ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೀತಾ ಶಿವರಾಜ್‍ಕುಮಾರ್ Geetha Shivrajkumar ಅವರ ಗೆಲುವು ಖಚಿತ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತಿದ್ದೇವೆ. ಚುನಾವಣಾ ತಯಾರಿ ಕೂಡ ನಡೆದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೀತಾ ಶಿವರಾಜ್‍ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆಗಳು. ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು, ಜನಪ್ರತಿನಿಧಿಗಳು ಸಂಕಲ್ಪ ತೊಟ್ಟಿದ್ದಾರೆ ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ನಡೆದಿದೆ ಎಂದರು.
ಶಿವಮೊಗ್ಗದಲ್ಲಿ ಮಾ.20ರಂದು ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆದಿದೆ. ಸ್ಥಳ ಇನ್ನೂ ನಿಗಧಿ ಮಾಡಿಲ್ಲ. ಈಗಾಗಲೇ ಗೀತಾಶಿವರಾಜ್‍ಕುಮಾರ್ ಅವರು, ಪ್ರಚಾರಕ್ಕೆ ರೆಡಿಯಾಗಿದ್ದಾರೆ. ಮಾ.20ರಂದು ಶಿವಮೊಗ್ಗಕ್ಕೂ ಬರುತ್ತಾರೆ. ಪ್ರತಿಯೊಂದು ಹಳ್ಳಿಯಲ್ಲೂ ಪ್ರಚಾರ ಸಭೆಗಳನ್ನು ಏರ್ಪಡಿಸುತ್ತೇವೆ. ಸುಮಾರು 400ಕ್ಕೂ ಹೆಚ್ಚು ಸಭೆಗಳನ್ನು ಮಾಡಲಿದ್ದೇವೆ. ಗ್ರಾಪಂ, ಹೋಬಳಿ ಮಟ್ಟದಲ್ಲೂ ಕೂಡ ಪ್ರಚಾರ ಸಭೆಗಳು ನಡೆಯುತ್ತವೆ ಎಂದರು.
ಗೀತಾ ಶಿವರಾಜ್‍ಕುಮಾರ್ ಇನ್ನೂ ಶಿವಮೊಗ್ಗಕ್ಕೆ ಕಾಲಿಟ್ಟಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಹಬ್ಬದ ದಿನಗಳು ಮುಗಿಯಲಿ ಎಂದು ಕಾಯುತ್ತಿದ್ದಾರೆ ಅಷ್ಟೇ. ಈಗಾಗಲೇ ಸೊರಬದಲ್ಲಿ ಅವರು ಇದ್ದಾರೆ. ಪ್ರಚಾರವನ್ನೂ ಕೂಡ ಕೈಗೊಂಡಿದ್ದಾರೆ. ಅವರ ಸಹೋದರರಾದ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಕೂಡ ಚುನಾವಣೆಯ ಕೆಲಸ ಮಾಡುತ್ತಿದ್ದಾರೆ. ಗೀತಾ ಶಿವರಾಜ್‍ಕುಮಾರ್ ಅವರ ಜೊತೆಗೆ ನಟ ಶಿವರಾಜ್‍ಕುಮಾರ್ ಕೂಡ ಪ್ರಚಾರಕ್ಕೆ ಕೈಜೋಡಿಸಲಿದ್ದಾರೆ ಎಂದರು.
ಮೋದಿಯ Modi ಅಲೆಗಳೆಲ್ಲ ಸುಳ್ಳಾಗುತ್ತವೆ. ಮೋದಿಯೇ ದೇವರು ಎಂದು ಬಿಜೆಪಿಯವರು ಹೇಳುತ್ತಾ ಬಂದಿದ್ದಾರೆ. ಒಂದು ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿಯ ಸ್ಥಿತಿ ಹೇಳತೀರದಾಗಿದೆ. ಭಿನ್ನಮತ ತಲೆಎತ್ತಿದೆ. ಹತ್ತು ಬಾಗಿಲುಗಳು ತೆರೆದಿವೆ. ಸುಳ್ಳಿನ ಭರವಸೆಗಳೆ ಹೆಚ್ಚಾಗುತ್ತಿವೆ. ನಮ್ಮ ಗ್ಯಾರಂಟಿಗೂ, ಮೋದಿಯವರ ಗ್ಯಾರಂಟಿಗೂ ವ್ಯತ್ಯಾಸವಿದೆ. ಅವರದು ಖಚಿತ ಭರವಸೆ ಅಲ್ಲ ಎಂದರು.
Also read: ಗೀತಾ ಶಿವರಾಜಕುಮಾರ್ ಪ್ರಚಾರ ಆರಂಭಕ್ಕೆ ಡೇಟ್ ಫಿಕ್ಸ್ | ಯಾವೆಲ್ಲಾ `ಕೈ’ ನಾಯಕರು ಬರಲಿದ್ದಾರೆ?
ರಾಜ್ಯದ ಗ್ಯಾರಂಟಿಗಳ ಜೊತೆಗೆ ಈಗ ಕಾಂಗ್ರೆಸ್ ಪಕ್ಷದ ವರಿಷ್ಟ ರಾಹುಲ್‍ಗಾಂಧಿಯವರು Rahul Gandhi ಕೂಡ ತಮ್ಮ ಪ್ರಣಾಳಿಕೆಯನ್ನು ಪ್ರಕಟಿಸಿ 5 ಗ್ಯಾರಂಟಿಗಳನ್ನು ದೇಶದ ಜನತೆಗೆ ನೀಡಿದ್ದಾರೆ. 30 ಲಕ್ಷ ಹುದ್ದೆಗಳು ಭರ್ತಿ ಮಾಡುವುದು, ಮನೆಯ ಯಜಮಾನಿಗೆ ವರ್ಷಕ್ಕೆ 1 ಲಕ್ಷ ರೂ. ನೀಡುವ ನಾರಿ ಯೋಜನೆ, ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ 1 ವರ್ಷ ಸ್ಟೈಫಂಡರಿ, ಉದ್ಯೋಗಸ್ಥ ಮಹಿಳೆಯರಿಗಾಗಿ ಹಾಸ್ಟೆಲ್ ವ್ಯವಸ್ಥೆ ಇವು ಕಾಂಗ್ರೆಸ್‍ನ ಗ್ಯಾರಂಟಿಗಳು ಆಗಿವೆ ಎಂದರು.
ಲೋಕಸಭಾ ಸದಸ್ಯನ್ನಾಗಿ 10 ವರ್ಷವಿದ್ದ ಬಿ.ವೈ. ರಾಘವೇಂದ್ರ MP Raghavendra ಶಿವಮೊಗ್ಗ ಜಿಲ್ಲೆಗೆ ಹೇಳುವಂತ ಕೊಡುಗೆಗಳನ್ನೇನು ನೀಡಿಲ್ಲ. ಅವು ಮಹತ್ವದ ಕೊಡುಗೆಗಳೇ ಅಲ್ಲ. ಅಡಿಕೆ ಸಮಸ್ಯೆಯ ಬಗ್ಗೆ ಸಂಸತ್‍ನಲ್ಲಿ ಧ್ವನಿಯನ್ನು ಎತ್ತಲಿಲ್ಲ. ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು 15 ದಿನದೊಳಗೆ ಬಗೆಹರಿಸುತ್ತೇನೆ ಎಂದು ಹೇಳಿ ವರ್ಷಗಳಾದವು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರದಿಂದ ಯಾವ ನೆರವನ್ನು ಪಡೆಯಲಿಲ್ಲ. ತುಟಿಪಿಟಿಕ್ ಎನ್ನಲಿಲ್ಲ ಎಂದು ಆರೋಪಿಸಿದರು.
ಸ್ಮಾರ್ಟ್ ಸಿಟಿಯ ಹಗರಣ ಎದ್ದು ಕಾಣುತ್ತಿದ್ದರೂ, ಸಾರ್ವಜನಿಕರು, ಸಂಘಸಂಸ್ಥೆಗಳು, ನೂರಾರು ಬಾರಿ ಮುಷ್ಕರ ಮಾಡಿದ್ದರೂ ಕಣ್ಣಿಗೆ ರಾಚುವಂತೆ ಭ್ರಷ್ಟಾಚಾರ ನಡೆದಿದ್ದರೂ ಕೂಡ ಕೇಂದ್ರ ಸರ್ಕಾರದ ಈ ಯೋಜನೆ ಬಗ್ಗೆ ಸಂಸದರು ಒಂದು ಮಾತನ್ನಾಡಲಿಲ್ಲ. ಸ್ಮಾರ್ಟ್‍ಸಿಟಿ ಕಳಪೆ ಕಾಮಗಾರಿ ಮತ್ತು ಭ್ರಷ್ಟಚಾರದ ಬಗ್ಗೆ ತನಿಖೆಯಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಚಂದ್ರಭೂಪಾಲ್, ಕಲೀಂ ಪಾಶಾ, ಇಕ್ಕೇರಿ ರಮೇಶ್, ಎನ್.ಡಿ.ಪ್ರವೀಣ್‍ಕುಮಾರ್, ಜಿ.ಪದ್ಮನಾಭ್, ಶಿ.ಜು.ಪಾಶ, ಜಿ.ಡಿ. ಮಂಜುನಾಥ್, ಪಿ.ಎಸ್. ಗಿರೀಶ್‍ರಾವ್, ಎಂ.ಟಿ. ದಿನೇಶ್ ಪಾಟೀಲ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post