ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿರುವುದು ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ತರಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮೊದಲ ಪ್ರತಿಕ್ರಿಯೆ ಹಂಚಿಕೊಂಡಿರುವ ಅವರು, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ. ವಿಜಯೇಂದ್ರ BYVijayendra ಅವರಿಗೆ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.
ಹಿರಿಯರ ಆಶೀರ್ವಾದ ಹಾಗೂ ಕಿರಿಯರ ಬೆಂಬಲದೊಂದಿಗೆ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಮುನ್ನಡೆಸುತ್ತಾರೆ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು, ದಿ. ಅನಂತಕುಮಾರ್ ಅವರೇ ಮುಂತಾದ ನಾಯಕರುಗಳ ದಾರಿಯಲ್ಲಿ ನಡೆಯುತ್ತಾರೆ ಅನ್ನುವ ಭರವಸೆ ನನಗಿದೆ ಎಂದಿದ್ದಾರೆ.
ಅವರ ನಾಯಕತ್ವದಲ್ಲಿ ಪಕ್ಷ ಹೊಸ ಚೈತನ್ಯದೊಂದಿಗೆ ಬೆಳೆಯಲಿ, ರಾಜ್ಯವನ್ನು ಆವರಿಸಿಕೊಂಡಿರುವ ಕಾಂಗ್ರೆಸ್ ದುರಾಡಳಿತದ ಕಾರ್ಮೋಡದ ನಡುವೆ ಭರವಸೆಯ ಒಂದು ಹೊಸ ಕಿರಣವಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಈ ವಯಸ್ಸಿನಲ್ಲಿ ಸಂಘಟನೆ ಕಟ್ಟುವ ದೊಡ್ಡ ಜವಾಬ್ದಾರಿ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಮುಂಬರುವ ತಾಲೂಕು, ಜಿಲ್ಲಾ ಪಂಚಾಯ್ತಿ, ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಸಮರ್ಥವಾಗಿ ಪಕ್ಷ ಮುನ್ನಡೆಯುತ್ತದೆ ಎಂಬ ನಂಬಿಕೆಯಿದೆ.
ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಸಹೋದರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ನಂಬಿಕೆಯಿದೆ. ರಾಜಕಾರಣವೇ ಒಂದು ಸವಾಲು. ನಮ್ಮ ಉದ್ದೇಶ ಹಾಗೂ ಸಿದ್ದಾಂತ ಸ್ಪಷ್ಟವಾಗಿದೆ. ನಮಗೆ ದೇಶವೇ ಮೊದಲು. ನಮಗೆ ಅಧಿಕಾರಕ್ಕಿಂತಲೂ ದೇಶದ ಹಿತ ಮುಖ್ಯ. ಇಂತಹ ಸಿದ್ದಾಂತವನ್ನು ಹತ್ತಿರದಿಂದ ನೋಡಿರುವ ವಿಜಯೇಂದ್ರ ಹಿರಿಯರು ಹಾಗೂ ಕಿರಿಯರನ್ನು ಒಟ್ಟಾಗಿ ಸೇರಿಸಿಕೊಂಡು ಮುನ್ನಡೆಯುತ್ತಾರೆ ಎಂದರು.
ರಾಜ್ಯದಲ್ಲಿ ನಮಗೆ ಕೊಂಚ ಹಿನ್ನಡೆಯಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಿ, ಎಲ್ಲರ ಮಾರ್ಗದರ್ಶನದಲ್ಲಿ ಪಕ್ಷವನ್ನು ವಿಜಯೇಂದ್ರ ಮುನ್ನಡೆಸುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















