ಕಲ್ಪ ಮೀಡಿಯಾ ಹೌಸ್ | ಸಿಗಂಧೂರು/ಶಿವಮೊಗ್ಗ |
ಮಲೆನಾಡಿಗರ ದಶಕಗಳ ಕನಸಾಗಿರುವ ಸಿಗಂಧೂರು ಸೇತುವೆ #Siganduru Bridge ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆ ದಿನಾಂಕವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸೇತುವೆ ಉದ್ಘಾಟನೆಯ ದಿನಾಂಕದ ಕುರಿತಾಗಿ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಅಂತಿಮಗೊಳಿಸಿ ಘೋಷಣೆ ಮಾಡಲಾಗುವುದು ಎಂದಿದ್ದಾರೆ.
ಸಿಗಂಧೂರು ಸೇತುವೆ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ದೇಶದ ಗಣ್ಯರು ಆಗಮಿಸುವ ಕಾರಣ ಹೆಲಿಕಾಪ್ಟರ್’ಗಳು ಬರಲು ಪೂರಕ ಹವಾಮಾನ ಅಗತ್ಯವಿದೆ. ಎಲ್ಲವನ್ನು ಸೂಕ್ಷö್ಮವಾಗಿ ಗಮನಿಸಿ ಒಂದು ದಿನ ನಿಗದಿಪಡಿಸಬೇಕಿದೆ. ಜುಲೈ 21 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೂ ಮುನ್ನ ಅಥವಾ ಅಧಿವೇಶನದ ನಂತರ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ಗ್ರಾಮ ಪಂಚಾಯ್ತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ #National Highway ಮೇಲ್ದರ್ಜೆಗೆ ಏರಿಸಿ ಹೆಚ್ಚಿನ ಅನುದಾನ ತರುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ #B S Yadiyurappa ಅವರ ಶ್ರಮ ಪ್ರಮುಖವಾಗಿದೆ ಎಂದರು.
ಮಲೆನಾಡಿಗರ ಹೆಮ್ಮೆಯಾಗಿರುವ ಇದು ಕೇಬಲ್ ತಂತ್ರಜ್ಞಾನದ ದೇಶದ ಎರಡನೇ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸೇತುವೆಯಿಂದಾಗಿ ಮಲೆನಾಡು ಮತ್ತು ಕರಾವಳಿಯ ಸಂಪರ್ಕ ಸಾಧ್ಯವಾಗಲಿದೆ. ಈ ಭಾಗದಲ್ಲಿರುವ ಧಾರ್ಮಿಕ ಕ್ಷೇತ್ರಗಳ ಸಂಪರ್ಕಕ್ಕೆ ಇದೊಂದು ರಾಜಮಾರ್ಗವಾಗಲಿದೆ. ಕರೂರು ಬಾರಂಗಿ ಹೋಬಳಿ ಹಾಗೂ ಸಾಗರ ಭಾಗದ ಆರ್ಥಿಕ ಬೆಳವಣಿಗೆಯು ಇದರಿಂದ ಸಾಧ್ಯವಾಗಲಿದೆ ಎಂದರು.
ಈ ಸೇತುವೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಜೊತೆಗೆ ಗುಣಮಟ್ಟದಿಂದ ಕೂಡಿದೆ. 423.15 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಶೀಘ್ರವೇ ಸಾರ್ವಜನಿಕರ ಸೇವೆಗೆ ಈ ಸೇತುವೆ ಲೋಕಾರ್ಪಣೆ ಆಗಲಿದೆ. ದ್ವೀಪದ ಸಂತ್ರಸ್ತ ಜನರು ಮತ್ತು ಭಕ್ತರ ಆಶಯದಂತೆ ಸೇತುವೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post