ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕಲಾ ಕೌಶಲ ಇರುವ ಉತ್ಸಾಹಿಗಳಿಗೆ ಬೆಂಬಲ ನೀಡಿ, ವೇದಿಕೆ ಕಲ್ಪಿಸಿ ಕೊಡಿ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ Pramodadevi Odeyar ಹೇಳಿದರು.
ನಾದ ವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ ಜಗನ್ಮೋಹನ ಅರಮನೆಯ ಸಭಾಂಗಣ ಆಯೋಜಿಸಿದ್ದ ಕಲಾವಿದೆ ಸುನಿತಾ ರತೀಶ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ, ನವ ಕಲಾವಿದೆ ಸುನಿತಾ ಚಿಕ್ಕ ವಯಸ್ಸಿನಲ್ಲೇ ಹಲವು ರಂಗದಲ್ಲಿ ಸಾಧನೆ ಮಾಡಿದ್ದಾರೆ. ಭರತನಾಟ್ಯದಲ್ಲಿ ಅವರು ವಿನೂತನ ಪ್ರಯೋಗದ ಮೂಲಕ ಹೊಸ ಹೆಜ್ಜೆಗಳನ್ನು ಸ್ಥಾಪಿಸುತ್ತಿದ್ದಾರೆ. ಅವರಿಗೆ ಭವಿಷ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಾನ್ಯತೆ ದೊರಕಲಿ ಎಂದು ಹಾರೈಸಿದರು. ವಿದುಷಿ ಮಿತ್ರಾ ಅವರು 32ನೇ ರಂಗಪ್ರವೇಶ ಕಾರ್ಯಕ್ರಮ ಮಾಡುತ್ತಿರುವುದು ದೊಡ್ಡ ಸಾಧನೆಯೇ ಆಗಿದೆ ಎಂದರು.
ನುರಿತ ನೃತ್ಯಪಟು
ನೂಪುರ ಟ್ರಸ್ಟ್‌ನ ಕಲಾ ನಿರ್ದೇಶಕ ಮತ್ತು ನಾಟ್ಯಾಚಾರ್ಯ ಪ್ರೊ.ಕೆ. ರಾಮಮೂರ್ತಿ ರಾವ್ ಮಾತನಾಡಿ, ಆರಂಭದಿಂದ ಕೊನೆಯವರೆಗೂ ನಾಟ್ಯದಲ್ಲಿ ತನ್ನ ನಗುವಿನ ಮುಖಭಾವದೊಂದಿಗೆ ಸಭಿಕರನ್ನು ರಂಜಿಸುವ ಕಲೆಯನ್ನು ಸುನಿತಾ ಸಿದ್ಧಿಸಿಕೊಂಡಿದ್ದಾರೆ. ನಾಟ್ಯದಲ್ಲಿ ಅವರು ತೋರುವ ತಲ್ಲೀನತೆ, ಶ್ರದ್ಧಾಭಾವದಿಂಧ ಅವರೊಬ್ಬ ನುರಿತ ನೃತ್ಯಪಟು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.
ಆರೋಗ್ಯ ಇಲಾಖೆ ಜಿಲ್ಲಾ ಅಧೀಕ್ಷಕ ಸುರೇಶ ಬಾಬು, ಉದ್ಯಮಿ ರತೀಶ್, ಗುರು ವಿದುಷಿ ಮಿತ್ರಾ ನವೀನ್, ವಿದ್ವಾನ್ ನವೀನ್, ಶ್ರೀ ರಾಮು ಹಾಜರಿದ್ದರು.
ಗಮನ ಸೆಳೆದ ನೃತ್ಯ ಪ್ರಸ್ತುತಿ
ಸುನಿತಾ ಅವರು ಪ್ರಾಥನೆಯೊಂದಿಗೆ ನೃತ್ಯ ಪ್ರಸ್ತುತಿ ಪ್ರಾರಂಭಿಸಿದರು. ಮೇಳಪ್ರಾಪ್ತಿ ಹಾಗೂ ಗುರು ವಂದನೆ ಸಲ್ಲಿಸಿದ ಅವರು ಶ್ರೀ ಚಾಮುಂಡೇಶ್ವರಿಯ ವಿವಿಧ ಶಕ್ತಿಯನ್ನು ಬಣ್ಣಿಸುವ ಅಲರಿಪು ಮೂಲಕ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತು. ಶೀಘ್ರ ಗತಿಯಲ್ಲಿ ನರ್ತಿಸುವ ಜತಿಸ್ವರದ ಪ್ರಸ್ತುತಿ ಗಮನ ಸೆಳೆಯಿತು. ವಿಭಿನ್ನ ಸಂಯೋಜನೆಯ ಶಬ್ದಂ (ವಿಷ್ಣು ಮೋಹಿನಿ ರೂಪ ತಾಳಿದ್ದಾಗ ಶಿವ ಆಕೆಯನ್ನು ಮೋಹಿಸಿ ಸ್ವಾಮಿ ಅಯ್ಯಪ್ಪನನ್ನು ಪಡೆದ ಕಥೆ) ಮನೋಜ್ಞವಾಗಿ ಮೂಡಿಬಂತು.
ವರ್ಣದ ಸಮರ್ಪಣೆ ಕಲಾವಿದೆಯ ನೃತ್ಯ ಸಾಮರ್ಥ್ಯ ಮತ್ತು ನೈಪುಣ್ಯವನ್ನು ಬಿಂಬಿಸಿತು. ವಿರಹದಿಂದ ಬೇಸತ್ತ ನಾಯಕಿ,ತನ್ನ ವೇದನೆಯನ್ನು ತನ್ನ ಸಖಿಯೊಂದಿಗೆ ನಿವೇದಿಸಿಕೊಳ್ಳುವ ಪರಿಯನ್ನು ಸುನಿತಾ ಪ್ರಸ್ತುತಪಡಿಸಿ ತಾನೊಬ್ಬ ಪ್ರಬುದ್ದ ಕಲಾವಿದೆ ಎಂಬುದನ್ನು ಸಾಬೀತುಪಡಿಸಿದರು.
Also read: ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ | ಇಬ್ಬರು ದಾರುಣ ಸಾವು
ನೂರ್ಮಡಿಸಿದ ಸೊಬಗು
ಉತ್ತರಾರ್ಧದಲ್ಲಿ ನೃತ್ಯಾಧಿಪತಿ ಶಿವನನ್ನು ಆರಾಧಿಸುವ ‘ಮಹಾದೇವ ಶಿವಶಂಭೋ’ ಎಲ್ಲರನ್ನು ಭಾವಪರವಶವನ್ನಾಗಿಸಿತು. ಕೃಷ್ಣನ ವೇಣುಗಾನದ ಮೋಡಿಗೆ ಮರುಳಾಗಿ ಚಿತ್ತ ಚಂಚಲತೆಯಿಂದ ನಾಯಕಿಯ ಪರಿತಾಪದ ಅಭಿನಯ ನೈಜತೆಯಿಂದ ಕೂಡಿತ್ತು. ತಿಲ್ಲಾನದ ರೋಚಕ ಪ್ರದರ್ಶನ ರಂಗ ಪ್ರವೇಶದ ಸೊಬಗನ್ನು ನೂರ್ಮಡಿಸಿದ್ದು ವಿಶೇಷ.
ಗುರು ಮಿತ್ರಾ ನವೀನ್ ಅವರ ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ಮಿತ್ರಾ ಅವರ ನಟುವಾಂಗ, ವಿದ್ವಾನ್ ನವೀನ್ ಅಂದಗಾರ್ ಗಾಯನ, ವಿದ್ವಾನ್ ಜಿ.ಎಸ್. ನಾಗರಾಜ್ ಮೃದಂಗ ಮತ್ತು ವಿದ್ವಾನ್ ವಿವೇಕ ಕೃಷ್ಣ ಕೊಳಲು ಪಕ್ಕವಾದ್ಯ ಸಹಕಾರ ಮೆರುಗು ನೀಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post