ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಕೌಸಲ್ಯಾ ರಾಮ |
ವಿಶ್ವ ಸಂಕೇತಿ #Sanketi ಭಾರತಿ ಟ್ರಸ್ಟ್ ವತಿಯಿಂದ ಜಯನಗರದ ನಾಚಾರಮ್ಮ ಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಸಂಕೇತ ಬರಹಗಾರರ ರಾಜ್ಯ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ’ ಭಾನುವಾರ ಸಮಾಪ್ತಿಗೊಂಡಿತು.
ಅಂತಿಮ ದಿನ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಹಿರಿಯ ಸಾಧಕರಿಗೆ ಸನ್ಮಾನ, ವಿಚಾರಗೋಷ್ಠಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಸಮ್ಮೇಳನಕ್ಕೆ ಮೆರುಗು ನೀಡಿದವು.
ಶಿವಮೊಗ್ಗ #Shivamogga ಸಮೀಪದ ಹೊಸಳ್ಳಿಯ ರಾಜಾರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 20 ಕವಿಗಳು ಭಾಗವಹಿಸಿದ್ದರು.

‘ಮಕ್ಕಳ ಸಾಹಿತ್ಯ, ನಾಟಕ ಸಂಗೀತ ಮತ್ತು ಸಂಕೇತಿ ಸಾಹಿತ್ಯದ ಮುನ್ನೋಟ’ ವಿಷಯ ಕುರಿತು ವಿಚಾರಗೋಷ್ಠಿ ನಡೆಯಿತು. ಹಿರಿಯ ಸಾಹಿತಿ ಮತ್ತೂರು #Mattur ಸುಬ್ಬಣ್ಣ ‘ಮಕ್ಕಳ ಸಾಹಿತ್ಯ’ದ ಬಗ್ಗೆ, ‘ನಾಟಕ’ ವಿಷಯ ಕುರಿತು ಡಾ.ಮೀರಾ ಮೂರ್ತಿ, ‘ಸಂಗೀತ’ ವಿಷಯದ ಕುರಿತು ಡಾ.ಆರ್.ಕೆ.ಪದ್ಮನಾಭ ಹಾಗೂ ‘ಸಂಕೇತಿ ಸಾಹಿತ್ಯದ ಮುನ್ನೋಟ’ ವಿಷಯ ಕುರಿತು ಸಂಸ್ಕೃತಿ ಸುಬ್ರಹ್ಮಣ್ಯ ವಿಚಾರ ಮಂಡಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ. ಅನಂತರಾಮು, ಸಾಹಿತಿ ಡಾ.ಬಿ.ಎಸ್. ಪ್ರಣತಾರ್ತಿಹರನ್ , ಸಂಚಾಲಕರಾದ ಸಂಸ್ಕೃತಿ ಸುಬ್ರಹ್ಮಣ್ಯ, ನಾಗರಾಜ ಹೊಸಹಳ್ಳಿ, ಸರೋಜಾ ಹಿರಿಯಣ್ಣ, ಕೋಶಾಧ್ಯಕ್ಷ ಪ್ರೊ.ಆರ್.ಎನ್. ಪದ್ಮನಾಭ, ಎಂ.ಬಿ. ಭಾನುಪ್ರಕಾಶ್, ಡಾ.ಕೆ.ಎಸ್. ನಾಗರಾಜ, ಆರ್.ಎಸ್.ಭಾಸ್ಕರ ಅವಧಾನಿ, ಡಾ.ಆರ್.ಕೆ. ಪದ್ಮನಾಭ ಮತ್ತಿತರರಿದ್ದರು.
ನಿರ್ಣಯಗಳ ಮಂಡಣೆ
ಸಂಕೇತಿ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಸಂಕೇತಿಗಳ ಪ್ರತಿ ಹಳ್ಳಿಯಲ್ಲೂ ಶ್ರೀರಾಮ ಮಂದಿರವಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ #Ramamandir ನಿರ್ಮಾಣವಾಗಿ ಪ್ರಾಣಪ್ರತಿಷ್ಠಾಪನೆ ಜನವರಿಯಲ್ಲಿ ನಡೆಸಲಾಗುವ ವಿಚಾರವನ್ನು ಸಮ್ಮೇಳನ ಹರ್ಷದಿಂದ ಸ್ವಾಗತಿಸುತ್ತದೆ. ಈ ಪವಿತ್ರ ಕಾರ್ಯಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯದಾಳದಿಂದ ಅಭಿನಂದನೆ ಸಲ್ಲಿಸಲಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಸಮಾಜಕ್ಕಾಗಿ ಮಾಡುತ್ತಿರುವ ಸೇವಾ ಕಾರ್ಯಗಳ ದಾಖಲೀಕರಣ, ನಮ್ಮ ಸಂಕೇತಿ ಹಳ್ಳಿಗಳ ಪರಿಸ್ಥಿತಿ ಅಧ್ಯಯನ, ಅದರ ಬಗ್ಗೆ ಕ್ಷೇತ್ರ ಸಂದರ್ಶನ ಮಾಡಿ, ಸಾಹಿತ್ಯ ರಚನೆಗೆ ಆದ್ಯತೆ ನೀಡಬೇಕಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ನಮ್ಮ ಸಂಕೇತಿಗಳ ಸಾಧನೆಗಳ ಬಗ್ಗೆ ಪರಿಚಯ ಮಾಡುವಂತಹ ಕ್ರಿಯಾತ್ಮಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಾಗಿದೆ. ಸಂಕೇತಿ ಸಮುದಾಯವನ್ನು, ಸಂಕೇತಿ ಸಂಘ-ಸಂಸ್ಥೆಗಳನ್ನು ವಿಶೇಷವಾಗಿ ಆಗ್ರಹಿಸಿ, ನಮ್ಮ ಸಮುದಾಯ ಉಳಿಸಿಕೊಳ್ಳುವ ಸರ್ವ ಪ್ರಯತ್ನವನ್ನು ಎಲ್ಲ ಕ್ಷೇತ್ರಗಳಲ್ಲೂ ಮಾಡಬೇಕು. ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರೆಸುವ ಹಿನ್ನೆಲೆಯಲ್ಲಿ ಗ್ರಾಮ, ನಗರ ಕೇಂದ್ರಿತ ಓದುಗರ ಸಮಾವೇಶ, ಬರಹಗಾರರ ಸಮ್ಮಿಲನ, ಕಾರ್ಯಾಗಾರ, ಕ್ಷೇತ್ರ ಪ್ರವಾಸಕ್ಕಾಗಿ ಅಧ್ಯಯನ ಪಾಠ, ರಚನೆ, ಕಥೆ, ಕವನಗಳ ಸ್ಪರ್ಧೆಗಳನ್ನು ಸಂಕೇತಿಗಳಿಗಾಗಿ ಆಯೋಜಿಸುವ ಸಂಕಲ್ಪ ತೊಡಬೇಕೆಂದು ಸಂಕೇತ ಸಮುದಾಯವನ್ನು ವಿಶೇಷವಾಗಿ, ಸಂಕೇತಿ ಯುವ ಸಮುದಾಯವನ್ನು ವಿನಂತಿ ಪೂರ್ವಕ ಆಗ್ರಹ ಮಾಡುವಂತೆ ಸಮ್ಮೇಳನ ನಿರ್ಣಯಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post