1989
ಅದೇನು ಮಾಡ್ತೀರೋ ಗೊತ್ತಿಲ್ಲ, ಆ ಸ್ಟೇಷನ್ ಶೇಖರ್‌ನ ತಲೆ ತಂದು ನನ್ನ ಟೇಬಲ್ ಮೇಲೆ ಇಡಬೇಕು. ಅಷ್ಟೇ! ಬೆಂಗಳೂರಿನಲ್ಲಿ ರೌಡಿಗಳ ಉಪಟಳ ಹೆಚ್ಚುತ್ತಿರುವ ಬಗ್ಗೆ ಸಭೆ ನಡೆಸಿದಾಗಲೆಲ್ಲ ಆ ಎಸಿಪಿ ಅಬ್ಬರಿಸಿ ನಮಗೆ ಹೇಳುತ್ತಿದ್ದರು. ಎನ್‌ಕೌಂಟರ್ ಮುಗಿದ ಕೆಲವೇ ನಿಮಿಷಗಳಲ್ಲಿ ಅವರಿಗೆ ನಾನು ಫೋನ್ ಮಾಡಿ ‘ಸಾರ್ ಶೇಖರ್ ಪತ್ತೆಯಾದ.’ ಎಂದೆ ‘ಹೌದಾ? ವೆರಿ ಗುಡ್, ಆದಷ್ಟು ಬೇಗ ಆತನನ್ನು ನನ್ನೆದುರು ಎಳೆದು ತನ್ನಿ.’ ಎಂದರು ವೀರಾವೇಶದಿಂದ. ‘ಸಾರ್ ಎನ್‌ಕೌಂಟರ್‌ನಲ್ಲಿ ಸತ್ತೋಗ್‌ಬಿಟ್ಟಾ ಸಾರ್.’ ಎಂದೆ. ಆ ಕಡೆಯಿಂದ ಸದ್ದೇ ಕೇಳಲಿಲ್ಲ. ‘ನೀವೇನೂ ಹೇಳಿಯೇ ಇಲ್ಲ, ನಾನೇನೂ ಕೇಳಿಯೇ ಇಲ್ಲ’ ಎಂಬಂತೆ ಅವರು ಕಾಲ ಕಟ್ ಮಾಡಿ, ರಿಸೀವರ್ ಎತ್ತಿಟ್ಟು ಬಿಟ್ಟರು! ತಲೆ ತಂದು ನನ್ನ ಟೇಬಲ್ ಮೇಲಿಡಿ ಎನ್ನುತ್ತಿದ್ದ ಎಸಿಪಿ, ಎನ್‌ಕೌಂಟರ್ ಎಂಬ ಶಬ್ದ ಕಿವಿಗೆ ಬೀಳುತ್ತಲೇ ಥಂಡಾ ಹೊಡೆದು ಬಿಟ್ಟಿದ್ದರು.
ಅವರು ಭಯಪಡಲೂ ಕಾರಣವಿತ್ತು. ಅದು ರಶೀದ್ ಕೊಲೆ ಪ್ರಕರಣದ ಬಿಸಿ ಇದ್ದ ಕಾಲ. ಕೇರಳ ಮೂಲಕ ವಕೀಲ ಎಂ.ಎ. ರಶೀದ್ ಎಂಬುವರ ಶವ ಬೆಂಗಳೂರು-ಸೇಲಂ ರೈಲು ಹಳಿಯ ಪಕ್ಕ ಪತ್ತೆಯಾಗಿತ್ತು. ಆ ವಕೀಲರ ಕಕ್ಷಿದಾರ ಸದಾಶಿವನ್ ಮತ್ತು ಆರ್.ಎಲ್.ಜಾಲಪ್ಪ ನಡುವೆ ವ್ಯಾವಹಾರಿಕ ವೈಷಮ್ಯ ತಲೆದೋರಿತ್ತು. ಜಾಲಪ್ಪ ಆಗ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಗೃಹ ಸಚಿವರು. ಹಾಗಾಗಿ ಈ ಪ್ರಕರಣ ರಾಜಕೀಯ ವಲಯ ಮತ್ತು ಪೊಲೀಸ್ ಇಲಾಖೆಯಲ್ಲಿ ಕೋಲಾಹಲ ಎಬ್ಬಿಸಿತ್ತು. ಸಿಬಿಐ ಅಧಿಕಾರಿಗಳು ಅಂದಿನ ಡಿಸಿಪಿ ನಾರಾಯಣ್, ಎಸ್‌ಐ ಉತ್ತಪ್ಪ ಮತ್ತು ಇತರ ನಾಲ್ವರು ಪೇದೆಗಳನ್ನು ಜೈಲಿಗೆ ತಳ್ಳಿದ್ದರು. ಗೃಹ ಸಚಿವರು ರಾಜೀನಾಮೆ ನೀಡಿ, ನಿರೀಕ್ಷಣಾ ಜಾಮೀನು ಪಡೆದಿದ್ದರು. ಈ ಪ್ರಕರಣದ ಬಳಿಕ ಪೊಲೀಸ್ ಅಧಿಕಾರಿಗಳು ನೈತಿಕ ಬಲವನ್ನೇ ಕಳೆದುಕೊಂಡಿದ್ದರು. ಹಾಗಾಗಿ, ನಾನು ಎನ್‌ಕೌಂಟರ್ ಸುದ್ದಿ ತಿಳಿಸಿದಾಗ ಇದರ ಉಸಾಬರಿಯೇ ಬೇಡ ಎಂದು ಎಸಿಪಿ ಫೋನ್ ಕಟ್ ಮಾಡಿದ್ದು.
ಬೆಂಗಳೂರಿಗರಿಗೆ ಆಗಿನ್ನು ಎನ್‌ಕೌಂಟರ್ ಪ್ರಕರಣ ಹೊಸದು. ಪೊಲೀಸರು ಹೀಗೆ ದಿಟ್ಟವಾಗಿ ಪಾತಕಿಗಳನ್ನು ನಿಗ್ರಹಿಸಿದರೆ ಮಾತ್ರ ನಗರ ಶಾಂತವಾಗಿರಲು ಸಾಧ್ಯ ಎಂಬ ಮಾತು ಕೇಳಿಬರಲಾರಂಭಿಸಿತ್ತು. ಆದರೆ ಈ ಪ್ರಕರಣ ಇದ್ದಕ್ಕಿದ್ದಂತೆ ಯು ಟರ್ನ್ ತೆಗೆದುಕೊಂಡು ಬಿಟ್ಟಿತು. ಎನ್‌ಕೌಂಟರ್ ಅಸಲಿಯೋ ನಕಲಿಯೋ ಎನ್ನುವುದನ್ನು ಪತ್ತೆ ಹಚ್ಚಲು ಸಿಬಿಐ ತನಿಖೆ ನಡೆಯಬೇಕು ಎಂದು ಬೆಂಗಳೂರಿನ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿತು! ‘ಇದು ಮತ್ತೊಂದು ರಶೀದ್ ಪ್ರಕರಣ. ಇಲ್ಲೂ ಒಂದಿಷ್ಟು ಪೊಲೀಸ್ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಇಲಾಖೆಯಲ್ಲೇ ಕೆಲವರು ಆಡಿಕೊಂಡರು.
ತಾನು ಶೇಖರ್ ಪತ್ನಿ, ತನಗೆ ಎರಡು ತಿಂಗಳ ಮಗುವಿದೆ ಎಂದು ಹೇಳಿಕೊಂಡ ಮಹಿಳೆಯೊಬ್ಬಳು ನೇರವಾಗಿ ಕೋರ್ಟ್‌ಗೆ ದೂರು ಸಲ್ಲಿಸಿದ್ದಳು. ಯಾವುದೇ ಪ್ರತಿರೋಧ ತೋರದಿದ್ದರೂ ತನ್ನ ಗಂಡನನ್ನು ಪೊಲೀಸರು ಅತೀ ಹತ್ತಿರದಿಂದ ಗುಂಡಿಟ್ಟು ಸಾಯಿಸಿದ್ದಾರೆ ಎನ್ನುವುದ ಆಕೆಯ ಆರೋಪವಾಗಿತ್ತು. ನಾನು ಈ ದೂರಿನಲ್ಲಿ ಮೊದಲ ಆರೋಪಿ. ಯಾವುದಕ್ಕೂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಎಂದು ಅಂದಿನ ಪೊಲೀಸ್ ಆಯುಕ್ತರು ಸಲಹೆ ನಿಇಡಿದರು. ಆದರೆ ನಾನು ಈ ಸಲಹೆಯನ್ನು ನಯವಾಗಿ ತಿರಸ್ಕರಿಸಿದೆ. ರೌಡಿ ಗುಂಡು ಹಾರಿಸಿರುವುದು ಖಚಿತವಾಗಿರುವಾಗ ಯಾವುದೇ ತನಿಖೆಗೆ ಹೆದರಲಾರೆ ಎಂದೆ. ಆತ ಗುಂಡು ಹಾರಿಸಿರುವುದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಬೆಲೆಸ್ಟಿಕ್ ಎಕ್‌ಸ್ಪರ್ಟ್‌ಗಳಿಂದ ಸಾಬೀತಾಗಲಿದೆ ಎಂಬ ನಂಬಿಕೆ ನನಗಿತ್ತು.
(ಮುಂದುವರೆಯುವುದು)
Discussion about this post