ಕಲ್ಪ ಮೀಡಿಯಾ ಹೌಸ್ | ದಾವಣಗೆರೆ (ಹರಿಹರ) |
ಮುಂದಿನ ಬಾರಿಯೂ ನರೇಂದ್ರಮೋದಿಯವರೇ ಪ್ರಧಾನಿಯಾಗಲಿದ್ದು, ಅವರ ಅವಧಿಯಲ್ಲಿಯೇ ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಂವಿಧಾನದ ಶೆಡ್ಯುಲ್ 9ಕ್ಕೆ ಸೇರಿಸಲು ಒತ್ತಾಯ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Basavaraja Bommai ಹೇಳಿದ್ದಾರೆ.
ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾಯಕ ಸಮುದಾಯಕ್ಕೆ ಎಸ್ಟಿಗೆ ಸೇರ್ಪಡೆ ಮಾಡಿದ ನಂತರ ಮೂವತ್ತೈದು ವರ್ಷಗಳ ನಂತರ ಈ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಆಶೋತ್ತರಗಳು ಹೆಚ್ಚಾಗಿವೆ. ನಮ್ಮ ಸಂವಿಧಾನ ಜೀವಂತಿಕೆ ಇರುವ ಸಂವಿಧಾನ, ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಅವಕಾಶ ಇದೆ. ಕೆಲವು ದೇಶದ ಸಂವಿಧಾನಗಳನ್ನು ಬರೆದು ಇಟ್ಟಿದ್ದಾರೆ. ಅವು ಜೀವಂತಿಕೆಯನ್ನು ಕಳೆದುಕೊಂಡಿವೆ. ದೇಶದಲ್ಲಿ ಕಾಲಕಾಲಕ್ಕೆ ಆಗುವ ಸಾಮಾಜಿಕ ಬದಲಾವಣೆಗೆ ತಕ್ಕಂತೆ ಸಂವಿಧಾನ ತಿದ್ದುಪಡಿ ಮಾಡಲು, ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಇಚ್ಚಾಶಕ್ತಿ ಬೇಕಿದೆ. ವಾಲ್ಮೀಕಿ ಸ್ವಾಮೀಜಿಗಳ ಹೋರಾಟದ ಫಲದಿಂದ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ 7 ಕ್ಕೆ ಹೆಚ್ಚಳ ಮಾಡಲು ನನಗೆ ಪ್ರೇರಣೆಯಾಯಿತು ಎಂದು ಹೇಳಿದರು.

Also read: ಶಿವಮೊಗ್ಗ | ಬಾರೇಹಳ್ಳ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಚಿವ ಮಧು ಬಂಗಾರಪ್ಪ ಸೂಚನೆ
ಮೀಸಲಾತಿ ಹೆಚ್ಚಳ ದಿಂದ ಎಸ್ಟಿ ಸಮುದಾಯಕ್ಕೆ ಸುಮಾರು 3500 ಹೆಚ್ಚು ಎಂಜನಿಯರಿಂಗ್ ಸೀಟುಗಳು, ಸುಮಾರು 400 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ದೊರೆತಿವೆ. ಅಲ್ಲದೆ ಎಲ್ಲ ಇಲಾಖೆಗಳ ಬಡ್ತಿಯಲ್ಲಿ ಹೆಚ್ಚು ಅವಕಾಶಗಳು ದೊರೆತಿವೆ. ನಾವು ಮಾಡಿರುವ ಆದೇಶವನ್ನು ಈ ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಆ ಕೆಲಸವನ್ನು ವಾಲ್ಮೀಕಿ ಸ್ವಾಮೀಜಿ ಈ ಸರ್ಕಾರ ದಿಂದ ಮಾಡಿಸಬೇಕು ಎಂದರು.

ವಾಲ್ಮೀಕಿ ಪರಿವರ್ತನೆಯ ಹರಿಕಾರ
ಮಹರ್ಷಿ ವಾಲ್ಮೀಕಿ ಅಂದರೆ, ಚೈತನ್ಯ, ಶಕ್ತಿ, ಪರಿವರ್ತನೆಯ ಹರಿಕಾರ, ಗಾಳಿ, ನೀರು, ಪ್ರಕೃತಿ ನಿರಂತರ ಪರಿವರ್ತನೆ ಆಗುತ್ತಿರುತ್ತದೆ. ಪರಿವರ್ತನೆಗೆ ಅತ್ಯಂತ ಶ್ರೇಷ್ಠ ಉದಾಹರಣೆ ವಾಲ್ಮೀಕಿ, ವಾಲ್ಮೀಕಿ ಇಲ್ಲದೇ ರಾಮಾಯಣ ಇಲ್ಲ. ರಾಮಾಯಣ ಇಲ್ಲದೆ ರಾಮ ಇಲ್ಲ. ದೇಶದಲ್ಲಿ 123 ರಾಮಾಯಣ ಕೃತಿಗಳಿವೆ ಅವುಗಳಲ್ಲಿ ಶ್ರೇಷ್ಠವಾಗಿರುವ ಕೃತಿ ಎಂದರೆ ವಾಲ್ಮೀಕಿ ರಾಮಾಯಣ ಎಂದು ಹೇಳಿದರು.

ಈ ದೇಶ ರಾಮನ ದೇಶ, ಕಷ್ಟ ಕಾಲದಲ್ಲಿ ಈ ದೇಶವನ್ನು ರಕ್ಷಿಸಿದವರು ವಾಲ್ಮೀಕಿ ಕುಲದವರು. ನಿಮ್ಮ ಕುಲದ ಬಗ್ಗೆ ನಿಮಗೆ ಹೆಮ್ಮೆ ಇದ್ದರೆ, ನಿಮಗೆ ಅತ್ಯಂತ ಉನ್ನತ ಸ್ಥಾನ ಮಾನ ಎಲ್ಲವೂ ದೊರೆಯುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ರಾಜುಗೌಡ, ವಾಲ್ಮೀಕಿ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಹಾಜರಿದ್ದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post