ಕಲ್ಪ ಮೀಡಿಯಾ ಹೌಸ್ | ಹಾಸನ |
ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಧಿಕಾರಿಗಳು ತೆಗೆದುಕೊಂಡು ತಪ್ಪು ನಿರ್ಧಾರ ಹಾಗೂ ಗುರಿ ತಪ್ಪಿದ ಗುಂಡಿ 8 ಬಾರಿ ಅಂಬಾರಿ ಹೊತ್ತ ಅರ್ಜುನ(ಆನೆ) Arjuna Elephant ಬಲಿಯಾದನೇ ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಆನೆ ಮಾವುತರು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದ್ದು, ಈ ಹೇಳಿಕೆಗಳೇ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಗುಂಡು ಹಾರಿಸಿದಾಗ ಗುರಿ ತಪ್ಪಿ ಅದು ಅರ್ಜುನನ ಕಾಲಿಗೆ ತಗುಲಿರುವ ಬಗ್ಗೆ ಅನುಮಾನ ಮೂಡಿದ್ದು, ಅರ್ಜುನನ ಕಾಲಿಗೆ ಗುಂಡು ತಗುಲುತ್ತಲೇ ಅದು ಬಲ ಕಳೆದುಕೊಂಡಿತ್ತು. ಈ ವೇಳೆ ಹಂತಕ ಆನೆ ಹಠಾತ್ ದಾಳಿ ಮಾಡಿತ್ತು ಎನ್ನಲಾಗಿದೆ.
ಮದದಲ್ಲಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಮದದಲ್ಲಿರುವ ಕಾಡಾನೆ ಹುಚ್ಚಾನೆಯಂತೆ ವರ್ತಿಸುತ್ತದೆ ಎಂಬ ಜ್ಞಾನ ಇದ್ದರೂ ತಪ್ಪು ನಿರ್ಧಾರ ತೆಗೆದುಕೊಂಡರು ಎಂದು ತಜ್ಞರು ಟೀಕಿಸುತ್ತಿದ್ದಾರೆ. ಕಾಡಾನೆ ಸೆರೆಗೆ ತೆರಳಿದ್ದ ವೇಳೆ ಒಂಟಿಸಲಗ ಏಕಾಏಕಿ ದಾಳಿ ಮಾಡಿತ್ತು. ಸಲಗ ದಾಳಿ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಮಿಸ್ ಫೈರ್’ಗೆ ಬಲಿಯಾದ ಅರ್ಜುನ?
ಕಾರ್ಯಾಚರಣೆ ವೇಳೆ ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲ ಕಳೆದುಕೊಂಡು ಸಮಸ್ಯೆ ಎದುರಿಸಿದೆ. ಮದವೇರಿದ ಆನೆಗೆ ಅರವಳಿಕೆ ಚುಚ್ಚದೇ ಹೋಗಿದ್ದರಿಂದ ಅರ್ಜುನ ಬಲ ಕಳೆದುಕೊಂಡು ಬಲಿಯಾದ ಎನ್ನಲಾಗಿದೆ. ಈ ಎಲ್ಲಾ ಸಂಶಯಗಳನ್ನು ಬಗೆಹರಿಸಲು ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಆದ ಯಡವಟ್ಟಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಹಿಸಲಾಗುತ್ತಿದೆ.
Also read: ಮಿಚಾಂಗ್ ಚಂಡಮಾರುತ | ದಕ್ಷಿಣದ ಮೂರು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ
ಕಾರ್ಯಾಚರಣೆ ವೇಳೆ ಅರವಳಿಕೆ ಇಂಜೆಕ್ಷನ್ ನೀಡಲಾಯಿತು. ಅದು ಗುರಿ ತಪ್ಪಿ ಪ್ರಶಾಂತ ಹೆಸರಿನ ಸಾಕಾನೆಗೆ ಬಿತ್ತು. ನಂತರ ಇನ್ನೊಂದು ಇಂಜೆಕ್ಷನ್ ನೀಡಿ ಪ್ರಶಾಂತನನ್ನು ಸುಧಾರಿಸಲಾಯಿತು. ಆಮೇಲೆ ಅರ್ಜುನನ ಮೇಲೆ ಮೊದಲ ಬಾರಿಗೆ ಕಾಡಾನೆ ದಾಳಿ ಮಾಡಿತು. ಕಾಡಾನೆ, ಸಾಕಾನೆ ಕಾಳಗದ ವೇಳೆ ಕೋವಿಯಿಂದ ಗುಂಡು ಹಾರಿಸಲಾಯಿತು. ಆಗ ಅರ್ಜುನನ ಕಾಲಿಗೆ ಗುಂಡು ತಗುಲಿತ್ತು. ದೊಡ್ಡ ಆನೆ ಅದು ಮರಗಳನ್ನು ಬೀಳಿಸಿತು. ನಾವು ಆನೆ ಮೇಲಿಂದ ಇಳಿದು ಓಡಿದೆವು. ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಹೇಳಿದ್ದಾರೆ ಎನ್ನಲಾಗಿದೆ.
ತನಿಖೆಗೆ ಒತ್ತಾಯ
ಅರ್ಜುನನ ಸಾವಿಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾರ್ಯಾಚರಣೆ ವೇಳೆ ಅರ್ಜುನ ಸಾವನ್ನಪ್ಪಿರುವ ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗಿದೆ.
ಇಂದು ಅಂತ್ಯಕ್ರಿಯೆ
8 ಬಾರಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಸಾಗಿದ್ದ ಅರ್ಜುನನ ಅಂತ್ಯಕ್ರಿಯೆ ಇಂದು ನಡೆದಿದೆ.
ಮದಗಜದ ಜೊತೆ ಹೋರಾಡುವ ವೇಳೆ ಅರ್ಜುನ ವೀರಮರಣ ಅಪ್ಪಿದ್ದು, ಶಾಸ್ತ್ರೋಕ್ತವಾಗಿ ಆನೆಯ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅರ್ಜುನನಿಗೆ ಸಕಲ ಸರ್ಕಾರಿ ಅಂತಿಮ ಗೌರವವನ್ನು ನೀಡಲಾಗಿದೆ.
ಮೈಸೂರು ಅರಮನೆಯ ರಾಜಮನೆತನದ ಪುರೋಹಿತರಾದ ಪ್ರಹ್ಲಾದ್ ಅವರು ಅಂತ್ಯಕ್ರಿಯೆ ವಿಧಿವಿಧಾನ ನೆರವೇರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















