ಕಲ್ಪ ಮೀಡಿಯಾ ಹೌಸ್ | ವಿಶೇಷ ಸಂದರ್ಶನ: ರಘುರಾಮ, ಶಿವಮೊಗ್ಗ |
ನಾಡಿನ ಹಿರಿಯ ಮೃದಂಗ ವಿದ್ವಾಂಸ ಎಚ್.ಎಸ್. ಸುಧೀಂದ್ರ ಅವರು ಕಟ್ಟಿ ಬೆಳೆಸಿರುವ ಪ್ರತಿಷ್ಠಿತ ಸಂಸ್ಥೆ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಗೆ ಈಗ ಬೆಳ್ಳಿ ಹಬ್ಬ. 25 ವಸಂತದ ಸಂಭ್ರಮದಲ್ಲಿರುವ ಸಂಸ್ಥೆಗೆ ತರುಣ ಸಾರಥಿಯೇ ಸುಧೀಂದ್ರ. ಇವರು ಸಂಸ್ಥೆ ಮೂಲಕ ಸಾಧಿಸಿದ್ದು ಅನಂತ. ಸಾವಿರಾರು ಕನಸುಗಳು ಮತ್ತೂ ಜೀವಂತ. ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸುವ, ಕಲಾವಿದರೆಂದರೆ ಸದಾ ಮಿಡಿಯುವ ಹೃದಯವಂತ ಸುಧೀಂದ್ರ ಅವರು ತಮ್ಮ ಕಲಾಶಾಲೆ ಸಿಲ್ವರ್ ಜ್ಯೂಬಿಲಿ ಅಂಗವಾಗಿ ಅಕ್ಟೋಬರ್ 23ರಿಂದ 27ರ ವರೆಗೆ ರಾಜಧಾನಿ ಬೆಂಗಳೂರಿನ ಬಸವನಗುಡಿ ವಾಡಿಯಾ ಸಭಾಂಗಣದಲ್ಲಿ ಹತ್ತಾರು ಕಲಾವಿದರಿಗೆ ಕಛೇರಿ ನೀಡಿದ್ದಾರೆ. ನ. 9ರಂದು ಬನಶಂಕರಿ ರಾಮಲಲಿತ ಕಲಾ ಮಂದಿರದಲ್ಲಿ ಸಂಗೀತ ಉತ್ಸವದ ಸಮಾರೋಪ, ಪ್ರಶಸ್ತಿ ಪ್ರದಾನ ಆಯೋಜಿಸಿದ್ದಾರೆ. ಈ ಸಂದರ್ಭ ಅವರು ಶಿವಮೊಗ್ಗದ ಲೇಖಕ ರಘುರಾಮ ಅವರೊಂದಿಗೆ ಹಂಚಿಕೊಂಡ ಅಂತರಂಗದ ಭಾವನೆಗಳನ್ನು ಇಲ್ಲಿ ಅಕ್ಷರ ರೂಪದಲ್ಲಿ ಓದುಗರಿಗೆ ಕಟ್ಟಿಕೊಡಲಾಗಿದೆ.
ವಿದ್ವಾನ್ ಎಚ್.ಎಸ್. ಸುಧೀಂದ್ರ- ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಪಂಕ್ತಿ ಕಲಾವಿದರು. ಕಲಿತದ್ದು ಇಂಜಿನಿಯರಿಂಗ್ (ಬಿಇ) ಪದವಿ. ಆದರೆ ಒಲಿದದ್ದು ಕಲೆ. ಕರಗತವಾಗಿದ್ದು ಕರ್ನಾಟಕ ಶಾಸ್ತ್ರೀಯ ಸಂಗೀತ. ಕೈ ಹಿಡಿದಿದ್ದು ಮೃದಂಗ. ಗಾಯನ ಮತ್ತು ಪಕ್ಕವಾದ್ಯ ರಂಗದಲ್ಲಿ ಇದಮಿತ್ಥಂ ಎಂದು ಅಧಿಕಾರಯುತವಾಗಿ ಹೇಳುವ ಎಲ್ಲ ಪಟ್ಟುಗಳೂ ತಿಳಿದಿರುವ ಕೆಲವೇ ಕೆಲವು ವಿದ್ವಾಂಸರಲ್ಲಿ ಸುಧೀಂದ್ರ ಅಗ್ರಗಣ್ಯರು. ರಾಜ್ಯ, ದೇಶ- ವಿದೇಶದ ಪ್ರತಿಷ್ಠಿತ ವೇದಿಕೆಗಳು ಇವರ ಕಲಾವಂತಿಕೆಗೆ ಮಣೆ ಹಾಕಿ ಗೌರವಿಸಿವೆ. ಪ್ರತಿಭೆಯನ್ನು ಮೆರೆಸಿ- ಪಾಂಡಿತ್ಯಕ್ಕೆ ಮಣಿದಿವೆ. ಗಾಯನ ಕ್ಷೇತ್ರದ ಮಹಾ, ಮಹಾ ವಿದ್ವಾಂಸರೊಂದಿಗೆ ಸಖ್ಯಭಾವ, ಕಛೇರಿಗೆ ಸಾಥ್ ನೀಡುವಲ್ಲಿ ಸಲಿಗೆ, ಮಾರ್ಗದರ್ಶನ ನೀಡುವಲ್ಲಿ ಸಾರಥ್ಯ. ಕಲಿಕೆ ಎಂಬ ವಿಚಾರಕ್ಕೆ ಬಂದರೆ ಅಲ್ಲಿ ರಾಜಿ ಎಂಬುದೇ ಇಲ್ಲ.
ದೇಶ-ವಿದೇಶದ ಕಲಾವಿದರಿಗೆ ಪಕ್ಕವಾದ್ಯ ಸಹಕಾರ ನೀಡಿದ್ದರೂ, ಮಹಾನ್’ಗಳು ನಿಕಟರಾಗಿದ್ದರೂ ಸುಧೀಂದ್ರ ಅವರಿಗೆ ಅಹಮಿಕೆ ಎಂಬುದು ಕಿಂಚಿತ್ತೂ ಇಲ್ಲ. ಬದ್ಧತೆ ವಿಚಾರದಲ್ಲಿ ವಜ್ರದಷ್ಟು ಕಠಿಣವಾದರೂ ವಿಶ್ವಾಸ ಮತ್ತು ಸ್ನೇಹದಲ್ಲಿ ಅವರು ಕುಸುಮದಂತೆ ಮೃದು.
ಚಿಕ್ಕ ಮಕ್ಕಳಿಗೂ ಬೆನ್ನುತಟ್ಟಿ, ಪಕ್ಕದಲ್ಲೇ ಕೂತು ಪ್ರೋತ್ಸಾಹ ತುಂಬಿ- ಅವರು ಇಷ್ಟಪಡುವ ತಿಂಡಿ- ತಿನಿಸು ಕೊಡಿಸಿ ಖುಷಿಪಡಿಸಿ, ಪಾಠ ಹೇಳಿ- ನಾನಿದ್ದೇನೆ- ಧೈರ್ಯವಾಗಿ ಮುನ್ನುಗ್ಗು ಎಂಬ ಭರವಸೆ ತುಂಬುವ ವಿಶೇಷ ಚೇತನ ಅವರು. ಗಾಯಕರೂ, ಲಯವಾದ್ಯ ಕಲಾನಿಪುಣರೂ ಆದ ಸುಧೀಂದ್ರ, ಕಛೇರಿ ಶೈಲಿಗಳನ್ನು ಸಮರ್ಥವಾಗಿ ತಿದ್ದುವ, ಕೃತಿಗಳಿಗೆ ಸಮಗ್ರವಾಗಿ ನ್ಯಾಯ ಒದಗಿಸುವಂತೆ ನವ-ಯುವ ಕಲಾವಿದರ ಶಾರೀರವನ್ನು ಹದಗೊಳಿಸುವ ಮೆಂಟರ್. ಅವರ ಸ್ನೇಹ ಎಂದರೆ ಅಲ್ಲೊಂದು ಮಾಂತ್ರಿಕತೆ- ಮೋಡಿ. ಎಂಥವರನ್ನಾದರೂ ವಿಶ್ವಾಸದ ತೆಕ್ಕೆಗೆ ತೆಗೆದುಕೊಂಡು ಸಾತ್ವಿಕ ಉದ್ದೇಶಗಳನ್ನು ಸರಾಗವಾಗಿ ಈಡೇರಿಸಿಕೊಳ್ಳುವ, ಆ ಮೂಲಕ ಸಮಾಜಕ್ಕೆ ಸೌಖ್ಯವನ್ನು ಬಯಸುವ ಬಂಧುವಾಗಿಬಿಡುವುದು ಅವರ ಸರಳತೆಗೆ ಸಾಕ್ಷಿ. ಗುರುಭಕ್ತಿ -ಹೇಗಿರಬೇಕು ಎಂಬುದನ್ನು ಪ್ರತ್ಯಕ್ಷ ಕಾಣಬೇಕು ಎಂದರೆ ಅದು ಅಡಕವಾಗಿರುವುದು ಸುಧೀಂದ್ರರ ನಡೆ- ನುಡಿಯಲ್ಲಿ. ಲೋಕಾನುಕಂಪ ಎಷ್ಟಿರಬೇಕು ಎಂಬುದನ್ನು ನೋಡಲು ಅವರ ಬದುಕಿನ ಕ್ರಮ ಕಾಣಬೇಕು.
ಬೆಳೆದುಬಂದ ಹಾದಿ
ರಾಜಧಾನಿ ಬೆಂಗಳೂರಿನಲ್ಲಿ 1999 ರಲ್ಲಿ ವಿದ್ವಾನ್ ಎಚ್.ಎಸ್. ಸುಧೀಂದ್ರ ಹಾಗೂ ವಿದ್ವಾನ್ ಬಾಲು ರಘುರಾಮನ್‌ಅವರಿಂದ ಸ್ಥಾಪನೆಗೊಂಡ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ಒಂದು ಅಂಗೀಕೃತ ಸಂಸ್ಥೆ. ಭಾರತೀಯ ಪರಂಪರೆಯ ಪ್ರದರ್ಶಿತ ಕಲೆಗಳನ್ನು ಪೋಷಿಸಿ ಬೆಳೆಸುವ ಘನ ಉದ್ದೇಶ ಹೊಂದಿದೆ. ಕಲಾಶಾಲೆಯು ಪರಿಣತ ವಿದ್ವಾಂಸರ ತಂಡ ಹೊಂದಿದೆ. ಯುವ ಮತ್ತು ಉದಯೋನ್ಮುಖ ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡುವುದರೊಂದಿಗೆ ಬೋಧಪ್ರದವಾದ, ಆಸಕ್ತಿಯಿಂದಕೂಡಿದ ಸಂಗೀತ ಕಛೇರಿಗಳನ್ನೂ ಆಯೋಜಿಸುತ್ತದೆ. ಕಳೆದ 24 ವರ್ಷಗಳಿಂದ ವಾದನ, ಹಾಗೂ ತಾಳವಾದ್ಯ ಕ್ಷೇತ್ರಗಳಲ್ಲಿ ಶಿಕ್ಷಣನೀಡುತ್ತಾ ಬಂದಿದೆ. ಸಾಹಿತ್ಯ ಮತ್ತು ಲಯದ ತಿಳಿವಳಿಕೆಗೆ ವಿಶೇಷ ಆದ್ಯತೆ ನೀಡುವ ಮಹತ್ತರವಾದ ಸೇವೆ ಮಾಡುತ್ತಿದೆ. ಈ ಶಾಲೆಯ ಆಶ್ರಯದಲ್ಲಿ ಬೆಳೆದ ನೂರಾರು ಕಲಾವಿದರು ಆಕಾಶವಾಣಿ – ದೂರದರ್ಶನದ ಕಲಾವಿದರಾಗಿ, ದೇಶ- ವಿದೇಶಗಳಲ್ಲಿ ಶುದ್ಧ ಭಾರತೀಯ ಶಾಸ್ತ್ರೀಯ ಸಂಗೀತದ ವಿದ್ವಾಂಸರಾಗಿ ಖ್ಯಾತರಾಗಿರುವುದು ಹೆಮ್ಮೆ.
ಕಲೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ವಿದ್ವಾನ್ ಎಚ್.ಎಸ್. ಸುಧೀಂದ್ರ ಈ ಪ್ರೌಢ ಸಂಗೀತ ಕಲಾಶಾಲೆಯ ಸಾಧನೆಗಳ ಹಿಂದಿನ ರೂವಾರಿ. ಶಾಲೆ ಪ್ರಾಂಶುಪಾಲ. ಅದಕ್ಕಿಂತಾ ಹೆಚ್ಚಾಗಿ ಸಮಾಜದ ಒಬ್ಬ ಸರಳ, ಉತ್ತಮ ಸಜ್ಜನ. ಇದೇ ಕಲಾರಂಗದ ಸುಕೃತ.
ಪಾಠದೊಂದಿಗೆ ಪ್ಲಾಟ್‌ಫಾರ್ಮನ್ನೂ ಕೊಡಬೇಕು
1987ರಿಂದ ನಾನು ಪಾಠ ಮಾಡಲು ಆರಂಭಿಸಿದೆ. ಸಂಗೀತಾನೇ ಪ್ರೊಫೆಷನ್ ಅಂತಾ ಮನಕ್ಕೆ ಖಚಿತ ಆಯಿತು. ಇಂಜಿನಿಯರಿಂಗ್ ಓದಿದ್ದೆ. ಆದರೆ ಸಂಗೀತ ಮತ್ತು ಮೃದಂಗ ಬಲವಾಗಿ ಸೆಳೆಯಿತು. ಕಲಿಕೆ -ಪಾಠ – ಅವುಗಳ ಜೊತೆಗೆ ವಿದ್ವಾಂಸರಿಗೆ ನಾವು ಗೌರವ ತೋರಿಸಬೇಕು ಎಂದೂ ಅನಿಸಿತು. ಇದಕ್ಕಾಗಿ ಒಂದು ಪ್ಲಾಟ್‌ಫಾರ್ಮ ಬೇಕಲ್ಲವೇ. ಅದನ್ನೂ ನಾನೇ ಕೊಡಬೇಕು ಎಂದು ಮನಸ್ಸಿಗೆ ಬಂತು. ಹರಿದಾಸರ, ವಾಗ್ಗೇಯಕಾರರ, ರಚನೆಕಾರರ ಕೃತಿಗಳ ಶುದ್ಧ ರೂಪ ಮುಂದಿನ ಪೀಳಿಗೆಗೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ಪಬ್ಲಿಕೇಶನ್ ಕೂಡಾ ಆರಂಭಿಸಬೇಕು ಎಂದು ಅನಿಸಿತು. ಇದಕ್ಕೆಲ್ಲಾ ನಮ್ಮದೇ ಆದ ಒಂದು ಸಂಸ್ಥೆ ಇದ್ದರೆ ಚಂದ. ಹಾಗಾಗಿ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಯನ್ನು 1999ರಲ್ಲಿ ಆರಂಭಿಸಿದೆವು.
ಬೆಳಕನ್ನು ಕೊಡುವ ಕಾಯಕ
ನಮ್ಮ ಸಂಸ್ಥೆಯಲ್ಲಿ ಹಿರಿಯರು-ಕಿರಿಯರಿಗೆ ವೇದಿಕೆ, ಪಟ್ಟಾಗಿ ಕುಳಿತು ಕಲೆಯನ್ನು ಆಸ್ವಾದಿಸಬೇಕು. ಸಂಗೀತಕ್ಕೆ ಸಂಬಂಧಪಟ್ಟ ಹತ್ತಾರು ವಿಚಾರಗಳ ವಿಮರ್ಶೆ, ಚಿಂತನ-ಮಂಥನ ಮಾಡಬೇಕು. ಅದರಿಂದ ಸಮಾಜಕ್ಕೆ ಮತ್ತೆ ಹೊಸ ಪೀಳಿಗೆಗೆ ಒಂದು ಕಲಾತ್ಮಕವಾದ ಬೆಳಕನ್ನು ಕೊಡಬೇಕು ಅನ್ನೋದು ನನ್ನ ಉದ್ದೇಶ ಆಗಿತ್ತು. ಅದಕ್ಕಾಗಿ ನನಗೆ ಅತ್ಯಂತ ಗೌರವಾನ್ವಿತರು ಮತ್ತು ಹಿರಿಯರಾದ ಇಬ್ಬರ ಅಭಿಮತ ಕೇಳಿದೆ. ಒಬ್ಬರು ಹಿರಿಯ ಮೃದಂಗ ವಿದ್ವಾಂಸರಾದ ವಾಸುದೇವ ರಾವ್. ಇನ್ನೊಬ್ಬರು ಶ್ರೀ ಮುಷ್ಣಂ ರಾಜಾರಾವ್. ಇಬ್ಬರೂ ಗುರುಗಳೇ. ಅವರಿಬ್ಬರ ಆಶೀರ್ವಾದ, ಸಹಕಾರ ಮತ್ತು ಬೆಂಬಲ ನನಗೆ ಆನೆಬಲ ನೀಡಿತು. ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ಉದಯಿಸಿತು ಎಂದು ಮೊದಲ ಹೆಜ್ಜೆಗಳನ್ನು ಸ್ಮರಿಸಿದರು ವಿದ್ವಾನ್ ಎಚ್.ಎಸ್. ಸುಧೀಂದ್ರ.
ಹೊಡೆತ ಬಿತ್ತು- ವಿಶ್ವಾಸ ಮೇಲಕ್ಕೆ ಎತ್ತಿತು
ಬೆಂಗಳೂರಿನ ವಿದ್ವಾಂಸರಾದ ಕೆ. ವೆಂಕಟರಾಮ್- ನಾನು ಮರೆಯಲಾರದ ವ್ಯಕ್ತಿತ್ವ. ಅವರನ್ನು ಪ್ರತಿ ಹಂತದಲ್ಲೂ ಸದಾ ನೆನಪು ಮಾಡಿಕೊಳ್ಳುತ್ತೇನೆ. ಅವರು ನನಗೆ ಬಹಳ ದೊಡ್ಡ ಜವಾಬ್ದಾರಿಗಳನ್ನು ಕೊಟ್ಟು ಬೆಳೆಸಿದವರು. ಘಟಂ ವಿದ್ವಾಂಸರಾಗಿದ್ದ ಅವರ ಸಂಸ್ಥೆಯಲ್ಲಿ ಒಂದಷ್ಟು ಕೆಲಸ ಮಾಡಿದ ಅನುಭವ ನನಗೆ ಇತ್ತು. ಅವರು ಕೊಟ್ಟ ಮಾರ್ಗದರ್ಶನವೇ ನಾನು ನನ್ನ ಸಂಸ್ಥೆ ಕಟ್ಟಲು ಬುನಾದಿ. ಮೊದಲಿಗೆ ಸ್ವಲ್ಪ ಅನುಭವ ಕಡಿಮೆ. 2-3 ವರ್ಷ ಸ್ವಲ್ಪ ಹೊಡೆತ ಬಿತ್ತು . ಹಣಕಾಸಿನ ಸಮಸ್ಯೆಯೂ ಅದರಲ್ಲಿ ಒಂದು. ಆದರೆ ನಾನು ಯಾರನ್ನೂ ಬೇಡಲಿಲ್ಲ. ಹಾಗೇ ಕಷ್ಟಪಟ್ಟು ಸಂಸ್ಥೆ ಕಟ್ಟುವ ಕೆಲಸ ಮಾಡ್ತಾ ಬಂದೆ. ನನ್ನ ಶಿಷ್ಯರು ಸಂಸ್ಥೆಗೆ ಆರ್ಥಿಕ- ನೈತಿಕ ಬಲವಾಗಿ ನಿಂತರು. ಎಲ್ಲಾ ಸಂಗತಿಗಳಿಂದ ‘ಪಾಠ’ ಕಲಿತೆ. ಯಾವುದೇ ಸಂಸ್ಥೆ ಸ್ಥಾಪನೆ ಮಾಡುವುದು ಸುಲಭ. ಅದನ್ನು ನಿರ್ವಹಣೆ ಮಾಡೋದು ಸ್ವಲ್ಪ ಸಾಹಸದ ಕೆಲಸ. ಆದರೆ ನಮ್ಮ ಸರ್ಕಲ್‌ನ ಎಲ್ಲರ ವಿಶ್ವಾಸಗಳೇ ನಮ್ಮನ್ನು ಮೇಲಕ್ಕೆ ಎತ್ತಿದವು ಎಂದರು ವಿದ್ವಾನ್ ಸುಧೀಂದ್ರ.
ದೇವಾಲಯಗಳಲ್ಲಿ ಕಛೇರಿ ಪುನರುತ್ಥಾನ
ಸಂಗೀತ ಎಂಬುದು ದೈವಿಕ ಕಲೆ. ದೈವ ಸಾಕ್ಷಾತ್ಕಾರಕ್ಕೆ ಸುಲಭದ ಮಾರ್ಗ. ಆದ್ದರಿಂದಲೇ ಹಿಂದಿನ ಪ್ರಾಚೀನ ದೇವಾಲಯಗಳಲ್ಲಿ ಶಿಲ್ಪ ಕಲೆಗಳಲ್ಲಿಯೂ ವಾದ್ಯ, ಗಾಯನ, ನೃತ್ಯ- ಕಲಾ ಸಭೆ ಅಭಿವ್ಯಕ್ತಗೊಳಿಸುವ ಅನೇಕ ಶಿಲ್ಪಗಳನ್ನು ಕಾಣುತ್ತೇವೆ. ಅಂತೆಯೇ ಸಂಗೀತ ಕಲೆಯನ್ನು ದೇವಾಲಯಗಳಲ್ಲಿ ಪೂಜಾ ಸಂದರ್ಭದಲ್ಲಿ ಗೌರವಿಸಲಾಗುತ್ತಿತ್ತು. ಪ್ರದರ್ಶನ ಕಲೆಯಾಗಿ ಮಾರ್ಪಾಡಾಗುವುದಕ್ಕೂ ಮುನ್ನ ಸಂಗೀತ ಎಂಬುದು ಸಮರ್ಪಣಾ ಕಲೆಯಾಗಿತ್ತು. ಕಾಲ ಘಟ್ಟದ ಹೊಡೆತಕ್ಕೆ ಸಿಲುಕಿ ದೇಗುಲದ ವಿಶೇಷ ಪೂಜಾ ಮಹೋತ್ಸವಗಳಲ್ಲಿ ಸಂಗೀತ ಕಾಲಕ್ರಮೇಣ ಕಡಿಮೆಯಾಯಿತು. ಈ ಹಂತದ ಗ್ಯಾಪ್ ತುಂಬಲು, ಸಂಗೀತದ ಪಾವಿತ್ರ್ಯತೆಯನ್ನು ಯುವಜನತೆಗೆ ಅರಿವು ಮೂಡಿಸಲು, ಕಲೆಯ ಸ್ಥಾನಮಾನವನ್ನು ದೇವಾಲಯಗಳಲ್ಲಿ ಪುನರುತ್ಥಾನ ಮಾಡಲು ನಮ್ಮ ಸಂಸ್ಥೆ ಸಂಕಲ್ಪಿಸಿತು. ಬೆಂಗಳೂರಿನ ಹಲವು ದೇವಾಲಯಗಳಲ್ಲಿ- ವಿಶೇಷ ಹಬ್ಬ ಹರಿದಿನಗಳಲ್ಲಿ ಕಾರ್ಯಕ್ರಮ ಪ್ರಾಯೋಜಿಸುತ್ತಾ ಬಂದೆವು. ಅನೇಕ ಹಿರಿಯ- ಕಿರಿಯ ಕಲಾವಿದರಿಗೆ ವೇದಿಕೆ ಒದಗಿಸಿದ್ದು ಈಗ ಮೈಲಿಗಲ್ಲಾಗಿದೆ.
ನಮ್ಮ ಹೆಮ್ಮೆಯ ಕಾರ್ಯಕ್ರಮ ಸರಣಿ
ಕಿರಿಯ ಕಲಾವಿದರ ಪ್ರೋತ್ಸಾಹಕ್ಕಾಗಿ ಶ್ರೀರಾಮನವಮಿ ಸಂಗೀತ ಉತ್ಸವ (2019 ರಿಂದ ಶ್ರೀ ರಾಮ ಭಕ್ತ ಸಭಾದ ಸಹಯೋಗ) ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಸಂಗೀತ ಉತ್ಸವ ( 2019 ತುಳಸೀ ಮಠದ ಸಹಕಾರ), ನವರಾತ್ರಿ ಸಂಗೀತ ಕಾರ್ಯಕ್ರಮ (2007 ರಿಂದ ಉಮಾ ಮಹೇಶ್ವರ ದೇಗುಲ ಸಾಥ್), ಸಂತ ಶ್ರೀ ತ್ಯಾಗರಾಜರ ಆರಾಧನೆ, ಸಂಗೀತ ಪಿತಾಮಹ ಶ್ರೀ ಪುರಂದರದಾಸರ ಆರಾಧನೆ ( 2013ರಿಂದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಸಹಕಾರದಲ್ಲಿ ಅಹೋರಾತ್ರಿ ಸಂಗೀತ ಸಮಾರಾಧನೆ), ತ್ರೈ ಮಾಸಿಕ ಕಚೇರಿಗಳು (ನಾದಸುರಭಿ ಮತ್ತು ವಿಶಿಷ್ಟ ಬನಶಂಕರಿ ೈನ್‌ಆರ್ಟ್ಸ್ ನೆರವು)- ಇವುಗಳೊಂದಿಗೆ ಯುವಚೇತನ ಉತ್ಸವ (4 ವರ್ಷಕ್ಕೊಮ್ಮೆ ಯುವ ಸಂಗೀತಗಾರರಿಗೆ) ಮತ್ತು ಪ್ರತಿ ವರ್ಷ ಸಂಸ್ಥೆ ವಾರ್ಷಿಕೋತ್ಸವ. (ಅಕ್ಟೋಬರ್-ನವೆಂಬರ್), ಇಬ್ಬರು ಕಲಾ ಸಾಧಕರಿಗೆ ‘ಸ್ವರಲಯ ರತ್ನ’ ಮತ್ತು ‘ಸ್ವರಲಯ ಶೃಂಗ’ ಪ್ರಶಸ್ತಿ ಪ್ರದಾನ, ಹಿರಿಯ- ಕಿರಿಯ ಕಲಾವಿದರ ಕಛೇರಿಗಳು ನಿರಂತರವಾಗಿ ಸಾಗಿವೆ. ವರ್ಷಕ್ಕೆ ಕನಿಷ್ಠ ಎಂದರೆ 40 ಕಾರ್ಯಕ್ರಮ ಮಾಡ್ತಾ ಇದ್ದೀವಿ.
ಕರ್ನಾಟಕ ಮ್ಯೂಜಿಶಿಯನ್ಸ್ ಡೈರಕ್ಟರಿ ಹತ್ತು ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ ಪ್ರಪ್ರಥಮ ಸಂಸ್ಥೆ ನಮ್ಮದು. ಇದರೊಂದಿಗೆ ಸಿದ್ಧಿವಿನಾಯಕಂ ಸದಾ ಭಜೇಹಂ, ಉಗಾಭೋಗ ದರ್ಪಣ, ಪುರಂದರದಾಸರ ನವರತ್ನ ಮಾಲಿಕೆ (ಸ್ವರಲಿಪಿ ಪುಸ್ತಕ-ಅಡಕಚಕ್ರ ಸಹಿತ), ಹರಿದಾಸರ ಮುಂಡಿಗೆಗಳು(ಸ್ವರಲಿಪಿ ಪುಸ್ತಕ ಮತ್ತು ಸಿಡಿ ಸಹಿತ), ಹೀಗೆ ಹಲವಾರುಅರ್ಥಪೂರ್ಣ ಪುಸ್ತಕಗಳನ್ನೂ, ಹರಿದಾಸ ಸಂಗ, ಮಧುರ ಸ್ಮೃತಿ, ವರ್ಣಮ್ಸ್ ಆನ್ ವಯಲಿನ್, ಕೃಷ್ಣಾಮೃತಂ, ದಿ ಡಿವೈನ್ ಸ್ಟಿಂಗ್ಸ್, ದಿ ಪಿಲಿಗ್ರಿಮೇಜ್, ತತ್ವಾಮೃತಂ, ವಾಗ್ದೇವಿ ವಂದನ, ಸ್ವರರಾಗ ಸುಧಾ, ವಾಗ್ಗೇಯ ವೈಭವ-1 ರಿಂದ 4, ಅಭಯಾಂಬಾ ವಿಭಕ್ತಿ ಕೃತಿಗಳು, ತ್ಯಾಗರಾಜ ವೈಭವಂ, ವೀಣಾ ಕಂಪನ, ಸೂಳಾದಿ, ಲಯವರ್ಷಿಣಿ, ನಾದ ಲಯ ವೈಭವ ಮತ್ತುಗೌರಿ ಮನೋಹರ ಅಡಕಚಕ್ರ ಬಿಡುಗಡೆ ಮಾಡಲಾಗಿದೆ. ಪುರಂದರ ನವರತ್ನ ಕೃತಿ ಮತ್ತು ಹರಿದಾಸರ ಮುಂಡಿಗೆ ಎಂಬ ಪುಸ್ತಕಗಳನ್ನೂ ಮತ್ತು ಅದರೊಂದಿಗೆ ಅವುಗಳ ಕಲಿಕೆಗೆ ಅನುಕೂಲವಾಗುವ ಸಿಡಿ ಗಳೂ ಬಿಡುಗಡೆಯಾಗಿವೆ. ಉಗಾಭೋಗದರ್ಪಣ, ಪುಸ್ತಕ ಮತ್ತು ಪುರಂದರ ನವರತ್ನ ಮಾಲಿಕೆ 10ನೇ ಆವೃತ್ತಿ ಪುಸ್ತಕ ಇದೀಗ ನ. 9ರಂದು ಬೆಳ್ಳಿ ಹಬ್ಬದ ಕೊಡುಗೆಯಾಗಿ, 35 ಹರಿದಾಸರ ಕೃತಿ ಒಳಗೊಂಡ ಸಿಡಿ ಲೋಕಾರ್ಪಣೆಯಾಗಲಿದೆ.
ಕಿರಿಯರಿಗೆ ಸಂದೇಶ…
ಇಂದು ಅನೇಕ ಕಲಾವಿದರ ನಡುವೆ ಕ್ವಾಲಿಟಿ ಆಫ್ ಮ್ಯೂಸಿಕ್ ಎನ್ನುವುದು ಬಹಳ ಮಹತ್ವದ್ದು. ಸಂಗೀತ ಕಲಿಕೆಗೆ ಸಮಯ ಇನ್ವೆಸ್ಟ್ ಮಾಡಿರೋ ನಮಗೆ ಅದು ಲಾಭದಾಯಕ ಅಥವಾ ತೃಪ್ತಿದಾಯಕ ಅಂತ ಅನ್ನಿಸಬೇಕು. ಕಾಲ ಕೆಟ್ಟಿಲ್ಲ. ದಯವಿಟ್ಟು ಕಾಲದ ಮೇಲೆ ನಾವು ಯಾವುದೇ ಆರೋಪ ಮಾಡಬಾರದು. ಮೊದಲು ನಾವು ಸರಿಯಾಗಿ ವಿದ್ಯೆ ಕಲೀಬೇಕು. ಅನೇಕ ವಿದ್ಯಾರ್ಥಿಗಳು ಶಾರ್ಟ್ ಟರ್ಮ್ ಗೋಲ್ಸ್ ಇಟ್ಕೊಂಡಿದ್ದಾರೆ. ಅದು ಲಾಂಗ್ ಟರ್ಮ್ ಆದರೆ ಚಂದ. ಗುಣಮಟ್ಟದ ಕಲಿಕೆ ಮತ್ತು ಶ್ರೇಷ್ಠವಾದ ಪ್ರಸ್ತುತಿ ಇವತ್ತು ಅತ್ಯಂತ ಅಗತ್ಯ. ಅದನ್ನ ನಾವು ಒಂದು ಸ್ಟ್ಯಾಂಡರ್ಡ್ ಅಂತಾ ಹೇಳ್ತಿವಿ. ಆ ನಿಟ್ಟಿನಲ್ಲಿ ನವ- ಯುವ ಕಲಾವಿದರು ಶ್ರಮಿಸಬೇಕು. ಇದಕ್ಕೆಲ್ಲ ಆಸಕ್ತಿ ಅನ್ನೋದು ಬಹಳ ಮುಖ್ಯ. ಕಲೆ ಬಗ್ಗೆ ಅಪಾರವಾದ ಕಳಕಳಿ ಅಂತರಂಗದಿಂದ ಹೊರ ಬರಬೇಕು.
ನಾವು ಮೊದಲು ನೆಟ್ಟಗೆ ಇರಬೇಕು
ಕಲಾವಿದರು ಒಗ್ಗಟ್ಟು ಆಗೋಲ್ಲ ಅನ್ನೋ ಚಿಂತೆ ಅಥವಾ ಚಿಂತನೆ ನಮಗೆ ಬೇಡ. ಬೇರೆಯವರು ಹೇಗೆ ಬೇಕಾದರೂ ಇರಲಿ, ನಾವು ಪರಿಪಕ್ವವಾಗಿ ಇರಬೇಕು ಕಲಾಕ್ಷೇತ್ರದಲ್ಲಿ ಯಾರೋ ಪ್ರಶಸ್ತಿ ಕೊಡುತ್ತಾರೆ ಅಂತ 25 ಕಡೆ ಅರ್ಜಿ ಹಿಡಿದು ಹುಡುಕಿಕೊಂಡು ಹೋಗಬಾರದು. ‘ಏನೋ ನಾನು ಕೇಳಿದೆ – ಅವರು ಪ್ರಶಸ್ತಿ ಕೊಟ್ರು- ನಂಗೆ ಸನ್ಮಾನ ಮಾಡಿದರು’ ಎನ್ನುವ ಒಂದು ಮುಲಾಜೂ ನನಗೆ ಬೇಡ. ಅಂತರಂಗ ನೋಡಿಕೊಂಡಾಗ ಇಂಥ ಪ್ರಶಸ್ತಿ ನನ್ನ ಹೃದಯದಲ್ಲಿ ಒಂದು ಕಪ್ಪು ಚುಕ್ಕೆ ಆಗಿ ಉಳಿಯುತ್ತೆ. ಹಾಗಾಗಿ ನಾನು ಯಾರಿಗೆ ಯಾವ ಪ್ರಶಸ್ತಿಗೂ ಕೈ ಚಾಚಿಲ್ಲ. ಚಾಚುವುದೂ ಇಲ್ಲ. ಆತ್ಮ ತೃಪ್ತಿಗಾಗಿ 25 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿ ಉತ್ತಮ ಗುಣಮಟ್ಟದ ಕಾರ್ಯಕ್ರಮ ನೀಡಿದ ತೃಪ್ತಿ ಇದೆ. ಒಂದಿಷ್ಟು ಕೆಲಸ ಮಾಡಿದ್ದೇವೆ ಎಂಬ ಧನ್ಯತೆ ಇದೆ. ಇಷ್ಟು ಸಾಕು ನೆಮ್ಮದಿ ಜೀವನಕ್ಕೆ.
ಕಟ್ಟಡ ಬೇಡ, ಪ್ರಶಸ್ತಿ ಆಸೆಯೂ ಸಲ್ಲ
ಸಂಸ್ಥೆಗಾಗಿ ನಾವು ಯಾವುದೇ ಕಟ್ಟಡಗಳನ್ನ ಮಹಲ್ಗಳನ್ನ ಕಟ್ಟುವ ಯೋಜನೆ ಇಲ್ಲ ಸರ್ಕಾರದ ಜೊತೆಗೆ ಒದ್ದಾಟ ಮಾಡಿಕೊಂಡು ಸಹಯೋಗ ಪಡೆದುಕೊಂಡು ಯಾವುದೇ ರೀತಿಯ ಕಾರ್ಯಕ್ರಮ ಮಾಡುವ ಉದ್ದೇಶ ಇಲ್ಲ ನಾವೇ ನಮ್ಮ ಹಣವನ್ನ ಹಾಕಿ ಶಿಷ್ಯ ಸಮೂಹದ ತನು ಮನ ಧನ ಸಹಕಾರದೊಂದಿಗೆ ಒಂದಿಷ್ಟು ಕಾರ್ಯಕ್ರಮವನ್ನು ಮಾಡ್ತಾ ಇದ್ದೀವಿ ಅದರಲ್ಲಿ ಸಂತೋಷ ಇದೆ ಶ್ರದ್ಧೆ ಇದೆ ನಮ್ಮೆಲ್ಲರಿಗೂ ಖುಷಿಯಿದೆ ಕಲಾ ಜೀವನ ನನಗೆ ಅತ್ಯಂತ ದೊಡ್ಡ ಆನಂದವನ್ನು ಕೊಟ್ಟಿದೆ ಹಣಕಾಸಿನ ವಿಚಾರಕ್ಕೆ ನಾವು ಯಾವತ್ತೂ ಯಾರನ್ನು ಕೈ ಚಾಚಿಲ್ಲ ಸಹ ಕಲಾವಿದರು ಮತ್ತು ಶಿಷ್ಯರೇ ತಾವಾಗೇ ಬಂದು ಸಹಾಯ ಮಾಡುತ್ತಾರೆ.
ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು
ಕೇವಲ ಪಾಠ, ಸಂಗೀತ ಕಚೇರಿ ಮಾಡುವುದು ಮಾತ್ರವೇ ನಮ್ಮ ಕಾಯಕ ಅಲ್ಲ. ಯಾರು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೋ ಅವರಿಗೆ ಆರ್ಥಿಕವಾಗಿ ಸಹಾಯ ಮಾಡುವುದೂ ನಮ್ಮ ಸಂಸ್ಥೆ ಕರ್ತವ್ಯವಾಗಿದೆ. ಕೋವಿಡ್ ಸಂದರ್ಭ, ನಂತರದ ಕಾಲಘಟ್ಟದಲ್ಲಿ ನಮ್ಮ ಸುತ್ತಮುತ್ತ ಸಂಕಷ್ಟದಲ್ಲಿ ಇರುವ ಕಲಾವಿದರಿಗೆ ಈವರೆಗೆ 13 ಲಕ್ಷ ರೂ. ವರೆಗೆ ನಾವು ಧನ ಸಹಾಯ ಕೊಟ್ಟಿದ್ದೇವೆ. ಯಾವುದೇ ದಾಖಲೆ, ಅರ್ಜಿ ಕೇಳದೇ ವಿಷಯ ತಿಳಿದ ತಕ್ಷಣ ನೇರವಾಗಿ ನಾವೇ ಹೋಗಿ ಆರ್ಥಿಕ, ನೈತಿಕ ಸಹಾಯ ನೀಡಿದ್ದೇವೆ. ಕಲಾವಿದರು ಎಂದರೆ ನಮಗೆ ಯಾವುದೇ ಗ್ರೇಡ್ ಇಲ್ಲ. ಸಮಾಜದಲ್ಲಿ ನಾವೂ ಒಬ್ಬರು. ಸಮಾಜಮುಖಿ ಚಿಂತನೆ, ಸಹಾಯ ಹಸ್ತ ಇರಲೇಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಮಾನವೀಯತೆ ಸಹಿತ ಬದುಕಬೇಕು ಎಂಬುದು ಸುಧೀಂದ್ರ ಅವರ ಆಶಯ. ಅದಕ್ಕಾಗಿ ಹೃದಯವನ್ನು ಸಲ್ಪ ವಿಶಾಲವಾಗಿ ಇಟ್ಕೋಬೇಕು ಎಂದೂ ನುಡಿಮುತ್ತು ಸೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post