ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಮನೆ ಬಜೆಟ್ ನಿಂದ ಹಿಡಿದು ರಾಷ್ಟ್ರದ ಬಜೆಟ್ ತನಕ ಎಲ್ಲದರ ಹಿಂದೆ ಅರ್ಥಶಾಸ್ತ್ರದ ತತ್ವಗಳು ಕಾರ್ಯನಿರ್ವಹಿಸುತ್ತವೆ ಎಂದು ಕಾರ್ಕಳದ ಉದ್ಯಮಿ ಸೂರಜ್ ಶೆಟ್ಟಿ ಎಂದು ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅರ್ಥಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆಯ ಉಪನಿರ್ದೇಶಕ ಮಾರುತಿ ಮಾತನಾಡಿ, ಅರ್ಥಶಾಸ್ತ್ರ ಮತ್ತು ಆರ್ಥಿಕತೆ ಎಂದರೆ ಕೇವಲ ಹಣದ ಚಲಾವಣೆ ಅಲ್ಲ, ಅದು ನಮ್ಮ ಆಯ್ಕೆಗಳು, ಆದ್ಯತೆಗಳು ಮತ್ತು ಜೀವನ ಪಾಠಗಳ ಚಿಹ್ನೆಯಾಗಿದೆ ಎಂದು ಹೇಳುತ್ತಾ ಜಾಗತಿಕ ಆರ್ಥಿಕತೆಯ ಪ್ರವಾಹದಲ್ಲಿ ಹೇಗೆ ಸಮತೋಲನ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರೂ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ಅರ್ಥಶಾಸ್ತ್ರದ ಮಹತ್ವ, ಅದರ ಪ್ರಾಯೋಗಿಕ ಬಳಕೆ ಹಾಗೂ ಅರ್ಥಶಾಸ್ತ್ರವನ್ನು ವೃತ್ತಿಯಾಗಿ ಹೇಗೆ ಆಚರಿಸಬಹುದು ಎಂಬುದರ ಕುರಿತು ಮಾತುಗಳನ್ನಾಡಿದರು.
ಕಾರ್ಯಾಗಾರದಲ್ಲಿ 2025 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಲ್ಲದೆ 2025 ನೇ ಸಾಲಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಶೇ. 100 ಫಲಿತಾಂಶ ಸಾಧಿಸಿದ ಕಾಲೇಜುಗಳ ಉಪನ್ಯಾಸಕರನ್ನು ಪುರಸ್ಕರಿಸಿ ಗೌರವಿಸಲಾಯಿತು.

2025 ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಗೋಪಾಲ್ ಭಟ್, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿ ಮತ್ತು ನಾಗರಾಜ್ ವೈದ್ಯ, ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಗೋಳಿಯಂಗಡಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಾಗಾರದಲ್ಲಿ ಪೂರ್ವಾಹ್ನ ಎರಡನೇ ವರ್ಷದ ಅರ್ಥಶಾಸ್ತçದಲ್ಲಿ ಗಣಿತದ ಸಮಸ್ಯೆಗಳಿಗೆ ಪರಿಹಾರ ಎಂಬ ವಿಚಾರದ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದ ಅರ್ಥಶಾಸ್ತ್ರ ಉಪನ್ಯಾಸಕರಾದ ದಿನಕರ ಶೆಟ್ಟಿ ಇವರು ವಿಚಾರ ಮಂಡಿಸಿದರು.
ಹೊಸ ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆ ತಯಾರಿಕೆಗೆ ಸಂಬಂಧಿಸಿದ ಮಾಹಿತಿಗಳು ಎಂಬ ವಿಚಾರದ ಕುರಿತು ಸರ್ಕಾರಿ ಸ್ವತಂತ್ರ ಪಿಯು ಕಾಲೇಜು, ಹಾಸನದ ಅರ್ಥಶಾಸ್ತç ಉಪನ್ಯಾಸಕರಾದ ಧರ್ಮೇಂದ್ರ ಬಿ.ಜಿ ಇವರು ವಿಚಾರ ಮಂಡಿಸಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷೆ ಅನುರಾಧ. ಎಚ್. ರವರು ಸ್ವಾಗತಿಸಿ, ಉಪನ್ಯಾಸಕಿ ಜ್ಯೋತಿ ಕೊಲ್ಲೂರು ರವರು ವಂದಿಸಿದರು. ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಕ್ಷಯ ಹೆಗ್ಡೆ ಮೊಳಹಳ್ಳಿ ರವರು ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post