ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾಗವತ ಶ್ರವಣವು ಭಕ್ತಿ ಮತ್ತು ಭಾವವನ್ನು ಜಾಗೃತ ಗೊಳಿಸುತ್ತದೆ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.
ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅಧಿಕ ಮಾಸ ವ್ರತಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮದ ನಿಮಿತ್ತ
ಕೃಷ್ಣಮೂರ್ತಿಪುರಂನ ಶ್ರೀನಿವಾಸ ಅವರ ‘ಸಪ್ತಗಿರಿ ನಿವಾಸ’ದಲ್ಲಿ ನಡೆದ ಭಾಗವತ ಪ್ರವಚನ ಸಪ್ತಾಹ ಮಂಗಳ ಮಹೋತ್ಸವದಲ್ಲಿ
ಉಪನ್ಯಾಸ ನೀಡಿದರು.
ಭಾಗವತ ಶ್ರವಣ ಮಾಡಿದರೆ ಜೀವನವನ್ನು ನೋಡುವ ವಿಧಾನವೇ ಬದಲಾಗುತ್ತದೆ. ಪ್ರಪಂಚವನ್ನು ಪರಿಭಾವಿಸುವ ದೃಷ್ಟಿ ಸುಧಾರಣೆಗೊಳ್ಳುತ್ತದೆ. ಪ್ರಕೃತಿಯ ಮಿತಿಗಳನ್ನು ಅರಿಯುವ ಪ್ರೌಢಿಮೆ ಬರುತ್ತದೆ ಎಂದರು.
ಭಾಗವತ ಕೇವಲ ಧರ್ಮ ಗ್ರಂಥವಲ್ಲ, ಬದುಕಿನಲ್ಲಿ ಯಾವುದನ್ನು ಮಾಡಬೇಕು, ಏನನ್ನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಇಂದಿನ ದಿನಮಾನಗಳಲ್ಲಿ ನಾವು ಮಾಡಬಾರದ್ದನ್ನೇ ಮಾಡಿ ನಿತ್ಯವೂ ದುಃಖಪಡುವ ಸ್ಥಿತಿ ಬಂದೊದಗಿದೆ ಎಂದರು.
ಅನಂತ ಕಾಲದ ಯಶಸ್ಸಿನ ಸೂತ್ರ ಭಾಗವತ ಗ್ರಂಥದಲ್ಲಿದೆ. ಹಾಗಾಗಿಯೇ ಇದು ಮಹತ್ವಪೂರ್ಣ ಕೃತಿಯಾಗಿದೆ. ನಾವು ನಮಗೆ ಮತ್ತು ಸಮಾಜಕ್ಕೆ ಹಿತಕರವಾದದ್ದನ್ನೇ ಮಾಡಿ ಆಯುಷ್ಯವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪರೀಕ್ಷಿತ ಮಹಾರಾಜನಿಗೆ ಕೇವಲ 7 ದಿನ ಮಾತ್ರ ಆಯುಷ್ಯವಿದೆ ಎಂದು ಶುಕಾಚಾರ್ಯರು ಹೇಳುತ್ತಾರೆ. ಕೂಡಲೇ ಆತ ಎಚ್ಚೆತ್ತು ಮೋಕ್ಷ ಸಾಧನೆಗೆ ತೊಡಗಿದ. ಆದರೆ ಮುಂದಿನ 7 ನಿಮಿಷ ಬದುಕುತ್ತೇವೆ ಎಂಬ ಭರವಸೆಗಳೇ ಇಲ್ಲದ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ. ಇಂತಹಾ ಸಂದಿಗ್ಧ ಕಲಿಗಾಲದಲ್ಲಿ ದೇವರು ಕೊಟ್ಟ ಸಾಧನಾ ಶರೀರವನ್ನು, ಬುದ್ಧಿ ಮತ್ತು ಇಂದ್ರಿಯಾದಿಗಳನ್ನು ಸತ್ಕಾರ್ಯಕ್ಕಾಗಿ ಮಾತ್ರ ಬಳಸಬೇಕು. ಆಗ ಮಾತ್ರ ಬದುಕಿ ಇರುವಷ್ಟು ಕ್ಷಣಗಳೂ ಆನಂದಮಯವಾಗುತ್ತವೆ ಎಂದು ಅನಿರುದ್ಧಾಚಾರ್ಯ ಹೇಳಿದರು.
ಸಪ್ತಾಹ ನೆರವೇರಿಸಿಕೊಟ್ಟ ಶ್ರೀನಿವಾಸ-ಭಾಗ್ಯ ದಂಪತಿಗಳು ಅನಿರುದ್ಧಾಚಾರ್ಯರನ್ನು ಗೌರವಿಸಿದರು. ಹಿರಿಯ ಪಂಡಿತರಾದ ಮುಕುಂದಾಚಾರ್ಯ, ಗೋವಿಂದಾಚಾರ್ಯ ಪಾಂಡುರಂಗಿ ಸೇರಿದಂತೆ ಹಲವು ಹಿರಿಯರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















