ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಕ್ರೋ ಫೈನಾನ್ಸ್, #Micro Finance ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿಗಾರರು ಬಡ ಮತ್ತು ಮಧ್ಯಮ ವರ್ಗದವರಿಗೆ ಸಾಲ ನೀಡುವ ಮುನ್ನ ಅವರಿಗೆ ಈ ಮುಂಚೆ ಇರುವ ಸಾಲಗಳ ಬಗ್ಗೆ ಪರಿಶೀಲಿಸಿ ನೀಡಬೇಕು. ಕಾನೂನುಬದ್ದವಾಗಿ ಸಾಲ ನೀಡುವುದು ಮತ್ತು ವಸೂಲಾತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ #DC Gurudatta Hegade ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಹಣಕಾಸು ಮತ್ತು ಮೈಕ್ರೋ ಫೈನಾನ್ಸ್, ಸಾಲ ನೀಡುವ ಏಜೆನ್ಸಿ ಮತ್ತು ಗಿರವಿ, ಲೇವಾದೇವಿಗಾರರೊಂದಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯ ಜನರಿಗೆ ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರು ತುರ್ತು ಪರಿಸ್ಥಿತಿಯಲ್ಲಿ ಸುಲಭವಾಗಿ ಸಾಲ ನೀಡುತ್ತಾ ಸಹಕರಿಸುತ್ತಾ ಬಂದಿದ್ದೀರಿ. ನಾವು ನಿಮ್ಮ ವಿರುದ್ದ ಇಲ್ಲ. ಆದರೆ ಓರ್ವ ಮಧ್ಯಮ ವರ್ಗದ ವ್ಯಕ್ತಿಗೆ 4 ಕ್ಕಿಂತ ಹೆಚ್ಚು ಬಾರಿ ಸಾಲ ನೀಡುವಂತಿಲ್ಲ. ಓರ್ವ ವ್ಯಕ್ತಿಗೆ ಸಾಲ ನೀಡುವ ಮುನ್ನ ಅವನ ಹಿಂದಿನ ಸಾಲಗಳ ಬಗ್ಗೆ ಮಾಹಿತಿ ಪಡೆದು ನೀಡಬೇಕು. ಹೆಚ್ಚು ಬಾರಿ ಸಾಲ ನೀಡಿ ಆತನಿಗೆ ಹೊರೆಯಾಗಿ, ಏನಾದರೂ ಹೆಚ್ಚು ಕಮ್ಮಿ ಆದರೆ ನಿಮಗೇ ಸಮಸ್ಯೆಯಾಗುತ್ತದೆ. ಆದ್ದರಿಂದ ಅನವಶ್ಯಕ ಸಮಸ್ಯೆ ತಂದುಕೊಳ್ಳದೇ, ಸಾಲ ಕುರಿತಾದ ಪೂರ್ವಾಪರ ಪರಿಶೀಲಿಸಿ ಸಾಲ ನೀಡಬೇಕು.
Also read: ವಯಸ್ಕ ಪತಿ-ಪತ್ನಿ ನಡುವೆ ಅಸ್ವಾಭಾವಿಕ ಲೈಂಗಿಕತೆ ಅಪರಾಧವೇ? ಕೋರ್ಟ್ ಮಹತ್ವದ ತೀರ್ಪು
ಹಾಗೂ ಸಾಲ ನೀಡುವಾಗ ಮತ್ತು ವಸೂಲು ಮಾಡುವಾಗ ಉತ್ತಮ ಅಭ್ಯಾಸಗಳು ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು ಎಂದ ಅವರು ಜಿಲ್ಲೆಯಲ್ಲಿ ಇನ್ನೂ ಸಹಕಾರ ಸಂಘಕ್ಕೆ ನೋಂದಣಿಯಾಗದ ಗಿರವಿದಾರರು ತಕ್ಷಣ ನೋಂದಣಿಯಾಗಬೇಕು. ಸಹಕಾರ ಸಂಘಗಳ ಉಪ ನಿಬಂಧಕರು ಈ ಕುರಿತು ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.
ಶಿವಮೊಗ್ಗದಲ್ಲಿ ಮೈಕ್ರೋಫೈನಾನ್ಸ್, ಇತರೆ ಹಣಕಾಸು ಸಂಸ್ಥೆಗಳ ವಿಷಯದಲ್ಲಿ ಅಂತಹ ಘಟನೆಗಳು, ಸಮಸ್ಯೆಗಳು ಇದುವರೆಗೆ ವರದಿಯಾಗಿಲ್ಲ. ಹೀಗೆಯೇ ಸಮರ್ಪಕವಾಗಿ, ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಸಾಲ ನೀಡಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಓರ್ವ ವ್ಯಕ್ತಿಗೆ ಪದೇ ಪದೇ ಸಾಲ ನೀಡಿ ಹೊರೆ ಮಾಡಬಾರದು. ಸಾಮರ್ಥ್ಯ ನೋಡಿ ಸಾಲ ನಿಡಬೇಕು. ನಿಮಗೆ ಕಂಪನಿಗಳು ಟಾರ್ಗೆಟ್ ನೀಡಿದ್ದಾರೆಂದು ಜನರಿಗೆ ಒತ್ತಡ ಹಾಕಬೇಡಿ. ಹಾಗೂ ವಸೂಲಾತಿ ವೇಳೆ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಅವೇಳೆಯಲ್ಲಿ ಸಾಲ ವಸೂಲಾತಿಗೆ ಹೋಗಬಾರದು. ಮನೆಯ ಹೆಣ್ಣುಮಕ್ಕಳು/ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅವಮಾನ, ದಬ್ಬಾಳಿಕೆ, ದೌರ್ಜನ್ಯ ಮಾಡಬಾರದು. ಒಂದು ವೇಳೆ ಇದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಸುಲಿಗೆ ಪ್ರಕರಣ ದಾಖಲಿಸಲಾಗುವುದು. ಕ್ರಿಮಿನಲ್ ಹಿನ್ನೆಲೆ ಇರುವಂತಹ ವ್ಯಕ್ತಿಗಳನ್ನು ಸಾಲ ವಸೂಲಾತಿಗೆ ನೇಮಿಸಿಕೊಳ್ಳಬಾರದು. ನಿಯಮಾನುಸಾರ, ಕಾನೂನುಬದ್ದವಾಗಿ ಸಾಲ ವಸೂಲಾತಿ ಮಾಡಬೇಕೆಂದು ಸೂಚಿಸಿದ ಅವರು ಸಾಲ ವಸೂಲಾತಿಗೆ ಪೊಲೀಸರು ಬೆಂಬಲ ಕೂಡ ಇದ್ದು, ಕಾನೂನು ರೀತಿಯಲ್ಲಿ ನಮ್ಮ ಸಹಾಯ ಪಡೆಯಬಹುದು ಎಂದರು.
ವಿಸಿ ಮೂಲಕ ಸಭೆಯಲ್ಲಿ ಆರ್ ಬಿಐ ಎಜಿಎಂ ಬಬುಲ್ ಬೊರ್ಡೊಲಯ್ ಮಾತನಾಡಿ ಆರ್ ಬಿ ಐ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ನಾಗಭೂಷಣ ಕಲ್ಮನೆ, ನಬಾರ್ಡ್ ಡಿಡಿಎಂ ಶರತ್, ಎಲ್ ಡಿ ಎಂ ಚಂದ್ರಶೇಖರ್, ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳು, ಸಹಕಾರ ಸಂಘಗಳ ಅಧಿಕಾರಿ/ಪದಾಧಿಕಾರಿಗಳು, ಗಿರವಿದಾರರ ಸಂಘದವರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post