ಕಲ್ಪ ಮೀಡಿಯಾ ಹೌಸ್ | ಸೊರಬ |
ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದ್ದು, ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಸಿಬ್ಬಂದಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ ಬಿ.ಜೆ. ವಿನೋದ್ ಅವರಿಗೆ ಹಮ್ಮಿಕೊಂಡ ವರ್ಗಾವಣೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಹುದ್ಯೋಗಿಗಳು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕಾಗುತ್ತದೆ. ಬಿ.ಜೆ. ವಿನೋದ್ ಅವರು ತಾವು ಕಂಡಂತೆ ಇತರೆ ನೌಕರರೊಂದಿಗೆ ಸೌಹಾರ್ದಯುತವಾಗಿದ್ದರು. ಸಾರ್ವಜನಿಕರಿಗೆ ಸ್ಪಂದಿಸುವ ಮತ್ತು ಮಾರ್ಗದರ್ಶನ ನೀಡುವ ಕಾರ್ಯವನ್ನು ಮಾಡಿದ್ದಾರೆ. ಅವರ ಮುಂದಿನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲಿ, ಮತ್ತಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ಆಶಿಸಿದರು.
ವರ್ಗಾವಣೆ ಸನ್ಮಾನ ಸ್ವೀಕರಿಸಿದ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಬಿ.ಜೆ. ವಿನೋದ್ ಮಾತನಾಡಿ, ಕಳೆದ 16 ವರ್ಷಗಳ ಕಾಲ ಸೊರಬದಲ್ಲಿ ಕರ್ತವ್ಯ ನಿರ್ವಹಿಸಿದ ಆತ್ಮ ತೃಪ್ತಿ ಇದೆ. ತಮ್ಮ ಹಿರಿಯ ಮತ್ತು ಕಿರಿಯ ಸಹುದ್ಯೋಗಿಗಳು ಸಹಕಾರ ನೀಡಿದ್ದಾರೆ. ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಕರ್ತವ್ಯದ ಜೊತೆಗೆ ಗ್ರಾಮೀಣ ಭಾಗದ ರೈತರಿಗೆ ಸಲಹೆಗಳನ್ನು ನೀಡಿದ್ದೇನೆ. ಎಲ್ಲಾ ನೌಕರರು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡುತ್ತಿರುವುದು ಸಂತಸ ಎನಿಸುತ್ತಿದೆ ಎಂದರು.
ಕಂದಾಯ ಇಲಾಖೆ ನೌಕರರ ಜಿಲ್ಲಾಧ್ಯಕ್ಷ ವಿ.ಎಲ್. ಶಿವಪ್ರಸಾದ್, ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಯಶವಂತರಾಜ್, ಶಿರಸ್ತೆದಾರರಾದ ಎನ್.ಜೆ. ನಾಗರಾಜ್, ರಮೇಶ್, ಪಿ. ಲಲಿತಾ, ಉಪತಹಶೀಲ್ದಾರ್ ವೈ.ಎಸ್. ದೀಪಕ್ ಸೇರಿದಂತೆ ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post