ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಲೋಕಸಭಾ ಸಾರ್ವತ್ರಿಕ ಚುನಾವಣೆಯು Lokasabha Election ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆ ದಿಸೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾರ್ಚ್, 28 ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ DC Venkat Raja ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಏಪ್ರಿಲ್, 04 ಕೊನೆಯ ದಿನವಾಗಿದೆ. ಏಪ್ರಿಲ್, 05 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಏಪ್ರಿಲ್, 08 ರಂದು ನಾಮಪತ್ರ ವಾಪಸ್ಸು ಪಡೆಯಲು ಕಡೆಯ ದಿನವಾಗಿದೆ. ಏಪ್ರಿಲ್, 26 ರಂದು ಮತದಾನ ನಡೆಯಲಿದ್ದು, ಜೂನ್, 04 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2,36,562 ಮತದಾರರು ಇದ್ದು, ಇವರಲ್ಲಿ 1,15,159 ಪುರುಷ ಮತದಾರರು ಮತ್ತು 1,21,394 ಮಹಿಳಾ ಮತದಾರರು ಇದ್ದು, ಇತರೆ 9 ಮಂದಿ ಮತದಾರರು ಇದ್ದಾರೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 2,29,592 ಮಂದಿ ಮತದಾರರು ಇದ್ದು, ಇವರಲ್ಲಿ 1,13,319 ಪುರುಷ ಮತದಾರರು ಮತ್ತು 1,16,266 ಮಹಿಳಾ ಮತದಾರರು ಇದ್ದಾರೆ, 7 ಮಂದಿ ಇತರೆ ಮತದಾರರು ಇದ್ದಾರೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 18 ರಿಂದ 19 ವಯಸ್ಸಿನ 9,076 ಯುವ ಮತದಾರರು ಇದ್ದು, 4,547 ಪುರುಷ ಯುವ ಮತದಾರರು ಮತ್ತು 4,529 ಮಹಿಳಾ ಮತದಾರರು ಇದ್ದಾರೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ವಿಶೇಷ ಚೇತನ ಮತದಾರರು ಇದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 273 ಮತಗಟ್ಟೆ ಹೊಂದಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ರ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದೆ.

Also read: ಹಾಲಿ ಸಂಸದರ ಬಗ್ಗೆ ಆಕ್ರೋಶವಿದೆ, ಪಕ್ಷ ನಿಷ್ಠೆಗಾಗಿ ಜನರಿಂದ ನನಗೆ ಬೆಂಬಲ: ಈಶ್ವರಪ್ಪ ವಿಶ್ವಾಸ
ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ಮತಗಟ್ಟೆಗಳಿಗೆ ಒಬ್ಬರು ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳು ಹಾಗೂ ಮೀಸಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರಿ ಅಧಿಕಾರಿ/ ಸಿಬ್ಬಂದಿಗಳನ್ನು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತದೆ.
ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ಸೆಕ್ಟರ್ ಅಧಿಕಾರಿಗಳು ಪ್ರೈಯಿಂಗ್ ಸ್ಕ್ವಾಡ್, ಲೆಕ್ಕ ವೀಕ್ಷಕರ ತಂಡ, ವಿಡಿಯೋ ವಿವಿಂಗ್ ತಂಡ, ವಿಡಿಯೋ ಪರಿಶೀಲನಾ ತಂಡ, ಸಹಾಯಕ ವೆಚ್ಚ ವೀಕ್ಷಕರ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ 44 ಮಂದಿ ಸೆಕ್ಟರ್ ಅಧಿಕಾರಿಗಳು, 21 ಮಂದಿ ಪ್ಲೈಯಿಂಗ್ ಸ್ಕ್ವಾಡ್, 42 ಮಂದಿ ಸ್ಟಾಟಿಕ್ ಸರ್ವಿಲೆನ್ಸ್ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಕೋವಿಡ್ ಶಂಕಿತ, ದೃಢಪಟ್ಟ ಮತದಾರರಿಗೆ ಹಾಗೂ ಅಗತ್ಯ ಸೇವೆಗಳ ಇಲಾಖೆಗಳ ನಿರತ ಅಧಿಕಾರಿ ಸಿಬ್ಬಂದಿಗಳಿಗೆ ವಿಶೇಷ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಚುನಾವಣಾ ಕರಪತ್ರಗಳು, ಪೋಸ್ಟರ್, ಬಿಲ್‍ಗಳಲ್ಲಿ ಪ್ರಕಾಶಕರು ಮತ್ತು ಪ್ರಕಾಶನ ಸಂಸ್ಥೆಯ ಮಾಹಿತಿಯನ್ನು ಕಡ್ಡಾಯವಾಗಿ ಮುದ್ರಿಸಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಅಭ್ಯರ್ಥಿಯ ಪರವಾಗಿ ಯಾವುದೇ ರೀತಿಯ ರಾಜಕೀಯ ಜಾಹೀರಾತನ್ನು ಪ್ರಕಟಿಸುವ/ಪ್ರಸಾರ ಮಾಡುವ ಮೊದಲು ಜಾಹೀರಾತಿನ ವಿವರವನ್ನು ಚುನಾವಣಾ ಎಂಸಿಎಂಸಿ ತಂಡದ ಗಮನಕ್ಕೆ ತಂದು ಪ್ರಮಾಣ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ www.eci.nic.in ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‍ಸೈಟ್ www.ceokarnataka.kar.nic.in ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ವೆಬ್‍ಸೈಟ್ www.kodagu.nic.in ನಲ್ಲಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post