ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-31 |
ಜೀವೋ ಜೀವಸ್ಯ ಜೀವನಂ ಎಂಬುದು ಭಗವಂತನ ಸೃಷ್ಟಿಯ ಸುಂದರ ಹೆಣಿಗೆಯ ಪ್ರತೀಕವಾಗಿದೆ. ಇಳೆಯಲ್ಲಿ ಒಂದು ಸಣ್ಣ ಹುಲ್ಲು ಕಡ್ಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಂಸಾಹಾರಿ ಪ್ರಾಣಿಗಳು, ಅಂತೆಯೇ ಮನುಷ್ಯರೂ ಪರಸ್ಪರ ಅವಲಂಬಿಸಿಕೊಂಡು ಜೀವನ ಮಾಡುವುದು ಪ್ರಕೃತಿಯ ಅದ್ಭುತವೇ ಸರಿ.
ಜೀವೋ ಜೀವಸ್ಯ ಜೀವನಂ ಎಂಬುದು ಕೇವಲ ನುಡಿಗಟ್ಟಲ್ಲ ಇದು ಸೃಷ್ಟಿಯ ಅಡಿಗಲ್ಲು. ಒಂದು ಜೀವಿ ಮತ್ತೊಂದು ಜೀವಿಯ ಬದುಕಿಗೆ ಆಧಾರವಾಗಿರುವುದು ನಿಸರ್ಗದ ಸಹಜ ನಿಯಮ. ಹುಲ್ಲು ಸಸ್ಯಹಾರಿ ಪ್ರಾಣಿಗಳಿಗೆ ಆಹಾರ, ಆ ಪ್ರಾಣಿಗಳು ಮಾಂಸಭಕ್ಷಕ ಪ್ರಾಣಿಗಳಿಗೆ ಆಹಾರ, ಆ ಪ್ರಾಣಿ ಸತ್ತ ನಂತರ ಮಣ್ಣನ್ನು ಸೇರಿ ಮತ್ತೊಂದು ಜೀವಿಗೆ ಪೋಷಕವಾಗುತ್ತದೆ. ಈ ಚಕ್ರದಲ್ಲಿ ಒಂದರ ಅಂತ್ಯ ಇನ್ನೊಂದರ ಆರಂಭವಾಗಿದೆ.
ಸಸ್ಯಗಳು ಸೂರ್ಯನ ಬೆಳಕಿನಿಂದ ಆಹಾರವನ್ನು ತಯಾರಿಸುತ್ತವೆ, ಪಕ್ಷಿಗಳು ಕೀಟಗಳನ್ನು ತಿಂದು ಬೆಳೆಗಳನ್ನು ಕಾಪಾಡುತ್ತವೆ, ಜೇನು ಹುಳಗಳು ಹೂವಿನ ರಸದಿಂದ ಜೇನು ತಯಾರಿಸುತ್ತವೆ. ಹೀಗೆ ಪ್ರತಿಯೊಂದು ಜೀವಿ, ನದಿ, ಪರ್ವತ ಎಲ್ಲವೂ ಪರಸ್ಪರ ಬಿಗಿದ ಜಾಲದಂತಿದೆ. ಈ ಜಾಗದಲ್ಲಿ ಒಂದು ಕೊಂಡಿ ಕತ್ತರಿಸಿದರೂ ಇಡೀ ಜಾಲವೇ ಹಾಳಾಗುತ್ತದೆ.
ಈ ಜಾಲದಲ್ಲಿ ಮಾನವನದ್ದು ಮುಖ್ಯ ಪಾತ್ರವಿದೆ. ಮನುಷ್ಯನು ಪರಿಸರದ ರಕ್ಷಕನಾಗಬಹುದು ಅಥವಾ ನಾಶಕನೂ ಆಗಬಹುದು. ಬೇಟೆ, ಕಾಡಿನ ನಾಶ ಮುಂತಾದ ಅವನ ಕಾರ್ಯಗಳು ಪ್ರಕೃತಿಯ ಜಾಲವನ್ನು ನಾಶ ಮಾಡುತ್ತವೆ. ಒಂದು ಹಕ್ಕಿ ನಾಶವಾದರೆ ಕೀಟಗಳು ಹೆಚ್ಚಿ ಬೆಳೆ ನಾಶವಾಗುತ್ತದೆ. ಒಂದು ನದಿ ಬತ್ತಿದರೆ ಬೆಳೆಗಳು ಹಾಗೂ ಜೀವಿಗಳು ನಾಶವಾಗುತ್ತವೆ. ಹೀಗೆ ಒಂದು ಕೊಂಡಿ ತುಂಡಾದರೂ ಇಡೀ ಪರಿಸರದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಅದೇ ಮನುಷ್ಯ ಪ್ರಕೃತಿಯೊಂದಿಗೆ ಸಹಜವಾಗಿ ಬದುಕಿದರೆ ಒಂದು ಸುಂದರ ಸಮತೋಲನ ನಿರ್ಮಾಣವಾಗುತ್ತದೆ. ಗಿಡ ನೆಡುವುದು, ಪ್ರಾಣಿಗಳನ್ನು ಕಾಪಾಡುವುದು, ನದಿಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು – ಇವು ಸಣ್ಣ ಸಣ್ಣ ಕಾರ್ಯಗಳಂತೆ ಕಂಡರೂ, ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಮಹತ್ವದ ನಿಧಿಯಾಗಿರುತ್ತದೆ.
‘ಜೀವೊ ಜೀವಸ್ಯ ಜೀವನಂ’ ನಮಗೆ ಕಲಿಸುವ ಪಾಠವೆಂದರೆ ಬದುಕು ಕೇವಲ ನಾವು ಬದುಕುವುದಲ್ಲ. ಬೇರೆ ಜೀವಿಗಳ ಬದುಕಿಗೂ ಕಾರಣ/ಸಹಾಯಕವಾಗಿ ಬದುಕುವುದು. ನದಿ ತನ್ನ ನೀರನ್ನು ತಡೆದಿಡುವುದಿಲ್ಲ, ಮರ ತನ್ನ ನೆರಳನ್ನು ಬಚ್ಚಿಡುವುದಿಲ್ಲ, ಹೂವು ತನ್ನ ಸುಗಂಧವನ್ನು ಮರೆಮಾಚುವುದಿಲ್ಲ. ನಾವೂ ಹಾಗೆಯೇ ಬದುಕಬೇಕು.
ಕೊನೆಯದಾಗಿ ಪ್ರಕೃತಿ ನಮಗೆ ತಿಳಿಸುವುದೇನೆಂದರೆ ‘ನೀನು ಬೇರೆಯವರಿಗೆ ಸಹಾಯಕನಾಗಿದ್ದರೆ ಬೇರೆಯವರು ನಿನಗೆ ಸಹಾಯಕರಾಗಿರುತ್ತಾರೆ.’ ಇದನ್ನು ಅರಿತಾಗ ಮಾತ್ರ ಮನುಷ್ಯ ನಿಜವಾದ ಅರ್ಥದಲ್ಲಿ ಬದುಕಿದ್ದಾನೆ ಎಂದು ಹೇಳಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















