ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ರಾಷ್ಟ್ರೀಯ ಸುರಕ್ಷತಾ ಮಂಡಳಿ ವತಿಯಿಂದ 2023-24ನೇ ಸಾಲಿನ ಉನ್ನತ ಸುರಕ್ಷತಾ ಪುರಸ್ಕಾರವನ್ನು ಕೊಪ್ಪಳದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಗೆ #Kirloskar Ferrous Industries ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ರಾಷ್ಟ್ರೀಯ ಸುರಕ್ಷತಾ ಮಂಡಳಿ ಕರ್ನಾಟಕ ಚಾಪ್ಟರ್ ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಈ ಕಾರ್ಯಕ್ರಮದಲ್ಲಿ, ಸುರಕ್ಷತಾ ಆಡಿಟ್ ಆಧಾರದ ಮೇಲೆ ರಾಜ್ಯದ ಆಯ್ದ ಕಾರ್ಖಾನೆಗಳಿಗೆ ಉತ್ತಮ, ಉನ್ನತ ಮತ್ತು ಅತ್ಯುತ್ತಮ ಸುರಕ್ಷತಾ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೊಪ್ಪಳದ ಘಟಕವು ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಮಿಕರ ಸುರಕ್ಷತೆ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಉತ್ಪಾದನೆ ನಡೆಸುತ್ತಿರುವುದಕ್ಕಾಗಿ ಈ ಪುರಸ್ಕಾರಕ್ಕೆ ಪಾತ್ರವಾಗಿದೆ.ಸಿ.ಎಸ್.ಆರ್ ಯೋಜನೆಗಳಡಿ ಸುತ್ತಮುತ್ತಲಿನ ಗ್ರಾಮಗಳ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಗೆ ಸಹ ಈ ಸಂಸ್ಥೆ ಶ್ರಮಿಸುತ್ತಿದೆ.
1993ರಲ್ಲಿ ಸ್ಥಾಪಿತವಾದ ಈ ಘಟಕವು 2017ರಲ್ಲಿ ಉತ್ತಮ ಸುರಕ್ಷತಾ ಪುರಸ್ಕಾರವನ್ನು, 2019, 2021 ಹಾಗೂ 2023ರಲ್ಲಿ ಉನ್ನತ ಸುರಕ್ಷತಾ ಪುರಸ್ಕಾರಗಳನ್ನು ಪಡೆದುಕೊಂಡಿತ್ತು. ಇದೇ ಶ್ರೇಯಸ್ಸನ್ನು ಮುಂದುವರಿಸಿಕೊಂಡು, 2025ರಲ್ಲಿ ನಾಲ್ಕನೇ ಬಾರಿ ಉನ್ನತ ಸುರಕ್ಷತಾ ಪುರಸ್ಕಾರವನ್ನು ಗಳಿಸುವ ಮೂಲಕ ಮತ್ತೊಂದು ಮೆಚ್ಚುಗೆ ಪಡೆದಿದೆ. ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪರಮೇನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಘಟಕಕ್ಕೂ ಉತ್ತಮ ಸುರಕ್ಷತಾ ಪುರಸ್ಕಾರ ಲಭಿಸಿದೆ.
ಈ ಸಾಧನೆಗೆ ಕಾರಣರಾದ ಎಲ್ಲಾ ಹಂತದ ಕಾರ್ಮಿಕರು, ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆಯವರು ಅಭಿನಂದನೆ ಸಲ್ಲಿಸಿದರು. ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಪಿ. ನಾರಾಯಣ ಅವರು, “ರಾಷ್ಟ್ರೀಯ ಸುರಕ್ಷತಾ ಮಂಡಳಿ ನೀಡಿದ ಈ ಪುರಸ್ಕಾರ ನಮ್ಮ ಪ್ರತಿಯೊಬ್ಬ ಉದ್ಯೋಗಿಯ ಪರಿಶ್ರಮಕ್ಕೆ ದೊರೆತ ಗೌರವ” ಎಂದು ಅಭಿಪ್ರಾಯಪಟ್ಟರು. ಸುರಕ್ಷತಾ ವಿಭಾಗದ ಮ್ಯಾನೇಜರ್ ಶ್ರೀ ಮುರಳಿಧರ್ ನಾಡಿಗೇರ್ ಅವರು, “ಸುರಕ್ಷತಾ ನೀತಿ-ನಿಯಮ ಪಾಲನೆ, ಸಾಧನ ಸಾಮಗ್ರಿಗಳ ಸರಿಯಾದ ಬಳಕೆ, ಸುರಕ್ಷತಾ ತರಬೇತಿ ಹಾಗೂ ಅಪಘಾತ ತಡೆ ಕ್ರಮಗಳ ಆಧಾರದ ಮೇಲೆ ಈ ಪ್ರಶಸ್ತಿ ದೊರೆತಿದೆ” ಎಂದು ಮಾಹಿತಿ ನೀಡಿದರು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್, ಬೇವಿನಹಳ್ಳಿ ಘಟಕದ ಪರವಾಗಿ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಪಿ. ನಾರಾಯಣ, ಎರಕ ವಿಭಾಗದ ಉಪಾಧ್ಯಕ್ಷರಾದ ಶ್ರೀ ವೀರಪ್ಪ ಕೋರಿ ಹಾಗೂ ಸುರಕ್ಷತಾ ವಿಭಾಗದ ಮ್ಯಾನೇಜರ್ ಶ್ರೀ ಎಂ.ಎಂ. ನಾಡಿಗೇರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸುರಕ್ಷತಾ ಮಂಡಳಿಯ ಮುಂಭೈ ಡೈರೆಕ್ಟರ್ ಜನರಲ್ ಡಾ. ಲಲಿತ್ ಘಭಾನೆ, ಜಿ.ಇ.ಬಿ.ಇ.ಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಶೋಭಾ ನಾಗೇಶ್, ಕರ್ನಾಟಕ ರಾಜ್ಯ ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ಕೈಗಾರಿಕಾ ಸುರಕ್ಷತೆ ಹಾಗೂ ಸ್ವಾಸ್ಥ್ಯ ಇಲಾಖೆಯ ನಿರ್ದೇಶಕರು ಕೆ. ಶ್ರೀನಿವಾಸ್ ಹಾಗೂ ರಾಷ್ಟ್ರೀಯ ಸುರಕ್ಷತಾ ಮಂಡಳಿ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿ ಪಿ.ಸಿ. ವೆಂಕಟೇಶ್ವರಲು ಉಪಸ್ಥಿತರಿದ್ದರು.
ಪರಮೇನಹಳ್ಳಿ ಘಟಕದ ಪರವಾಗಿ ಬೀಡುಕಬ್ಬಿಣ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಸುಶಾಂತ್ ಜಾದವ್ ಮತ್ತು ಸುರಕ್ಷತಾ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಆಕಾಶ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮವನ್ನು ಎನ್‌ಎಸ್‌ಸಿ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಎಲ್ಲಾ ಪಾಲ್ಗೊಂಡವರಿಂದ ಮೆಚ್ಚುಗೆ ವ್ಯಕ್ತವಾಯಿತು. ಪ್ರಶಸ್ತಿ ಪಡೆದ ಎಲ್ಲಾ ಸಂಸ್ಥೆಗಳಿಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ಹಾರ್ದಿಕ ಅಭಿನಂದನೆಗಳು.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post