ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಆಗ ಶಾಲೆಯಲ್ಲಿ ಪರೀಕ್ಷೆ ಮುಗಿದಿತ್ತು, ಅಂತೂ ಇಂತೂ ಬೇಸಿಗೆ ರಜೆಯೂ ಸಹ ಪ್ರಾರಂಭವಾಗಿತ್ತು. ನನ್ನ ಹುಟ್ಟೂರಾದ ಮೈಸೂರಿನಲ್ಲಿ ಬೇಸಿಗೆಯ ರಜೆಯನ್ನು ಕಳೆಯಲು ಹೋದ ನನಗೆ ಸಂತೋಷಕ್ಕೆ ಪಾರವೇ ಇಲ್ಲ.
ನಮ್ಮ ಪರಿವಾರ ಹಾಗೂ ನಮ್ಮ ದೊಡ್ಡಮ್ಮನ ಪರಿವಾರವೂ ನಮ್ಮಲ್ಲಿ ಸೇರಿತ್ತು. ಓದು, ಪಠ್ಯಪುಸ್ತಕ, ಅಂಕನಿ, ಪುಟಗಳು ಎಂಬ ಶಬ್ದಗಳನ್ನು ಮರೆತು ಆಟ, ಹರಟೆ, ರುಚಿಕರವಾದ ಆಹಾರ, ಪ್ರವಾಸ, ನಿದ್ರೆ ಎಂಬ ಶಬ್ದಗಳೇ ನಮ್ಮ ತಲೆಯಲ್ಲಿ ಓಡುತ್ತಿದ್ದವು.
ಈ ನಡುವೆಯೇ 2024ರ ಜನವರಿ 22ರಿಂದ ನನಗೊಂದು ಆಸೆ ಮನದಲ್ಲಿ ಮೂಡಿತ್ತು. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮಭೂಮಿಯಾದ ಅಯೋಧ್ಯೆಗೆ #Ayodhya ಹೋಗಬೇಕು ಎನ್ನುವುದು. ಜೊತೆಗೆ ನನ್ನ ತಾತ, ಮುತ್ತಾತ, ಮುತ್ತಜ್ಜಿ, ಪೂರ್ವಜರಿಗೆ ರಾಮಂದಿರದ ಸಹಿತವಾಗಿ ಶ್ರೀ ರಾಮಚಂದ್ರ ಪ್ರಭುವನ್ನು ನೋಡಿರಲಿಲ್ಲ. ಅವಕಾಶವು ಇರಲಿಲ್ಲ. ನನಗೆ ಆ ಸದವಕಾಶ ಸಿಕ್ಕಿದೆ. ಯಾವ ಜನ್ಮದ ಪುಣ್ಯದಿಂದ ಸಿಕ್ಕಿರುವ ಫಲವೆಂಬ ಒಂದ ಸಣ್ಣ ಸಾತ್ವಿಕ ಅಹಂಕಾರವೂ ಹುಟ್ಟಿತು.
ಆ ಕನಸು ನನಸಾಗುವ ಕಾಲ ಸನ್ನಿಹಿತವಾಗಿ, ಅಯೋಧ್ಯೆ ಪಯಣವೂ ಸಹ ಆರಂಭವಾಗಿತ್ತು. 30 ಮೇ 2024ರಂದು ಬೆಂಗಳೂರಿಗೆ ತೆರಳಿದೆವು. ಮರುಭೂಮಿ ರಾಜಸ್ಥಾನವೋ? ಬೆಂಗಳೂರೋ? ಎಂಬುವಷ್ಟು ಬಿಸಿಲಿನ ಝಳ ಅಬ್ಬರಿಸುತ್ತಿತ್ತು. ಆದರೆ ರಾಮನನ್ನು ಕಾಣುವ ಛಲದ ಮುಂದೆ ಈ ಬಿಸಿಲು ಯಾವ ಲೆಕ್ಕ.
Also read: ಆ.22: ರೇಡಿಯೋ ಶಿವಮೊಗ್ಗದಲ್ಲಿ ಜನತಾ ಜಾಗೃತಿ ಬಾನುಲಿ ಸರಣಿ
ಸರಿ, ನಾವು ಮೊದಲು ದೆಹಲಿಗೆ #NewDelhi ಹೋಗಿ ಆಮೇಲೆ ಅಯೋಧ್ಯೆಗೆ ಹೋದೆವು. ನಮ್ಮ ದೆಹಲಿಗೆ ಹೋಗುವ ವಿಮಾನ ಒಂದು ಮೇ 2024 ರಂದು ಹೊರಡುವುದಿತ್ತು. ಬೆಳಗ್ಗೆ ಐದು ಗಂಟೆಗೆ ನಾವು ವಿಮಾನ ನಿಲ್ದಾಣದಲ್ಲಿ ಇರಬೇಕಿತ್ತು. ಎಲ್ಲಿ ಗಿರಿನಗರದಲ್ಲಿರುವ ನಮ್ಮ ಮನೆ? ಎಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ? ಬೆಂಗಳೂರು ಮೈಸೂರಿನಷ್ಟು ವ್ಯತ್ಯಾಸ. ಹಾಗಾಗಿ ನಾವು ರಾತ್ರಿ ಮರುಭೂಮಿಯಂತೆ ಬೆಂದು ಹೋಗಿದ್ದ ನಮ್ಮ ಮನೆಯಲ್ಲಿ ರಾತ್ರಿ ಹತ್ತು ಗಂಟೆಗೇ ಮಲಗಿದೆವು. ನಮಗಾಗುತ್ತಿದ್ದ ಸೆಖೆಯು ಒಂದು ಮಟ್ಟಕ್ಕೆ ಇಂಗಿತು. ಅಯೋಧ್ಯೆಗೆ ಹೋಗುವ ಸಂತೋಷದಲ್ಲಿ ನಾನು ಕೇವಲ 5 ಗಂಟೆ ಕಾಲಾವಧಿ ಅಷ್ಟೇ ಮಲಗಿದ್ದು.
ವಿಮಾನದಲ್ಲಿ #Flight ಹೋಗುವ ಉತ್ಸಾಹದಿಂದ ನನ್ನ ಎದೆ ಬಡಿತ ಜೋರಾಗಿತ್ತು. ಮಾರನೆಯ ದಿನ ನಾನು ನನ್ನ ತಂದೆಯ ಅಲಾರಂ 3:15ಕ್ಕೆ ಹೊಡೆಯುವ ಎರಡು ನಿಮಿಷಗಳ ಮುನ್ನ ನನ್ನ ತಂದೆ ತಾಯಿಯರನ್ನು ಎಬ್ಬಿಸಿದೆ. ಈ ಕಾರಣದಿಂದ ನಾನು ಒಂದು ದೊಡ್ಡ ಸಾಹಸ ಮಾಡಿದ್ದೇನೆ ಎಂಬಷ್ಟು ಖುಷಿಯಾಗಿತ್ತು. ಸ್ನಾನಾದಿಗಳನ್ನು ಮುಗಿಸಿಯಾಯಿತು. ನನ್ನ ತಂದೆ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿದ ನಂತರ ಹೊರಡಲು ಸಿದ್ದರಾದೆವು. ನನ್ನ ತಂದೆ ತಾಯಿ ಇಡೀ ಬೆಂಗಳೂರಿನ ಇತಿಹಾಸಗಳನ್ನು ಹೇಳಿಕೊಂಡು ವಿಮಾನ ನಿಲ್ದಾಣ ತಲುಪುವವರೆಗೂ ಆನಂದದಿಂದ ಹೋದೆವು.
ನಿಲ್ದಾಣ ತಲುಪಿದ ನಂತರ ಅಲ್ಲಿ ಚೆಕ್ ಇನ್ ಇತ್ಯಾದಿಗಳನ್ನು ಮುಗಿಸಿ ಟೀ ಕುಡಿಯಲು ಅಲ್ಲಿದ್ದ ಸುಮಾರು 50ರಿಂದ ಹೆಚ್ಚು ಹೋಟೆಲುಗಳಲ್ಲಿ ಒಂದು ಹೋಟೆಲ್’ನಲ್ಲಿ ಟೀ ಕುಡಿದೆವು.
ಆನಂತರದ್ದೇ ನನ್ನ ಪಾಲಿನ ಸಂತಸದ ಘಳಿಗೆ. ಅದೇ ದೆಹಲಿಗೆ ಹೊರಡುವ ವಿಮಾನ ಹತ್ತಿದ ಸಂಭ್ರಮದ ಕ್ಷಣ. ಇದಕ್ಕಿಂತ ಹಿಂದೆ ನಾನು ವಿಮಾನದಲ್ಲಿ ಪ್ರವಾಸ ಮಾಡಿದ್ದು 2019 ರಲ್ಲಿ. ನಾನು ಆಗ ನಾಲ್ಕನೆಯ ತರಗತಿಯಲ್ಲಿದ್ದೆ. ಕುಳಿತು ಒಂದು ಅಂದಾಜು 10 ನಿಮಿಷಗಳಾದ ಮೇಲೆ ವಿಮಾನ ಮೇಲೆ ಹೊರಟಿತು. ವಿಮಾನ ಒಮ್ಮೆ ವೇಗವಾಗಿ ಚಲಿಸಿದರೆ ಅದಾಗದೇ ಹಾರುತ್ತದೆ. ನನ್ನ ತಂದೆ ತಂತ್ರಜ್ಞಾನಿ. ಈ ವಿಮಾನ ಹೇಗೆ ಹಾರುತ್ತದೆ ಎಂಬುದನ್ನು ತಿಳಿಸಿಕೊಟ್ಟರು. ಮಧ್ಯದಲ್ಲಿ ನಮಗೆ ತಿನ್ನಲು ಆಹಾರವನ್ನು ಕೊಟ್ಟರು.
ದೆಹಲಿಯಲ್ಲಿ ವಿಮಾನ ಇಳಿದು ಅಲ್ಲಿಂದ ಒಂದು ಬಸ್ಸಿನಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಸಂಖ್ಯೆ ಎರಡರ ತನಕ ಬಿಟ್ಟರು. ನಾವು ನಮ್ಮ ಲಗೇಜ್ ತೆಗೆದುಕೊಂಡು ಅಲ್ಲಿದ್ದ ಒಂದು ಅಂಗಡಿಯಲ್ಲಿ ಹಾಲು ಕುಡಿದೆವು. ಅಯೋಧ್ಯೆಗೆ ಹೋಗಲು ಎರಡು ಗಂಟೆಗಳ ಕಾಲ ಕಾಯಬೇಕಿತ್ತು. ನನ್ನ ತಂದೆ ಮುಂಬೈಯಿಂದ ಅಥವಾ ಕೋಲ್ಕತ್ತಾ ಇಂದ ಅಯೋಧ್ಯೆಗೆ ಹೋಗಲು ವ್ಯವಸ್ಥೆ ಮಾಡಿದ್ದರು. ಹೀಗಾಗಿ, ಅಲ್ಲಿ ನಾವು ಎಂಟು ಗಂಟೆಗಳ ಕಾಲ ಕಾಯಬೇಕಿತ್ತು. ದೆಹಲಿಯಲ್ಲಿ ಕೇವಲ ಎರಡು ಗಂಟೆಗಳ ಕಾಲ ಕಾಯುವ ಅವಧಿ ಇತ್ತು. 2 ಗಂಟೆಗಳು ಅಲ್ಲಿ ಒಂದು ನಿಮಿಷದಂತೆ ಕಳೆದವು.
ನಾನು, ನನ್ನ ತಂದೆ, ನನ್ನ ತಾಯಿ ಹಾಗೂ ನೂರ ತೊಂಬತ್ತೇಳು ಜನರು ಬರುವವರಿದ್ದರು. ಅಲ್ಲಿಂದ ಮತ್ತೆ ವಿಮಾನ ಹತ್ತಿ ಪಯಣ ಶುರು ಮಾಡಿದೆವು. ನನಗೆ ಕಾಯುವಷ್ಟು ಸಹನೆ ಇಲ್ಲದೆ ಮಲಗಿಕೊಂಡೆ. ವಿಮಾನ ಇಳಿಯಬೇಕಾದರೆ ನನ್ನ ಕಿವಿಯಲ್ಲಿ ಗಾಳಿ ತುಂಬಿಕೊಂಡು ನೋವು ಅನುಭವಿಸಿದ್ದೂ ಸಹ ಒಂದು ರೀತಿಯ ಅನುಭವವೇ ನನಗೆ. ಇದರಿಂದ ನನ್ನ ಗಾಢ ನಿದ್ರೆಯು ಭಂಗವಾಯಿತು ಎನ್ನಿ.
ನಂತರದ್ದೇ ನಾವು ಕಾಯುತ್ತಿದ್ದ ಆ ಸವಿಗಳಿಗೆ ಬಂದೇ ಬಿಟ್ಟಿತ್ತು. ಹೌದು… ಅಯೋಧ್ಯೆಯ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುಣ್ಯ ನೆಲವನ್ನು ಸ್ಪರ್ಶಿಸಿದ ಕ್ಷಣ. ಮುಖ್ಯವಾಗಿ ಆ ವಿಮಾನ ನಿಲ್ದಾಣವನ್ನು ಕಂಡ ನಮ್ಮಲ್ಲಿ ಅನುಭೂತಿಯಾಗಿದ್ದು ಖುಷಿಯೋ ದುಃಖವೂ ಅಥವಾ ಆಶ್ಚರ್ಯವೋ ಗೊತ್ತಿಲ್ಲ. ಅದು ಬರಿ ಒಂದು ವಿಮಾನ ನಿಲ್ದಾಣವಲ್ಲ ರಾಮನ ವಿಮಾನ ನಿಲ್ದಾಣ ಎನಿಸಿತು.
ಆಮೇಲೆ ನಾವು ಅಯೋಧ್ಯೆ ಭೂಮಿಯನ್ನು ಇಳಿದಾಕ್ಷಣವೇ ನಮಸ್ಕರಿಸಿದೆವು. ನಮ್ಮ ಚೀಲಗಳನ್ನು ತೆಗೆದುಕೊಂಡು ಕನಕ ಕುಟೀರ ಎಂಬ ಅತಿಥಿ ಗೃಹಕ್ಕೆ ಹೋಗಿ ವಿಶ್ರಾಂತಿ ಮಾಡಿದೆವು. ನಿದ್ರೆಯಿಂದೆದ್ದು ಮುಖ ತೊಳೆದು ಅಲ್ಲಿಯ ಹನುಮಾನ್ ಗರ್ಹಿಗೆ(ಗಡಿ) ಹೋದೆವು. ಬೆಂಗಳೂರಿನ ಜನಸಂಖ್ಯೆಗಿಂತ ಅಯೋಧ್ಯೆಯಲ್ಲಿದ್ದ ಪ್ರವಾಸಿಗರ ಜನಸಂಖ್ಯೆಯೇ ಹೆಚ್ಚಿದೆ ಎಂದೆನಿಸಿತು. ನೈವೇದ್ಯಕ್ಕಾಗಿ ಒಂದು ಲಡ್ಡುವಿನ ಡಬ್ಬಿಯನ್ನು ಕೊಟ್ಟರು. ಒಂದು ಲಡ್ಡುವನ್ನು ಅದರಿಂದ ತೆಗೆದು ಹನುಮಂತನ ಹತ್ತಿರ ಇಟ್ಟು ಮಿಕ್ಕಿದ್ದನ್ನು ನಮಗೆ ಕೊಟ್ಟರು. ಅಲ್ಲಿ ನನಗೆ ಒಬ್ಬ ಅರ್ಚಕರು ಚಂಡು ಹೂವಿನ ಮಾಲೆಯನ್ನು ಪ್ರಸಾದವನ್ನಾಗಿ ಕೊಟ್ಟರು.
ನನಗನಿಸಿದ್ದು, ಭಾರತದ ದಕ್ಷಿಣ ಭಾಗದಲ್ಲಿರುವವರ ಜೀವನ ಶೈಲಿ, ಸಂಪ್ರದಾಯ, ಆಹಾರ ಪದ್ಧತಿಯೇ ಬೇರೆ, ಭಾರತದ ಉತ್ತರ ಭಾಗದಲ್ಲಿರುವವರ ಜೀವನ ಶೈಲಿ, ಸಂಪ್ರದಾಯ, ಆಹಾರ ಪದ್ಧತಿಯೇ ಬೇರೆ. ಇದಾದ ನಂತರ ರಾಮಮಂದಿರಕ್ಕೆ ಹೋದೆವು. ಅಲ್ಲಿ ನೀರು ಕುಡಿದೆವು. ಕೃಷ್ಣನ ಚರಿತ್ರೆಯಲ್ಲಿ ಬರುವ ಅಘಾಸುರನೆಂಬ ಅಸುರ ಹಾವಿನಂತೆ ಉದ್ದವಾದ ಕ್ಯೂ ಇತ್ತು.
ಇಂತಹ ಪುಣ್ಯ ಸ್ಥಳಕ್ಕೆ ತೆರಳಿದಾಗ ಸುಮ್ಮನಿರಲು ಸಾಧ್ಯವೇ… ಸರಿ ವಿಷ್ಣು ಸಹಸ್ರನಾಮ ವಾಲ್ಮೀಕಿ ರಾಮಾಯಣದ ಮೊದಲನೆಯ ಸರ್ಗವನ್ನು ಪಾರಾಯಣ ಮಾಡಿಬಿಟ್ಟೆ. ರಾಮ ಮಂದಿರದ ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ಇರುವ ಗರುಡ-ಹನುಮಂತರು ಅಲ್ಲಿದ್ದ ದೀಪಗಳಲ್ಲಿ ಮಿಂಚುತ್ತಿದ್ದರು. ಭಕ್ತರನ್ನು ಸ್ವಾಗತಿಸುತ್ತಿದ್ದರು ಕೂಡ.
ಶ್ರೀರಾಮನಿಗೆ ಆ ದಿನ ಹಸಿರು ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದ. ಪ್ರಭುವಿನ ಹಣೆಯಲ್ಲಿದ್ದ ಗಂಧ ಆತನ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಎಡಗೈಯಲ್ಲಿ ಬಿಲ್ಲು, ಬಲಗೈಯಲ್ಲಿ ಬಾಣ, ಕರುಣಾಕರವಾದ ದೃಷ್ಟಿ, ಮೊಗದಲ್ಲಿ ಮಂದಹಾಸ, ಪಾದ ಕಮಲಗಳು, ಈ ಕಮಲಗಳ ಮಧ್ಯೆ ಒಂದು ಕಮಲ, ರಾಮನ ಪಾದಗಳ ಮೇಲೆ ಕೆತ್ತಿದಂತಹ ಗೆಜ್ಜೆಗಳು… ಆಹಾ…! ಆನಂದ…ಆನಂದ…ಆನಂದ… ಮತ್ತೆ ಪರಮಾನಂದ… ಅಂತಹ ಕ್ಷಣವದು.
ಎಷ್ಟೆಂದರೆ, ನನ್ನ ತಾಯಿ ತಂದೆಯ ಕಣ್ಣಲ್ಲಿ ಆನಂದಭಾಷ್ಪ ಗಂಗೆಯಂತೆ ಹರಿಯುತ್ತಿತ್ತು. ನಾವು ಮಂದಿರಕ್ಕೆ ಬಂದಾಗ ಏಳು ಗಂಟೆ ಸಾಯಂಕಾಲ ಆಗಿತ್ತು. ಹೋಗುವಾಗ ಎಂಟು ಗಂಟೆ ಆಗಿತ್ತು. ಊಟ ಮಾಡಿ ಅತಿಥಿ ಗೃಹಕ್ಕೆ ತೆರಳಿದವು. ಮಂದಿರದಲ್ಲಿ ಪ್ರಸಾದವನ್ನು ಕೊಟ್ಟರು. ಅಂದು ನಾವು ಸುಮಾರು ನಾಲ್ಕು ಕಿಲೋಮೀಟರ್ ನಡೆದಿದ್ದ ಕಾರಣ ಸುಸ್ತಾಗಿ ಮಲಗಿದೆವು.
ಮಾರನೆಯ ದಿನ ಅಯೋಧ್ಯೆಯ ಬೇರೆ ಮುಖ್ಯ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಮುಂಜಾನೆ ಬೇಗ ಎದ್ದು ಹೊರಟೆವು. ಒಂದು ಕಡೆ ಪೂರಿ ಚನ್ನ ಕಾಳಿನಿಂದ ಮಾಡಿರುವ ಸಾಗು ತಿಂದು, ಇನ್ನೊಂದು ಕಡೆ ಹೆಮ್ಮೆಯ ಹಾಲಿನ ಮೊಸರಿನಿಂದ ಮಾಡಿದ ಲಸ್ಸಿಯನ್ನು ಕುಡಿದೆ. ಅದ್ಭುತವಾಗಿತ್ತು ರುಚಿ. ಇದಾದ ನಂತರ ರಾಮಮಂದಿರಕ್ಕೆ ಹೋದೆವು. ಈ ದಿನ ಬೆಳಗ್ಗೆ ಹೋಗಿದೆವು 45 ಡಿಗ್ರಿ ಬಿಸಿಲು ಅಲ್ಲಿರುವ ಆನಂದದಿಂದ ಇದು ಹೆಚ್ಚು ಪರಿಮಾಣವಾಗಲಿಲ್ಲ. ಈ ದಿನ ಬೆಳಗ್ಗೆ ಹೋಗಿದ್ದರಿಂದ ಹಿಂದಿನ ದಿನದ ಸಾಯಂಕಾಲ ಬಂದಷ್ಟು ಜನರು ಇರಲಿಲ್ಲ.
ಈ ದಿನ ನಮ್ಮ ಶ್ರೀರಾಮನಿಗೆ ಹಳದಿ ಬಣ್ಣದ ವಸ್ತ್ರ ಹಾಕಿದ್ದರು. ಈ ಬಾರಿ ನಾವು ಮಧ್ಯದ ಸರತಿಯಿಂದ ಹೋದೆವು. ಹಾಗಾಗಿ ದರ್ಶನ ಇನ್ನೂ ಚೆನ್ನಾಗಿ ಆಯಿತು. ಆ ಸಾಯಂಕಾಲ ಸರಯೂ ಘಾಟಿಗೆ ಹೋದೆವು. ಆದರೆ ಸರಯೂ ಆರತಿ ನೋಡಲೆಂದು ಹೋದ ನಾವು ಅಲ್ಲಿ ಹೋಗುವಾಗ ಆಗಲೇ ಮುಗಿದುಹೋಗಿತ್ತು. ನಾವೇ ಆರತಿ ಮಾಡಿದೆವು.ತ್ರಿಮಥಾಚಾರ್ಯರಲ್ಲಿ ಒಬ್ಬರಾದ ಮಧ್ವಾಚಾರ್ಯರ ಒಂದು ಗ್ರಂಥವಾದ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ರಾಮಾಯಣದ ನಿರ್ಣಯವೂ ಇತ್ತು. ನಾನು ಐದನೇ ತರಗತಿಯಲ್ಲಿದ್ದಾಗ ನನ್ನ ತಂದೆ ರಾಮಾಯಣದ ನಿರ್ಣಯ ಹೇಳಲು ಶುರು ಮಾಡಿದ್ದರು. ಈಗ ರಾಮನ ಅವತಾರ ಸಮಾಪ್ತಿಗೆ ಬಂದಿತ್ತು. ರಾಮನ ಅವತಾರ ಸಮಾಪ್ತಿ ಆಗಿದ್ದು ಅಲ್ಲೇ. ಹಾಗಾಗಿ, ಅಲ್ಲೇ ಆ ಪಾಠವನ್ನು ಕೇಳಿದ್ದೆ, ಚೆನ್ನಾಗಿ ಅರ್ಥವಾಯಿತು.
ಭಾರತದ ದಕ್ಷಿಣ ಭಾಗದಲ್ಲಿರುವ ನಮ್ಮ ಜೀವನ ಶೈಲಿ, ಸಂಸ್ಕೃತಿ, ಸಂಪ್ರದಾಯ ಎಲ್ಲವೂ ಬೇರೆ. ನಾವು ಇಲ್ಲಿ ಭಕ್ತಿಗಿಂತ ಹೆಚ್ಚು ಪೂಜೆಯ ಪದ್ಧತಿ, ಶಾಸ್ತ್ರ ಇತ್ಯಾದಿಗಳನ್ನು ಭಕ್ತಿಗಿಂತ ಮುಂದೆ ಹಾಕುತ್ತೇವೆ. ಭಕ್ತಿಯೂ ಇರುತ್ತದೆ. ಆದರೆ ಉತ್ತರ ಭಾಗದ ಭಾರತೀಯರಿಗೆ ಭಕ್ತಿಯೇ ಹೆಚ್ಚಿರುತ್ತದೆ. ಅವರೆಲ್ಲರಿಗೂ ಒಂದು ಕಲ್ಲು ಕೊಟ್ಟು ಪೂಜೆ ಮಾಡಿ ಎಂದರೆ ಅದರಲ್ಲಿ ದೇವರನ್ನು ಕಂಡು ಭಕ್ತಿಯಿಂದ ತಮಗೆ ಬರುವ ಪೂಜಾ ಪದ್ಧತಿಯಲ್ಲಿ ಪೂಜೆ ಮಾಡುತ್ತಾರೆ. ಏಕೆಂದರೆ ಅದು ಪುಣ್ಯಭೂಮಿ. ಭಾರತದ ದಕ್ಷಿಣ ಭಾಗ ಕರ್ಮ ಭೂಮಿ. ಹಾಗಾಗಿ ಶಾಸ್ತ್ರ ಸಂಪ್ರದಾಯದಲ್ಲಿ ಹೇಳುವುದನ್ನು ಕಟ್ಟುನಿಟ್ಟಾಗಿ ಭಕ್ತಿಯಿಂದ ಇಷ್ಟಪಟ್ಟು ಮಾಡಬೇಕು.
ಅಯೋಧ್ಯೆ ನಂತರ ನಾವು ಕಾಶಿಗೆ ಕೂಡ ಹೋಗಿ, ವಿಶ್ವನಾಥನ ದರ್ಶನ ಮಾಡಿದೆವು. ಕಾಲಭೈರವನನ್ನು ಕಂಡು ಗಂಗಾ ಸ್ನಾನ ಮಾಡಿ ಪಾವನರಾದ ಅನುಭವ ಪಡೆದೆವು. ಅಲ್ಲಿಯ ರೋಚಕ ಅನುಭವಗಳನ್ನು ಹೇಳುತ್ತಾ ಹೋದರೆ ಅದು ಲೇಖನವಲ್ಲ ಮಹಾ ಪ್ರಬಂಧ ಆಗುವುದು. ಹಾಗಾಗಿ ಇಷ್ಟನ್ನು ಹೇಳಿ ಈ ಲೇಖನವನ್ನು ಮುಗಿಸುತ್ತೇನೆ.
ಶ್ರೀ ಕೃಷ್ಣಾರ್ಪಣಮಸ್ತು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post