ಕಲ್ಪ ಮೀಡಿಯಾ ಹೌಸ್ | ಸೊರಬ |
ಹಿಂದೆಂದೂ ಕಾಣದಂತಹ ಉಷ್ಣತೆ, ದಿನದಿಂದ ದಿನಕ್ಕೆ ಪಾತಾಳ ಮುಟ್ಟುತ್ತಿರುವ ನೀರು. ಕೃಷಿಗಿರಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿಯಲ್ಲಿ ನೀರಿನ ಮೂಲಕ್ಕೆ ಕೈಹಾಕುವ ಮೂಲಕ ಪರಿಸರ ಮಾರಕ ಚಟುವಟಿಕೆ ಹಳೇಸೊರಬದಲ್ಲಿ ಪ್ರತ್ಯಕ್ಷದರ್ಶಿಯಾಗಿದೆ.
ಪಟ್ಟಣ ಹೊರವಲಯದ ಹಳೇಸೊರಬ ಐತಿಹಾಸಿಕ ಕೆರೆ ರಸ್ತೆ ಅಗಲೀಕರಣದಿಂದಾಗಿ ತನ್ನ ನೀರಿನ ಸಾಮರ್ಥ್ಯ ವ್ಯಾಪ್ತಿಯನ್ನು ಕಿರಿದಾಗಿಸಿಕೊಂಡಿದೆ.
ತೆರೆದ ಬಾವಿ, ಕೊಳವೆಬಾವಿಗೆ ಅಗತ್ಯ ಮೂಲವಾದ, ಗ್ರಾಮದ ನೂರಾರು ಎಕರೆ ಕೃಷಿಭೂಮಿಗೆ ನೂರಾರು ವರ್ಷಗಳಿಂದ ನೆರವಾಗಿ ಜನತೆಯ ಜೀವ ಜಲ ಸಂಗ್ರಹಣೆಯ ಕೆರೆ ಪ್ರಸ್ತುತ ಸುಮಾರು ನಾನೂರು ಅಡಿಯಷ್ಟು ಉದ್ದಕ್ಕೆ ಸುಮಾರು ಹನ್ನೆರಡು ಅಡಿ ಅಗಲ ವಿಸ್ತಾರದಲ್ಲಿ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದಾಗಿ ಶೇ. 20-25 ರಷ್ಟು ಭವಿಷ್ಯದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕೊರತೆ ಎದುರಿಸಬೇಕಿದೆ.
Also read: ನೆನಪಿಡಿ! ನನ್ನ ಕ್ರಮ ಸಂಖ್ಯೆ 8, ನನ್ನ ಚಿನ್ಹೆ ಕಬ್ಬಿನ ಜಲ್ಲೆ ಜೊತೆಗಿನ ರೈತ | ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ
ಸಾಲದೆಂಬಂತೆ ಇದೇ ಕೆರೆಯ ಹಿಂಬದಿ ಅವೈಜ್ಞಾನಿಕವಾಗಿ ಮಣ್ಣು ತೆಗೆದು ನೀರು ಸಂಗ್ರಹಣೆಗೆ ತೊಡಕ್ಕನ್ನುಂಟು ಮಾಡಿದ್ದಾರೆ. ಗ್ರಾಮದ ಕೆಲವರು ಅಭಿವೃದ್ಧಿ ಕಾರ್ಯ ಅಡ್ಡಿಪಡಿಸಬೇಡಿ ಎಂದರೆ ಕೆಲವರು ಕೆರೆ ಮುಚ್ಚಿ ಅಭಿವೃದ್ಧಿ ಮಾಡುವುದು ಯಾವ ರೀತಿಯ ಅಭಿವೃದ್ಧಿ ಎಂಬ ದ್ವಂದ್ವ ಹೇಳಿಕೆಗಳನ್ನು ನೀಡುತ್ತಾರೆ. ಹಾಗಾಗಿ, ಸಾಂಘಿಕ ಕೆರೆ ರಕ್ಷಣೆ ವಿಚಾರ ಕೆರೆಯ ಜೊತೆಗೇ ಹೂತು ಹೋಗಿದೆ.
ರಸ್ತೆ ನಿರ್ಮಾಣಕ್ಕಾಗಿ ಅನುಮತಿ ಪಡೆಯದೆ ಕೆರೆಗಳಲ್ಲಿ 10 ಅಡಿಗೂ ಹೆಚ್ಚು ಮಣ್ಣು ಲೂಟಿ ಮಾಡುತ್ತಿದ್ದರೂ, ಸಂಬಂಧಿಸಿದ ಇಲಾಖೆಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
ರಸ್ತೆ ವಿಸ್ತರಿಸಲು ಸುಮಾರು 8-10 ಅಡಿ ಕೆರೆಹುಗಿದು ಮಣ್ಣು ಏರಿಸುತ್ತಿದ್ದು ಕೆರೆಯ ಮಣ್ಣನ್ನೆ ಬಳಸಲಾಗಿದೆ. ಇಲ್ಲಿನ ಬೃಹತ್ ಮರವೊಂದನ್ನು ತೆಗೆಯಲಿದ್ದು ಅದರ ನಿರ್ಜೀವ ಬೇರುಗಳು ಕೆರೆಯ ಏರಿಯನ್ನು ಸಡಿಲಗೊಳಿಸಲಿದೆ. ತರಾತುರಿಯಿಂದ ಹಣ ಮಂಜೂರಾತಿ ಗಾಗಿ ಕಳಪೆ ಕಾಮಗಾರಿ ನಡೆದಿದೆ. ಕೆರೆ ಹುಗಿದಿದ್ದು ತೀರಾ ದುಷ್ಕೃತ್ಯವೆಂದೆ ಭಾವಿಸಬೇಕಿದೆ.
-ಚಿದಾನಂದ ಗೌಡ, ಅಧ್ಯಕ್ಷರು, ಸಾರ್ವಜನಿಕ ಹಿತ ರಕ್ಷಣಾ ವೇದಿಕೆಸೊರಬದಲ್ಲಿ ಕೆರೆಗಳ ಸಂಖ್ಯೆ ಹೆಚ್ಚಿರುವುದು ಹೆಗ್ಗಳಿಕೆಯೇನಲ್ಲ. ಇಲ್ಲಿನ ಭೂಮಿಗೆ ಅದರ ಅವಶ್ಯಕತೆಯನ್ನು ಮನಗಂಡು ಪೂರ್ವಿಜರು ಇತಿಹಾಸ ಕಾಲದಲ್ಲಿ ರಚಿಸಿಕೊಟ್ಟಿದ್ದಾರೆ. ಅವುಗಳನ್ನು ಉಳಿಸಿಕೊಳ್ಳುವ ಸಾಮಾನ್ಯ ಜ್ಞಾನವನ್ನು ಹೊಂದದ ಆಡಳಿತ ವ್ಯವಸ್ಥೆ ಇಂದಾಗಿ ಮನುಷ್ಯ ಕುಲದ ನಾಶಕ್ಕೆ ಮುಂದಾಗಿರುವುದು ಖೇದಕರ ಸಂಗತಿ.
-ಶ್ರೀಪಾದ ಬಿಚ್ಚುಗತ್ತಿ, ಕಾರ್ಯಕರ್ತ, ಪರ್ಯಾವರಣ, ಸಂರಕ್ಷಣಾ ಗತಿವಿಧಿ
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಅನುಮತಿ ನೀಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಗರಿಷ್ಠ 1.50 ಮೀಟರ್ ಆಳದವರೆಗೆ ಮಾತ್ರವೇ ಹೂಳು ತೆಗೆಯಲು ಅನುಮತಿ ನೀಡಲಾಗುತ್ತದೆ. ಜತೆಗೆ ನೀರಿನ ಸಂಗ್ರಹ ಸಾಮಾರ್ಥ್ಯವನ್ನು ಹೊಂದಿರುವ ಮಣ್ಣಿನ ತಾಯಿ ಪದರಕ್ಕೆ ಹಾನಿಯಾಗದಂತೆ ಹೂಳು ತೆಗೆಯಬೇಕೆಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ.
ಜತೆಗೆ ಹೂಳು ಮಣ್ಣು ತೆಗೆದ ಹಳ್ಳದಲ್ಲಿ ನಾಲ್ಕು ದಿಕ್ಕುಗಳಿಂದ ನಿಗದಿತ ಇಳಿಜಾರು ತೆಪ್ಪೆ ದೋಣಿ ಆಕಾರದಲ್ಲಿ ಮಾಡಿ ದನ, ಕರು, ಮಕ್ಕಳು ಹಾಗೂ ಇತರರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕಂಬ ನಿಯಮ ವಿಧಿಸಲಾಗಿದ್ದರೂ, ಯಾವುದೇ ನಿಯಮಗಳನ್ನು ಪಾಲನೆ ಮಾಡದೆ 10 ಅಡಿಗಳಿಗೂ ಹೆಚ್ಚಿನ ಆಳದವರೆಗೆ ಮಣ್ಣು ತೆಗೆದಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಒಟ್ಟಾರೆ ಐತಿಹಾಸಿಕ, ಜೀವಜಲದ ಆಗರವಾದ ಕೆರೆಯನ್ನು ರಸ್ತೆ ನುಂಗಿದೆ. ವೆಚ್ಛ ಅಧಿಕವಾದರೂ ಕೆರೆಯಲ್ಲಿ ಪಿಲ್ಲರ್ ನಿರ್ಮಿಸಿ ಫ್ಲೈ ಓವರ್ ನಿರ್ಮಿಸಿ ನೀರು ಸಂಗ್ರಹಣೆಯನ್ನು ಕಾಯ್ದುಕೊಳ್ಳಬಹುದಿತ್ತು. ನಮ್ಮ ಆಡಳಿತಕ್ಕೆ ನೀರಿಗಿಂತಲೂ ರಸ್ತೆ ನಿರ್ಮಾಣಕ್ಕೆ ಮಂಜೂರಾಗುವ ಹಣ ಮುಖ್ಯ. ನಾವೂ ಕೂಡ ಉಚಿತ ಕೊಡುಗೆಗೆ ನಮ್ಮನ್ನೆ ಮಾರಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಂಡಿರುವ ಪರಿಣಾಮ ಮನಃಶಾಸ್ತ್ರಜ್ಞರು ಹೇಳುವಂತೆ ನಮ್ಮ ಕುಲದ ನಾಶಕ್ಕೆ ನಾವೇ ಮುಂದಾಗಿರುವುದು ಖೇದಕರ ಸಂಗತಿ.
(ವಿಶೇಷ ವರದಿ: ಮಧು ರಾಮ್ ಸೊರಬ )
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post