ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಉಳವಿ ಹೋಬಳಿ ಹಲಸಿನಕೊಪ್ಪ ಗ್ರಾಮದಲ್ಲಿ ಗ್ರಾಮದ ಸನಂ ೪ ರಲ್ಲಿ ಸುಮಾರು ೧೫೦ ಹೆಚ್ಚು ಎಕರೆ ಗೋಮಾಳ ಪ್ರದೇಶದಲ್ಲಿದ್ದ ಅರಣ್ಯವನ್ಯ ಹಗಲು ರಾತ್ರಿ ಕಾದು ರಕ್ಷಿಸಿಕೊಂಡು ಬಂದಿದ್ದಾರೆ. ಇವರಿಗೆ ಅರಣ್ಯ ಇಲಾಖೆ ಸಿಪಿಟಿ ನಿರ್ಮಿಸಿ ಕೊಡುವ ಮೂಲಕ ಸಹಕರಿಸಿದೆ.
ಈಚೆಗೆ ಸಿಪಿಟಿ ಒಳಗೆ ಪ್ರವೇಶಿಸಿ ಗ್ರಾಮಸ್ಥರು ಕಾಯ್ದುಕೊಂಡು ಬಂದಿದ್ದ ಸುಮಾರು ಎರಡು ಎಕರೆ ಮರಗಿಡಗಳನ್ನು ಪಕ್ಕದ ಬೇಳೂರು ಗ್ರಾಮದ ಒಬ್ಬರು ದ್ವಂಸ ಮಾಡಿ ಅಡಿಕೆ ಬೆಳೆದಿದ್ದು ಜಿಲ್ಲಾಧಿಕಾರಿಗಳ ತನಕವೂ ದೂರು ಹೋಗಿತ್ತು. ಆ ವ್ಯಕ್ತಿಗೆ ಮಂಜೂರು ಮಾಡಿಕೊಟ್ಟಿರಲಿಲ್ಲ. ಆದಾಗ್ಯೂ ಪುನಃ ವೃಕ್ಷಾರೋಪಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮತ್ತೆ ಅಡಿಕೆ ಗಿಡ ನೆಟ್ಡಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.
ಇಲ್ಲಿನ ಸಕಿಪ್ರಾ ಶಾಲಾ ಆವರಣದಲ್ಲಿ ವೃಕ್ಷಾರೋಪಣ ನೆರವೇರಿಸಿ ನಂತರ ಸನಂ ೪ ರ ಗೋಮಾಳದ ತನಕ ವೃಕ್ಷಜಾತ ತೆರಳಲಾಯಿತು. ಜಾತಾಕ್ಕೆ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶಿಸರ, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್ ಅವರು ಚಾಲನೆ ನೀಡಿದರು.
ವೃಕ್ಷಾರೋಪಣ ವೇಳೆ ತಹಶಿಲ್ದಾರ್ ಹುಸೇನ್ ಸರಕಾವಸ್ ಹಾಜರಿದ್ದರು. ಅತಿಕ್ರಮಣ ಜಾಗದಲ್ಲಿ ಗ್ರಾಮಸ್ಥರು ಕಾಡು ಗಿಡಗಳನ್ನು ನೆಡುವ ಮೂಲಕ ಅರಣ್ಯ ಪುನಶ್ಚೇತನಕ್ಕೆ ಮುಂದಾದರು. ಈ ವೇಳೆ ಅತಿಕ್ರಮಣ ಮಾಡಿದವರಿಗೂ ಗ್ರಾಮದವರಿಗೂ ಮಾತಿನ ಚಕಮಕಿ ನಡೆಯಿತು. ಗ್ರಾಮದ ಮಹಿಳೆಯರು ನಾವು ಇಲ್ಲಿಯವರೆಗೆ ಉಳಿಸಿಕೊಂಡು ಬಂದಿದ್ದ ಅರಣ್ಯವನ್ನು ಹೊಸಕಿಹಾಕಿದ್ದಾರೆ. ಪುನಃ ಇಲ್ಲಿ ಅವರು ಇಲ್ಲಿ ಕಾಲಿಟ್ಟರೆ ನಾವು ಸುಮ್ಮನಿರುವುದಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ತಹಶಿಲ್ದಾರ್, ಸ್ಥಳ ಪರಿಶೀಲನೆ, ದಾಖಲೆ ಪರಿಶೀಲನೆ ನಡೆಸಿ, ಅಕ್ರಮದಾರರಿಗೆ ಬಗರ್ ಹುಕುಂ ಸಮಿತಿ ಭೂ ಮಂಜೂರಾತಿಯನ್ನು ವಜಾಮಾಡಿದ್ದು ಪ್ರಸ್ತುತ ಸರ್ಕಾರಿ ಸ್ವಾಮ್ಯದಲ್ಲಿ ಈ ಜಾಗವಿದೆ. ಇಲ್ಲಿ ಯಾವುದೇ ಸಾಗುವಳಿ, ಕಡಿತಲೆ ಇತ್ಯಾದಿ ಚಟುವಟಿಕೆಯನ್ನು ಯಾರೂ ನಡೆಸುವಂತಿಲ್ಲ. ಈಗಿರುವ ಸ್ಥಿತಿಯನ್ನು ಉಳಿಸಿಕೊಳ್ಳಬೇಕು. ಉಲ್ಲಂಘನೆ ನಡೆದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
Also read: ಶಿವಮೊಗ್ಗ-ಭದ್ರಾವತಿ ನಡುವೆ ಬಸ್-ಟ್ಯಾಕ್ಸಿ ಅಪಘಾತ: ತಪ್ಪಿದ ಅನಾಹುತ
ವೃಕ್ಷಲಕ್ಷ ಆಂದೋಲನದ ಅನಂತಹೆಗಡೆ ಅಶಿಸರ ಮಾತನಾಡಿ, ರಾಜ್ಯಕ್ಕೆ ಮಾದರಿಯಾಗಬೇಕಾದ ಹಲಸಿನಕೊಪ್ಪ ಕಾನು ಅತಿಕ್ರಮಣ ತೆರವಿಗೆ ಇಲಾಖೆಗಳು ಮೀನಾಮೇಷ ಎಣಿಸುತ್ತಿರುವುದು ಬೇಸರದ ಸಂಗತಿ. ಇಲ್ಲಿ ಹಲವು ಪರಿಸರ ಕಾಯ್ದೆಗಳ ಉಲ್ಲಂಘನೆ ಆಗಿದ್ದು, ಕೂಡಲೆ ಜಾಗ ತೆರವುಗೊಳಿಸಿ ಮರು ಅರಣ್ಯೀಕರಣಕ್ಕೆ ಕಂದಾಯ, ಅರಣ್ಯ ಇಲಾಖೆ ಜಂಟಿಯಾಗಿ ಮುಂದಾಗಬೇಕು. ಗ್ರಾಮಸ್ಥರ ತಾಳ್ಮೆಯನ್ನು ಪರೀಕ್ಷಿಸಕೂಡದು ಎಂದರು.
ಜೀವವೈವಿಧ್ಯ ಸಮಿತಿ, ಗ್ರಾಪಂ, ತಾಪಂ, ಕಂದಾಯ, ಅರಣ್ಯ ಇಲಾಖೆ ಈ ಕಾನು ಪ್ರದೇಶಕ್ಕೆ ರಕ್ಷಿತ ಜೇನು ಕಾನು ಎಂದು ಈ ವೇಳೆ ಘೋಷಿಸಿ ನಾಮಫಲಕವನ್ನು ಅಳವಡಿಸಿತು.
ತಾಲ್ಲೂಕು ಜೀವವೈವಿಧ್ಯ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತನಾಡಿದರು.
ಶಿವಮೊಗ್ಗ ಪರಿಸರ ಸಂಘಟನೆಯ ಪ್ರೊ.ಬಿ.ಎಂ.ಕುಮಾರಸ್ವಾಮಿ, ಬಾಲಕೃಷ್ಣ ನಾಯ್ಡು, ತಡಸ ಭೀಮರಾವ್, ಎಸ್.ಬಿ.ಅಶೋಕ್ ಕುಮಾರ್, ರಾಜ್ಯ ಜೀವವೈವಿಧ್ಯ ಮಂಡಳಿ ತಜ್ಞ ಪ್ರೀತಂ, ಕಾರ್ತೀಕ್, ಮಾಜಿ ಸದಸ್ಯ ಕೆ.ವೆಂಕಟೇಶ್, ತಾಪಂ ಅಧಿಕಾರಿ ಸೀಮಾ, ಅಧ್ಯಕ್ಷೆ ತುಳಸಿ, ಪಿಡಿಒ ನಾಗರಾಜ್, ಸಾಮಾಜಿಕ ಅರಣ್ಯ ಆರ್ ಎಫ್ ಒ ಸಂಜಯ್, ಪೊಲೀಸ್ ಅಧಿಕಾರಿ ನಾಗರಾಜ್, ಪಜಾ ಟ್ರಸ್ಟ್ ಕಾರ್ಯದರ್ಶಿ ಸಿ.ಪಿ.ಈರೇಶಗೌಡ, ಕಂದಾಯ, ಅರಣ್ಯ, ತಾಪಂ ಗ್ರಾಪಂ ಅಧಿಕಾರಿಗಳು ಸಿಬ್ಬಂದಿ, ಗ್ರಾಮ ಪ್ರಮುಖರಾದ ರಮೇಶ್, ರಾಜಾರಾಂ, ಗ್ರಾಮಾಧ್ಯಕ್ಷ ಪರಶುರಾಮ ಹಾಗೂ ಗ್ರಾಮಸ್ಥರು ಪಾಲ್ಗೊಂಡರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post