ಕಲ್ಪ ಮೀಡಿಯಾ ಹೌಸ್ | ಸೊರಬ |
ಆಧುನಿಕ ಜೀವನ ಪದ್ಧತಿಯಲ್ಲಿ ಒತ್ತಡದ ಮನಸ್ಥಿತಿಗೆ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ ಅತ್ಯುತ್ತಮವಾದುದು ಎಂದು ಮುಖ್ಯಶಿಕ್ಷಕಿ ಸಿ.ಬಿ. ಮಂಜುಳಾ ಹೇಳಿದರು.
ಭಾನುವಾರ ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸುರಭಿ ಶಾಖೆಯಿಂದ ಉಚಿತ ಯೋಗ ತರಬೇತಿ ಶಿಬಿರದ ನಿಮಿತ್ತ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಿತ್ಯ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಯೋಗ ಮಾಡುವುದರಿಂದ ಆನೇಕ ರೋಗಗಳಿಂದ ದೂರವಿರಬಹುದು. ಯೋಗ ಕಲೆಯು ಭಾರತದ ಪ್ರಾಚೀನ ಆರೋಗ್ಯ ಸಂರಕ್ಷಣೆಯ ನೈಸರ್ಗಿಕ ಸಂಜೀವಿನಿಯಾಗಿದೆ. ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಕಳೆದ ೪೫ ವರ್ಷಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಚಿತವಾಗಿ ಯೋಗ ಶಿಕ್ಷಣ ನೀಡಲಾಗುತ್ತಿದ್ದು, ಪಟ್ಟಣದಲ್ಲಿ ಕಳೆದ ೫೭ದಿನಗಳಿಂದ ಯೋಗ ಶಿಬಿರ ನಡೆಸಲಾಗುತ್ತಿದೆ. ಸುಮಾರು ಐದು ಸಾವಿರ ವರ್ಷದ ಇತಿಹಾಸವಿರುವ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದರು.
Also read: ಸೊರಬ | ಅಗ್ನಿ ಅವಘಡ | ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ
ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಂ.ಆರ್. ಪಾಟೀಲ್ ಮಾತನಾಡಿ, ಯೋಗ ಮಾಡುವುದರಿಂದ ನಿರೋಗಿಯಾಗಿರಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ವಾತಾವರಣ ಮತ್ತು ಆಹಾರ ಪದ್ಧತಿಯಿಂದ ಅನೇಕ ರೋಗಗಳು ಮನುಷ್ಯರನ್ನು ಕಾಡುತ್ತಿವೆ. ಎಲ್ಲದಕ್ಕೂ ವೈದ್ಯರನ್ನೇ ಅವಲಂಬಿಸಿದ್ದೇವೆ. ಆದರೆ, ನಿತ್ಯವೂ ಯೋಗವನ್ನು ಅಳವಡಿಸಿಕೊಂಡಲ್ಲಿ ಅನೇಕ ರೋಗಗಳ ಮೇಲೆ ನಿಯಂತ್ರಣ ಸಾಧಿಸಬಹುದು ಎಂದ ಅವರು, ಪ್ರಕೃತಿ ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕಟಿಬದ್ಧರಾಗಿರಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಪ್ರಕೃತಿ ಸಂಪತ್ತನ್ನು ರಕ್ಷಿಸುವುದು ನಮ್ಮೆಲ್ಲೆರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಯೋಗ ಬಂಧುಗಳಾದ ವಿ.ಕೆ. ದಿನೇಶ್, ಬಿ.ವಿ. ಚಂದ್ರಶೇಖರ್, ಡಾ. ಶ್ರೀಧರ್, ನಾಗರಾಜ್, ಸಿದ್ದು ಪೂಜಾರಿ, ಗಣಪತಿ, ವೈ.ಜಿ. ಗುರುಮೂರ್ತಿ, ರಾಮಚಂದ್ರಪ್ಪ, ಡಿ.ಸಿ. ರಾಘವೇಂದ್ರ, ಈಶ್ವರ್, ಹೂವಪ್ಪ ಯಂಕೇನ್, ಲಕ್ಷ್ಮಣ, ತಿಮ್ಮಪ್ಪ, ಆ.ಕೋ. ವಿರೂಪಾಕ್ಷಪ್ಪ, ರೇಖಾ, ಪರಮೇಶ್ವರ್, ರೂಪಾ ಮಧುಕೇಶ್ವರ, ನೇತ್ರಾ, ವಿದ್ಯಾ, ಲಲಿತಾ, ಶಶಿಕಲಾ, ತಾರಾ, ಪಿ. ಜ್ಯೋತಿ, ಭೂಮಿ, ಪೃಥ್ವಿ, ಸಾತ್ವಿಕ್, ಶಿವಾನಂದ್, ಸುರೇಖಾ ಸೇರಿದಂತೆ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















