ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಪುನೀತ್ ಜಿ. ಕೂಡ್ಲೂರು |
ಭಾರತದಲ್ಲಿ ಇತ್ತೀಚಿಗೆ ಆಚರಿಸುತ್ತಿರುವ ಅತಿ ದೊಡ್ಡ ಹಬ್ಬವೆಂದರೆ ಅದು ವರಮಹಾಲಕ್ಷ್ಮೀ ಹಬ್ಬ. ಗೌರೀ ಗಣೇಶ ಹಬ್ಬವೇ ಅತಿ ದೊಡ್ಡ ಹಬ್ಬ ಎಂದು ಹೇಳಲಾಗಿತ್ತು. ಅದು ಸರಿ ಆದರೆ ಗೌರೀ ಗಣೇಶನನ್ನು ಕೆಲವರು ಮನೆಯಲ್ಲಿ ಕೂರಿಸಿ ಪೂಜಿಸುವುದಿಲ್ಲ ಅದೊಂದು ಸಾರ್ವಜನಿಕ ಹಬ್ಬದಂತೆ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಆದರೆ ವರಮಹಾಲಕ್ಷ್ಮೀ ಹಾಗಲ್ಲ ಒಂದಷ್ಟು ವರ್ಷಗಳ ತನಕ ವ್ರತವಾಗಿ ಕೇವಲ ಸಂಪ್ರದಾಯವಾಗಿ ಆಚರಿಸುವವರ ಮನೆಯಲ್ಲಿ ವ್ರತಾಚರಣೆಯಾಗಿದ್ದ ವರಮಹಾಲಕ್ಷ್ಮೀ ವ್ರತ ಇಂದು ವರಮಹಾಲಕ್ಷ್ಮೀ ಹಬ್ಬವಾಗಿ ಪರಿವರ್ತನೆಗೊಂಡು ಪ್ರತಿ ಮನೆಯಲ್ಲೂ ಲಕ್ಷ್ಮೀಯನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಗುತ್ತಿದೆ. ಇಷ್ಟು ಪ್ರಸಿದ್ದಿ ಪಡೆದಿರುವ ಈ ಹಬ್ಬದ ಹಿನ್ನಲೆಯೇನು? ಹೇಗೆ ಪೂಜಿಸ ಬೇಕು ಎಂದು ತಿಳಿಸುವ ಪ್ರಯತ್ನ ಈ ಲೇಖನ.
ಹಿಂದೂ ಧರ್ಮದ ಪ್ರಸಿದ್ದ ಪುರಾಣಗಳಲ್ಲಿ ಒಂದಾದ ಭವಿಷ್ಯೋತ್ತರ ಪುರಾಣದಲ್ಲಿ ಪಾರ್ವತಿ ಪರಮೇಶ್ವರರ ಸಂವಾದ ರೂಪದಲ್ಲಿ ಈ ವರಮಹಾಲಕ್ಷ್ಮೀ ವ್ರತದ ಉಲ್ಲೇಖ ಬರುತ್ತದೆ. ಜಗನ್ಮಾತೆ ಪಾರ್ವತಿಯು ಪರಮೇಶ್ವರನನ್ನು ರಹಸ್ಯವೂ ಹಾಗೂ ಮಂಗಳಕರವಾದ ವ್ರತವೊಂದನ್ನು ತಿಳಿಸಿ ಎಂದು ಕೇಳಿದಾಗ ಪರಮೇಶ್ವರನು ವ್ರತಗಳಲ್ಲೆಲ್ಲಾ ಶ್ರೇಷ್ಠವಾದ ವ್ರತ, ಸಕಲ ಸಂಪತ್ತನ್ನು ಸೌಭಾಗ್ಯಗಳನ್ನು ಶೀಘ್ರದಲ್ಲಿಯೇ ದಯಪಾಲಿಸುವ ವರಲಕ್ಷ್ಮೀವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಕೊನೆಯ ಶುಕ್ರವಾರದಂದು ಸೌಭಾಗ್ಯ ಮತ್ತು ಮಂಗಳಕಾರ್ಯಗಳನ್ನು ಬಯಸುವ ಉತ್ತಮ ಸ್ತ್ರೀಯರು ಈ ವ್ರತವನ್ನು ಆಚರಿಸಿದರೆ ನಿಶ್ಚಿತ ಫಲ ದೊರೆಯುತ್ತದೆ ಎಂದು ತಿಳಿಸಿದರು.
ಪುರಾಣಕಾಲದಲ್ಲಿ ಕುಂಡಿನವೆಂಬ ಪಟ್ಟಣದಲ್ಲಿ ಪತಿವ್ರತೆಯೂ ಹಾಗೂ ಸಕಲ ಶಾಸ್ತ್ರಜ್ಞಳೂ ಆಗಿದ್ದ ಚಾರುಮತಿ ಎಂಬ ಮಹಿಳೆಗೆ ದೇವಿಯು ಕನಸಿನಲ್ಲಿ ದರ್ಶನ ನೀಡಿ “ ಎಲೈ ಪತಿವ್ರತೆಯೇ ! ನಿನ್ನನ್ನು ಹರಸಲು ನಾನು ಬಂದಿರುವೆ. ಪತಿ ಭಕ್ತಿ ಪರಾಯಣೆಯೂ, ಅತ್ತೆ ಮಾವಂದಿರ ಶುಶ್ರೂಷೆಯಲ್ಲಿ ನಿರತಳೂ ಆದ ನಿನ್ನ ಸದಾಚಾರಕ್ಕೆ ಮೆಚ್ಚಿದ್ದೇನೆ. ಶ್ರಾವಣಮಾಸದಲ್ಲಿ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರದಂದು ನನ್ನನ್ನು ವಿಶೇಷವಾಗಿ ಪೂಜಿಸು. ನಿನ್ನ ಇಷ್ಟಾರ್ಥಗಳೆಲ್ಲವೂ ನೆರವೇರುತ್ತದೆ” ಎಂದು ಹೇಳಿದಳು. ಇದರಿಂದ ಸಂತೋಷಗೊಂಡ ಚಾರುಮತಿಯು ಆನಂದದಿಂದ ಬಂದುಗಳೊಡನೆ ಕೂಡಿ ಪೂರ್ಣ ಕಳಶದಲ್ಲಿ ಆಲದ ಬಳ್ಳಿ, ಹೊಸ ಅಕ್ಕಿಯನ್ನು ತುಂಬಿ ವರಲಕ್ಶ್ಮೀಯನ್ನು ಆವಾಹಿಸಿ ಶ್ರದ್ಧಾ ಭಕ್ತಿಗಳಿಂದ “ಪದ್ಮಾಸನೇ ಪದ್ಮಕರೇ ಸರ್ವಲೋಕೈಕ ಪೂಜಿತೇ | ನಾರಾಯಣಪ್ರಿಯೇ ದೇವಿ ಸುಪ್ರೀತಾ ಭವ ಸರ್ವದಾ ||” ಎಂದು ಪ್ರಾರ್ಥಿಸಿ ಕಲ್ಪೋಕ್ತವಾಗಿ ಷೋಡಶೋಪಚಾರಗಳಿಂದ ವರಲಕ್ಷ್ಮೀಯನ್ನು ಪೂಜಿಸಿ ನಂತರ ಒಂಬತ್ತು ಗ್ರಂಥಿಗಳಿರುವ ಪವಿತ್ರ ದಾರವನ್ನು ಪೂಜಿಸಿ ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ಲಕ್ಷ್ಮೀದೇವಿಗೆ ನೇವೇದ್ಯ ಮಾಡಿ ಮಂಗಳಾರತಿ ಹಾಗೂ ಆರತಿಯನ್ನು ಮಾಡಿದಳು. ಪೂಜೆಯಾದ ಬಳಿಕ ಪೂಜಿಸಿದ ದಾರವನ್ನು ಬಲತೋಳಿಗೆ ಕಟ್ಟಿಕೊಂಡಳು ಮತ್ತು ಸುಮಂಗಲಿಯರಿಗೆ ಬಾಗೀನಗಳನ್ನು ಚಾರುಮತಿ ನೀಡಿದಳು ಎಂದು ಭವಿಷ್ಯೋತ್ತರ ಪುರಾಣದಲ್ಲಿ ತಿಳಿಸಿದೆ.
ಈ ವರಮಹಾಲಕ್ಷ್ಮೀ ವ್ರತವನ್ನಾಗಿ ಹಾಗೂ ಕೇವಲ ಪೂಜೆಯಾಗಿ ಮಾಡುವವರು ಪೂಜೆಯನ್ನು ಮಾಡುವ ವಿಧಾನಗಳು ಬೇರೆ ಬೇರೆಯಾಗಿದೆ. ವ್ರತಾಚರಣೆಮಾಡುವವರು ವರಮಹಾಲಕ್ಷ್ಮೀವ್ರತವನ್ನು ಮಾಡುವ ಮೊದಲು ಯಮುನೆಯ ಪೂಜೆಯನ್ನು ಮಾಡಬೇಕು. ಯಮುನೆಯ ಪೂಜೆಯ ಕಳಶವನ್ನು ಮೊದಲು ಅಲಂಕರಿಸಿದ ಮಂಟಪದಲ್ಲಿ ಇಟ್ಟು ಪೂಜಿಸಿ ನಂತರ ಅದರೊಟ್ಟಿಗೆ ವರಮಹಾಲಕ್ಷ್ಮೀ ಕಳಶವನ್ನು ಇಟ್ಟು ವ್ರತವನ್ನು ಮಾಡಬೇಕು ಇದನ್ನು ವ್ರತಾಚರಣೆ ಮಾಡಿಸಲು ಬರುವ ಪುರೋಹಿತರು ಮಾಡಿಸುತ್ತಾರೆ. ಆದರೆ ಮನೆಯಲ್ಲಿ ಅತ್ಯಂತ ವಿಜೃಭಂಣೆಯಿಂದ ವರಮಹಾಲಕ್ಷ್ಮೀ ಪೂಜೆಯನ್ನು ಮಾಡುವ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸ್ವಯಂ ವಿದ್ವಾಂಸರುಗಳ ಹಲವು ವಿಡಿಯೋಗಳನ್ನು ನೋಡಿ ವರಮಹಾಲಕ್ಷ್ಮೀ ಕಳಶಕ್ಕೆ ಯಾವ್ಯಾವ ಪದಾರ್ಥಗಳನ್ನು ಹಾಕಬೇಕೆಂದು ತಿಳಿಯದೇ ಆಚಾರಕ್ಕಿಂತ ಅನಾಚಾರಗಳೇ ಹೆಚ್ಚಾಗುತ್ತಿವೆ. ವರಮಹಾಲಕ್ಷ್ಮೀ ಕಳಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಹೇಳಿದ ಹಾಗೆ ಗುಳಂಗಜಿ, ಕವಡೆ ಅದೆಲ್ಲವನ್ನು ಹಾಕಬೇಡಿ, ಶಾಸ್ತ್ರೀಯವಾಗಿ ಹೇಗೆ ಮಾಡಬೇಕೆಂದು ತಿಳಿಯೋಣ.
ವರಮಹಾಲಕ್ಷ್ಮೀ ಪೂಜೆಗೆ ಬೇಕಾಗಿರುವ ಪ್ರಮುಖ ಸಾಮಾಗ್ರಿಗಳು ಅರಿಶಿನ ಕುಂಕುಮ, ಕಲಶಗಳು, ಐದು ತೆಂಗಿನಕಾಯಿ, ಮಂಟಪಾಲಂಕಾರ ಸಾಮಾಗ್ರಿಗಳಾದ ಬಾಳೆಕಂಬ, ತೋರಣ ಇತ್ಯಾದಿ. ನೈವೇದ್ಯಕ್ಕಾಗಿ ಹಣ್ಣು ಪ್ರಮುಖವಾಗಿ ದಾಳಂಬಿ ಹಣ್ಣು, ಒಂಬತ್ತೆಳೆಯ ಹಸಿದಾರ, ಬಟ್ಲಡಿಕೆ, ಅರಿಶಿನದ ಕೊಂಬು, ಪಂಚ ಪಲ್ಲವ ಹಾಗೂ ವಿಳೈದೆಲೆ. ವಾಯನದಾನಕ್ಕೆ ಎರಡು ತೆಂಗಿನಕಾಯಿ, ತಾಂಬೂಲ, ದಕ್ಷಿಣೆ, ಮಹಿಳೆಯರಿಗೆ ಕೊಡಲು ಬಳೆ, ಮಂಗಳದ್ರವ್ಯ ಬಾಗಿನ.
ವರಮಹಾಲಕ್ಷ್ಮೀಯ ಕಳಶಕ್ಕೆ ಏನೇನು ಹಾಕಬೇಕೆಂದರೆ. ವರಮಹಾಲಕ್ಷ್ಮೀ ಪೂಜೆಗಾಗಿ ಸಿದ್ದಪಡಿಸಿದ ಬೆಳ್ಳಿ, ಬಂಗಾರ ಅಥವಾ ತಾಮ್ರದ ಕಳಶವನ್ನು ಗಂಧ , ಅಕ್ಷತೆ, ಅರಿಶಿನ, ಕುಂಕುಮಗಳಿಂದ ಅಲಂಕರಿಸಿ ಅದರೊಳಗೆ ಅಕ್ಕಿ ಅಥವಾ ನೀರಿನೊಂದಿಗೆ ಪಂಚಪಲ್ಲವ ಅಂದರೆ ಆಲದ ಎಲೆ, ಅರಳಿ ಎಲೆ, ಮಾವಿನ ಎಲೆ, ಹಲಸಿನ ಎಲೆ ಹಾಗೂ ಹೊಂಬಾಳೆಯನ್ನು ಹಾಕಬೇಕು. ನಂತರ ಕಳಶದ ಮೇಲೆ ತೆಂಗಿನಕಾಯಿಯನ್ನು ಇಡಬೇಕು. ನಿಮ್ಮ ಮನೆಯ ಪದ್ದತಿಯಂತೆ ಒಂದು ಕಳಶ ಅಥವಾ ಜೋಡಿ ಕಳಶವನ್ನು ಇಡಬಹುದು. ಕಳಶದ ಪಾತ್ರೆ, ಆಭರಣ , ಮುಖವಾಡಗಳನ್ನು ಹಾಕಿ ಕಳಶವನ್ನು ಅಲಂಕರಿಸಬಹುದು ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಹೀಗೆ ಅಲಂಕರಿಸಿದ ಕಳಶದಲ್ಲಿ ವರಮಹಾಲಕ್ಷ್ಮೀಯನ್ನು ಆಹ್ವಾನಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿ ನಮ್ಮ ಶಕ್ತ್ಯಾನುಸಾರ ಷೋಡಶೋಪಚಾರಗಳಿಂದ ಪೂಜಿಸಿ , ದಾರವನ್ನು ಕೈಗೆ ಕಟ್ಟಿಕೊಂಡು ಮಹಿಳೆಯರಿಗೆ ಮಂಗಳದ್ರವ್ಯಗಳ ಬಾಗಿನ ನೀಡಿ ಪೂಜೆಯನ್ನು ಸಮಾಪ್ತಿಮಾಡಬೇಕು.
ಇದೆಲ್ಲಕ್ಕಿಂತಲೂ ಮುಖ್ಯವಾದದು ಭಕ್ತಿ ಏಕೆಂದರೆ ದೇವರು ಪದಾರ್ಥಗ್ರಾಹಿಯಲ್ಲ ಭಾವಗ್ರಾಹಿ ಎಂಬುದು ನೆನಪಿಡಿ. ಜಗದ್ಗುರುಶ್ರೀ ಶಂಕರಾಚಾರ್ಯರು ಹೇಳಿದ್ದಾರೆ ’ಪೂಜಾಸಾಧನಸಾಮಗ್ರ್ಯಾಂ ಭಕ್ತಿರೇವ ಗರೀಯಸೀ’ ಅಂದರೆ ಪೂಜೆಯಲ್ಲಿ ಬಳಸುವ ಎಲ್ಲಾ ಸಾಮಾಗ್ರಿಗಳಲ್ಲಿ ಭಕ್ತಿಯೇ ಪರಮೋತ್ಕೃಷ್ಟವಾದದು ಹಾಗಾಗಿ ಶ್ರದ್ಧಾ ಭಕ್ತಿಯಿಂದ ವರಮಹಾಲಕ್ಷ್ಮೀಯನ್ನು ಪೂಜಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post