ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಗೆ #Shivamogga Mahanagara Palike ಇಂದು ನಗರಾಭಿವೃದ್ಧಿ ಮತ್ತು ನಗರಯೋಜನೆ ಸಚಿವ ಭೈರತಿ ಸುರೇಶ್ ದಿಡೀರ್ #Minister Byrathi Suresh ಭೇಟಿ ನೀಡಿ ಕರ್ತವ್ಯಲೋಪ ಎಸಗಿದ ಅಧಿಕಾರಿಯೋರ್ವರನ್ನು ಅಮಾನತುಗೊಳಿಸುವಂತೆ ಆದೇಶಿಸಿ ಪಾಲಿಕೆ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
ನೇರವಾಗಿ ಕಂದಾಯ ವಿಭಾಗಕ್ಕೆ ಭೇಟಿ ನೀಡಿದ ಅವರು ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಮಾಹಿತಿ ಪಡೆದರು. ಅರ್ಜಿ ಯಾವಾಗ ನೀಡಿದ್ದೀರಿ, ಎಷ್ಟು ತಿಂಗಳಿನಿಂದ ಓಡಾಡುತ್ತಿದ್ದೀರಿ, ಸಂಬಂಧಿಸಿದ ಅಧಿಕಾರಿಗಳು ಸ್ಪಂಧಿಸಿದ್ದಾರೆಯೆ ? ಎಂಬ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ನಾ ಮುಂದು ತಾ ಮುಂದು ಎಂದು ಜಮಾಯಿಷಿ ಸಚಿವರಿಗೆ ಪಾಲಿಕೆಯ ಮೇಲೆ ದೂರಿನ ಸುರಿಮಳೆಗೈಯ್ದರು.
ಆಯುಕ್ತರೊಂದಿಗೆ ಟಪಾಲು ವಿಭಾಗಕ್ಕೆ ಮತ್ತು ದೂರು ಸ್ವೀಕಾರ ವಿಭಾಗಕ್ಕೆ ಭೇಟಿ ನೀಡಿದ ಸಚಿವರು ಅಲ್ಲೇ ಕುಳಿತು ಲೆಡ್ಜರ್ ಪರಿಶೀಲನೆ ನಡೆಸಿ ದೂರು ನೀಡಿದವರಿಗೆ ತಾವೇ ಖುದ್ದಾಗಿ ದೂರವಾಣಿ ಮುಖಾಂತರ ಸಂಪರ್ಕಿಸಿ ಕೆಲಸವಾಗಿದೆಯೇ ಎಂದು ಮಾಹಿತಿ ಪಡೆದರು.
Also read: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ | 141 ವರ್ಷ ಜೈಲು | ಕೇರಳ ನ್ಯಾಯಾಲಯ ಮಹತ್ವದ ತೀರ್ಪು
ಆದರ್ಶ ನಗರದ ನಾಗರಿಕರೊಬ್ಬರು ಚರಂಡಿ ಸ್ವಚ್ಛತೆ ಇಲ್ಲ ಎಂದು ದೂರು ನೀಡಿ 25 ದಿನಗಳಾಗಿತ್ತು. ಆದರೆ ಪಾಲಿಕೆ ವತಿಯಿಂದ ಯಾರು ಸ್ಥಳಕ್ಕೆ ಬಂದಿರಲಿಲ್ಲ. ಇದನ್ನು ತಿಳಿದ ಸಚಿವರು ತಕ್ಷಣ ಸ್ಥಳೀಯ ಆರೋಗ್ಯಾಧಿಕಾರಿ ವೇಣುಗೋಪಾಲ್ ಅವರನ್ನು ಸ್ಥಳದಲ್ಲೇ ಈ ಕೂಡಲೇ ಸಸ್ಪೆಂಡ್ ಮಾಡುವಂತೆ ಆಯುಕ್ತರಿಗೆ ಸೂಚಿಸಿದರು.
ಅಲ್ಲಿ ನೆರೆದ ನಾಗರಿಕರು ಪಾಲಿಕೆಯಲ್ಲಿ ಖಾತೆ ಮಾಡಿಕೊಡಲು ಮತ್ತು ಈ ಸ್ವತ್ತು ಮಾಡಲು ಆಗುತ್ತಿರುವ ವಿಳಂಬದ ಬಗ್ಗೆ ಗಮನಸೆಳೆದರು. ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಸ್ವಚ್ಛತೆಯಿಲ್ಲ. ಪಾಲಿಕೆ ಆವರಣವೇ ಗಬ್ಬೆದ್ದು ಹೋಗಿದೆ. ಅಧಿಕಾರಿಗಳು ಯಾರು ಕೆಲಸ ಮಾಡುತ್ತಿಲ್ಲ ಎಂದು ಆಯುಕ್ತರನ್ನು ಸೇರಿದಂತೆ ತರಾಟೆಗೆ ತೆಗೆದುಕೊಂಡರು.
ಎಲ್ಲದರ ಮಾಹಿತಿ ಪಡೆದ ಸಚಿವರು ನಾನು ಇನ್ನೊಮ್ಮೆ ಬರುತ್ತೇನೆ. ಅಷ್ಟರೊಳಗೆ ವ್ಯವಸ್ಥೆ ಸರಿಪಡಿಸಬೇಕು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೇ ಕರ್ತವ್ಯ ಲೋಪ ಎಸಗುವ ಸಿಬ್ಬಂದಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕಂದಾಯ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಮುಖಂಡ ರಮೇಶ್ ಹೆಗಡೆ ಪೌತಿ ಖಾತೆ ಗಂಡನ ಹೆಸರಲ್ಲಿದ್ದು, ಆತ ಸತ್ತು ಹೋಗಿದ್ದು, ಹೆಂಡತಿಗೆ ಖಾತೆ ಮಾಡಿ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಗಮನ ಸೆಳೆದರು. ಆಯುಕ್ತರು ಪ್ರತಿಕ್ರಿಯಿಸಿ ನಾನು ಬಂದು ಕೇವಲ 3 ತಿಂಗಳಾಗಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳು ಇದೆ.ಇ-ಸ್ವತ್ತು ಸಮಸ್ಯೆ ಸರ್ಕಾರ ಮಟ್ಟದಲ್ಲಿ ಬಗೆಹರಿಯಬೇಕಾಗಿದೆ ಎಂದು ವಿವರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈಗಾಗಲೇ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. 3ವಾರಗಳಲ್ಲಿ ಇಡೀ ರಾಜ್ಯದಲ್ಲಿ ಇ-ಸ್ವತ್ತಿನ ಸಮಸ್ಯೆ ಬಗೆಹರಿಯಲಿದೆ. ಇ-ಸ್ವತ್ತು ಮಾಡಿದರೆ ಸ್ವತ್ತಿನ ಮಾಲೀಕರಿಗೆ ಭದ್ರತೆ ಸಿಗುತ್ತದೆ. ಮತ್ತು ಯಾರು ಕೂಡ ಮೋಸ ಮಾಡಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಸರ್ಕಾರ ಹೊಸ ನೀತಿಯನ್ನು ಸಿದ್ದಪಡಿಸಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.
ಸ್ಥಳದಲ್ಲಿ ಇದ್ದ ಹಿರಿಯರೊಬ್ಬರು ಆಗಸ್ಟ್ ತಿಂಗಳಿನಿಂದ ಖಾತೆಗಾಗಿ ಓಡಾಡುತ್ತಿರುವುದನ್ನು ತಿಳಿದುಕೊಂಡ ಸಚಿವರು ಕೂಡಲೇ ಖಾತೆ ಮಾಡಿಕೊಡುವಂತೆ ಆಯುಕ್ತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಉಪ ಆಯುಕ್ತರು ಹಾಗೂ ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗಡೆ, ಗಿರೀಶ್, ರಂಗನಾಥ್, ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post