ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶತಮಾನಗಳ ಹೋರಾಟದ ಫಲವಾಗಿ ಇಂದಿನ ಸಮಾಜದಲ್ಲಿ ಮಹಿಳೆ ಸಬಲಗೊಂಡು, ತನ್ನ ಸಾಮರ್ಥ್ಯವನ್ನು ಹೊರಹಾಕಿದ್ದಾಳೆ ಎಂದು ಕುವೆಂಪು ವಿವಿ ವಿಶ್ರಾಂತ ಸಿಂಡಿಕೇಟ್ ಸದಸ್ಯೆ ಕಿರಣ್ ದೇಸಾಯಿ ಅಭಿಪ್ರಾಯಪಟ್ಟರು.
ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ #Women’sDay ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಮಹಿಳೆ ವಿಶ್ವದ ಎಲ್ಲ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆ ಮಾಡಿದ್ದಾಳೆ ಎಂದರೆ ಅದು ಸಮ್ಮನೆ ರಾತ್ರೋರಾತ್ರಿ ಆಗಿಲ್ಲ. ಬದಲಾಗಿ ಅದರ ಹಿಂದೆ ಶತಮಾನಗಳ ಸಾಧನೆ, ತ್ಯಾಗ ಅಡಗಿದೆ. ಆಯಾ ಕಾಲಘಟ್ಟದಲ್ಲಿ ಮಹಿಳೆಯರ ಹಕ್ಕು ಹಾಗೂ ಸಮಾನತೆಗಾಗಿ ಹೋರಾಟಗಳು ನಡೆದಿದ್ದರ ಫಲ ಈಗ ದೊರೆಯುತ್ತಿದೆ ಎಂದರು.
ಶೈಕ್ಷಣಿಕವಾಗಿ ಮುಂದುವರೆದು ಮಹಿಳೆಯರು 19-20ನೆಯ ಶತಮಾನದ ಈಚೆಗೆ ಹೆಚ್ಚಿನ ಪ್ರಾಧಾನ್ಯತೆ ಪಡೆದುಕೊಂಡಿದ್ದಾರೆ. ಶೈಕ್ಷಣಿಕ ಬೆಳವಣಿಗೆಯೊಂದಿಗೆ ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದು, ಇದರಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ದೊರೆಯಬೇಕಿದೆ ಎಂದರು.
ಸ್ವತಂತ್ರ ಬಂದಾಗಿನಿಂದ ಈಗಿನವರೆಗೂ ನೋಡಿದರೆ ಮಹಿಳೆಯರಿಗೆ ಇನ್ನೂ ಪ್ರಾಶಸ್ತ್ಯ ದೊರೆಯಬೇಕಿದ್ದು, ಇದಕ್ಕಾಗಿ ಪ್ರಬಲ ಹೋರಾಟಗಳು ನಡೆಯಬೇಕಿದೆ ಎಂದರು.
ಈಗಿನ ಮಹಿಳೆಯರಿಗೆ ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಕುಟುಂಬ ನಿರ್ವಹಣೆ ಆಗಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಮಹಿಳೆಗೆ ಇದರೊಂದಿಗೇ ಆಕೆಗೆ ಕುಟುಂಬ ನಿರ್ವಹಣೆಯೂ ಸಹ ಕಷ್ಟವಾಗುತ್ತಿದೆ. ಇದರ ಪರಿಹಾರಕ್ಕಾಗಿ ಪುರುಷರು ಕುಟುಂಬ ನಿರ್ವಹಣೆ ಹಾಗೂ ಮನೆ ಕೆಲಸಗಳಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಮ್ಮ ಸಮಾಜದ ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಮಹಿಳೆಯನ್ನು ಕುಗ್ಗಿಸಿ, ಹತ್ತಿಕ್ಕಲಾಗಿದೆ. ಅದು ಬದಲಾಗಿ ವೈಯಕ್ತಿಕ ಅಸ್ಮತೆ ಕುಗ್ಗಿಸುವ ಮನಃಸ್ಥಿತಿಯನ್ನು ಖಂಡಿಸಬೇಕಿದೆ. ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರದಲ್ಲೂ ಅವಕಾಶ ದೊರೆಯುತ್ತಿರುವಂತೆಯೇ ಧಾರ್ಮಿಕ ವಿಚಾರದಲ್ಲೂ ಸಹ ಆಕೆಯ ಅಸ್ಮಿತೆ ವೃದ್ಧಿಸಬೇಕಿದೆ.
-ಕಿರಣ್ ದೇಸಾಯಿ
ಸರ್ವೇಜನಾ ಸುಖಿನೋಭವಂತು ಎಂಬುದನ್ನು ವಿಶ್ವಕ್ಕೇ ಸಾರಿದ ಭಾರತದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ನೀಡುತ್ತಲೇ ಬರಲಾಗಿದೆ. ಆದರೂ, ಆಕೆಗೆ ಸಮಾನತೆ ನೀಡುವ ವಿಚಾರದಲ್ಲಿ ಇನ್ನೂ ಹೆಚ್ಚಿನ ಮನಃಸ್ಥಿತಿ ಬದಲಾಗಬೇಕಿದೆ ಎಂದರು.
ಕರುಣೆ ಹಾಗೂ ಶಾಂತಿ ಎನ್ನುವುದು ಮಹಿಳೆಯ ಶಕ್ತಿಯೇ ಹೊರತು ದೌರ್ಬಲ್ಯವಲ್ಲ. ಇದನ್ನು ಪುರುಷ ಸಮಾಜ ಅರ್ಥ ಮಾಡಿಕೊಂಡು ಆಕೆಯ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ನಡೆಯುವ ಜೊತೆಯಲ್ಲಿ ಸಂಪೂರ್ಣ ಸಮಾನತೆ ಸಹ ನೀಡಬೇಕು ಎಂದು ಕರೆ ನೀಡಿದರು.
ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ಇಂದಿನ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿರುವ ಮಹಿಳೆಯರು ಇನ್ನೂ ಹೆಚ್ಚಿನ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕಿದೆ. ಋಣಾತ್ಮಕ ಅಂಶಗಳ ಬಗ್ಗೆ ಹೆಚ್ಚಿನ ಗಮನ ನೀಡದೇ ಸಕಾರಾತ್ಮಕ ಅಂಶಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು ಮಹಿಳೆಯರು ಸಾಧನೆ ಮಾಡಬೇಕು ಎಂದರು.
ಪ್ರಾಂಶುಪಾಲ ಬಿ.ಎಸ್. ಸುರೇಶ್ ಮಾತನಾಡಿ, ಪ್ರತಿ ಪುರುಷರೂ ತಮ್ಮ ಮನೆ ಕೆಲಸಗಳಲ್ಲಿ ಮಹಿಳೆಯರಿಗೆ ಸಹಕಾರ ನೀಡಬೇಕು. ಅಲ್ಲಿಂದಲೇ ಮಹಿಳೆಯರ ಆತ್ಮಸ್ಥೈರ್ಯಕ್ಕೆ ಬೆನ್ನೆಲುಬಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವೈದ್ಯರು, ಉಪನ್ಯಾಸಕರು, ಅಧ್ಯಾಪಕ ಹಾಗೂ ಅಧ್ಯಾಪಕೇತರ ವರ್ಗದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post