ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಗ್ರಾಹಕರೊಬ್ಬರಿಗೆ ಒಪ್ಪಂದದಂತೆ ಅಪಘಾತ ವಿಮಾ ಹಣ ವಿತರಿಸದ ಖಾಸಗಿ ವಿಮಾ ಕಂಪೆನಿಯೊಂದಕ್ಕೆ ರೂ. 15 ಲಕ್ಷ ಡೆಪಾಸಿಟ್ ಇರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ನವಲಗುಂದ ತಾಲೂಕಿನ ಹಾಲ ಕುಸುಗಲ್ಲ ಗ್ರಾಮದ ಬಸವರಾಜ ಶಂಕರಪ್ಪ ಸವದಿ ಎನ್ನುವವರು ತಮ್ಮ ಗೂಡ್ಸ್ ವಾಹನಕ್ಕೆ ರೂ. 15 ಲಕ್ಷ ವೈಯಕ್ತಿಕ ಅಪಘಾತದ ವಿಮೆ ಮಾಡಿಸಿದ್ದರು. 2021ರ ಮಾರ್ಚ್ ತಿಂಗಳಿನಲ್ಲಿ ಈ ವಾಹನ ಹುಬ್ಬಳ್ಳಿ-ವಿಜಯಪುರ ರಸ್ತೆಯಲ್ಲಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ ವಾಹನದ ಮಾಲೀಕರೂ ಆದ ಚಾಲಕ ಬಸವರಾಜ್ ತೀವ್ರವಾಗಿ ಗಾಯಗೊಂಡು ಮೃತರಾಗಿದ್ದರು.
ಘಟನೆ ಹಿನ್ನೆಲೆಯಲ್ಲಿ ತಂದೆಗೆ ಸಂಬಂಧಿಸಿದ ವಿಮಾ ಹಣ ರೂ.15 ಲಕ್ಷ ನೀಡುವಂತೆ ಅಲ್ಪವಯಿ ಮಗ ಸಿದ್ದಪ್ಪನ ಪರವಾಗಿ ಅವರ ತಾಯಿ ಪ್ರಸುತಿ ಎದುರುದಾರ ವಿಮಾ ಕಂಪನಿಗೆ ದಾಖಲೆಗಳ ಸಮೇತ ಕ್ಲೇಮ್ ಅರ್ಜಿ ಕೊಟ್ಟಿದ್ದರು. ಇನ್ನು, ಇದೇ ವೇಳೆ ಮೃತ ಬಸವರಾಜನಿಗೆ ತಾನು ಹೆಂಡತಿ ಎಂದು ಇನ್ನೊಬ್ಬ ಮಾಲಾಶ್ರೀ ಎನ್ನುವವರು ವಿಮಾ ಪರಿಹಾರ ತನಗೂ ಕೊಡುವಂತೆ ಆಕ್ಷೇಪಣೆ ಹಾಕಿದ್ದರು. ಮತ್ತೊಬ್ಬ ಬಸವ್ವ ಸವದಿ ಅನ್ನುವವರು ತಾನು ಮೃತ ಬಸವರಾಜನ ಅವಿವಾಹಿತ ಸಹೋದರಿ ಇದ್ದು ತನಗೂ ವಿಮಾ ಹಣ ಸೇರತಕ್ಕದೆಂದು ಆಕ್ಷೇಪಿಸಿದ್ದರು. ಈ ಎಲ್ಲ ಆಕ್ಷೇಪಗಳನ್ನು ಪರಿಗಣಿಸಿದ ವಿಮಾ ಕಂಪನಿ ಪರಿಹಾರ ಯಾರಿಗೆ ಕೊಡುವುದು ಅಂತ ಗೊತ್ತಾಗುತ್ತಿಲ್ಲ ಎಂದು ದೂರುದಾರ ಕ್ಲೇಮನ್ನು ತಿರಸ್ಕರಿಸಿದ್ದರು.
ವಿಮಾ ಕಂಪನಿಯ ನಡಾವಳಿಕೆ ಗ್ರಾಹಕರ ಹಿತರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ವಿಮಾಕಂಪನಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಮೃತನ ಸಹೋದರಿ ಬಸವ್ವ ಮತ್ತು ಮೃತನ ಹೆಂಡತಿ ಅನ್ನುವ ಮಾಲಾಶ್ರೀ ಅವರು ಮೃತನ ಸಾವಿನಿಂದ ಬರಬಹುದಾದ ಪರಿಹಾರದ ಹಣವನ್ನು ತಮಗೆ ಕೊಡುವಂತೆ ಕೋರಿ ಧಾರವಾಡ ಮತ್ತು ಬೆಳಗಾವಿಯ ಕೋರ್ಟುಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಮೃತ ವಿಮಾದಾರ ಹಾಗೂ ಎದುರುದಾರ ವಿಮಾ ಕಂಪನಿಯವರ ಮಧ್ಯೆ ಆಗಿರುವ ಒಪ್ಪಂದದಂತೆ ಅವರು ಸತ್ತ ಮೇಲೆ ವೈಯಕ್ತಿಕ ಅಪಘಾತ ವಿಮೆ ರೂ.15 ಲಕ್ಷ ಅವಲಂಬಿತರಿಗೆ ಕೊಡಬೇಕಾದುದು ಅವರ ಕರ್ತವ್ಯವಾಗಿದೆ ಎಂದು ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದ್ದು, ತೀರ್ಪು ನೀಡಿದ 1 ತಿಂಗಳೊಳಗಾಗಿ 15 ಲಕ್ಷ ಹಣವನ್ನು ಗ್ರಾಹಕರ ರಕ್ಷಣಾ ಆಯೋಗದಲ್ಲಿ ಡಿಪಾಸಿಟ ಮಾಡುವಂತೆ ಎದುರುದಾರ ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.
Also read: ಬಿಸಿಲಿನಲ್ಲಿ ಕುಳಿತುಕೊಳ್ಳುವ ಶಿಕ್ಷೆ ನೀಡಿದ ಶಿಕ್ಷಕ: ನಾಲ್ಕನೇ ತರಗತಿ ವಿದ್ಯಾರ್ಥಿ ಸಾವು
ದೂರುದಾರ ಮೃತನ ಮಗನಿದ್ದು, ಒಬ್ಬ ಸಹೋದರಿ ಹಾಗೂ ಇನ್ನೊಬ್ಬ ಹೆಂಡತಿಯ ಮಧ್ಯೆ ಮೃತನ ಅವಲಂಬಿತರಾರು ಎನ್ನುವ ಬಗ್ಗೆ ತಂಟೆ ತಕರಾರು ಇದೆ. ಅಂತಹ ಗಂಭೀರ ಸಂಗತಿಗಳನ್ನು ನಿರ್ಣಯಿಸುವ ಅಧಿಕಾರ ವ್ಯಾಪ್ತಿ ಗ್ರಾಹಕರ ಆಯೋಗಕ್ಕೆ ಬರುವುದಿಲ್ಲ. ಕಾರಣ ಅವರು ಸಂಬಂಧಿಸಿದ ಸಿವಿಲ್ ಕೋರ್ಟು ಅಥವಾ ಅಧಿಕಾರಯುತ ಪ್ರಾಧಿಕಾರದ ಮುಂದೆ ಪ್ರಕರಣ ದಾಖಲಿಸಿ ಆ ಹಣ ಪಡೆಯಲು ತಾವೇ ಹಕ್ಕುದಾರರು ಎಂದು ಆದೇಶ ತರುವಂತೆ ಆಯೋಗ ಆ ಮೂವರಿಗೂ ನಿರ್ದೇಶನ ನೀಡಿದೆ.
ಆದೇಶ ತರುವವರೆಗೆ ವಿಮಾ ಕಂಪನಿ ಡಿಪಾಸಿಟ್ ಮಾಡಿದರೂ ರೂ. 15 ಲಕ್ಷ ಅನ್ನು ರಾಷ್ತ್ರೀಕೃತ ಬ್ಯಾಂಕನಲ್ಲಿ ಕಾಯಂ ಠೇವಣಿ ಇಡುವಂತೆ ತೀರ್ಪಿನಲ್ಲಿ ಹೇಳಿದೆ. ಸಿವಿಲ್ ಕೋರ್ಟು ಅಥವಾ ಅಧಿಕಾರಯುತ ಪ್ರಾಧಿಕಾರದಿಂದ ಆದೇಶ ತಂದ ವ್ಯಕ್ತಿ ಅಥವಾ ವ್ಯಕ್ತಿಗಳು ಸದರಿ ಆದೇಶದಂತೆ ಬಡ್ಡಿ ಸಮೇತ ಡಿಪಾಸಿಟ್ ಹಣ ಪಡೆಯಲು ಅರ್ಹರಿದ್ದಾರೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post