ಕಲ್ಪ ಮೀಡಿಯಾ ಹೌಸ್ | ಸೊರಬ |
ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸೋಮವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನದ ನಿಮಿತ್ತ ಪಟ್ಟಣದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.
ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಂಜಿನ ಮೆರವಣಿಗೆಗೆ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ನಂತರ ಮುಖ್ಯರಸ್ತೆಯ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.
ಕಾರ್ಯಕ್ರಮದ ದಿಕ್ಕೂಚಿ ಭಾಷಣ ಮಾಡಿದ ಹಿಂದೂ ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ್ ಸತೀಶ್ ಪೂಜಾರಿ ದಾವಣಗೆರೆ, ಅಖಂಡ ಭಾರತ ನಿರ್ಮಾಣಕ್ಕೆ ಹಿಂದೂಗಳು ಜಾಗೃತರಾಗಿ ಸಂಕಲ್ಪ ಮಾಡಬೇಕಿದೆ. ಕೇವಲ ಅಹಿಂಸೆಯಿಂದ ದೇಶಕ್ಕೆ ಹೋರಾಟ ದೊರೆಯಲಿಲ್ಲ, ಅನೇಕ ಭಗತ್‌ಸಿಂಗ್, ಚಂದ್ರಶೇಖರ್ ಅಜಾಜ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಲಕ್ಷಾಂತರ ಕ್ರಾಂತಿಕಾರಿ ಹೋರಾಟಗಾರರ ತ್ಯಾಗ ಬಲಿದಾನವಿದೆ. ಪ್ರಸ್ತುತ ಯುವ ಜನತೆಗೆ ದೇಶದ ನೈಜ ಇತಿಹಾಸವನ್ನು ತಿಳಿಸುವ ಕಾರ್ಯವಾಗಬೇಕಿದೆ. ದೇಶದೊಳಗಿನ ಮತಾಂಧರ ಭಯೋತ್ಪಾಧನೆ-ಸಂಘರ್ಷಗಳನ್ನು ಎದುರಿಸಲು ಯಾವುದೇ ಹೋರಾಟಗಳಿಗೂ ಯುವ ಸಮೂಹ ಸದಾ ಸಿದ್ಧರಾಗಬೇಕು. ಆಪರೇಶನ್ ಸಿಂಧೂರ ಮತ್ತು ಆಪರೇಶನ್ ಮಹಾದೇವ ಯಶಸ್ವಿಗೊಳಿಸಿದ ದೇಶದ ದಿಟ್ಟ ಸೈನಿಕರಿಗೆ ಗೌರವಾರ್ಪಣೆ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಸಮಾಜ ಸೇವೆಕ ಡಾ. ಎಚ್.ಇ. ಜ್ಞಾನೇಶ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅಖಂಡ ಭಾರತದ ಭಾಗವೇ ಆಗಿದ್ದವು. ಕೆಲವರ ಸ್ವಾರ್ಥ ಸಾಧನೆಗಾಗಿ ಅಖಂಡವಾಗಿದ್ದ ಭಾರತ ಸ್ವಾತಂತ್ರ್ಯ ದೊರೆಯುತ್ತಿದ್ದಂತೆ ತ್ರಿಖಂಡವಾಗಿದ್ದು ದುರ್ಧೈವದ ವಿಷಯ. ಕಾಲನ ಹೊಡೆತಕ್ಕೆ ಸಿಲುಕಿ ದೇಶ ವಿಭಜನೆಯಾಗಿದೆ. ವಿನಃ, ಹಿಂದೂ ಧರ್ಮದ ಬೇರು ಸುಸ್ಥಿತಿಯಲ್ಲಿದೆ. ಮುಂದಿನ ದಿನಗಳಲ್ಲಿ ವಿಭಜನೆಯಾಗಿರುವ ಅಖಂಡ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕಿದೆ ಎಂದರು.
ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಂಜು ಹಾಗೂ ಭಗವಧ್ವಜ ಹಿಡಿದು ಜೈಕಾರ ಹಾಕುತ್ತಾ ಮಳೆಯನ್ನು ಲೆಕ್ಕಿಸದೆ ಸಾಗಿದರು.
ತಾಲೂಕು ಸೇರಿದಂತೆ ವಿವಿಧ ಹೋಬಳಿ ಕೇಂದ್ರಗಳಿಂದ ಆಗಮಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಾಗೂ ಮಾಜಿ ಯೋಧರು ವಿವಿಧ ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು. ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ನೂರಾರು ದೇಶಭಕ್ತರು, ಮಕ್ಕಳು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post