ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅ.19ರಂದು ಶನಿವಾರ ಸಂಜೆ 7ಕ್ಕೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಹೇಳಿದರು.
ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮದ್ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು, ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಇವರು ವಹಿಸಲಿದ್ದು, ಪರಮಪೂಜ್ಯ ಶ್ರೀ ದತ್ತಾವಧೂತ ಮಹಾರಾಜರು, ಚೈತನ್ಯಾಶ್ರಮ, ಹುಬ್ಬಳ್ಳಿ ಹಾಗೂ ದೇಶದ ಶ್ರೇಷ್ಟ ಜ್ಯೋತಿಷಿಗಳಾದ ಗಣೇಶ ದ್ರಾವಿಡ್ ಅವರು ಭಾಗವಹಿಸಲಿದ್ದಾರೆ. ದಶಗ್ರಂಥ ಘನಪಾಠಿಗಳಾದ ವೇದ ಬ್ರಹ್ಮ ಶ್ರೀಚಂದ್ರಮೌಳಿ ಘನಪಾಠಿ ಎಂಬ ಯುವ ವಿದ್ವಾಂಸರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದರು.
ಕೇವಲ 20 ವರ್ಷದಲ್ಲಿ ಶ್ರೀಚಂದ್ರಮೌಳಿ ಘನಪಾಠಿ ಅವರು ತಮ್ಮ ಕುಟುಂಬದಲ್ಲಿ 5ನೇ ತಲೆಮಾರಿನ ವೇದಧ್ಯಾಯಿಗಳಾಗಿದ್ದ ಇವರು, 7ನೇ ವಯಸ್ಸಿನಿಂದ ಇಂದಿನವರೆಗೆ ಅಧ್ಯಯನ ಮಾಡುತ್ತ, ಶೃಂಗೇರಿ ವೇದ ಪೋಷಕ ಸಭಾ, ಮೈಸೂರಿನ ಅವಧೂತ ದತ್ತಪೀಠ, ಕಂಚಿ ಕಾಮಕೋಟಿ ಪೀಠದ ವೇದ ರಕ್ಷಣಾ ನಿಧಿ ಟ್ರಸ್ಟ್ ಈ ಮೂರು ಕೇಂದ್ರದಲ್ಲಿ ನಡೆಯುವ ವೇದ ಪರೀಕ್ಷೆಯಲ್ಲಿ ಇವರು ಭಾಗವಹಿಸಿದ್ದಾರೆ.
Also read: ತಲಕಾವೇರಿಯಲ್ಲಿ ತೀರ್ಥೋದ್ಭವ | ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನವಿತ್ತ ಕಾವೇರಿ
ಕಳೆದ 79 ದಿನಗಳಿಂದ ಕೂಡಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನಪಾರಾಯಣವನ್ನು ಋಗ್ವೇದ ಸಂಹಿತೆಯಲ್ಲಿ ಇರುವ ಎಲ್ಲಾ 10,552 ಋಕ್ಕುಗಳನ್ನು ಯಾವುದೇ ಪುಸ್ತಕ ನೋಡದೇಯೇ ಘನಪಾಠ ಪಾರಾಯಣ ಮಾಡಿದ್ದು, ಭಾರತೀಯ ಗುರುಕುಲ ಪದ್ಧತಿಯ ವಿದ್ವತ್ ಪರೀಕ್ಷೆಗಳಲ್ಲಿ ಇದು ಕೂಡ ಒಂದಾಗಿದೆ. ಕೂಡಲಿಯಲ್ಲಿ ಚಾತುರ್ಮಾಸದ ಅಂಗವಾಗಿ ಮಹಾಸಂಸ್ಥಾನದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರತಿದಿನ 7 ಗಂಟೆಗಳಂತೆ ಒಟ್ಟು 630 ಗಂಟೆಗಳ ಕಾಲ ಒಟ್ಟು 90 ದಿನಗಳ ಕಾಲ ಈ ಘನಪಾರಾಯಣ ನಡೆದಿದ್ದು, ಅ.18ರಂದು ಮುಕ್ತಾಯಗೊಳ್ಳಲಿದೆ. ಇಂತಹ ವಿದ್ವತ್ ಪಾರಾಯಣವು ಕಾಶಿ ಮತ್ತು ಪೂಣೆ ಬಿಟ್ಟರೆ ಬೇರೆಯಲ್ಲಿಯೂ ನಡೆದಿಲ್ಲ. ವಿಶ್ವವಿಖ್ಯಾತ ರಿಯಾಲಿಟಿ ಶೋಗಳಿಗಿಂತ ಇದು ದೊಡ್ಡ ಸಾಧನೆಯಾಗಿದ್ದು, ಈ ಐತಿಹಾಸಿಕ ಅಪರೂಪದ ಕಾರ್ಯವು ಶಿವಮೊಗ್ಗದಲ್ಲಿ ನಡೆದು ಮುಕ್ತಾಯ ಕಾಣುತ್ತಿರುವಾಗ ಈ ವಿದ್ವಾಂಸರನ್ನು ಶಿವಮೊಗ್ಗದ ಜನತೆ ಗೌರವಿಸಲಿದೆ.
ಅ.19ರ ಶನಿವಾರ ಸಂಜೆ 5ಕ್ಕೆ ಶೋಭಾಯಾತ್ರೆಯೂ ಕೋಟೆ ರಸ್ತೆಯ ಗಾಯತ್ರಿ ದೇವಸ್ಥಾನದಿಂದ ಹೊರಟು ಒ.ಪಿ.ರಸ್ತೆ, ಸಿ.ಎಲ್, ರಾಮಣ್ಣ ರಸ್ತೆ, ಓಲ್ಡ್ ಬಾರ್ ಲೈನ್ ರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಗಾಯತ್ರಿ ಮಾಂಗಲ್ಯ ಮಂದಿರಕ್ಕೆ ತಲುಪಲಿದೆ. ಇಲ್ಲಿ ಚಂದ್ರಮೌಳಿ ಘನಪಾಠಿಯವರಿಗೆ ಗೌರವಿಸಿ 10 ಲಕ್ಷ ರೂ.ಗಳನ್ನು ಪ್ರಶಸ್ತಿಯೊಂದಿಗೆ ಪ್ರದಾನ ಮಾಡಲಾಗುವುದು. ಶಿವಮೊಗ್ಗದ ಗಣ್ಯರು ಹಾಗೂ ಜನಪ್ರತಿನಿಧಿಗಳು ಕೂಡ ಇದರಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ವಿನಂತಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಮಾತನಾಡಿ, ನಗರದ ಎಲ್ಲಾ ಹಿಂದೂ ಬಾಂಧವರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದರು. ಪುರೋಹಿತರಾ ಮಹಿಪತಿ ಜೋಯಿಸ್ ಮಾತನಾಡಿ, ಈ ಕಾರ್ಯಕ್ರಮದ ಬಳಿಕ ಅ.20ರಂದು ಕೂಡಲಿ ಮಠದಲ್ಲಿ ವೇದ ಸಮ್ಮೇಳನ ಕೂಡ ನಡೆಯಲಿದೆ. 2 ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮಾಪತಿ, ವಾಸುದೇವ್, ಎಂ.ಕೆ.ಸುರೇಶ್‍ಕುಮಾರ್, ಸಂತೋಷ್, ಸುಧೀಂದ್ರ, ರಾಜೇಶ್ ಶಾಸ್ತ್ರಿ, ಕೇಶವಮೂರ್ತಿ, ಸುಧೀಂದ್ರ ಕಟ್ಟೆ, ರಾಜು, ಸಂತೋಷ್, ಕುಬೇರಪ್ಪ, ನಾಗೇಶ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post