ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೇವರಲ್ಲಿ ನಾವು ಕೇವಲ ಲೌಕಿಕ ಸಂಪತ್ತುನ್ನು ಬೇಡಬಾರದು. ಅವು ಕೆಲವೇ ದಿನಕ್ಕೆ ಮಾತ್ರ ಉಪಯೋಗಿ ಆಗುತ್ತವೆ. ಭಕ್ತಿ, ಜ್ಞಾನವನ್ನು ಬೇಡಿದರೆ ಜೀವನ ಪೂರ್ಣ ಬೆಳಕಾಗಿ ಮುಕ್ತಿ ದೊರಕುತ್ತದೆ ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ರಾಮಸ್ವಾಮಿ ವೃತ್ತದಲ್ಲಿರುವ ಶ್ರೀ ವೆಂಕಟಾಚಲಧಾಮದಲ್ಲಿ ಬುಧವಾರ ಹಮ್ಮಿಕೊಂಡಿದ 13ನೇ ಸಂವತ್ಸರೋತ್ಸವದಲ್ಲಿ ಶ್ರೀ ವೆಂಕಟಾಚಲ ಸ್ವಾಮಿ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಪೂಜೆ ಸಮರ್ಪಿಸಿ ಅವರು ಆಶೀರ್ವಚನ ನೀಡಿದರು.
ಕಲಿಗಾಲದಲ್ಲಿ ಮನುಷ್ಯರಿಗೆ ರಾಕ್ಷಸೀ ಪ್ರವೃತ್ತಿ ಹೆಚ್ಚಾಗಿದೆ. ಅಧ್ಯಾತ್ಮ ಜ್ಞಾನದಿಂದ, ಸಾಧು ಸಂತರ ಒಡನಾಟದಿಂದ ನಾವೇನು ದೇವರಾಗುವುದು ಬೇಡ, ಮನುಷ್ಯರಂತಾದರೂ ಜೀವಿಸಿ ಸ್ವಾವಲಂಬಿ ದೇಶ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ ಎಂದವರು ನುಡಿದರು.

ದೇವರು ಸರ್ವ ವ್ಯಾಪಿ. ಆದರೆ ಎಲ್ಲಿ ಆತ್ಮಪೂರ್ವಕ ಪೂಜೆ ಮತ್ತು ಅನ್ನದಾನ ನಡೆಯುತ್ತವೆಯೋ ಅಲ್ಲಿ ದೇವರ ಸಾನ್ನಿಧ್ಯ ಜಾಗೃತವಾಗಿರುತ್ತದೆ. ಹಾಗಾಗಿ ದೇವಸ್ಥಾನಗಳಲ್ಲಿ ಹೆಚ್ಚಾಗಿ ಪೂಜಾದಿಗಳು, ಅನ್ನ ಸಂತರ್ಪಣೆಗಳು ನಡೆಯಬೇಕು. ಈ ಮೂಲಕ ಜನರಿಗೆ ನೆಮ್ಮದಿ ದೊರಕುತ್ತದೆ. ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆ ಎಂದು ಶ್ರೀಗಳು ನುಡಿದರು.

ಕಲಶಾಭಿಷೇಕ ಮತ್ತು ವಿವಿಧ ಹೋಮಗಳು
ವೆಂಕಟಾಚಲ ಧಾಮದಲ್ಲಿ ಬುಧವಾರ ಬೆಳಗ್ಗೆ 50 ಕಲಶಾರಾಧನೆ ನಂತರ ಪವಿತ್ರ ಜಲದಿಂದ ವೆಂಕಟೇಶ ದೇವರಿಗೆ ಕಲಶಾಭಿಷೇಕ ಮತ್ತು ವಿವಿಧ ಹೋಮಗಳು ಸಂಪನ್ನಗೊಂಡವು. ನಂತರ ಶ್ರೀಗಳು ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಪೂಜೆ ನೆರವೇರಿಸಿದರು.
ಇದೇ ಸಂದರ್ಭ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಾಗವತಾಶ್ರಮ ಪ್ರತಿಷ್ಠಾನದ ಟ್ರಸ್ಟಿ ರವೀಂದ್ರ, ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ, ವೇದ ವಿದ್ವಾಂಸ ಕೃಷ್ಣಕುಮಾರ ಆಚಾರ್, ಗಿರೀಶ ಆಚಾರ್ ಮತ್ತು ವ್ಯವಸ್ಥಾಪಕ ರಾಘಣ್ಣ ಹಾಜರಿದ್ದರು. ಬ್ರಹ್ಮ ಕಲಶಾಭಿಷೇಕಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post