ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಭೆಯಲ್ಲಿ ಸಕಾಲ ಸೇವೆಯನ್ನೂ ಡಿಜಿಟಲೀಕರಣಗೊಳಿಸುವ ಬಗ್ಗೆಯೂ ಸಚಿವ ಕೃಷ್ಣ ಬೈರೇಗೌಡ Minister Krishna byregowda ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಯಲ್ಲಿ ಈಗಾಗಲೇ ಎಲ್ಲಾ ಸೇವೆಯನ್ನೂ ಆನ್‌ಲೈನ್ ಮೂಲಕವೇ ನೀಡಲಾಗುತ್ತಿದೆ. ಸಕಾಲ ಸೇವೆಯನ್ನೂ ಏಕೆ ಆನ್‌ಲೈನ್ ಮೂಲಕ ನೀಡಬಾರದು? ಎಂದು ಪ್ರಶ್ನಿಸಿದ ಸಚಿವರು, ಸಮಾಜದಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚುತ್ತಿದೆ. ಹೀಗಾಗಿ ಆನ್ಲೈನ್ ಸೇವೆ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬುದು ಸುಳ್ಳು ಹೇಳಿಕೆ. ಕಂದಾಯ ಇಲಾಖೆಯಲ್ಲೇ ಇದು ಸಾಧ್ಯವಾಗಿದೆ ಎಂದ ಮೇಲೆ ಉಳಿದ ಕಡೆ ಏಕೆ ಸಾಧ್ಯವಿಲ್ಲ. ಇನ್ಮುಂದೆ ಸಕಾಲ ಅರ್ಜಿಯನ್ನೂ ಆನ್‌ಲೈನ್ ಮೂಲಕವೇ ಸ್ವೀಕರಿಸಿ ಎಂದು ಸಲಹೆ ನೀಡಿದರು.
“ಪ್ರತಿ ಹಳ್ಳಿಯಲ್ಲೂ ಈಗ ಸೈಬರ್ ತಾಣಗಳಿವೆ. ಸರ್ಕಾರದ ಗ್ರಾಮ-1 ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಮೊಬೈಲ್‌ಗೂ ನೀಡುವ ಉದ್ದೇಶ ಸರ್ಕಾರಕ್ಕಿದೆ. ಇದು ಸಾಧ್ಯವಾದರೆ ಜನ ಮೊಬೈಲ್ ಮೂಲಕವೇ ಸಕಾಲ ಅರ್ಜಿ ಸಲ್ಲಿಸಿ ಸೇವೆಯನ್ನೂ ಪಡೆಯಬಹುದು. ಸಕಾಲ ಸೇವೆ ಡಿಜಿಟಲೀಕರಣಗೊಂಡರೆ ಡಿಜಿಟಲ್ ಹೆಜ್ಜೆ ಗುರುತಿನ (ಫುಟ್ ಪ್ರಿಂಟ್) ಮೂಲಕ ಅರ್ಜಿ ಎಲ್ಲಿದೆ? ವಿಳಂಭಕ್ಕೆ ಕಾರಣವೇನು? ಎಂಬ ಕುರಿತ ಮಾಹಿತಿ ನಮಗೂ ಲಭ್ಯವಾಗುತ್ತದೆ. ಹೀಗಾಗಿ ಮುಂದಿನ 5 ವರ್ಷದಲ್ಲಿ ಸಕಾಲ ಸಂಪೂರ್ಣ ಡಿಜಿಟಲ್ ಆಗಬೇಕು” ಎಂದು ಸೂಚಿಸಿದರು.
Also read: ಏನಿದು ಯುವನಿಧಿ ಯೋಜನೆ? ನೋಂದಣಿ ಮಾಡುವುದು ಹೇಗೆ? ಅರ್ಹರಾಗದೇ ಇರುವವರು ಯಾರು?
ಸಕಾಲಕ್ಕೆ ಮತ್ತಷ್ಟು ಹೊಸ ಸೇವೆ ಸೇರ್ಪಡೆ!
ಸಕಾಲ ಕಾಯ್ದೆಯ ಅಡಿಯಲ್ಲಿ ಈಗಾಗಲೇ ಹಲವಾರು ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತಿದೆ. ಇದರ ಜೊತೆಗೆ ಮತ್ತಷ್ಟು ಸೇವೆಗಳನ್ನು ಹೊಸದಾಗಿ ಸೇರಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಅಧೀನ ಇಲಾಖೆಗಳಾದ ಕರ್ನಾಟಕ ರಾಜ್ಯ ಶುಶ್ರೂಷೆ ಪರಿಷತ್ತು, ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿ, ಕರ್ನಾಟಕ ರಾಜ್ಯ ಶುಶ್ರೂಷೆ ಪರೀಕ್ಷಾ ಮಂಡಳಿ ಹಾಗೂ ರಾಜೀವ್ ಗಾಂದಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 130 ಹೊಸ ಸೇವೆಗಳನ್ನು ನೀಡಲು ಪ್ರಸ್ತಾವನೆ ಸಲ್ಲಿಸಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಅಧೀನ ಇಲಾಖೆಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಶೋಧನೆ ಮತ್ತು ತರಬೇತಿ ಇಲಾಖೆ ಈಗಾಗಲೇ 65 ಸೇವೆಗಳನ್ನು ನೀಡುತ್ತಿದ್ದು, ಹೊಸದಾಗಿ 63 ಸೇವೆಗಳನ್ನು ನೀಡಲು ಮುಂದಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ 22 ಸೇವೆಗಳನ್ನು ನೀಡುತ್ತಿದ್ದು, ಹೊಸದಾಗಿ 16 ಸೇವೆಗಳನ್ನು ನೀಡಲು ಪ್ರಸ್ತಾವನೆ ಸಲ್ಲಿಸಿದೆ.
ಇದೇ ರೀತಿ ಕೃಷಿ ಇಲಾಖೆ, ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಾನೂನು ಇಲಾಖೆ, ಸಾರಿಗೆ ಇಲಾಖೆ, ಒಳಾಡಳಿತ ಇಲಾಖೆ, ವಸತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಹಕಾರ ಇಲಾಖೆ, ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಆರ್ಥಿಕ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಯೂ ಹೊಸ ಸೇವೆಗಳ ಪ್ರಸ್ತಾವನೆ ಸಲ್ಲಿಸಿದ್ದು, 500 ಕ್ಕೂ ಹೆಚ್ಚು ಹೊಸ ಸೇವೆಗಳ ಜನರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















