ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಶರೀರವೆಂಬುದು ಭಗವಂತ ನೀಡಿದ ಅನರ್ಘ್ಯ ರತ್ನ. ಇದರ ರಚನೆಗೆ ಹೋಲಿಕೆ ಇಲ್ಲ. ಜೀವನ ಮಾರ್ಗದಲ್ಲಿ ನಮ್ಮನ್ನು ಒಯ್ಯುವ ಸಾಧನ ಅದು. ಪರಮಾರ್ಥದ ಸಾಧನೆ ಕೂಡಾ ಇದರ ಮೂಲಕವೇ ಆಗಬೇಕು. ಇದನ್ನು ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 39ನೇ ದಿನ ಮೈಸೂರು, ಹುಬ್ಬಳ್ಳಿ-ಧಾರವಾಡ, ಹಾವೇರಿ, ದಾವಣಗೆರೆ ವಲಯಗಳ ಸರ್ವ ಸೇವೆ ಸ್ವೀಕರಿಸಿ, ಕಾಲ ಸರಣಿಯ ಪ್ರವಚನ ಅನುಗ್ರಹಿಸಿದರು. ಎಲ್ಲ ಸಾಧನೆಗೂ ಕಾರಣವಾಗುವ ಶರೀರಕ್ಕೆ ಇರುವ ದೊಡ್ಡ ಅಪಾಯ ರೋಗದಿಂದ. ಇಂಥ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಜ್ಯೋತಿಷ ಈ ನಿಟ್ಟಿನಲ್ಲಿ ನೆರವಾಗುತ್ತದೆ ಎಂದು ಹೇಳಿದರು.

ವಾತ-ಪಿತ್ತ-ಕಫ, ಸಪ್ತಧಾತು, ದೇವತೆಗಳ ಮೂಲಕ ಜ್ಯೋತಿಷ ರೋಗಗಳನ್ನು ನಿರೂಪಿಸುತ್ತವೆ. ಜತೆಗೆ ಇವುಗಳ ಪರಿಹಾರವನ್ನೂ ನಿರೂಪಿಸುತ್ತದೆ. ಜ್ಯೋತಿಷ, ಆಯುರ್ವೇದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದಕ್ಕೊಂದು ಪೂರಕ ಎಂದು ಬಣ್ಣಿಸಿದರು. ಜ್ಯೋತಿಷ ಮತ್ತು ಆಯುರ್ವೇದವನ್ನು ಬಲ್ಲವನು ಅತ್ಯುತ್ತಮ ವೈದ್ಯನಾಗಬಲ್ಲ. ರೋಗನಿರ್ಣಯದಲ್ಲಿ ಇವೆರಡೂ ಜತೆಜತೆಗೆ ಸಾಗಬೇಕು ಎಂದು ಅಭಿಪ್ರಾಯಪಟ್ಟರು.

ವಾತ-ಪಿತ್ತ-ಕಫಗಳು ತತ್ವಾತ್ಮಕವಾಗಿ ಸಂಯೋಜನೆಯಾಗುವುದರಿಂದ ಸಪ್ತಧಾತುಗಳು ನಿರ್ಮಾಣವಾಗುತ್ತವೆ. ಆಧುನಿಕ ವೈದ್ಯವಿಜ್ಞಾನವನ್ನು ಜ್ಯೋತಿಷದ ಮೂಲಕವೂ ಅರ್ಥ ಮಾಡಿಕೊಳ್ಳಬಹುದು. ಕಾಲ ಹಿತೈಷಿಯಾಗಿ ನಮ್ಮೊಂದಿಗೆ ಪ್ರತಿ ಕ್ಷಣವೂ ಮಾತನಾಡುತ್ತದೆ. ಅನವರತವಾಗಿ ನಮ್ಮ ಹಿತಕ್ಕಾಗಿ ನಮ್ಮೊಂದಿಗೆ ಮಾತನಾಡುತ್ತಿರುತ್ತದೆ. ಸೃಷ್ಟಿಚಕ್ರದಲ್ಲಿ ಒಂದು ನಕ್ಷೆಯನ್ನು ಕೊಟ್ಟು ನಮ್ಮ ಇರುವಿಕೆಯನ್ನು ತೋರಿಸಿಕೊಡುತ್ತದೆ. ಗ್ರಹ- ರಾಶಿಗಳ ಪರಿಭಾಷೆಯಲ್ಲಿ ನಮ್ಮ ಇರುವಿಕೆ, ಮುಂದಿನ ದಾರಿಯ ಬಗ್ಗೆಯೂ ತಿಳಿಸಿಕೊಡುತ್ತದೆ. ಭವಿಷ್ಯದ ಸಂಪತ್ತು- ಆಪತ್ತುಗಳನ್ನು ಹಾಗೂ ಅದರ ಮೂಲವನ್ನು ತೋರಿಸಿಕೊಡುತ್ತದೆ. ಆ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನಮಗಿರಬೇಕು ಎಂದು ವಿಶ್ಲೇಷಿಸಿದರು.
ಶರೀರದ ಪ್ರತಿ ಅವಯವಗಳಿಗೂ ಒಬ್ಬೊಬ್ಬ ದೇವರು ಇದ್ದಾರೆ. ಪ್ರತಿ ಕ್ರಿಯೆಗೂ ದೇವತೆ ಇದೆ. ಅವುಗಳಿಗೆ ಕೋಪ ಬಂದಾಗ ನಮ್ಮ ಆರೋಗ್ಯದಲ್ಲಿ ಏರು ಪೇರು ಆಗಬಹುದು. ಶರೀರವನ್ನು ಅದು ಬಂದ ಕಾರಣಕ್ಕೆ ಬಳಸದಿದ್ದರೆ, ಆಯಾ ದೇವತೆಗಳಿಗೆ ಕೋಪ ಬರುತ್ತದೆ. ಇದು ರೋಗಕ್ಕೆ ಕಾರಣವಾಗುತ್ತದೆ ಎಂದರು.
ಇಂದಿನ ಅನಾವರಣದ ಬಗ್ಗೆ ಪ್ರಸ್ತಾವಿಸಿ, ಶ್ರೇಷ್ಠ ಕಾರ್ಯಕರ್ತನ ವ್ಯಕ್ತಿತ್ವದ ಅನಾವರಣ ಇಂದು ನಡೆದಿದೆ. ಅವರ ಭಕ್ತಿ ಹಾಗೂ ಕಾರ್ಯಗಳಿಂದಾಗಿ ಅವರು ಶಾಶ್ವತವಾಗಿ ಉಳಿದಿದ್ದಾರೆ. ಭೌತಿಕತೆಗಿಂತ ಹೆಚ್ಚಿನ ಭಾವನಾತ್ಮಕತೆ ಕೆಲವು ಕಡೆ ಇರುತ್ತದೆ. ಆದರೆ ಅವರು ಭಾವವನ್ನು ತುಂಬಿ ಕೊಟ್ಟವರು. ಯಾವುದೋ ಶುಭಗಳಿಗೆಯಲ್ಲಿ ಸಂಪರ್ಕಕ್ಕೆ ಬಂದಿದ್ದು, ಜನ್ಮಜನ್ಮಾಂತರದ ಬಂಧ ಎನ್ನುವ ರೀತಿಯಲ್ಲಿ ಬೆಳೆಯಿತು. ಅಂಥ ಬಾಂಧವ್ಯ ಪ್ರಮೋದ್ ರಾವ್‍ನದ್ದು. ಮೈಸೂರಿನ ಮಠ ಎನ್ನುವ ಮಟ್ಟಕ್ಕೆ ಆ ಮನೆ ಇತ್ತು. ಎಷ್ಟೋ ಸಭೆ, ಸಮಾಲೋಚನೆಗಳು, ಮಹತ್ವದ ನಿರ್ಣಯಗಳು ಅಲ್ಲಿ ನಡೆದಿವೆ. ಅನೇಕರು ಬೆಳಕಿಗೆ ಬಂದದ್ದು ಅಲ್ಲಿಂದ ಎಂದು ಬಣ್ಣಿಸಿದರು.
ಆ ಚೇತನಕ್ಕೆ ಶಾಶ್ವತ ಶಾಂತಿ ದೊರಕಬೇಕು. ಇಡೀ ಕಾರ್ಯಕರ್ತರ ಸಮೂಹದ ಪರವಾಗಿ ಅವರನ್ನು ನೆನೆಯೋಣ. ನಿಜ ಗುರುವಿನಲ್ಲಿ ಮನಸ್ಸು ಸ್ಥಿರವಾಗಿ ಬರಲು ಪ್ರಮೋದ್ ಸ್ಫೂರ್ತಿಯಾಗಲಿ ಎಂದು ಆಶಿಸಿದರು.
ಮೈಸೂರಿನ ಅಪೂರ್ವ ಕಾರ್ಯಕರ್ತ ಕೀರ್ತಿಶೇಷ ಪ್ರಮೋದ್ ಹೆಗಡೆಯವರ ವ್ಯಕ್ತಿತ್ವದ ಅನಾವರಣವನ್ನು ಅವರ ಪತ್ನಿ ವಿಜಯಾ ಪ್ರಮೋದ್ ರಾವ್ ನೆರವೇರಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಅರವಿಂದ ಬಂಗಲಗಲ್ಲು, ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಮೋಹನ ಹರಿಹರ, ವಿಶ್ವನಾಥ ಸಾರಂಗ, ಡಾ.ಎಸ್.ಆರ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post