ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಈ ಬಾರಿ ಒಂದು ವಾರ ಮುಂಚಿತವಾಗಿ ಕಬ್ಬು ಅರೆಯುವಿಕೆ ಶುರುವಾಗಲಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ Minister Shivananda Patil ತಿಳಿಸಿದರು.
ನವೆಂಬರ್ ಒಂದರಿಂದ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆ ಆರಂಭವಾಗಬೇಕಿತ್ತು. ಆದರೆ, ಬರದ ಹಿನ್ನೆಲೆಯಲ್ಲಿ ಒಂದು ವಾರ ಅಂದರೆ ಇದೇ ತಿಂಗಳ 25ರಿಂದ ಕಬ್ಬು ಅರೆಯುವಿಕೆ ಆರಂಭವಾಗಲಿದೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರೈತರು ಕಂಗಲಾಗಿದ್ದಾರೆ. ಬಹಳಷ್ಟು ಕಡೆ ಕಬ್ಬು ಒಣಗುತ್ತಿದೆ. ಹಂಗಾಮಿಗೆ ಬೇಗನೆ ಕಬ್ಬು ಅರೆಯುವಿಕೆ ಶುರು ಮಾಡುವಂತೆ ಬೆಳಗಾರರು ಮನವಿ ಮಾಡಿದ್ದಾರೆ. ಹೀಗಾಗಿ ಒಂದು ವಾರಕ್ಕೆ ಮುನ್ನ ಕಬ್ಬು ಅರೆಯುವಿಕೆಯನ್ನು ಆರಂಭಿಸುವಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳ ಆದೇಶದನ್ವಯ ಜಾರಿ
ಪ್ರತಿ ಬಾರಿ ತಮಗೆ ಇಷ್ಟ ಬಂದಂತೆ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ಶುರು ಮಾಡುತ್ತಿದ್ದವು. ಈ ಬಾರಿ ನವೆಂಬರ್ 1 ರಿಂದ ಏಕಕಾಲದಲ್ಲಿ ಕಬ್ಬು ಅರೆಯುವಿಕೆಯನ್ನು ಆರಂಭಿಸುವಂತೆ ನಿರ್ದೇಶಿಸಲಾಗಿತ್ತು. ಸದ್ಯ ಎಲ್ಲೆಡೆ ಬರ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 25ರ ನಂತರ ಶುರು ಮಾಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರು ಆದೇಶ ನೀಡಿದ್ದು, ಅದರನ್ವಯ ನವೆಂಬರ್ 1ರಿಂದ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲೂ ಏಕಕಾಲಕ್ಕೆ ಕಬ್ಬು ಅರೆಯುವುದನ್ನು ಶುರುವಾಗಲಿದೆ ಎಂದು ಹೇಳಿದರು.
ಬರ ಹಿನ್ನೆಲೆ; ಇಳುವರಿ ಕಡಿಮೆ ಸಾಧ್ಯತೆ
ಕಬ್ಬು ಎಂದಿನಂತೆ ಸುಮಾರು 11ರಿಂದ 12 ತಿಂಗಳಿಗೆ ಕಟಾವಿಗೆ ಬರುತ್ತದೆ. ಮಳೆ ಚೆನ್ನಾಗಿ ಆಗಿ, ನವೆಂಬರ್ ನಲ್ಲಿ ಕಬ್ಬು ಕಟಾವು ಮಾಡಿದ್ದರೆ ಇಳುವರಿಯೂ ಜಾಸ್ತಿ ಇರುತ್ತಿತ್ತು. ಆದರೆ, ಮಳೆ ಕೊರತೆಯಿಂದ ಅಕ್ಟೋಬರ್ ನಲ್ಲೇ ಕಬ್ಬು ಕಟಾವು ಮಾಡುವುದರಿಂದ ಸ್ವಲ್ಪ ಇಳುವರಿ ಕಡಿಮೆಯಾಗಲಿದೆ ಎಂದರು.
ರಾಜ್ಯದಲ್ಲಿ ಈ ಬಾರಿ 3.50 ರಿಂದ 4.50 ಲಕ್ಷ ಹೆಕ್ಟೇರ್ ನಲ್ಲಿ 11-12 ತಿಂಗಳು ತುಂಬಿದ ಕಬ್ಬು ಇದೆ. ಶೇ 9.5ರಷ್ಟು ಇಳುವರಿ ಇರುತ್ತಿತ್ತು. ಈ ಬಾರಿ ಸುಮಾರು 1 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಕಟಾವಿಗೆ ಬಂದಿಲ್ಲ. ಕಳೆದ ಬಾರಿ 74 ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆಯನ್ನು ಮಾಡಲಾಗಿತ್ತು. ಈ ಬಾರಿ 75 ರಿಂದ 78 ಕಾರ್ಖಾನೆಯಲ್ಲಿ ಕಬ್ಬನ್ನು ಅರೆಯಬಹುದು. ಇದರಿಂದ 1800 ಮೆಗಾವಾಟ್ ಕೋಜನ್ ಉತ್ಪಾದನೆಯಾಗಲಿದ್ದು, ಪರಿಣಾಮ ಸದ್ಯ ಇರುವ ಲೋಡ್ ಶೆಡ್ಡಿಂಗ್ ತಡೆಗೂ ಸಹಕಾರಿ ಆಗಲಿದೆ ಎಂದು ಹೇಳಿದರು.
ಒಂದು ರೂಪಾಯಿಯೂ ಬಾಕಿ ಇಲ್ಲ
ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಎಫ್ಆರ್ ಪಿಗಿಂತ ಜಾಸ್ತಿ ಹಣವನ್ನೇ ಕೊಡಿಸಲಾಗಿದೆ. ಈ ಮೊದಲು 19.74 ಸಾವಿರ ಕೋಟಿ ರೂಪಾಯಿ ಇದ್ದು, ಈಗ 20 ಸಾವಿರ ಕೋಟಿ ರೂಪಾಯಿ ರೈತರಿಗೆ ಕೊಡಿಸಲಾಗಿದೆ. ಬುಳವಾಡ ಬಸವೇಶ್ವರ ಸಕ್ಕರೆ ಕಾರ್ಖಾನೆಯಿಂದ ರೂ. 28 ಕೋಟಿ ಬಾಕಿ ಇತ್ತು. ಕಾರ್ಖಾನೆಯ ಉಪಕರಣ ಜಪ್ತಿ ಮಾಡಿ ಹಣವನ್ನು ರೈತರಿಗೆ ಕೊಡಿಸಲಾಗಿದೆ. ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಒಂದು ರೂಪಾಯಿ ಬಾಕಿ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಂಭವ
ಎಥೆನಾಲ್ ಲಾಭಾಂಶವನ್ನು ರೈತರಿಗೆ ಕೊಡುವ ಬಗ್ಗೆ ಸಕ್ಕರೆ ನಿಯಂತ್ರಣ ಮಂಡಳಿ ಮುಂದೆ ತಂದು ನಿರ್ಧಾರ ಮಾಡಲಾಗುವುದು. ಕಳೆದ ಬಾರಿ ಎಥೆನಾಲ್ ಗೆ 35 ಸಾವಿರ ಕೋಟಿ ಲೀಟರ್ ಗೆ ಹೋಗಿತ್ತು. ಈ ಬಾರಿ ಸಕ್ಕರೆ ಉತ್ಪಾದನೆಯೂ ಕಡಿಮೆ ಆಗಬಹುದು, ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಸಕ್ಕರೆ ಬಾರದೇ ಇರಬಹುದು. ರಾಜ್ಯದಲ್ಲಿ ಎಥೆನಾಲ್ ಲಾಭವನ್ನು ಈ ವರ್ಷವೇ ರೈತರಿಗೆ ಕೊಡಿಸಲಾಗುವುದು ಎಂದು ಹೇಳಿದರು.
ಕಾರ್ಖಾನೆಗಳ ಅಂತರ ನಿಗದಿ
ಹಿಂದಿನ ಸರ್ಕಾರ ಸಕ್ಕರೆ ಕಾರ್ಖಾನೆಗಳ ನಡುವೆ 15 ಕಿ.ಮೀ ಅಂತರವನ್ನು ಮಾಡಿದ್ದರು. ನಾವೀಗ 25 ಕಿ.ಮೀ ಅಂತರ ಇರಬೇಕೆಂದು ಹೇಳುತ್ತವೆ ಅಷ್ಟೇ. ನೆರೆಯ ಮಹಾರಾಷ್ಟ್ರದಲ್ಲಿ ಈಗ 25 ಕಿ.ಮೀ ಅಂತರ ಇದೆ. ಕಬ್ಬು ಬೆಳೆ ತುಂಬಾ ಕಡಿಮೆ ಇದೆ. ಮುಖ್ಯವಾಗಿ 125 ದಿನ ಕಬ್ಬು ಅರೆಯುವಿಕೆ ನಡೆಸಿದರೆ ಮಾತ್ರ ಕಾರ್ಖಾನೆಗೆ ಪ್ರಯೋಜನ. ಇದನ್ನು 90 ದಿನಕ್ಕೆ ಸೀಮಿತಗೊಳಿಸಬಹುದು. ಹಾಗಾಗಿ ಅಂತರ ನಿಗದಿಪಡಿಸುವ ವಿಚಾರ ಕೈಬಿಡಲಾಗಿದೆ ಎಂದು ಸಚಿವರು ಹೇಳಿದರು.
ವಿದ್ಯುನ್ಮಾನ ಮಾಪನ ಯಂತ್ರ ಕಡ್ಡಾಯ
ಕಬ್ಬು ಬೆಳೆಗಾರರಿಗೆ ತೂಕ, ಇನ್ನಿತರೆಯಲ್ಲಿ ಮೋಸ ಆಗುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ತಪಾಸಣೆಗೆ ಕಾರ್ಯಪಡೆ (ಸ್ಕ್ವಾಡ್ ) ರಚನೆ ಮಾಡಲಾಗುತ್ತಿದೆ. ಮಾಪನ ಇಲಾಖೆ, ನಮ್ಮ ಇಲಾಖೆ ಸೇರಿ ತಪಾಸಣೆ ನಡೆಸುತ್ತೇವೆ. ರೈತರು ಬರಹ ರೂಪದಲ್ಲಿ ದೂರು ಕೊಟ್ಟರೆ ಪರಿಶೀಲಿಸುತ್ತೇವೆ. ವಿದ್ಯುನ್ಮಾನ ಮಾಪನ ಯಂತ್ರ ಕಡ್ಡಾಯ ಮಾಡಲಾಗುವುದು ಎಂದರು.
ಮುಂಚೆನೇ ಕ್ರಷಿಂಗ್ ಶುರು ಮಾಡಿದ ಶಾಸಕರೊಬ್ಬರ ಕಾರ್ಖಾನೆ ನಿಲ್ಲಿಸಿದೆ. ಕೆಆರ್‌ಪಿ ಶುಗರ್ಸ್ ಅವರು ಬೇರೆ ಏರಿಯಾದ ಕಬ್ಬು ನುರಿಸಿದ್ದರು. ಬಸವೇಶ್ವರ ಶುಗರ್ ಕಾರ್ಖಾನೆಗೆ ಗೋದಾಮು ಇರಲಿಲ್ಲ. ಕಬ್ಬು, ಸಕ್ಕರೆ ಎಲ್ಲಿಗೆ ಸಾಗಿಸುತ್ತಿದ್ದ ಅಂತ ಗೊತ್ತೇ ಇರಲಿಲ್ಲ. ಈಗ ಗೋದಾಮು ಕಟ್ಟಿಸಿದ್ದಾರೆ. 7 ವರ್ಷದಿಂದ ಕಾರ್ಖಾನೆ ನಡೆಸುತ್ತಿದ್ದರು. 3.50 ಸಾವಿರ ಟನ್ ಗೆ ಪರವಾನಗಿ ಇತ್ತು. 7 ಸಾವಿರ ಟನ್ ಕ್ರಷಿಂಗ್ ಮಾಡುತ್ತಿದ್ದರು. ಈ ಸಂಬಂಧ ನೋಟಿಸ್ ನೀಡಲಾಗಿದ್ದು ತನಿಖೆ ನಡೆದಿದೆ ಎಂದರು.
Also read: ತೋಟಗಾರಿಕಾ ಬೆಳೆಗಳು ರೈತರ ಆದಾಯ ಹೆಚ್ಚಿಸುವಲ್ಲಿ ಸಹಕಾರಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಸಕ್ಕರೆ ನಿರ್ವಹಣೆ, ನಿಯಂತ್ರಣಕ್ಕೆ ವಿಧೇಯಕವನ್ನು ಮಹಾರಾಷ್ಟ್ರ ಮಾದರಿಯಲ್ಲಿ ತರಲು ಚಿಂತನೆ ಇದೆ. ಅಲ್ಲಿ 198 ಕಾರ್ಖಾನೆ ಇದೆ. ಇಳುವರಿ, ಎಥೆನಾಲ್ ಎಲ್ಲವೂ ಜಾಸ್ತಿ ಇದೆ ಎಂದರು.
ಮೈಶುಗರ್ ಕಾರ್ಖಾನೆ
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಅವ್ಯವಹಾರ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಲೋಕಾಯುಕ್ತ ತನಿಖೆ ಆಗಿದೆ. ಅದರ ಆಧಾರದ ಮೇಲೆ ಮೇಲ್ಮನವಿ ಹೋಗಬೇಕು. 1 ಕೋಟಿ ರೂಪಾಯಿ ತುಂಬಬೇಕು. 2 ಲಕ್ಷ ಟನ್ ಕ್ರಷಿಂಗ್ ಆಗಿದೆ. ಶೇ. 7.50 ರಷ್ಟು ರಿಕವರಿ ಆಗಿದೆ ಎಂದು ಹೇಳಿದರು.
ರಫ್ತಿಗೆ ಅವಕಾಶ ಕೊಟ್ಟರೆ ಒಳ್ಳೆಯದು
ಸದ್ಯ ಸಕ್ಕರೆ ಮೇಲೆ ಶೇ 5ರಷ್ಟು ಜಿಎಸ್ಟಿ ಇದೆ. ಅದರಿಂದ ನಮಗೆ ಶೇ 2.5 ಸಿಗಲಿದೆ. ದೇಶದಲ್ಲಿಗ ರಫ್ತು ರದ್ದಾಗಿರುವುದರಿಂದ ಸಕ್ಕರೆ ದರ ಕಡಿಮೆ ಇದೆ. ರಫ್ತಿಗೆ ಅವಕಾಶ ಸಿಕ್ಕರೆ ರೈತರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಸಚಿವರು ಹೇಳಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post