ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಬರಹ: ಶಿವಮೊಗ್ಗ ರಾಂ |
ಉದ್ಯಾನ ನಗರಿಯ ಪ್ರತಿಷ್ಠಿತ ‘ಸಂಗೀತ ಸಂಭ್ರಮ’ – ಇನ್‌ಸ್ಟಿಟ್ಯೂಷನ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ #InstitutionofMusicandDance ಸಂಸ್ಥೆ ಜನವರಿ 2ರಿಂದ 5ರವರೆಗೆ ಮಲ್ಲೇಶ್ವರ ಬಡಾವಣೆ 14ನೇ ಕ್ರಾಸ್‌ನ ‘ಸೇವಾ ಸದನ’ ದಲ್ಲಿ 14ನೇ ವರ್ಷದ ನಿರಂತರಂ-ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಮಹೋತ್ಸವ ಹಮ್ಮಿಕೊಂಡಿದೆ.
ಬೆಂಗಳೂರು ಸೇರಿದಂತೆ ದೇಶ-ವಿದೇಶದ ಸಂಗೀತ-ನೃತ್ಯ ವಿದ್ವಾಂಸರು, ಪರಿಣತರು, ವಿವಿಧ ರಂಗದ ಸಾಧಕರು ಮತ್ತು ಉದಯೋನ್ಮುಖ ಪ್ರತಿಭೆಗಳು ಈ ಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಶಿವರಾಂ ಅವರಿಂದ ಚಾಲನೆ
ಜ. 2ರ ಸಂಜೆ 5ಕ್ಕೆ ನಿವೃತ್ತ ಸಹಾಯಕ ಪೊಲೀಸ್ ಕಮಿಷನರ್ ಬಿ.ಕೆ. ಶಿವರಾಂ ‘ನಿರಂತರಂ’ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ನಿರಂತರಂ ಉತ್ಸವದ ಮುಖ್ಯ ರೂವಾರಿ ಹಾಗೂ ಸಂಗೀತ ಸಂಭ್ರಮ ಸಂಸ್ಥೆ ನಿರ್ದೇಶಕಿ- ವಿದುಷಿ ಪುಸ್ತಕಂ ರಮಾ ಸಾಕ್ಷಿಯಾಗಲಿದ್ದಾರೆ. ಸಂಗೀತ ಸಂಭ್ರಮ ತಂಡದ ಕಲಾವಿದರ ಭಕ್ತಿ ಸಂಗೀತ ಗಾಯನವು ಉತ್ಸವಕ್ಕೆ ಮುನ್ನುಡಿ ಬರೆಯಲಿದೆ. ಉದಯೋನ್ಮುಖ ಪ್ರತಿಭೆಗಳಾದ ಕಿರಣ್ ಜೋಶ್ಯರ್-ನಂದನ್ ಜೋಶ್ಯರ್ ದ್ವಂದ್ವ ಗಾಯನದ ನಂತರ ಖ್ಯಾತ ಕಲಾವಿದೆ ಅಂಜಲಿ ಶ್ರೀರಾಮ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಪ್ರಸ್ತುತ ಪಡಿಸಲಿದ್ದಾರೆ.
ನಾಟ್ಯಾಲಯ ಸ್ಕೂಲ್ ಆಫ್ ಡಾನ್ಸ್ ಕಲಾವಿದರಿಂದ ‘ನೃತ್ಯ ಪ್ರವೇಶಂ’ ವಿಶೇಷ ರೂಪಕ ರಂಜಿಸಲಿದೆ. (ನಿರ್ದೇಶನ ಗುರು ವಿನಿತಾ)
ಭರತನಾಟ್ಯ ಪ್ರಸ್ತುತಿ
ಕಲಾಸ್ನೇಹಿ ನರ್ತನ ಯೋಗ ಸಂಸ್ಥೆ ನಿರ್ದೇಶಕ ವಿದ್ವಾನ್ ಯೋಗೇಶ ಕುಮಾರ್- ಸ್ನೇಹಾ ನಾರಾಯಣರ ದ್ವಂದ್ವ ಭರತನಾಟ್ಯ ನಂತರ ಲಲಿತಾ ಕಲಾ ನಿಕೇತನ ತಂಡದಿಂದ ಭರತನಾಟ್ಯ ಪ್ರೇಕ್ಷಕರನ್ನು ರಂಜಿಸಲಿದೆ.
Also Read>> ಗಮನಿಸಿ! ಜ.1ರ ನಾಳೆಯಿಂದ ಶಿವಮೊಗ್ಗದ ಈ ರೈಲುಗಳ ಸಂಚಾರ ಸಮಯದಲ್ಲಿ ಬದಲಾಗಲಿದೆ
ಜ.3ರಂದು ಸಂಜೆ 5ಕ್ಕೆ (ಮಂಡಾಯಂ ಅಜಿ ಕೃಷ್ಣಕುಮಾರ್ ಸ್ಮರಣಾ) ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಅನನ್ಯ ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಆರ್.ವಿ. ರಾಘವೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಗೀತ ಸಂಭ್ರಮ – ತಂಡದಿಂದ ಭಕ್ತಿ ಸಂಗೀತ, ನಂತರ ಪೂರ್ವಿ ಸಂಗೀತ ಅಕಾಡೆಮಿ ಕಲಾವಿದ ರಿಂದ ಗಾಯನವಿದೆ. ನಂತರ ವಿದುಷಿ ಲಾವಣ್ಯಾ ಕೃಷ್ಣಮೂರ್ತಿ ತಂಡದಿಂದ ಪ್ರಮುಖ ಕಚೇರಿ ಸಂಪನ್ನಗೊಳ್ಳಲಿದೆ. ಭರತನಾಟ್ಯ ಸರಣಿಯಲ್ಲಿ ಅಮೆರಿಕದ ಡಲ್ಲಾಸ್‌ನ ಶಶಾಂಕ ಈಶ್ವರ್, ಆಸ್ಟಿನ್‌ನ ಅಕ್ಷೈನಿ ಕಮ್ಮ ಹಾಗೂ ಚಿಕಾಗೋನ ಅದಿತಿ ರಾಂ ನರ್ತನ ಪ್ರೌಢಿಮೆ ಅನಾವರಣಗೊಳ್ಳಲಿದೆ.
ಜ.4ರಂದು ದಿನಪೂರ್ಣ ಸಂಗೀತ-ನೃತ್ಯ ಸಮಾರಾಧನೆ ನೆರವೇರಲಿದೆ. ಬೆಳಗ್ಗೆ 10ಕ್ಕೆ ನಾಟ್ಯಾಲಯ ಸ್ಕೂಲ್ ಆಫ್ ಡಾನ್ಸ್ ( ಆಸ್ಟಿನ್) ನೃತ್ಯಗುರು ವಿನಿತಾ ಸುಬ್ರಮಣಿಯನ್ ದೀಪ ಬೆಳಗಲಿದ್ದಾರೆ. ನರ್ತನ ಸರಣಿಯಲ್ಲಿ ಕುಮಾರಿ ಸ್ವರಾ ಕೃಷ್ಣರಾವ್- ಅಕ್ಷಾ ಶ್ರೀವತ್ಸಂ- ರಾವಳಿ ಮೈಲಾವರಪು, ಸ್ನೇಹಾ ಭಾಗವತ್ ಅವರ ಭರತನಾಟ್ಯ ಮನಕ್ಕೆ ಮುದ ನೀಡಲಿದೆ.ರಾಮಪ್ರಿಯ ತುಳಸಿದಾಸ ರೂಪಕ
ಎಂ.ಎಸ್. ನಾಟ್ಯ ಕ್ಷೇತ್ರದ ಗುರು ಕೌಸಲ್ಯಾ ನಿವಾಸ್ ತಂಡದಿಂದ ರಾಮಪ್ರಿಯ ತುಳಸಿದಾಸ – ವಿಶೇಷ ನೃತ್ಯರೂಪ ಪಡಮೂಡಲಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಸಮಾರಂಭವನ್ನು ವಿದುಷಿ ರೇವತಿ ಕಾಮತ್ ಉದ್ಘಾಟಿಸಲಿದ್ದಾರೆ. ಡಾ. ರಾಜಕುಮಾರ್ ನೇತ್ರ ಬ್ಯಾಂಕ್ ನಿರ್ದೇಶಕ ಡಾ. ಎಂ. ಕೆ. ಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಎಂದರೋ ಮಹಾನುಭಾವುಲು…
ವಿಶ್ವ ಸಂಗೀತ ವಾಗ್ಗೇಯಕಾರರಿಗೆ ಮತ್ತು ಸಂಯೋಜಕರಿಗೆ ವಿಶೇಷ ನಮನ ಸಲ್ಲಿಸುವ ದಿಸೆಯಲ್ಲಿ ಸಿದ್ಧಪಡಿಸಿರುವ ‘ ಎಂದರೋ ಮಹಾನುಭಾವುಲು’ ಪ್ರೇಕ್ಷಕರ ಮನದಂಗಳದಲ್ಲಿ ಹೊಸ ಪಲ್ಲವಗಳನ್ನೇ ಸೃಷ್ಟಿಮಾಡಲಿದೆ. ಹಿರಿಯ ವೇಣುವಾದಕ ರಘುನಂದನ ರಾಮಕೃಷ್ಣ ಅವರ ಪರಿಕಲ್ಪನೆಯಲ್ಲಿ ಮೂಡಿ ಬರಲಿರುವ ಪ್ತಸ್ತುತಿಗೆ ಸುಪ್ರಿಯಾ ರಘುನಂದನ, ದೀಪ್ತಿ ಶ್ರೀನಾಥ ಮತ್ತು ಸುರಾಘವಿ ತಂಡದ ಕಲಾವಿದರು ಕೊರಳಾಗಲಿದ್ದಾರೆ.
ನಿರಂತರಂ ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಹಬ್ಬ – 14ನೇ ವರ್ಷಾಚರಣೆಯಲ್ಲಿ ದೇಶ -ವಿದೇಶದ ವಿದ್ವನ್ಮಣಿಗಳು ಸಂಗಮ ಗೊಳ್ಳಲಿದ್ದಾರೆ. ಹಿರಿಯ ವಿದ್ವಾಂಸರಿಗೆ ಗೌರವ, ನುರಿತ ಕಲಾವಿದರಿಗೆ ಕಚೇರಿ, ಅರಳು ಪ್ರತಿಭೆಗಳಿಗೆ ವೇದಿಕೆ ಮತ್ತು ಕಲಾರಸಿಕರಿಗೆ ರಸದೌತಣ ದೊರಕಿಸಿಕೊಡಲಿದೆ. ಸಾಗರದಾಚೆಯ ಕಲಾವಿದರು ಈ ಉತ್ಸವದಲ್ಲಿ ಪಾಂಡಿತ್ಯವನ್ನು ಒರೆಗೆ ಹಚ್ಚಲಿದ್ದಾರೆ. ಎಲ್ಲದಕ್ಕೂ ಶ್ರೀ ನಾರಾಯಣ ರಾಮಾಜುನ ಜೀಯರ್ ವಿಶೇಷ ಕೃಪೆ, ಅನುಗ್ರಹ ನಿರಂತರವಾಗಿರುವುದೇ ನಮಗೆ ಶಕ್ತಿ.
-ಪುಸ್ತಕಂ ರಮಾ, ಹಿರಿಯ ವಿದುಷಿ
ಜ. 5ರ ಸಂಜೆ 5.30ಕ್ಕೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜೀಯುರ್ ಸಾನಿಧ್ಯದಲ್ಲಿ ಉತ್ಸವದ ಪ್ರಮುಖ ಘಟ್ಟ ಕಳೆಗಟ್ಟಲಿದೆ. ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಈ ಟಿವಿ ಮಾಧ್ಯಮ ಸಲಹೆಗಾರ ಪವನ್ ಕುಮಾರ ಮಾನ್ವಿ, ವಿದುಷಿ ನಾಗಮಣಿ ಶೀನಾಥ್ ಹಾಜರಿರುತ್ತಾರೆ. ಇತ್ತೀಚೆಗೆ ನಿಧನರಾದ ವಿದುಷಿ ಮತ್ತು ಆಕಾಶವಾಣಿ ಕಲಾವಿದೆ ಆರ್. ಚಂದ್ರಿಕಾ ಅವರಿಗೆ ವಿಶೇಷ ನಮನ ಸಲ್ಲಿಸಲು ಸಂಗೀತ ಸಂಭ್ರಮ ತಂಡವು ‘ ನಾದ ಚಂದ್ರಿಕಾ’ ಕಾರ್ಯಕ್ರಮ ಸಿದ್ಧಪಡಿಸಿದೆ. ವಿದುಷಿ ಡಾ. ನಾಗಮಣಿ ಶ್ರೀನಾಥ್ ನಿರ್ದೇಶನದ ಈ ಕಾರ್ಯಕ್ರಮದಲ್ಲಿ ಸುನಾದ ಕಲ್ಚರಲ್ ಸೆಂಟರ್ ಕಲಾವಿದರ ಅಭಿನಯ ಮನ ಸೆಳೆಯಲಿದೆ. ಕಲಾಪೋಷಕ ಡಿ.ಎಸ್. ಉಮೇಶ್ ಇದಕ್ಕೆ ಸಾಕ್ಷಿಯಾಗಲಿದ್ದಾರೆ.
14 ಕಲಾವಿದರಿಗೆ ಸಂಭ್ರಮ ಪುರಸ್ಕಾರ
ಹಿರಿಯ ವಿದುಷಿ ಪುಸ್ತಕ ರಮಾ ನೇತೃತ್ವದಲ್ಲಿ 14ನೇ ಸಂಗೀತ ಸಂಭ್ರಮ ಸವಿ ನೆನಪಿಗಾಗಿ ಜ. 5ರ ಸಂಜೆ 7ಕ್ಕೆ ನಾಡಿನ ಪ್ರಖ್ಯಾತ 14 ವಿದ್ವಾಂಸರು- ಕಲಾರಾಧಕರನ್ನು ಗೌರವಿಸಲಾಗುತ್ತಿದೆ. ನೃತ್ಯಗುರು ಲಲಿತಾ ಶ್ರೀನಿವಾಸನ್, ಡಾ.ಟಿ.ಎಸ್. ಸತ್ಯವತಿ, ಗಾಯನ ಸಮಾಜ ಅಧ್ಯಕ್ಷ ಡಾ. ಎಂಆರ್‌ವಿ ಪ್ರಸಾದ್, ಸಿನಿಮಾ ನಿರ್ದೇಶಕ ಟಿ.ಎಸ್. ನಾಗಾಭರಣ, ಡಾ. ಎಂ. ಸೂರ್ಯಪ್ರಸಾದ್, ಕೊಳಲು ವಿದ್ವಾಂಸ ಬಿ.ಕೆ. ಅನಂತ ರಾಮನ್, ಬೆಂಗಳೂರು ಗಣೇಶ ಉತ್ಸವದ ರೂವಾರಿ ಎಂ.ಮರಿಯಪ್ಪ, ಆನೂರು ಅನಂತ ಕೃಷ್ಣ ಶರ್ಮ, ವಾಣಿ ಈಶ್ವರ ಡಲ್ಲಾಸ್, ಸುಧಾ ಶೇಖರ ಅಮೆರಿಕ, ಇಂಗ್ಲೆಂಡಿನ ದೇವಿಕಾ ರಾವ್, ರಂಗ ಕಲಾವಿದೆ – ಲೇಖಕಿ ನಾಗವೇಣಿ ರಂಗನ್ ಅವರು ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಉತ್ಸವದ ಸಮಗ್ರ ಉಸ್ತುವಾರಿಯನ್ನು ಹಿರಿಯ ವಿದುಷಿಯರಾದ ಪುಸ್ತಕಂ ರಮಾ, ದೀಪ್ತಿ, ಹರಿಣಿ, ಮತ್ತು ಪದ್ಮಿನಿ ನಿರ್ವಹಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post