ಕಲ್ಪ ಮೀಡಿಯಾ ಹೌಸ್ | ಸೊರಬ |
ರಸ್ತೆಯಲ್ಲಿನ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಚಾಮರಾಜಪೇಟೆ ನಿವಾಸಿಗಳು ನಿಮ್ಮ ಜೀವಕ್ಕೆ ನೀವೇ ಹೊಣೆ, ಪುರಸಭೆ ಅಲ್ಲ ಎಂದು ಬರೆಯುವ ಮೂಲಕ ಶನಿವಾರ ವಿನೂತವಾಗಿ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಚಾಮರಾಜಪೇಟೆ ನಿವಾಸಿಗಳ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಸಂಜೀವ ಆಚಾರ್ ಮಾತನಾಡಿ, ಕೆಲ ತಿಂಗಳ ಹಿಂದೆ ಚಾಮರಾಜಪೇಟೆಯಲ್ಲಿ ಹರ್ ಘರ್ ಗಂಗಾ ಯೋಜನೆಯಡಿ ಪೈಪ್ ಲೈನ್ ಅಳವಡಿಸಲು ರಸ್ತೆಯಲ್ಲಿ ಗುಂಡಿ ಅಗೆಯಲಾಗಿತ್ತು. ಅಗೆದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಲಿಲ್ಲ. ಇದರಿಂದ ನಿತ್ಯ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅನೇಕರು ಬಿದ್ದು ಎದ್ದು ಹೋದ ನಿದರ್ಶನಗಳಿವೆ. ಈ ಬಗ್ಗೆ ಹಲವು ಬಾರಿ ಪುರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರಸ್ತೆಯಲ್ಲಿ ಬರಹದ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಪ್ರಮುಖರಾದ ಡಿ. ಶಿವಯೋಗಿ ಮಾತನಾಡಿ, ಮುಖ್ಯರಸ್ತೆಯಿಂದ ಕಾನುಕೇರಿ, ಕೋರ್ಟ್, ಸಾರ್ವಜನಿಕ ಆಸ್ಪತ್ರೆ, ಆಶ್ರಯ ಬಡಾವಣೆ, ಕ್ರೀಡಾಂಗಣಕ್ಕೆ ತೆರಳುವ ಬಹುತೇಕರು ಇದೇ ಮಾರ್ಗ ಬಳಸುತ್ತಾರೆ. ರಸ್ತೆಯಲ್ಲಿ ಕುಡಿಯುವ ನೀರಿನ ಸರಬರಾಜಿನ ಪೈಪ್ ಲೈನ್ ಅಳವಡಿಕೆ ತರುವಾಯ ಗುಂಡಿಗಳನ್ನು ಮುಚ್ಚದೇ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದರು.
ಯಾವುದೋ ಹಳೇ ಕಟ್ಟಡದ ಅವಶೇಷಗಳನ್ನು ತಂದು ರಸ್ತೆಯಲ್ಲಿ ಸುರಿದಿದ್ದಾರೆ. ಇದರಿಂದ ವಾಹನಗಳ ಸವಾರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಸಂಬAಧಪಟ್ಟವರು ಇತ್ತ ಕಡೆ ಗಮನ ಹರಿಸಿ, ರಸ್ತೆಯನ್ನು ದುರಸ್ತಿಗೊಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಪಪಂ ಮಾಜಿ ಸದಸ್ಯ ಸಮೀವುಲ್ಲಾ, ಸ್ಥಳೀಯರಾದ ವೆಂಕಟಗಿರಿ ಭಟ್, ಅಣ್ಣಪ್ಪ, ಉಮೇಶ್ ದೇವಾಡಿಗ, ವಸಂತ ಶೇಟ್, ಸುಬ್ರಹ್ಮಣ್ಯ ಆಚಾರ್, ಶ್ರೀನಾಥ್, ಕುಬೇರಪ್ಪ ಶೇಟ್ ಸೇರಿದಂತೆ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























