ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಮೀಪದ ಡಾಬಸಪೇಟೆ ಮತ್ತು ದೊಡ್ಡಬಳ್ಳಾಪುರದ ನಡುವೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಆಸುಪಾಸಿನಲ್ಲಿ ಅಭಿವೃದ್ಧಿಪಡಿಸಲಿರುವ ಕ್ವಿನ್ ಸಿಟಿ (ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ) ಯೋಜನೆಯ ಮೊದಲನೆಯ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಚಾಲನೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇದರ ಅಂಗವಾಗಿ ಸಮಾರಂಭ ಏರ್ಪಡಿಸಲಾಗಿತ್ತು. ಇದರಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, #D K Shivakumar ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೇರಿದಂತೆ ಸಚಿವ ಸಂಪುಟದ ಹಲವು ಮಂತ್ರಿಗಳು ಮತ್ತು ಹಿರಿಯ ಜನಪ್ರತಿನಿಧಿಗಳು ಹಾಗೂ ಗಣ್ಯ ಉದ್ಯಮಿಗಳು ಉಪಸ್ಥಿತರಿದ್ದರು.

Also read: ಮುಡಾ ಹಗರಣ | ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲು
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, `ಬೆಂಗಳೂರಿನ ಕೈಗಾರಿಕಾ ಬೆಳವಣಿಗೆಗೆ ಹೇರಳ ಅವಕಾಶಗಳಿದ್ದು, ಇದನ್ನು ಸಾಧಿಸಲು ಸರಕಾರ ಬದ್ಧವಾಗಿದೆ. ಎರಡು ವಾರಗಳಲ್ಲಿ ಕಾವೇರಿ 5ನೇ ಹಂತದ ಕುಡಿವ ನೀರು ಪೂರೈಕೆ ಆರಂಭವಾಗಲಿದ್ದು, 20 ವರ್ಷಗಳ ಕಾಲ ನೀರಿನ ಕೊರತೆ ಇರುವುದಿಲ್ಲ. ಹಾಗೆಯೇ, ಇಲ್ಲಿ ವಿದ್ಯುತ್ ತೊಂದರೆ ಕೂಡ ಇಲ್ಲ. ಸಂಚಾರ ವ್ಯವಸ್ಥೆಯಲ್ಲಿ ತುಸು ಸಮಸ್ಯೆ ಇರುವುದು ನಿಜ. ಅದನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿರುವಷ್ಟು ಪ್ರತಿಭಾನ್ವಿತ ಮಾನವ ಸಂಪನ್ಮೂಲ ಕೈಗಾರಿಕೆಗಳಿಗೆ ಇನ್ನೆಲ್ಲೂ ಸಿಕ್ಕುವುದಿಲ್ಲ’ ಎಂದರು.

ಸಚಿವ ಎಂ ಬಿ ಪಾಟೀಲ ಮಾತನಾಡಿ, `ಒಟ್ಟು 5,800 ಎಕರೆಯಲ್ಲಿ ಕ್ವಿನ್ ಸಿಟಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದ್ದು, ಮೊದಲ ಹಂತದಲ್ಲಿ 2,000 ಎಕರೆಯಲ್ಲಿ ಇದನ್ನು ಸಾಕಾರಗೊಳಿಸಲಾಗುವುದು. 5 ಲಕ್ಷ ಜನವಸತಿಯ ಗುರಿಯುಳ್ಳ ವಿನೂತನ ನಗರದ ಪರಿಧಿಯಲ್ಲಿ ಶೇ 40ರಷ್ಟು ಜಾಗವನ್ನು ಉದ್ಯಾನಗಳಿಗೆ ಮೀಸಲಿಡಲಾಗಿದೆ. ಜೊತೆಗೆ 0.69 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ 465 ಎಕರೆ, ವರ್ಷಕ್ಕೆ 7 ಸಾವಿರ ಟನ್ ಹಣ್ಣು-ತರಕಾರಿ ಬೆಳೆಯಲು 200 ಎಕರೆ, ಶೇಕಡ 50ರಿಂದ 70ರಷ್ಟು ಜಲ ಮರುಪೂರಣ ವ್ಯವಸ್ಥೆ ಇರಲಿದೆ’ ಎಂದರು.
ಉದ್ದೇಶಿತ ನಗರದಲ್ಲಿ ಮೊದಲಿಗೆ ಅತ್ಯುತ್ತಮ ಗುಣಮಟ್ಟದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುವುದು. ಜತೆಗೆ ಜಗತ್ತಿನ ಅಗ್ರ 500 ವಿ.ವಿ.ಗಳು ತಮ್ಮ ಕ್ಯಾಂಪಸ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಉತ್ಕೃಷ್ಟ ದರ್ಜೆಯ ಆಸ್ಪತ್ರೆಗಳು, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಒಟ್ಟಿನಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆಯ ಯೋಜನೆಯಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಯೋಜನೆಯ ವೈಶಿಷ್ಟ್ಯಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಎಚ್ ಕೆ ಪಾಟೀಲ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಚೆಲುವರಾಯಸ್ವಾಮಿ, ಡಾ.ಎಂ ಸಿ ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ ಎನ್ ರಾಜಣ್ಣ, ಶರಣಬಸಪ್ಪ ದರ್ಶನಾಪುರ, ಮಂಕಾಳ ವೈದ್ಯ, ಬೋಸರಾಜು, ಶಿವಾನಂದ ಪಾಟೀಲ, ಮಧು ಬಂಗಾರಪ್ಪ, ರಹೀಂ ಖಾನ್ ಮತ್ತು ಆರ್ ಬಿ ತಿಮ್ಮಾಪುರ, ಹಿರಿಯ ಶಾಸಕ ಆರ್ ವಿ ದೇಶಪಾಂಡೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಉದ್ಯಮಿಗಳಾದ ಪ್ರಶಾಂತ್ ಪ್ರಕಾಶ್, ಗೀತಾಂಜಲಿ ಕಿರ್ಲೋಸ್ಕರ್, ರಂಗೇಶ್ ರಾಘವನ್, ವೈದ್ಯ ಡಾ.ವಿವೇಕ ಜವಳಿ ಉಪಸ್ಥಿತರಿದ್ದರು.
ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಯೋಜನೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕೆಐಎಡಿಬಿ ಸಿಇಒ ಡಾ,ಮಹೇಶ್ ಉಪಸ್ಥಿತರಿದ್ದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸ್ವಾಗತಿಸಿದರು. ಕೆಐಎಡಿಬಿ ಸಿಇಒ ಡಾ.ಮಹೇಶ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post