ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಇಂದು ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ #Varamahalakshmi ಸಂಭ್ರಮ ಎದ್ದು ಕಾಣುತ್ತಿದ್ದು, ಬೆಳಿಗ್ಗೆಯಿಂದಲೇ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ವಿಶೇಷವಾಗಿ ಮಹಿಳೆಯರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಾಗಿನ ವಿನಿಮಯ ಮಾಡಿಕೊಳ್ಳುವುದು ಕಂಡು ಬಂತು.

ಕೆಲವರ ಮನೆಗಳಲ್ಲಿ ಲಕ್ಷ್ಮಿ ಭಾವಚಿತ್ರ ಇಟ್ಟು ಪೂಜಿಸಿದರೆ, ಇನ್ನೂ ಕೆಲವರ ಮನೆಗಳಲ್ಲಿ ತಾಮ್ರ, ಬೆಳ್ಳಿ ಬಿಂದಿಗೆಗೆ ಸೀರೆ ಉಡಿಸಿ ಅದರ ಮೇಲೆ ತೆಂಗಿನ ಕಾಯಿ ಇಟ್ಟು ಅದಕ್ಕೆ ಬೆಳ್ಳಿ, ಬಂಗಾರದ ಲಕ್ಷ್ಮಿ ಮುಖವಾಡ ಇಟ್ಟು ವಿವಿಧ ಆಭರಣಗಳನ್ನು ತೊಡಿಸಿದ್ದರು.


ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಖರೀದಿ ಬಲು ಜೋರಾಗಿ ಸಾಗಿತ್ತು. ಹೂವು, ಹಣ್ಣು, ಬಾಳೆ ಎಲೆ ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಮಾರಾಟ ಬಲು ಜೋರಾಗಿತ್ತು. ನಗರದ ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ದುರ್ಗಿಗುಡಿ, ಲಕ್ಷ್ಮಿ ಟಾಕೀಸ್ ವೃತ್ತ, ಗೋಪಿ ಸರ್ಕಲ್, ಪೊಲೀಸ್ ಚೌಕಿ, ಗೋಪಾಳ, ಎಪಿಎಂಸಿ ಮಾರುಕಟ್ಟೆಯಲ್ಲಿ ಜನ ಜಂಗುಳಿ ಕಂಡುಬಂದಿತ್ತು.

ನಗರದ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಮಂದಿರದಲ್ಲಿ ಮಹಿಳಾ ಮಂಡಳಿ ವತಿಯಿಂದ ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮತ್ತು ವಿಶೇಷ ಪೂಜೆ ಹಾಗೂ ಚೂಡಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಲಕ್ಷ್ಮೀಪುರದ ಶ್ರೀ ಮಹಾಲಕ್ಷ್ಮಿ ಹಾಗೂ ಗಾಂಧಿನಗರ ಮುಖ್ಯ ರಸ್ತೆಯ ಚೌಡೇಶ್ವರಿ, ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ, ಕೋಟೆ ಮಾರಿಕಾಂಬಾ ದೇವಿಗೆ ವರಮಹಾಲಕ್ಷ್ಮಿಯ ವಿಶೇಷ ಅಲಂಕಾರ ಮಾಡಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post