ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವು ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಇದರ ಕುರಿತಾಗಿ ಉನ್ನತ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಿ, ಅವರು ನೀಡುವ ವರದಿಯನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ #Dinesh Gundurao ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗ್ಯವಲ್ಲ ಎಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವರದಿ ನೀಡಿದ್ದರೆ, ಸೆಂಟ್ರಲ್ ಡ್ರಗ್ಸ್ ಲ್ಯಾಬ್ (CDL) ಪಾಸಿಟಿವ್ ವರದಿ ನೀಡಿದೆ. ಇದನ್ನು ಉಲ್ಲೇಖಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೇವೆ. ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗುವುದು ಎಂದರು.
ಜಿಲ್ಲೆಯ ಬಾಣಂತಿಯರ ಅಸಹಜ ಸಾವಿನ ಬಗ್ಗೆ ಮಾಹಿತಿ ಬರುತ್ತಿದ್ದಂತೆಯೇ ತನಿಖೆ ನಡೆಸಲು ರಾಜೀವ್ ಗಾಂಧಿ ವಿವಿ ಉಪಕುಲಪತಿ ನೇತೃತ್ವದಲ್ಲಿ ತಂಡ ರಚಿಸಿ ವರದಿ ಪಡೆಯಲಾಗಿದೆ. ಆರಂಭದಲ್ಲಿಯೇ ಈ ಐವಿ ಫ್ಲೂಯಿಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿಸಲಾಗಿತ್ತು. ಸದ್ಯ ಈ ಕಂಪನಿಯ ಐವಿ ಫ್ಲೂಯಿಡ್ ಸಂಪೂರ್ಣವಾಗಿ ಸರಬರಾಜು ಸ್ಥಗಿತ ಮಾಡಲಾಗಿದೆ. ರಾಜ್ಯದಲ್ಲಿ ಇಂತಹ ಸಾವು ಮರುಕಳಿಸಬಾರದು ಎಂದು ಅವರು ತಿಳಿಸಿದರು.
Also read: ಅತಿಥಿ ಶಿಕ್ಷಕರು/ಉಪನ್ಯಾಸಕರ ವೇತನ ಪರಿಷ್ಕರಣೆಗೆ ಶಾಸಕ ಡಾ. ಧನಂಜಯ ಸರ್ಜಿ ಒತ್ತಾಯ
ಬಳಿಕ ಹೆರಿಗೆ ಕೋಣೆಗಳ ಸಮುಚ್ಚಯಕ್ಕೆ ಭೇಟಿ ನೀಡಿ, ಅಲ್ಲಿನ ಬಾಣಂತಿಯರ ಆರೋಗ್ಯ ಕ್ಷೇಮ ವಿಚಾರಿಸಿದರು. ಜಿಲ್ಲಾ ಆಸ್ಪತ್ರೆಯಿಂದ ಕೈಗೊಳ್ಳುವ ಆರೈಕೆ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.
ಈ ವೇಳೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post