ಕಲ್ಪ ಮೀಡಿಯಾ ಹೌಸ್ | ಚನ್ನಪಟ್ಟಣ |
ರಾಜ್ಯದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯದ ಖಜಾನೆ ಖಾಲಿ ಆಗಿ, ರಾಜ್ಯ ದಿವಾಳಿ ಆಗಿದೆ. ಹಾಗೂ ಅಭಿವೃದ್ದಿ ಕೆಲಸಗಳಿಗೆ ಹಣ ಇಲ್ಲದಂತಾಗಿದೆ ಎಂದು ಮಾಜಿ ಪ್ರಧಾನಿ ಹೆಚ್’ಡಿ. ದೇವೇಗೌಡ #H D Devegowda ಆರೋಪ ಮಾಡಿದರು.
ಎನ್’ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಂಟಿಯಾಗಿ ಮತಯಾಚನೆ ನಡೆಸಿದ್ದು, ಇಬ್ಬರೂ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ವೈಫಲ್ಯ ಎತ್ತಿಹಿಡಿದರು.
ಕಾಂಗ್ರೆಸ್ ನವರೇ ಹಠ ಮಾಡಿ ನನ್ನ ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಕೊನೆಗೆ ಅವರೇ ಮೈತ್ರಿ ಸರ್ಕಾರ ಉರುಳಿಸಿದರು. ಕಳೆದ 10 ವರ್ಷಗಳಿಂದ ರೈತರ ಖಾತೆಗೆ ಮೋದಿ ಸರ್ಕಾರ ರೂ.2000 ಜಮಾ ಮಾಡುತ್ತಾ ಬರುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸ್ಥಗಿತಗೊಳಿಸಿದೆ. ಈಗ 5 ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು, ಅವರಲ್ಲಿಯೇ ಗ್ಯಾರಂಟಿಗಳ ಕುರಿತು ಅಪಸ್ವರ ಎದ್ದಿದೆ ಎಂದು ಟೀಕಿಸಿದರು.
Also read: ಸಿಲಿಕಾನ್ ಸಿಟಿಯಲ್ಲಿ ಶಿವಮೊಗ್ಗದ ಚಿತ್ರಕಾರ ನಂಜುಂಡಸ್ವಾಮಿಯವರ ವ್ಯಂಗ್ಯ ಚಿತ್ರ ಪ್ರದರ್ಶನ | ವಿಶೇಷ ಸಂದರ್ಶನ
ನನಗೆ ನಿಂತು ಮಾತನಾಡುವುದಕ್ಕೆ ಆಗುತ್ತಿಲ್ಲ. ಕಾಲಲ್ಲಿ ನೋವಿದೆ. ಹೀಗಾಗಿ ಕುಳಿತು ಮಾತನಾಡುತ್ತಿದ್ದೇನೆ. ನಾನು ರೈತನ ಮಗ. 90 ವರ್ಷ ವಯಸ್ಸಾಗಿದೆ ನನಗೆ ಸರಿಸಮನಾಗಿ ಎಸ್.ಎಂ.ಕೃಷ್ಣ ಒಬ್ಬರೇ ಇರುವುದು. ಅವರು ಎಲ್ಲೂ ಬರಲ್ಲ. ದೇವೇಗೌಡ ಅವರು ಯಾಕೆ ಬರುತ್ತಾರೆ? ಮೊಮ್ಮಗನ ಗೆಲ್ಲಿಸಲು ಬರುತ್ತಾರೆ. 90 ವಯಸ್ಸಾದರೂ ಬರ್ತಾನಲ್ಲ, ಹುಚ್ಚು ಹಿಡಿದಿದ್ಯಾ ಎಂದು ಎದುರಾಳಿಗಳು ಮಾತನಾಡುತ್ತಿದ್ದಾರೆ. 50 ವರ್ಷಗಳ ಹಿಂದೆ ಚನ್ನಪಟ್ಟಣಕ್ಕೆ ಬಂದು ಕಾಂಗ್ರೆಸ್ ಸೋಲಿಸಿದ ವ್ಯಕ್ತಿ ನಾನು. ನಿಖಿಲ್ ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದಾನೆ. ಹಾಗಂತ ನಾನು ಮೊಮ್ಮಗನನ್ನು ಗೆಲ್ಲಿಸಲು ಇಲ್ಲಿಗೆ ಬಂದಿಲ್ಲ. ಪ್ರಾದೇಶಿಕ ಪಕ್ಷ ಉಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಬಂದಿದ್ದೇನೆಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ, ಚನ್ನಪಟ್ಟಣದಲ್ಲಿ ಎನ್’ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ದೊಡ್ಡ ಪ್ರಮಾಣದ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅದರಲ್ಲಿ ನನಗೆ ಯಾವುದೇ ಸಂಶಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2006ರಲ್ಲಿ ನಾನು ಮತ್ತು ಕುಮಾರಸ್ವಾಮಿ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ, ಉಚಿತ ಬೈಸಿಕಲ್, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಜನಪರ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ಇದೆಲ್ಲವನ್ನು ಜನತೆ ಮರೆಯಬಾರದು ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post