ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಕೌಸಲ್ಯಾ ರಾಮ |
ಪಾಡ್ಯ- ಯುಗಾದಿ ಪಾಡ್ಯ, ಬಿದಿಗೆ – ಭಾವನ ಬಿದಿಗೆ, ತದಿಗೆ- ಅಕ್ಷಯ ತದಿಗೆ, ಚೌತಿ- ವಿನಾಯಕನ ಚೌತಿ, ಪಂಚಮಿ- ನಾಗರ ಪಂಚಮಿ… ಹೀಗೆ ಆರಂಭವಾಗುತ್ತಿದ್ದ ತಿಥಿ-ದಿನವಿಶೇಷದ ಮಕ್ಕಳ ಬಾಯಿಪಾಠ ಕಡೆಗೆ ಅಮಾವಾಸ್ಯೆ- ಮಣ್ಣೆತ್ತಿನ ಅಮಾವಾಸ್ಯೆ (ಬಸವನ ಅಮಾವಾಸ್ಯೆ)ಗೆ ಬಂದು ನಿಲ್ಲುತ್ತದೆ. ದಶಕದ ಹಿಂದೆ ಅಜ್ಜ- ಅಜ್ಜಿಯರು ಮನೆಯಲ್ಲಿ ನಿತ್ಯ ಸಂಜೆ ಇದನ್ನು ಹೇಳಿಸುತ್ತಿದ್ದರು.
ಮಣ್ಣೆತ್ತಿನ ಅಮಾವಾಸ್ಯೆ ಎಂಬುದು ಕಡೆಯ ತಿಥಿಯಾದರೂ ಉಣ್ಣುವ ಅನ್ನ ಕೊಡುವ ಕೃಷಿಕನ ಕಾಯಕ ಕೋಷ್ಠಕದಲ್ಲಿ ಮೊದಲ ಪ್ರಕ್ರಿಯೆ. ವೃಷಭಗಳು ಎಂದರೆ ಎತ್ತುಗಳು ಉಳುವ ಯೋಗಿಯ ನಿತ್ಯದ ಸಂಗಾತಿಗಳು. ಕೃಷಿಕರ ಬದುಕಿಗೆ ಆಧಾರ ಸ್ತಂಬವಾಗಿ ನಿಲ್ಲುವ ಜೀವಿಗಳು. ಹೊಲದಲ್ಲಿ ರೈತರ ಜತೆ ಜತೆಗೆ ದುಡಿಯುವ ಎತ್ತುಗಳನ್ನು ಬಸವಣ್ಣ ಎಂದೇ ಆರಾಧಿಸುವ ಸಂಸ್ಕೃತಿ ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಕಾರ ಹುಣ್ಣಿಮೆಯಲ್ಲಿ ಬಸವನನ್ನು ಸಿಂಗರಿಸಿ ಮೆರವಣಿಗೆ ಮಾಡಿದ್ದ ರೈತರು, ಇದೀಗ ಮಣ್ಣೆತ್ತಿನ ಅಮಾವಾಸ್ಯೆಗೆ ಮನೆಯ ಎತ್ತುಗಳಿಗೂ ಕೊಟ್ಟಿಗೆಯಲ್ಲಿ ಸಿಂಗರಿಸಿ ಭಕ್ತಿಯಿಂದ ಪೂಜಿಸುವುದು ವಾಡಿಕೆ.
ಇತ್ತ ದೇವರ ಮನೆಯಲ್ಲಿ ಮಣ್ಣಿನ ಎತ್ತುಗಳನ್ನು ಎಂದರೆ ಮಣ್ಣಿನ ಬಸವಣ್ಣಗಳನ್ನು ಇಟ್ಟು ಪೂಜಿಸುವುದು ಅನೂಚಾನವಾಗಿ ಬಂದ ಸಂಪ್ರದಾಯವಾಗಿದೆ. ನಮ್ಮದು ಕೃಷಿ ಪ್ರಧಾನ ದೇಶ. ಮಳೆಗಾಲ ಆರಂಭವಾಯಿತು ಎಂದರೆ ಅದು ರೈತರಿಗೆ ಬಿಡುವಿಲ್ಲದ ಚಟುವಟಿಕೆಯ ದಿನಚರಿ ಆರಂಭದ ದಿನಗಳು. ಮುಂಗಾರು ಕಾಲಿಟ್ಟಿತು ಎಂದರೆ ಉತ್ತುವುದು, ಬಿತ್ತುವುದು ಇತ್ಯಾದಿ ಪ್ರಕ್ರಿಯೆಗೆ ಚಾಲನೆ ದೊರಕಿತು ಎಂದೇ ಅರ್ಥ.
ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಧನ್ಯತೆಯಿಂದ ಪೂಜಿಸುವ ಹಬ್ಬವಿದು. ಜೇಷ್ಠ ಮಾಸದ ಮೋಡಗಳನ್ನು ನೋಡುತ್ತಾ, ಪ್ರಥಮ ವರ್ಷಧಾರೆ ಮತ್ತು ಮುಂಗಾರು ಮಳೆ ವೈಭವ ಸಂಭ್ರಮಿಸುತ್ತಾ ಬೀಜ ಬಿತ್ತುವ ಪರ್ವ ಕಾಲದಲ್ಲಿ ಇರುವ ಭೂಮಿ ತಾಯಿಯ ಮಕ್ಕಳು (ಕೃಷಿಕರು) ಸಂಪ್ರದಾಯದ ಚೌಕಟ್ಟಿನಲ್ಲಿ ಒಂದಷ್ಟು ಸಂಭ್ರಮ ಕಾಣಲಿ ಎಂದು ಇಣುಕುವುದೇ ಮಣ್ಣೆತ್ತಿನ ಅಮಾವಾಸ್ಯೆ.
ಮಣ್ಣಿನಿಂದ ಎತ್ತುಗಳನ್ನು ಸಿದ್ಧಮಾಡಿ ಅದರ ಮುಂದೆ ಒಂದು ಚಿಕ್ಕ ಬಾನಿ (ಮೇವು-ನೀರು ಹಾಕಲು) ಮಾಡಿ ಪೂಜಿಸುದು ಸಂಪ್ರದಾಯ. ಈ ಸಂದರ್ಭ ಮಣ್ಣಿನ ಎತ್ತುಗಳಲ್ಲಿ ವೃಷಭವನ್ನು ಆವಾಹನೆ ಮಾಡಿ ಷೋಡಶೋಪಚಾರಗಳಿಂದ ಪೂಜೆ ಸಮರ್ಪಿಸುತ್ತಾರೆ. ಧೂಪ, ದೀಪಾದಿಗಳನ್ನು ಸಮರ್ಪಿಸಿ ನೈವೇದ್ಯವನ್ನೂ ಮಾಡುತ್ತಾರೆ. ಉತ್ತರ ಕರ್ನಾಟಕದ ಮತ್ತು ಮಲೆನಾಡಿನ ಗ್ರಾಮಗಳಲ್ಲಿ ಕೆಲವರು ಹೋಳಿಗೆ, ಕಡುಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ನೈವೇದ್ಯ ಸಮರ್ಪಿಸಿ ಸಂಜೆಗೆ ಮಕ್ಕಳಿಗೆ ‘ಕರಿ ಎರೆಯುವ’ ಸಂಪ್ರದಾಯವಿದೆ.
ಮಣ್ಣೆತ್ತಿನ ಅಮಾವಾಸ್ಯೆ ದಿನ ಪೂಜಿಸಿದ ಮೂರ್ತಿಗಳಿಗೆ ಮನೆಯಲ್ಲಿ ಅಂಬಲಿ ತಯಾರಿ ಮಾಡಿಕೊಂಡು ಹೊಲ, ಗದ್ದೆಗೆ ತಂದು ಮರದ ಕೆಳಗೆ ಇಡುತ್ತಾರೆ. ಅಂಬಲಿ ನೈವೇದ್ಯ ಮಾಡಿ ಮೂರ್ತಿಗಳ ವಿಸರ್ಜನೆ ಮಾಡುತ್ತಾರೆ. ಅಂಬಲಿ ದೇಹಕ್ಕೆ ತಂಪು. ಅಂಬಲಿ ಕುಡಿದ ನಂತರ ದೇಹ ಮತ್ತು ಮನಸು ಹೇಗೆ ಕೃಷಿ ಕಾಯಕಕ್ಕೆ ಮರು ಚೇತನಗೊಳ್ಳುವುದೋ ಹಾಗೆ ನಮ್ಮ ಎತ್ತುಗಳೂ (ವೃಷಭ) ತಂಪಾಗಿ, ಸೊಂಪಾಗಿ ಬದುಕಿ ವರ್ಷವಿಡೀ ನಮ್ಮ ಕಾಯಕದೊಂದಿಗೆ ಜತೆಯಾಗಿರಲಿ ಎಂಬ ಅಂತರಂಗದ ಪ್ರಾರ್ಥನೆ ಇಲ್ಲಿ ಸಲ್ಲಿಕೆಯಾಗುತ್ತದೆ.
ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ
ಮಣ್ಣೇ ಲೋಕದಲಿ ಬೆಲೆಯಾದ್ದು .. ಎನ್ನುತ್ತಾರೆ ಜನಪದರು.
ಹೌದು. ಹುಟ್ಟಿನಿಂದ ಚಟ್ಟದವರೆಗೂ ಮಣ್ಣ ನಮ್ಮ ಬದುಕಿನ ಅವಿಭಾಜ್ಯ ಅಂಗ. ಆ ಮಣ್ಣಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ಮಣ್ಣೆತ್ತು ಅಮವಾಸ್ಯೆ. ಅದರ ನಿಮಿತ್ತ ಅನ್ನ ಕೊಡುವಲ್ಲಿ ಮಹತ್ವದ ಪಾತ್ರ ವಹಿಸುವ ಎತ್ತುಗಳ ಆರಾಧನೆ.
ಮಳೆ ಆರಂಭದ ದಿನಗಳಲ್ಲಿ ರಾಸುಗಳಿಗೆ ಒಂದು ದಿನ ಬಿಡುವು ಕೊಟ್ಟು ಅವುಗಳನ್ನು ಸಿಂಗರಿಸುವ, ಗೌರವಿಸುವ, ಆರಾಧಿಸುವ ಪರ್ವ ಕಾಲವೇ ಮಣ್ಣೆತ್ತಿನ ಅಮಾವಾಸ್ಯೆ. ಎತ್ತುಗಳು ಇದ್ದವರು, ಕೃಷಿ ಬದುಕನ್ನೇ ನಂಬಿದವರು, ರೈತಾಪಿ ವರ್ಗದವರು, ಹೈನುಗಾರಿಕೆ ಮಾಡುವವರು ( ಕರಾವು ಇದ್ದವರು) ಮನೆಯಲ್ಲೇ ಇರುವ ಜಾನುವಾರುಗಳನ್ನು ಪೂಜಿಸುತ್ತಾರೆ.
ಎತ್ತುಗಳು ಇಲ್ಲದ ಮನೆಯಲ್ಲೂ ಈ ಪೂಜಾ ಪದ್ಧತಿ ಇದೆ. ಮಣ್ಣಿನಿಂದ ಎತ್ತಿನ ಮೂರ್ತಿಗಳನ್ನು ಮಾಡಿ ಅವುಗಳನ್ನು ದೇವರ ಮನೆಯಲ್ಲಿ ಇಟ್ಟು ಅಮಾವಾಸ್ಯೆಯಂದು ಪೂಜಿಸುತ್ತಾರೆ. ಮರುದಿನ ಪಾಡ್ಯ. ಅಂದೂ ಪೂಜೆ ಸಮರ್ಪಿಸಲಾಗುತ್ತದೆ. ಗದ್ದೆ, ಹೊಲ ಇದ್ದವರು ಶ್ರಾವಣ ಮಾಸದ ನಾಗರ ಪಂಚಮಿಯವರೆಗೂ ದಿನನಿತ್ಯ ಪೂಜಿಸುತ್ತಾರೆ. ದನ- ಕರುಗಳನ್ನು ಹುರಿದುಂಬಿಸಿ ಮತ್ತೆ ಕೃಷಿಕಾಯಕಕ್ಕೆ ಸಜ್ಜು ಮಾಡುವ ನಿಟ್ಟಿನಲ್ಲಿ ಈ ಹಬ್ಬ ಪ್ರಧಾನ ಪಾತ್ರ ವಹಿಸುತ್ತದೆ.
ಹಬ್ಬಕ್ಕೂ- ಮಣ್ಣಿನ ಮೂರ್ತಿಗಳಿಗೂ ಇದೆ ನಂಟು
ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಅನೇಕ ಹಬ್ಬಗಳಿಗೂ ಮಣ್ಣಿಗೂ ನೇರ ಸಂಬಂಧವಿದೆ. ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಜನರು, ನಂತರ ನಾಗರ ಪಂಚಮಿಗೆ ಮಣ್ಣಿನಿಂದ ನಾಗರ ಹಾವನ್ನು ಮಾಡುತ್ತಾರೆ. ನಂತರ ಕೃಷ್ಣ ಜನ್ಮಾಷ್ಟಮಿ, ಗೌರಿ ಹುಣ್ಣಿಮೆ, ಗಣೇಶ ಚೌತಿ ಆಗಮನ. ಗೌರಿ- ಗಣೇಶರನ್ನು 15 ದಿನ ಮೊದಲೇ ಹಸಿ ಮಣ್ಣಿನಲ್ಲಿ ಮಾಡಿ ಆರಾಧಿಸುವುದು ವಾಡಿಕೆ. ಬಳಿಕ ಮಣ್ಣಿನಿಂದ ಮಾಡಿದ ಜೋಕಮಾರನನ್ನು ಮಾಡಿ, ಚರಗವನ್ನು ಚೆಲ್ಲುವ ಮೂಲಕ ಆ ವರ್ಷದ ಮಣ್ಣಿನ ಪೂಜೆಗಳಿಗೆ ಮಂಗಳ ಹಾಡುತ್ತಾರೆ. ಬಹುತೇಕ ಗ್ರಾಮೀಣ ನಿವಾಸಿಗಳಿಗೆ ಈ ಹಬ್ಬದ ಮಹತ್ವ, ಉತ್ಸಾಹ ಮತ್ತು ಸಂಭ್ರಮಗಳು ಗೊತ್ತು. ನಗರವಾಸಿಗಳಿಗೆ ಈ ಖುಷಿ ಅಲಭ್ಯ. ಕಾರಣ ಜೀವನ ಶೈಲಿಯ ನಾಗಾಲೋಟ ಮತ್ತು ನಗರೀಕರಣದ ಅವಸರದ ಬದುಕು ನಮ್ಮ ಸಂಪ್ರದಾಯಗಳನ್ನು ಮರೆ ಮಾಡುತ್ತಿದೆ.
ಬಸವನಿಗೆ ಮಾಡುವ ಪ್ರಾರ್ಥನೆ ಹೀಗಿದೆ
- ಸಮೃದ್ಧವಾಗಿ ವರುಣನ ಕೃಪೆಯಾಗಿ ಕೆರೆ, ಕೆಟ್ಟೆಗಳು ತುಂಬಲಿ.
- ಗದ್ದೆ, ಹೊಲಗಳು ಫಲವತ್ತಾಗಲಿ
- ಎತ್ತುಗಳು ಗದ್ದೆ, ಹೊಲದ ಕೆಲಸಕ್ಕೆ ಸಂಭ್ರಮದಿಂದ ಸಹಕಾರ ನೀಡಲು ಸನ್ನದ್ಧವಾಗಿರಲಿ
- ಬಿತ್ತಲು ವಾತಾವರಣ ಅನುವು ಮಾಡಿಕೊಡಲಿ
- ಸಸಿಮಡಿಗಳು, ಗಿಡಗಳು ಸಮೃದ್ಧವಾಗಿ ಬೆಳೆಯಲಿ
- ಯಾವುದೇ ಕ್ರಿಮಿ, ಕೀಟಗಳು ಬೆಳೆಗೆ ಬಾಧಿಸದಿರಲಿ
- ಗಿಡಗಳಲ್ಲಿ ಕಾಳುಗಳು ಕಟ್ಟಿದಾಗ ಹಕ್ಕಿ, ಪಕ್ಷಿಗಳು ಹೆಚ್ಚಾಗಿ ಕಾಟ ಕೊಡಲಿದಲಿ
- ಸಮೃದ್ಧವಾಗಿ ಫಸಲು ಬರಲಿ. ಮನೆ- ಮನ ತುಂಬಲಿ
- ಧಾನ್ಯ ಲಕ್ಷ್ಮೀ ಸಮೃದ್ಧಿಯಾಗಲಿ
- ದೇಶದ ಪ್ರತಿ ಜೀವಿಗೂ ಭೂತಾಯಿ ಸಮೃದ್ಧ ಅನ್ನಾಹಾರ ನೀಡಲಿ
- ಸರ್ವೇ ಜನಾಃ ಸುಖಿನೋ ಭವಂತು ಎನ್ನುವಂತೆ ಎಲ್ಲರೂ ಉಂಟು, ಉಟ್ಟು ಸುಖಮಯ ಜೀವನ ನಡೆಸಲಿ
- ಎಲ್ಲರೂ ಮಾಡುವುದು ಹೊಟ್ಟೆಗಾಗಿ- ಗೇಣು ಬಟ್ಟೆಗಾಗಿ. ಈ ಹೋರಾಟದಲ್ಲಿ ಸಮೃದ್ಧಿ ಪ್ರಾಪ್ತಿಯಾಗಲಿ.
- ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು. ಈ ವಿದ್ಯೆಯನ್ನೇ ಬದುಕಿಗೆ ಮೂಲವಾಗಿಸಿಕೊಂಡ ಕೃಷಿಕರು ಆನಂದಮಯವಾಗಿರಲಿ.
ಬಸವನನ್ನು ತಯಾರಿಸುವ ವಿಧಾನ
ಗ್ರಾಮೀಣ ಭಾಗದಲ್ಲೇ ಈ ಹಬ್ಬದ ಆಚರಣೆಗೆ ಸಂಭ್ರಮ ಹೆಚ್ಚು. ಅನೇಕರು ಗದ್ದೆ, ಹೊಲದಿಂದ ಮಣ್ಣನ್ನು ತಂದು ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ಕೆಲವರು ಗಣಪತಿ ತಯಾರಿಸುವುದಕ್ಕೆ ಹದ ಮಾಡಿ ಒಂದೆಡೆ ಇಟ್ಟುಕೊಂಡ ಮಣ್ಣನ್ನೇ ಬಳಸಿ ಎತ್ತುಗಳನ್ನು ಮಾಡುತ್ತಾರೆ. ಭೂಮಿಯನ್ನು ಉಳುವ ಸಂಕೇತವಾಗಿ ಎತ್ತುಗಳನ್ನು ಚಿಕ್ಕ- ದೊಡ್ಡ ಆಕಾರಗಳಲ್ಲಿ ತಯಾರು ಮಾಡುತ್ತಾರೆ.
ಮೊದಲೆಲ್ಲಾ ಮನೆಯಲ್ಲೇ ಮಾಡಿದ ಎತ್ತು, ನಾಗಪ್ಪ, ಗಣಪತಿ, ಜನ್ಮಾಷ್ಟಮಿಯ ಕೃಷ್ಣರನ್ನು ಪೂಜೆ ಮಾಡುತ್ತಿದ್ದರು. ನಾವು ಆರಾಧನೆ ಮಾಡುವ ಮಣ್ಣಿನಮೂರ್ತಿಗಳನ್ನು ನಾವೇ ಸಿದ್ಧಮಾಡಿಕೊಂಡರೆ ಅದು ಶ್ರೇಷ್ಠ ಎನ್ನುತ್ತಿದ್ದರು ಹಿರಿಯರು. ಸಂಪ್ರದಾಯದ ಹೆಸರಿನಲ್ಲಿ ಕಲೆಯೂ ಮನೆಯ ಕೆಲವರಿಗೆ ಸಿದ್ಧಿ ಆಗುತ್ತ ಇತ್ತು. ಈಗ ಅದು ಬಹುತೇಕ ಮಾಯವಾಗಿದೆ. ಹಾಗಾಗಿ ಕೆಲವರು ಕುಂಬಾರರ ಮನೆಗಳಲ್ಲಿ ತಯಾರಿಸಿದ ಜೋಡಿ ಎತ್ತುಗಳನ್ನು ಖರೀದಿಸಿ ಮಾಡಿಕೊಂಡು ತರುತ್ತಾರೆ. ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಬಾನಿ ತಯಾರಿ ಮಾಡುತ್ತಾರೆ. ಮಕ್ಕಳಿಗಂತೂ ಬಸವನ ಪೂಜೆ ಮಾಡುವುದು ಎಂದರೆ ಎಲ್ಲಿಲ್ಲದ ಸಂಭ್ರಮ. ವಿಸರ್ಜನೆ ನಂತರ ಈ ಬಸವ ಆಟ ಆಡುವ ಆಟಿಕೆಗಳ ಸಂಗ್ರಹಕ್ಕೆ ಬರುತ್ತಾನೆಂಬ ನಿರೀಕ್ಷೆ.
ರೈತರ ಜೀವಾಳ
ಎತ್ತುಗಳು ರೈತರ ಜೀವಾಳ . ಕೃಷಿಕರಿಗೆ ಎತ್ತುಗಳು ಎರಡು ಕಣ್ಣುಗಳಿದ್ದಂತೆ. ಮತ್ತೊಂದಡೆ ಮಣ್ಣು ಕೂಡಾ ದೇವತಾ ಸ್ವರೂಪಿ. ಭೂತಾಯಿ ಎಂದೇ ಆಕೆಗೆ ಗೌರವಾದರ. ಎತ್ತುಗಳು ಜಮೀನಿನಲ್ಲಿ ರೈತನಿಗಾಗಿ ಹಗಲಿರಳು ದುಡಿದರೆ, ಮತ್ತೊಂದಡೆ ಭೂತಾಯಿ ರೈತನಿಗೆ ಅನ್ನ, ಆಹಾರ ನೀಡುತ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಸದಾ ಪೂಜನೀಯವಾಗಿಯೇ ಕಾಣುತ್ತಾರೆ. ಇದು ಜೀವನದ ಧನ್ಯತೆಯ ಸಂಕೇತವೂ ಹೌದು.
ಕುಂಬಾರರಿಗೆ ಸುಗ್ಗಿ
ಮಣ್ಣೆತ್ತಿನ ಅಮಾವಾಸ್ಯೆ ಸಂದರ್ಭದಲ್ಲಿ ಮಣ್ಣಿನಿಂದ ತಯಾರಿಸಲ್ಪಟ್ಟ ಎತ್ತುಗಳಿಗೆ ಭಾರೀ ಬೇಡಿಕೆ ಇದೆ. ಇದೊಂದು ರೀತಿಯಲ್ಲಿ ಕುಂಬಾರರಿಗೆ ಸುಗ್ಗಿ ಹಬ್ಬವೂ ಹೌದು. ಮಣ್ಣೆತ್ತಿನ ಅಮಾವಾಸ್ಯೆಯ ಸಂದರ್ಭದಲ್ಲಿ ವಾರದ ಮೊದಲೇ ಮಣ್ಣಿನ ಎತ್ತಿನ ತಯಾರಿಕೆಯಲ್ಲಿ ಕುಂಬಾರರು ನಿರತರಾಗುತ್ತಾರೆ. ಬಿತ್ತನೆಯ ಕೆಲಸ ಮುಗಿಯುತ್ತಿದ್ದಂತೆ ರೈತರು ಈ ಹಬ್ಬದ ಆಚರಣೆ ಆರಂಭಿಸುತ್ತಾರೆ. ಮಡಿಕೆ, ಕುಡಿಕೆ ಮಾಡುವ ಕುಂಬಾರರು ಬಸವ, ಗಣೇಶನ ಮೂರ್ತಿಗಳನ್ನೂ ಕಲಾತ್ಮಕವಾಗಿ ಮಾಡುತ್ತಾರೆ. ನಗರ ಭಾಗದ ಕೆಲವು ಸಂಪ್ರದಾಯಸ್ಥ ಕುಟುಂಬಗಳು ಈ ರೀತಿ ಕುಂಬಾರರ ಮನೆಗಳಿಂದ ಬಸವನನ್ನು ಕೊಂಡು ಕೊಂಡು ಮನೆಯಲ್ಲಿ ಇರಿಸಿ ಪೂಜೆ ಮಾಡುತ್ತಾರೆ. ಕುಂಬಾರಿಕೆಗೂ ಈ ಹಬ್ಬ ಮನ್ನಣೆ ನೀಡಿದೆ. ಒಟ್ಟಾರೆ ಸಮಾಜದ ವಿವಿಧ ಸ್ತರದ ಕುಲಕಸುಬುಗಳ ಕುಶಲ ಕರ್ಮಿಗಳು, ಸಂಸ್ಕೃತಿ, ಸಂಪ್ರದಾಯ, ಮಣ್ಣಿನ ಮಹತ್ವ, ಆರಾಧನಾ ಪದ್ಧತಿ, ಮನೆತನಗಳ ಕರ್ತವ್ಯ, ವಿಧ ವಿಧ ಅಡುಗೆ , ಖಾದ್ಯ ಮಾಡುವ ಸಂಭ್ರಮ, ಜಾನುವಾರು ಪ್ರೀತಿ, ಕಾಯಕಕ್ಕೆ ನೆರವಾಗುವ ಜೀವಿಗಳಿಗೂ ಗೌರವಿಸುವ, ಪ್ರೀತಿಯಿಂದ ಕಾಣುವ, ದೇವರೆಂದು ಅವುಗಳನ್ನೂ ಆರಾಧಿಸುವ … ಹೀಗೆ ಹತ್ತು ಹಲವು ನಿಟ್ಟಿನಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ತನ್ನದೇ ಆದ ಹಿರಿಮೆ- ಗರಿಮೆಯನ್ನು ಸಾರಿದೆ. ಅದರ ಮಹತ್ವ ಇಂದಿನ ಹೊಸ ಪೀಳಿಗೆಗೂ ಪರಿಚಯ ಆಗಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post