ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಪತಿವ್ರತೆಯರು ಯೋಗಿಗಳಷ್ಟೇ ಪವಿತ್ರರು. ಸ್ತ್ರೀಯರ ಸರ್ವೋತ್ಕೃಷ್ಟ ಸಾಧನಾ ಮಾರ್ಗ ಅದು. ಪತಿ ಎಂಥವನೇ ಆಗಿದ್ದರೂ, ಶ್ರೀಪತಿಯನ್ನೇ ಕಾಣುವ ಸ್ತ್ರೀಯರು ಪರಮ ಪವಿತ್ರರು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ #Raghaveshwara shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 19ನೇ ದಿನವಾದ ಗುರುವಾರ ಜೀವಯಾನ ಮಾಲಿಕೆಯಲ್ಲಿ ‘ಯಮನನ್ನು ಗೆದ್ದವರುಂಟೇ’ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿ, ಯಮನ ದರ್ಶನ ಮಾಡಿ, ಆತನೊಂದಿಗೆ ಸಂವಾದ ನಡೆಸುವ ಯೋಗವೂ ಮಹಾ ಪತಿವ್ರತೆಯಾದ ಸಾವಿತ್ರಿಗೆ ಕೂಡಿ ಬಂತು. ಕೊರಳಿಗೆ ಯಮಪಾಶ ಬಿದ್ದೂ ಬದುಕಿದ ಅಪರೂಪದ ಪಾತ್ರ ಮಾರ್ಕಾಂಡೇಯ. ಅವರು ಧರ್ಮರಾಯನಿಗೆ ಹೇಳಿದ ಕಥೆ ಎಂತವರ ಮನವನ್ನೂ ಕಲುಕುವಂಥದ್ದು ಸತ್ಯವಾನ್ ಸಾವಿತ್ರಿಯ ದೃಷ್ಟಾಂತವನ್ನು ಬಣ್ಣಿಸಿದರು.
ಅಶ್ವಪತಿ ಎಂಬ ಮಹಾರಾಜ ಸಂತತಿಗಾಗಿ ಸಾವಿತ್ರಿಯ ಉಪಾಸನೆ ಮಾಡುತ್ತಾನೆ. 65 ಕೋಟಿ ಆಹುತಿಯನ್ನು ನಿರಂತರ 18 ವರ್ಷಗಳ ಕಾಲ ಮಾಡುತ್ತಾನೆ. ಸಾವಿತ್ರಿ ಪ್ರಕಟವಾಗಿ ಪುತ್ರೀರತ್ನವನ್ನು ಕರುಣಿಸುತ್ತೇನೆ ಎಂದು ಹೇಳುತ್ತಾಳೆ. ದೊರೆ ಪುತ್ರಿಗೆ ಸಾವಿತ್ರಿ ಎಂದೇ ಹೆಸರಿಡುತ್ತಾನೆ. ಸಾವಿತ್ರಿ ತೇಜಸ್ವಿನಿಯಾಗಿ ಬೆಳೆದಳು. ಅಂಥ ತೇಜೋಪುಂಜವಾದ ಸಾವಿತ್ರಿಯನ್ನು ವರಿಸಲು ಸಾಧ್ಯವಾಗದಂಥ ಕಾಲ ನಿರ್ಮಾಣವಾಯಿತು ಎಂದರು.
ಒಂದು ದಿನ ತಂದೆ ಮಗಳನ್ನು ಕರೆದು ಯೋಗ್ಯವರನನ್ನು ನೀನೇ ಆರಿಸಿಕೊಳ್ಳುವ ಕಾಲ ಬಂದಿದೆ ಎಂದರು. ಸಾವಿತ್ರಿ ರಥಾರೂಢಳಾಗಿ ವರಾನ್ವೇಷಣೆಗೆ ಹೊರಟಳು. ವೃದ್ಧ ಅಮಾತ್ಯರು ಆಕೆಯ ಜತೆ ತೆರಳಿದಾಗ ಆಕೆ ಆಶ್ರಮದತ್ತ ಸಾಗುತ್ತಾಳೆ. ಕೆಲ ಸಮಯ ಬಳಿಕ ನಾರದರು ಆಗಮಿಸಿದ ಸಂದರ್ಭದಲ್ಲಿ ಸಾವಿತ್ರಿ ಬಂದಳು. ಸಾಲ್ವದೇಶದ ಅಧಿಪತಿ ಯುವತ್ಸೇನನ ಮಗ ಸತ್ಯವಾನನನ್ನು ಆರಿಸಿಕೊಂಡ ವಿಷಯವನ್ನು ತಿಳಿಸಿದಳು. ಸತ್ಯ-ಧರ್ಮಿಷ್ಟನಾದರೂ ಆತನಿಗೆ ಇರುವುದು ಒಂದೇ ವರ್ಷದ ಆಯಸ್ಸು. ಇದು ಎಲ್ಲ ಗುಣಗಳನ್ನೂ ನುಂಗುವ ದೋಷ. ಆದ್ದರಿಂದ ಸಾವಿತ್ರಿ ತಪ್ಪು ಮಾಡಿದಳು ಎಂದು ನಾರದರು ಹೇಳುತ್ತಾರೆ. ಅಶ್ವಪತಿ ಬೇರೆ ವರನನ್ನು ಅನ್ವೇಷಿಸುವಂತೆ ಸೂಚಿಸಿದರೂ, ಸಾವಿತ್ರಿ ತನ್ನ ಅಚಲ ನಿರ್ಧಾರ ಬದಲಿಸಲಿಲ್ಲ. ಅಶ್ವಪತಿ ಕನ್ಯೆಯ ಜತೆಗೆ ಆಶ್ರಮವಾಸಿಯಾಗಿದ್ದ ಯುವತ್ಸೇನನ ಬಳಿಗೆ ತೆರಳಿ ವಿವಾಹ ಮಹೋತ್ಸವ ಪರಮ ಮಂಗಲಕರವಾಗಿ ನೆರವೇರಿತು ಎಂದು ಹೇಳಿದರು.
ಹೊಸಜೋಡಿ ಸಂತಸದಲ್ಲಿ ವಿಹರಿಸುತ್ತಿದ್ದರೂ, ನಾರದರ ವಾಕ್ಯ ಮನಸ್ಸಿನಲ್ಲೇ ಕೊರೆಯುತ್ತಿರುತ್ತದೆ. ದಿನಗಣನೆ ಮಾಡುತ್ತಿದ್ದಂತೆಯೇ ಅವರ ದುಃಖ ಹೆಚ್ಚುತ್ತಿತ್ತು. ಕೊನೆಯ ದಿನ ಸಮೀಪಿಸಿದಾಗ ಆಕೆ ಮೂರು ದಿನಗಳ ವ್ರತ ಕೈಗೊಳ್ಳುತ್ತಾಳೆ. ತ್ರಯೋದಶಿ, ಚತುರ್ದಶಿ, ಅಮಾವಾಸ್ಯೆಯ ಉಪವಾಸ ಪೂರೈಸಿದಳು. ಸತ್ಯವಾನ್ ಆಯುಷ್ಯದ ಕೊನೆಯ ದಿನವಾದ ಪಾಡ್ಯದಂದು ಸತ್ಯವಾನ್ ಕೊಡಲಿ ಹಿಡಿದು ಕಾಡಿಗೆ ಹೊರಟ. ಸಾವಿತ್ರಿಯೂ ಹಿಂಬಾಲಿಸಿದಳು.
Also read: ಭಾರತದಲ್ಲಿ ಸದ್ಯದಲ್ಲಿಯೇ ದೊಡ್ಡದೊಂದು ಸಂಭವಿಸಲಿದೆ, ಹಿಂಡನ್‌ಬರ್ಗ್ ರಹಸ್ಯ ಸಂದೇಶ ಪೋಸ್ಟ್!
ಜಗತ್ತೇ ತಿರುಗುವ ಅನುಭವವಾಗುತ್ತಿದೆ. ಅತೀವ ವೇದನೆಯಾಗುತ್ತದೆ ಎಂದು ಸತ್ಯವಾನ್ ಹೇಳುತ್ತಾನೆ. ಸಾವಿತ್ರಿಯ ಮಡಿಲಲ್ಲಿ ಪವಡಿಸಿಕೊಂಡಾಗ ಅನತಿ ದೂರದಲ್ಲಿ ಒಂದು ಪುರುಷಾಕಾರ ಕಾಣಿಸಿಕೊಂಡು ಸನಿಹಕ್ಕೆ ಬಂತು. ಕಡುಗಪ್ಪು ಬಣ್ಣದ, ಕೆಂಪುಗಣ್ಣಿನ ಆಕೃತಿಯಲ್ಲಿ ಹೊನ್ನಕಿರೀಟ ಶೋಭಿಸುತ್ತಿತ್ತು. ಸೂರ್ಯತೇಜದ ಆತನ ಕೈಯಲ್ಲಿ ಪಾಶವಿತ್ತು. ಸತ್ಯವಾನನ ಪಕ್ಕದಲ್ಲಿ ನಿಂತು ಆತನನ್ನೇ ನೋಡಲಾರಂಭಿಸಿತು. ಅನರ್ಥವನ್ನು ಚಿಂತಿಸಿ ಸಾವಿತ್ರಿ ಭಯದಿಂದ ಕಂಪಿಸಿದಳು. ಆರ್ತಳಾಗಿ ಪರಿಪರಿಯಾಗಿ ಆ ಆಕೃತಿಯ ಬಳಿ ಬೇಡುತ್ತಾಳೆ. ಆದರೆ ಸತ್ಯವಾನನ ಅಂಗುಷ್ಠಾಕೃತಿಯ ಕೊರಳಿಗೆ ಪಾಷ ಬಿಗಿದು ಕರೆದೊಯ್ಯುವ ತನ್ನ ಕರ್ತವ್ಯವನ್ನು ಯಮ ಪೂರೈಸುತ್ತಾನೆ ಎಂದರು.
ಸಾವಿತ್ರಿಯೂ ಯಮನನ್ನು ಹಿಂಬಾಲಿಸಿ, ಧರ್ಮಪ್ರಶಂಸೆ ಮಾಡುತ್ತಾಳೆ. ಸಂತೃಪ್ತನಾದ ಯಮ, ಸತ್ಯವಾನನ ಜೀವವನ್ನು ಬಿಟ್ಟು ಬೇರೆ ಯಾವ ವರ ಬೇಡಿದರೂ ನೀಡುವ ಭರವಸೆ ನೀಡುತ್ತಾನೆ. ಕುರುಡನಾದ ಮಾವನಿಗೆ ದೃಷ್ಟಿ, ತೇಜಸ್ಸು ಬರಬೇಕು ಎಂದು ಬೇಡುತ್ತಾಳೆ. ಮತ್ತೆ ಯಮನನ್ನು ಹಿಂಬಾಲಿಸಿ ಸತ್ಪುರುಷರ ನಿರೂಪಣೆ ಮಾಡುತ್ತಾಳೆ. ಮತ್ತೆ ಸಂತುಷ್ಟನಾದ ಯಮ ಮತ್ತೊಂದು ವರ ಪಾಲಿಸುತ್ತಾನೆ. ಮಾವನಿಗೆ ಧರ್ಮಿಷ್ಟನಾಗಿ ಬದುಕಲು ರಾಜ್ಯ ಮರಳಲಿ ಎಂದು ಬೇಡುತ್ತಾಳೆ. ತತಾಸ್ತು ಎಂದು ಹೇಳಿದ ಯಮನ ಜತೆಗೆ ತೆರಳಿದ ಸಾವಿತ್ರಿ ಸತ್ಪುರುಷರ ಅನುಗ್ರಹವನ್ನು ಮನೋಜ್ಞವಾಗಿ ಬಿಂಬಿಸುತ್ತಾಳೆ. ಮತ್ತೆ ಯಮ ವರ ಪ್ರಸಾದಿಸಿದಾಗ ತಾಯಿಗೆ ಪುತ್ರನಾಗುವಂತೆ ಮತ್ತು ತನಗೆ ಸತ್ಯವಂತನಿಂದಾಗುವ ಧರ್ಮಸಂತಾನ ಬೇಕು ಎಂಬ ವರ ಬೇಡುತ್ತಾಳೆ ಎಂದು ವಿವರಿಸಿದರು.
ಮತ್ತೆ ಸಂತುಷ್ಟನಾದ ಯಮ ವರ ಕರುಣಿಸಿದಾಗ ಕೊನೆಯದಾಗಿ ಸತ್ಯವಂತನ ಜೀವ ಮರಳಿಸುವಂತೆ ಕೇಳುತ್ತಾಳೆ. ಪತಿಯ ಹೊರತು ನನಗೆ ಸಂಪತ್ತು, ಬದುಕು ಸ್ವರ್ಗ ಕೂಡಾ ಬೇಡ ಎಂದು ಪರಿಪರಿಯಾಗಿ ಮಾಡಿದ ಪ್ರಾರ್ಥನೆಗೆ ಸೋತು ಯಮ ಪಾಶವನ್ನು ಸಡಿಲಿಸಿ, ನಾಲ್ಕು ಆಯುಷ್ಯವನ್ನು ನೀಡುತ್ತಾನೆ ಎಂದರು.
ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಜಿ.ಜಿ.ಹೆಗಡೆ ತಲೆಕೇರಿ, ಬೆಂಗಳೂರು ಮಂಡಲ ಉಪಾಧ್ಯಕ್ಷ ಎನ್.ಜಿ.ಭಾಗ್ವತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಮುಖ್ಯಸ್ಥರಾದ ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post