ಕಲ್ಪ ಮೀಡಿಯಾ ಹೌಸ್ | ನಾದ ಕಲ್ಪ ವಿಶೇಷ ಲೇಖನ |
ಶ್ರೀ ಸುರಭಾರತಿ ಸಂಸ್ಥೆಯ ಮಾರ್ಘಶೀರ್ಷೋತ್ಸವದ ಅಂಗವಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ಜುಗಲ್ಬಂದಿ ಕಾರ್ಯಕ್ರಮ ಚಿರಸ್ಮರಣೀಯವಾಗುವ ರೀತಿಯಲ್ಲಿ ಪ್ರೇಕ್ಷಕರ ಗಮನ ಮನಸೂರೆಗೊಂಡಿತು.
ನಾಡಿನ ಹೆಸರಾಂತ ಕೊಳಲು ವಾದಕರಾದ ವಿದ್ವಾನ್ ವಿಜಯಗೋಪಾಲ್ ಹಾಗೂ ಸುಪ್ರಸಿದ್ಧ ನಾದಸ್ವರ ವಿದ್ವಾನ್ ಮೈಲೈ ಕಾರ್ತಿಕೇಯನ್ ಅವರ ಕಛೇರಿ ನಡೆಯಿತು. ಇವರಿಗೆ ಪಕ್ಕವಾದ್ಯದಲ್ಲಿ ಶ್ರೀ ನಿಕ್ಷಿತ್ ಪುತ್ತೂರು ಮೃದಂಗದಲ್ಲಿ ಹಾಗೂ ಶ್ರೀ ವಾಳಪಳ್ಳಿ ಕೃಷ್ಣಕುಮಾರ್ ಘಟದಲ್ಲಿ ಸಾಥ್ ನೀಡಿದರು.
Also Read>> ನಿಂತಿದ್ದ ಬಸ್‌ಗೆ ಕಾರು ಡಿಕ್ಕಿ | ಶಾಹಿ ಗಾರ್ಮೆಂಟ್ಸ್‌ನ ಅಧಿಕಾರಿ ಸಾವು
ಅತಿ ಪ್ರಾಚೀನ ಹಿತವಾದ, ಮನುಷ್ಯನ ಶಾರೀರಕ್ಕೆ ಹತ್ತಿರವಾದ ವಾದ್ಯ ಕೊಳಲು. ಮಂಗಳ ವಾದ್ಯವಾದ ಅಮೋಘ ನಾದವುಳ್ಳ ನಾದಸ್ವರ ಇವೆರಡೂ ಚಿತ್ತಾಕರ್ಷಕ, ಇನ್ನು ಇವುಗಳ ಸಮನ್ವಯವನ್ನು ಕೇಳಬೇಕೇ? ನಾದಲೋಕದ ಬೇರೆಯೇ ಸ್ತರಕ್ಕೆ ಶ್ರೋತ್ರುಗಳನ್ನು ಒಯ್ಯಬಲ್ಲದು ಎನ್ನುವುದಕ್ಕೆ ಇಂದು ಈ ಇಬ್ಬರು ವಿದ್ವನ್ಮಣಿಗಳೇ ಸಾಕ್ಷಿ! ಅವರ ವಾದ್ಯಗಳ ಮೇಳೈಕೆ ಅದ್ಭುತವಾಗಿತ್ತು. ಈ ಇಬ್ಬರು ಮೇರು ಕಲಾವಿದರ ಯುಗಳ ಕಛೇರಿಯು ತುಂಬಿತುಳುಕುತ್ತಿದ್ದ ಸುರಭಾರತಿ ಸಭಾಭವನದಲ್ಲಿ ಯಶಸ್ವಿಯಾಗಿ ಮೂಡಿಬಂದಿತು.
ಕಾರ್ಯಕ್ರಮವನ್ನು ಶ್ರೀ ರಾಗದ ವರ್ಣದೊಂದಿಗೆ ಪ್ರಾರಂಭಿಸಲಾಯಿತು. ಚರಣ ಭಾಗಕ್ಕೆ ಒಳ್ಳೆಯ ಸ್ವರಪ್ರಸ್ತಾರ, ನಂತರ ನಾಟ ರಾಗ, ಆದಿ ತಾಳದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಮಹಾಗಣಪತಿಂ, ವಿಸ್ತಾರವಾದ ವಸಂತ ಆಲಾಪನೆಯೊಂದಿಗೆ ಶ್ರೀ ತ್ಯಾಗರಾಜರ ಸೀತಮ್ಮ ಮಾಯಮ್ಮ, ಸೊಗಸಾಗಿ ಮೂಡಿಬಂದಿತು. ಕಮಾಚ್ ರಾಗದ ವಿದ್ವತ್ಪೂರ್ಣ ಆಲಾಪನೆಯೊಂದಿಗೆ ಸುಂದರ ಪ್ರಸ್ತುತಿ, ಶ್ರೀ ಮೈಸೂರು ವಾಸುದೇವಾಚಾರ್ಯರ ಪ್ರಸಿದ್ದ ಕೃತಿ ಬ್ರೋಚೇವಾರೆವರುರ, ನಂತರ ಕಾಡಿನರಾಜ ರಾಗ ಆದಿ ತಾಳದಲ್ಲಿ ತ್ಯಾಗರಾಜರ ಸರಸ ಸಾಮದಾನ.
ಕಛೇರಿಯ ಮುಖ್ಯ ವಿನಿಕೆಯಾಗಿ ಕಲಾವಿದರು ರಾಗ ತಾನ ಪಲ್ಲವಿಯನ್ನು ಆರಿಸಿಕೊಂಡರು. ಷಣ್ಮುಖಪ್ರಿಯ ರಾಗತಾನದ ಉತ್ತಮ ಪ್ರದರ್ಶನದ ನಂತರ, ಪಲ್ಲವಿಯ ನಿರೂಪಣೆ, ಗೀತ ವಾದ್ಯ ಲಯಸಾರಂ ಸುಸ್ವರ ಭಾರತಂ ಕಲಾವಿದರದೇ ರಚನೆ ಸುರಭಾರತಿ ಸಂಸ್ಥೆಯ ಹೆಸರನ್ನು ಸಮಯೋಚಿತವಾಗಿ ಹೊಂದಿಸಿದ, ಚಮತ್ಕಾರಯುತ ಪ್ರಸ್ತುತಿ ಪ್ರಶಂಸನೀಯ.
ಮಿಶ್ರ ಛಾಪು ತಾಳದಲ್ಲಿ ಸಂಯೋಜಿಸಲಾದ ಪಲ್ಲವಿಯ ತ್ರಿಕಾಲ ವಿನ್ಯಾಸ, ಸ್ವರಪ್ರಸ್ತಾರದಲ್ಲಿ ಎರಡೂ ವಾದ್ಯಗಳ ಸ್ವಾರಸ್ಯಕರ ರಾಗಮಾಲಿಕಾ ಸಂವಾದ, ಮಲಯಮಾರುತ- ಶಹನ, ಮೋಹನ ಕಲ್ಯಾಣಿ-ವರಮು, ದುರ್ಗ-ಕಾಪಿ, ರಾಗಗಳಲ್ಲಿ ಆಕರ್ಷಕವಾಗಿತ್ತು. ಈ ಪ್ರಸ್ತುತಿಯ ಕಡೆಯಲ್ಲಿ ಶ್ರೀ ನಿಕ್ಷಿತ್ ಪುತ್ತೂರ್ ಹಾಗೂ ಶ್ರೀ ವಾಳಪಳ್ಳಿ ಕೃಷ್ಣ ಕುಮಾರ್ ಅವರು ತಮ್ಮ ಪ್ರಬುದ್ಧ ಶೈಲಿಯಲ್ಲಿ ಲಯವಿನ್ಯಾಸ ಮಾಡಿ ರಂಜಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದರು.
ಕಛೇರಿಯ ಉತ್ತರಾರ್ಧದ ನಿರೂಪಣೆಗಳು, ರಾಗಮಾಲಿಕೆಯಲ್ಲಿ ಕನಕದಾಸರ ದೇವರನಾಮ ಬಾರೋ ಕೃಷ್ಣಯ್ಯ, ಶ್ರೀ ಲಾಲ್ಗುಡಿ ಜಿ. ಜಯರಾಮನ್ ಅವರ ಬೆಹಾಗ್ ರಾಗದ ತಿಲ್ಲಾನ ಹಾಗೂ ಸಿಂಧುಭೈರವಿ ರಾಗದಲ್ಲಿ ಶ್ರೀ ಅರುಣಗಿರಿನಾಥರ ತಿರುಪ್ಪುಗ್ಹಳಿಂದ ಆಯ್ದ ರಚನೆ ಅಮುದಮೂರುಗಳೊಂದಿಗೆ ಈ ವಿನೂತನ ಜುಗಲ್ಬಂದಿ ಕಾರ್ಯಕ್ರಮ ಸಂಪನ್ನಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post