ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಆಧುನಿಕ ದಿನಗಳ ಧಾವಂತದಲ್ಲಿ ಪತ್ರಿಕೆಗಳು, ವೆಬ್‌ತಾಣಗಳ ನೀಡುವ ಸುದ್ದಿ ಓದಿ ಅರ್ಥೈಸಿಕೊಳ್ಳುವುದಕ್ಕಿಂತ ಛಾಯಾಚಿತ್ರಗಳನ್ನು ನೋಡುತ್ತಲೇ ಸುದ್ದಿ ಗ್ರಹಿಸುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ವೆಂಕಟೇಶ್ ಎಸ್. ಅಭಿಪ್ರಾಯಪಟ್ಟರು.
ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣದ ದಿನದ ಅಂಗವಾಗಿ ಮಂಗಳವಾರ ವಿಭಾಗದ ಕ್ವಾಡ್ರಾಂಗಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಛಾಯಾಚಿತ್ರವೊಂದು ಸಾವಿರ ಪದಗಳಿಗೆ ಸಮ ಎಂಬ ಮಾತಿನಿಂತೆ ಸುದ್ದಿಪತ್ರಿಕೆಗಳಲ್ಲಿ ನೀಡುವ ಛಾಯಾಚಿತ್ರಗಳು ಭಾವಸಮೇತವಾಗಿ ಓದುಗರಿಗೆ ವಿಷಯವನ್ನು ದಾಟಿಸುತ್ತವೆ. ಹೀಗಾಗಿ ಚಿತ್ರಗಳನ್ನು ನೋಡುವ ಮೂಲಕ ಸುದ್ದಿಗಳನ್ನು ಓದುವ, ಗ್ರಹಿಸುವ, ಅರ್ಥೈಸಿಕೊಳ್ಳಲು ಪ್ರವೃತ್ತಿಗಳು ವೃದ್ಧಿಯಾಗಿವೆ ಎಂದರು.
ಛಾಯಾಚಿತ್ರಗಳ ಪ್ರದರ್ಶನದಲ್ಲಿ ಕೋವಿಡ್ ಕಾಲಘಟ್ಟದ ಜನರ ನಿತ್ಯಬದುಕಿನ ಸಂಕಟಗಳು, ಜನಪರ ಚಳುವಳಿಗಳು, ವಿಶೇಷ ಪಕ್ಷಿಗಳು ಮತ್ತು ಜನರ ಸುತ್ತಮುತ್ತಲಿನ ಸಾಕುಪ್ರಾಣಿಗಳ ಮಾನವಾಸಕ್ತ ಚಿತ್ರಗಳು, ದಸರಾ ಸಂದರ್ಭದ ವಿಶೇಷ ಘಟನಾವಳಿಗಳು ಸೇರಿದಂತೆ ವಿಷಯಾಧರಿತವಾಗಿ ಸುಮಾರು 100 ಚಿತ್ರಗಳನ್ನು ಪ್ರದರ್ಶಿಸಿ ವಿವಿಧ ಸಮಾಜೋ-ಆರ್ಥಿಕ ಬದುಕು, ಪ್ರಾಣಿಪ್ರಪಂಚಗಳ ವಿಸ್ಮಯಗಳ ಕುರಿತು ಅರಿವು ಮೂಡಿಸಲಾಯಿತು.
ಛಾಯಾಚಿತ್ರದ ಪ್ರದರ್ಶನದ ಜೊತೆಗೆ ವಿಭಾಗದ ವಿದ್ಯಾರ್ಥಿಗಳಿಗೆ ಛಾಯಾಗ್ರಹಣದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರಜಾವಾಣಿಯ ಹಿರಿಯ ಫೋಟೋಗ್ರಾಫರ್ ಅನೂಪ್ ಆರ್. ತಿಪ್ಪೇಸ್ವಾಮಿ ವಿದ್ಯಾರ್ಥಿಗಳಿಗೆ ಸುದ್ದಿಛಾಯಾಚಿತ್ರದ ಮೌಲ್ಯಗಳು, ವಿಶೇಷ ಛಾಯಾಚಿತ್ರಗಳು ಮತ್ತು ಹಿಂದಿನ ಆಸಕ್ತಿಕರ ವಿಚಾರಗಳು, ತಾಂತ್ರಿಕತೆಗಳನ್ನು ತಿಳಿಸಿಕೊಟ್ಟರು.
Also read: ತಾಲೂಕು ಮಟ್ಟದ ಕುಸ್ತಿ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿಗಳ ಮೇಲುಗೈ
ಛಾಯಾಚಿತ್ರ ಪ್ರದರ್ಶನಕ್ಕೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಆಗಮಿಸಿ, ಛಾಯಾಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಾಗಾರದಲ್ಲಿ ವಿಭಾಗದ ಅಧ್ಯಕ್ಷರಾದ ಡಾ. ಸತ್ಯಪ್ರಕಾಶ್ ಎಂ ಆರ್, ಡಾ. ವರ್ಗೀಸ್ ಮತ್ತು ಡಾ. ಸತೀಶ್‌ಕುಮಾರ್, ಸೇರಿದಂತೆ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post