ಕಲ್ಪ ಮೀಡಿಯಾ ಹೌಸ್ | ಸೊರಬ |
ಸಚಿವ ಜಮೀರ್ ಆಹ್ಮದ್ #Minister Zameer Ahmad ಅವರ ಕ್ಷುಲ್ಲಕ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ #CM Siddaramaiah ಹೆಸರನ್ನು ದುರ್ಬಳಕೆ ಮಾಡಿಕೊಂಡು ವಕ್ಫ್ ವಿಚಾರದಲ್ಲಿ ರಾಜ್ಯದ ಜನತೆಗೆ ತಲ್ಲಣವನ್ನು ಸೃಷ್ಠಿಸಿದ್ದಾರೆ ಎಂದು ಮಾಜಿ ಸಚಿವ ಎಸ್. ಕುಮಾರ್ ಬಂಗಾರಪ್ಪ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ, ಮಠ ಮಾನ್ಯಗಳ ಜಮೀನು ಹಾಗೂ ಹಿಂದೂ-ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದವರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿರುವುದು ಪ್ರಸ್ತುತ ರಾಷ್ಟ್ರ ವ್ಯಾಪ್ತಿಯಲ್ಲಿ ಚರ್ಚೆಯಾಗುತ್ತಿದೆ. ರಾಷ್ಟ್ರದಲ್ಲಿ ಸುಮಾರು 30 ಲಕ್ಷ ಎಕರೆ ಪ್ರದೇಶ ವಕ್ಫ್ ಬೋರ್ಡ್ಗೆ ಸೇರಿಸಲಾಗಿದೆ. ರಾಜ್ಯದಲ್ಲಿ ದೊರೆತಿರುವ ಅಂಕಿ ಅಂಶದ ಪ್ರಕಾರ 1.16 ಲಕ್ಷ ಎಕರೆ ಪ್ರದೇಶ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಬೆಲೆ ಬಾಳುವ ಆಸ್ತಿಯನ್ನು ತಕ್ಷಣವೇ ಸರ್ಕಾರ ವಶಕ್ಕೆ ಪಡೆಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ವಕ್ಫ್ ಬೋರ್ಡ್ #Wakf Board ಅಧ್ಯಕ್ಷರೆಂದು ಘೋಷಣೆ ಮಾಡಿಕೊಂಡಿರುವ ಜಮೀರ್ ಆಹ್ಮದ್ ಅವರು ಸಚಿವ ಸ್ಥಾನದ ದುರ್ಭಳಕೆ ಮಾಡಿಕೊಂಡು ಅಧಿಕಾರಿಗಳನ್ನು ಬಳಸಿಕೊಂಡು ರೈತರಿಗೆ ಅವಕಾಶವನ್ನು ಸಹ ನೀಡದೇ ಸಾವಿರಾರು ಎಕರೆ ಪ್ರದೇಶವನ್ನು ವಕ್ಫ್ ಬೋರ್ಡ್ಗೆ ಸೇರಿಸಿದ್ದಾರೆ. ಈ ನಡುವೆ ವಕ್ಫ್ ಆಸ್ತಿಯನ್ನು ಹಿಂದಿನಿಂದಲೂ ಕಾಂಗ್ರೆಸ್‌ನ ನಾಯಕರು ಸಹ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ರೈತರಿಗೆ ಮತ್ತು ಜನ ಸಾಮಾನ್ಯರಿಗೆ ರಕ್ಷಣೆ ನೀಡುವ ಉದ್ದೇಶದಿಂದ ನ. 25ರಿಂದ 27ರವರೆಗೆ ಬೀದರ್, ರಾಯಚೂರು, ಕಲಬುರಗಿ ಭಾಗದಲ್ಲಿ ಪಕ್ಷದ ಸಮಾನ ಮನಸ್ಕರರು ಒಗ್ಗೂಡಿ ಪ್ರವಾಸ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
Also read: ಬಾಗಲಕೋಟೆ | ಕೊರಿಯರ್’ನಲ್ಲಿ ಬಂದ ಹೇರ್ ಡ್ರೈಯರ್ ಸ್ಫೋಟ | ಆನ್ ಮಾಡಿದ ಮಹಿಳೆಯ ಕೈಗಳು ಛಿದ್ರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದರೂ ಸಹ ಅಭಿವೃದ್ಧಿ ಶೂನ್ಯವಾಗಿದೆ. ಕ್ಷೇತ್ರದ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಕನಿಷ್ಠ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡಲು ಸಾಧ್ಯವಾಗಿಲ್ಲ. ಸೊರಬ-ಶಿರಾಳಕೊಪ್ಪ, ಶಿಗ್ಗಾ-ಶಿರಾಳಕೊಪ್ಪ, ತವನಂದಿ-ಬಿಳಗಲಿ ಸೇರಿದಂತೆ ಅನೇಕ ರಸ್ತೆಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅನುಮೋದನೆ ನೀಡಲಾಗಿತ್ತು. ಅಂತಿಮವಾಗಿ ಹಣಕಾಸು ಒಪ್ಪಿಗೆ ಮಾತ್ರ ಬಾಕಿ ಉಳಿದಿತ್ತು. ಹಾಲಿ ಆಡಳಿತದಲ್ಲಿರುವ ಸರ್ಕಾರದಿಂದ ಯಾವುದೇ ಗುದ್ದಲಿ ಪೂಜೆ, ಶಂಕುಸ್ಥಾಪನೆಗಳು ನಡೆದಿಲ್ಲ. ರಾಜ್ಯದ ಜನತೆ ಕಾಂಗ್ರೆಸ್‌ನ ಮೇಲಿರಿಸಿದ ನಿರೀಕ್ಷೆಗಳು ಹುಸಿಯಾಗಿದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಸುಮಾರು 93 ಸಾವಿರ ಮತಗಳು ಲಭಿಸಿದ್ದವು. ಈ ಪೈಕಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಶೇ.50ರಷ್ಟು ಮಂದಿಯನ್ನು ಸದಸ್ಯರನ್ನಾಗಿಸುವ ಗುರಿಯೊಂದಿಗೆ ಕನಿಷ್ಟ 40 ಸಾವಿರ ಮತದಾರರನ್ನು ಸದಸ್ಯರನ್ನಾಗಿಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಮುಂದುವರೆದಿದೆ. ಈಗಾಗಲೇ ಪಕ್ಷದ ಸಕ್ರಿಯ ಸದಸ್ಯರು ಸುಮಾರು 25 ಸಾವಿರ ಸದಸ್ಯತ್ವ ಮಾಡಿದ್ದಾರೆ. ಕೆಲವಡೆ ನೆಟ್‌ವರ್ಕ್ ಸಮಸ್ಯೆಯಿಂದ ಅಡಚಣೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ ಕಡಸೂರು, ಪ್ರಕಾಶ್ ಅಗಸನಹಳ್ಳಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳೆಯಮ್ಮ ಈಶ್ವರಪ್ಪ, ಯುವ ಮೋರ್ಚಾ ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ, ವೀರಶೈವ ಲಿಂಗಾಯ ಸಮಾಜದ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್, ಪುರಸಭೆ ಸದಸ್ಯ ಎಂ.ಡಿ. ಉಮೇಶ್, ಪ್ರಮುಖರಾದ ಅಮಿತ್ ಗೌಡ, ಜಾನಕಪ್ಪ ಒಡೆಯರ್ ಯಲಸಿ, ಕೃಷ್ಣಮೂರ್ತಿ ಕೊಡಕಣಿ, ಅಭಿಷೇಕ್‌ಗೌಡ ಬೆನ್ನೂರು, ಸಂಜಯ್ ತಡಗಳಲೆ ಸೇರಿದಂತೆ ಮತ್ತಿತರರಿದ್ದರು.
ಸರ್ಕಾರ ಬೀಳಿಸುವ ಉದ್ದೇಶವಿಲ್ಲ
ರಾಜ್ಯದಲ್ಲಿ ಬಹುಮತ ಪಡೆದು ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಉದ್ದೇಶವನ್ನು ಬಿಜೆಪಿ ಹೊಂದಿಲ್ಲ. ಆದರೆ, ಸರ್ಕಾರದಿಂದ ಮೂಡ, ವಾಲ್ಮೀಕಿ ಸೇರಿದಂತೆ ಅನೇಕ ಹಗರಣ ನಡೆದಿವೆ. ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಸರ್ಕಾರದ ತಪ್ಪುಗಳನ್ನು ಜನತೆಯ ಮುಂದಿಡಲಾಗುವುದು. ಈಗಾಗಲೇ ಮದ್ಯ ಮಾರಾಟಗಾರರು ಅಬಕಾರಿ ಇಲಾಖೆಯ ವಿರುದ್ಧ ಕೈಗೊಂಡಿರುವ ಹೋರಾಟಕ್ಕೆ ಮಾತ್ರವಲ್ಲ ರಾಜ್ಯ ಸರ್ಕಾರ ವೈಫಲ್ಯಗಳನ್ನು ವಿರೋಧಿಸಿ ನಡೆಯುವ ಎಲ್ಲಾ ಹೋರಾಟಗಳಿಗೂ ಬೆಂಬಲ ನೀಡುವುದಾಗಿ ಮಾಜಿ ಸಚಿವ ಎಸ್. ಕುಮಾರ್ ಬಂಗಾರಪ್ಪ ತಿಳಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post