ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ನವರಾತ್ರಿಯು ಆಧ್ಯಾತ್ಮಿಕವಾಗಿ ಬಹಳ ಮಹತ್ವವನ್ನು ಪಡೆದಿದೆ. ನವರಾತ್ರಿ ದೇವಿ ಉಪಾಸಕರ ಉತ್ಸವ, ಪರಮಾತ್ಮನ ಉತ್ಸವ, ವೈಷ್ಣವರು ಶ್ರೀ ವೆಂಕಟೇಶನ ನವರಾತ್ರಿಯನ್ನು ಆಚರಿಸಿದರೆ, ಶಾಕ್ತ್ಯರು ಮತ್ತು ಶೈವರು ದೇವಿಯ ಆರಾಧನೆಯನ್ನು ವಿಶೇಷವಾಗಿ ಮಾಡುತ್ತಾರೆ.
ಪ್ರಮುಖವಾಗಿ ನವರಾತ್ರಿಯಲ್ಲಿ ದೀಪೋತ್ಸವ ಬಹಳ ಮಹತ್ವ ಪಡೆಯುತ್ತದೆ. ದಕ್ಷಿಣ ಭಾರತದಲ್ಲಿ ದೇವಿ ಮತ್ತು ವೆಂಕಟೇಶ ದೇವರ ಪೂಜೆಯು ನಡೆದರೆ ಉತ್ತರ ಭಾರತದಲ್ಲಿ ರಾಮಲೀಲಾ ಉತ್ಸವವು ಮಹತ್ವ ಪಡೆದಿರುತ್ತದೆ.
ತ್ರೇತಾಯುಗದಲ್ಲಿ ನವರಾತ್ರಿಯಲ್ಲಿಯೇ ಯುದ್ಧವು ನಡೆದು ದಶಮಿಯ ದಿನ ರಾವಣನ ವಧೆ ಆದ ಕಾರಣ ಇಂದಿಗೂ ದಶಮಿಯದಿನ ರಾವಣಾಸುರನ ಪುತ್ಥಳಿಯನ್ನು ಮಾಡಿ ಅವನ ವಧೆಯನ್ನು ಮಾಡಿ ಸಂಭ್ರಮಿಸುತ್ತಾರೆ. ದ್ವಾಪರದಲ್ಲಿ ಅಜ್ಞಾತವಾಸ ಮುಗಿಯುವ ಸಮಯದಲ್ಲಿ ವಿರಾಟನಗರದ ಮೇಲೆ ದಂಡೆತ್ತಿ ಬಂದ ದುರ್ಯೋಧನಾದಿಗಳನ್ನು ಬೃಹನ್ನಳೆಯ ರೂಪದಲ್ಲಿದ್ದ ಅರ್ಜುನನು ಉತ್ತರ ಕುಮಾರನೊಂದಿಗೆ ಹೋಗಿ ವಿಜಯವನ್ನು ಸಾಧಿಸಿದ ನಂತರ ಬನ್ನಿ ಪೂಜೆಯನ್ನು ಮಾಡುತ್ತಾನೆ.
ಆಯುಧ ಪೂಜೆ ಬನ್ನಿ ಪೂಜೆಯು ದ್ವಾಪರ ಯುಗದ ಕಥೆಗಳಾದರೆ. ದ್ವಾಪರದ ಕೊನೆಯಲ್ಲಿ ಶ್ರೀ ವೆಂಕಟೇಶನ ಕಲ್ಯಾಣದ ಮೂಲಕ ಲೋಕ ಶಿಕ್ಷಣವನ್ನು ಮಾಡುತ್ತಾನೆ. ಇವೆಲ್ಲವೂ ಪೌರಾಣಿಕ ಮಹತ್ವವನ್ನು ಸಾರುತ್ತವೆ.
ಧಾರ್ಮಿಕವಾಗಿ ದೇವಿಯು ಶಕ್ತಿ ಸ್ವರೂಪಳು, ಅವಳ ಆರಾಧನೆಯಿಂದ ನಮಗೆ ಶಕ್ತಿ, ಭಕ್ತಿ ಎರಡೂ ದೊರೆಯುತ್ತದೆ. ಮಳೆಗಾಲದ ಈ ಸಮಯದಲ್ಲಿ ಹೊರಗೆ ತಿರುಗುವ ಪರಿಸ್ಥಿತಿ ಇಲ್ಲವಾದ್ದರಿಂದ ಮನೆಯಲ್ಲಿಯೇ ಇದ್ದು ಪೂಜೆಯನ್ನು ಮಾಡುವುದು ನಮ್ಮ ದೈವಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂದು ನಮ್ಮ ಪೂರ್ವಜರು ಆಶ್ವಯುಜ ಮಾಸದಲ್ಲಿ ನವರಾತ್ರಿಯ ಉತ್ಸವವನ್ನು ಆರಂಭಿಸುತ್ತಾರೆ.
ಸಂಘರ್ಷ ಮತ್ತು ಹೋರಾಟಗಳು ಯುಗ ಯುಗಾಂತರಗಳಿಂದಲೂ ನಡೆದೇ ಇವೆ. ನವರಾತ್ರಿ ಉತ್ಸವ ದುಷ್ಟ ಶಕ್ತಿಗಳ ಮೇಲೆ ಸಾತ್ವಿಕತೆಯ ಜಯದ ಪ್ರತೀಕ ಅತ್ಯಾಚಾರ ಮಾಡಿದವರನ್ನು ಸಂಹಾರ ಮಾಡಿ ದೇವಿಯು ತನ್ನ ಪ್ರತಿ ರೂಪಗಳಿಂದಲೂ ತನ್ನ ಭಕ್ತರ ರಕ್ಷಣೆಯನ್ನು ಮಾಡಿರುತ್ತಾಳೆ.
ರಾಮಾಯಣದಲ್ಲಿ ರಾಮನು ಪರಸ್ತ್ರೀ ವ್ಯಾಮೋಹಕ್ಕೆ ಒಳಗಾದ ರಾವಣನ ರಕ್ಕಸಿ ಪ್ರವೃತ್ತಿಯನ್ನು ಖಂಡಿಸಿ ತಿಳಿ ಹೇಳಿ ತಿದ್ದಿ ಕೊಳ್ಳದೇ ಹೋದಾಗ ಅವನ್ನು ದಂಡಿಸಿ ವಧಿಸಿದನು. ಕೌರವರು ಪರಧನಕ್ಕಾಗಿ ಆಸೆ ಪಟ್ಟು ಅನ್ಯಾಯ ಮಾಡುತ್ತಲೇ ಬಂದಾಗ ಅವರಿಗೆ ಶ್ರೀಕೃಷ್ಣನು ಪಾಂಡವರ ಮೂಲಕ ಶಿಕ್ಷಿಸಿದನು. ಈ ಎಲ್ಲ ಕಥೆಗಳಲ್ಲಿ ಕೂಡ ನಮ್ಮ ಜೀವನಕ್ಕೆ ಬಹಳಷ್ಟು ಸಂದೇಶಗಳನ್ನು ನೀಡಲಾಗಿದೆ.
ರಾಮಾಯಣದಲ್ಲಿ ಸೀತಾದೇವಿಯ ಪಾತ್ರದ ಮೂಲಕ ಪತಿಯನ್ನೇ ನಂಬಿ ಎಲ್ಲಿಗಾದರೂ ಹೋಗಬೇಕು. ಅವನ ಕಷ್ಟ ಸುಖಗಳಲ್ಲಿ ಪಾಲುದಾರಳಾಗಬೇಕೆಂಬ ನೀತಿಯನ್ನು ಕಲಿತರೆ, ಕೆಲವೊಮ್ಮೆ ಹಠ ಮಾಡಬಾರದು ಹಿರಿಯರ ಮಾತನ್ನು ಮೀರಬಾರದು ಎಂಬ ನೀತಿಯನ್ನು ಕೂಡ ಕಲಿಯುತ್ತೇವೆ.ಶ್ರೀರಾಮನಿಂದ ಕಲಿಯುವುದು ಬಹಳವೇ ಇದೆ. ರಾಮನು ಆದರ್ಶ ಪುರುಷನು ಅವನ ಜೀವನದ ಪ್ರತಿಯೊಂದು ಘಟನೆಯು ನಮ್ಮ ಮುಂದೆ ಬಂದೇ ಬರುತ್ತದೆ. ತಂದೆ ತಾಯಿಯರ ಸೇವೆ ಮಾಡುವುದು, ಅವರ ಆಜ್ಞೆ ಪಾಲಿಸಿ ಅವರ ಪ್ರೀತಿ ಪಾತ್ರನಾಗುವುದು ಅಣ್ಣ ತಮ್ಮಂದಿರ ಮೇಲೆ ವಾತ್ಸಲ್ಯ ತೋರುವುದು, ಗುರು ಹಿರಿಯರಿಗೆ ಗೌರವ ಕೊಡುವುದು ಅವರ ಸೇವೆ ಮಾಡುತ್ತಾ ಅವರಿಂದ ಜ್ಞಾನ ಪಡೆಯುವುದು, ದುಷ್ಟ ಶಿಕ್ಷಣ ಮಾಡಿ ಪ್ರಜೆಗಳು ಋಷಿ ಮುನಿಗಳನ್ನು ಕಾಪಾಡುವುದನ್ನು ಕಲಿಯಬೇಕು. ಧರ್ಮದ ಸಲುವಾಗಿ ಒಂಟಿಯಾಗಿ ಆಗಲಿ ಜೊತೆಯವರ ಜೊತೆಗೂಡಿಯಾಲಿ ಹೋರಾಟ ಮಾಡುವುದನ್ನು ನಾವು ಕಲಿಯಬೇಕು. ಇವೆಲ್ಲ ಪಾಠವನ್ನು ರಾಮನ ಕಥೆಯನ್ನು ಹೇಳುವುದರ ಕೇಳುವುದರ ಮೂಲಕ ನೆನಪು ಮಾಡಿಕೊಳ್ಳಬೇಕು.
ಇನ್ನು ಮಹಾಭಾರತದಿಂದ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇ ಬೇಕು. ಎಷ್ಟು ಸಾಧ್ಯವೋ ಅಷ್ಟು ಸಹಿಸಿ ಹೊಂದಿಕೊಂಡು ನಡೆಯಬೇಕು, ಕೊನೆಗೆ ಮಿಕ್ಕಿದಾಗ ಧರ್ಮಕ್ಕಾಗಿ ಯುದ್ಧವನ್ನಾದರೂ ಮಾಡಿ ನಮ್ಮದಾಗಿರುವುದನ್ನು ಪಡೆಯಬೇಕು ಎಂದು ಕಲಿಯುತ್ತೇವೆ.
ವೆಂಕಟೇಶನ ಮಹಾತ್ಮೆ ಮತ್ತು ಕಲ್ಯಾಣದಲ್ಲಿ ಕಲಿಯುದಲ್ಲಿ ನಡೆಯುವ ಎಲ್ಲ ಘಟನೆಗಳನ್ನು ಮೊದಲಿಗೇ ತಾನು ಆಡಿ ತೋರಿಸಿದ್ದಾನೆ ಭಗವಂತ. ವೈಕುಂಠದಿಂದ ಭೂಮಿಗೆ ಬಂದ ಭಗವಂತನಿಗೆ ಇರಲು ಸ್ಥಳವನ್ನು ವರಾಹ ದೇವರು ಕೊಡುತ್ತಾರೆ. ಬಾಡಿಗೆಗಾಗಿ ಮನೆಯನ್ನು ಭಗವಂತನೇ ಹಿಡಿದ ಇನ್ನು ಆ ಸ್ಥಳಕ್ಕೆ ಮೌಲ್ಯ ಎಂಬಂತೆ ಭೂ ವೈಕುಂಠದಲ್ಲಿ ಮೊದಲಿಗೆ ವರಾಹದೇವರ ದರ್ಶನ ಪೂಜೆ ನಂತರ ತನ್ನ ದರ್ಶನ ಎಂದು ಶ್ರೀನಿವಾಸನು ಹೇಳಿದ್ದಾನೆ.
ಕಲಿಯುಗದಲ್ಲಿ ಹೀಗೆ ತಿರುಗುತ್ತಾ ಹೋದಾಗ ಕನ್ಯೆಯನ್ನು ನೋಡುವುದು ಪ್ರೀತಿಯಾಗುವುದು ಸಹಜ ಎಂದು ಭಗವಂತ ಬೇಟೆಗೆ ಹೋದಾಗ ಪದ್ಮಾವತಿಯನ್ನು ನೋಡಿ ಮರುಳಾಗುವುದು. ಬಕುಲಾವತಿಯನ್ನು ಕಳುಹಿಸಿ ಮದುವೆಯ ನಿಶ್ಚಯ ಮಾಡಿಸುವುದು, ಕುಬೇರ ಬಳಿ ಮದುವೆಗೆ ಸಾಲವನ್ನು ಮಾಡುವುದು ಮತ್ತು ಭಕ್ತಾದಿಗಳು ಹಾಕುವ ಹಣದಲ್ಲಿ ಬಡ್ಡಿ ಕೊಡುವೆ ಎನ್ನುವುದು ಕೂಡ ಲೋಕ ಶಿಕ್ಷಣವೇ ಇಂದು ನಾವು ಕಲಿಯುಗದಲ್ಲಿ ಮದುವೆ ಮನೆ ಕಟ್ಟಲು ಸಾಲವನ್ನು ಮಾಡಿ ಬಡ್ಡಿಯನ್ನು ಕಟ್ಟುತ್ತೇವೆ. ಮದುವೆಗೆ ಬಂಧು ಬಾಂಧವರನ್ನು ಕರೆಯುತ್ತೇವೆ. ಇವೆಲ್ಲವೂ ನಮಗೆ ನಮ್ಮ ಪೂರ್ವಜರಿಂದ ದೊರೆತ ಪಾಠವಾಗಿದೆ. ದೇವಾದಿ ದೇವತೆಗಳು ಮನುಷ್ಯರ ಜೀವನವನ್ನು ಹೇಗೆ ಮಾಡಬೇಕುಂದು ತೋರಿಸಿ ಹೋಗಿದ್ದಾರೆ. ಅವರಿಂದ ಸರಿಯಾಗಿ ಕಲಿತವರು ಇಂದು ಉತ್ತಮ ಜೀವನವನ್ನು ನಡೆಸುತ್ತಾರೆ. ಬೇಡದ ವಿಷಯವನ್ನು ಅನುಸರಿಸುವವರು ಕಷ್ಟ ಪಡುತ್ತಲೇ ಇರುತ್ತಾರೆ.
ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಧರ್ಮ ಮಾರ್ಗದಲ್ಲಿ ನಡೆಯುವುದು ಬಹಳ ಮುಖ್ಯವಾಗಿದೆ. ನಮ್ಮ ಜೀವನದಲ್ಲಿ ಶಿಸ್ತು ಸಂಯಮ ನಿಯಮಗಳನ್ನು ನಾವು ಸಣ್ಣವರಿದ್ದಾಗಲೇ ಕಲಿಯಬೇಕು. ಪರಂಪರೆಯಿಂದಲೇ ಇಂತಹ ಉತ್ತಮ ಪಾಠವನ್ನು ಕಲಿಯುತ್ತಿರುತ್ತೇವೆ. ಅದಕ್ಕಾಗಿ ಋತುಮಾನಕ್ಕೆ ಅನುಗುಣವಾಗಿ ಜೀವನ ಶೈಲಿಗೆ ಅನುಗುಣವಾಗಿ ಹತ್ತು ಹಲವು ಹಬ್ಬಗಳನ್ನೂ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬಂದಿರುತ್ತೇವೆ. ಆಧುನಿಕ ಪ್ರಪಂಚದಲ್ಲಿ ಮೊದಲಿನಂತೆ ಜೀವನ ಇಲ್ಲದೇ ಇರುವ ಕಾರಣ ಇಂದಿನ ಪರಿಸ್ಥಿತಿಯಲ್ಲಿ ಹಳೆಯ ಕಾಲದಂತೆ ಅಲ್ಲದೇ ಹೋದರೂ ಮಕ್ಕಳಲ್ಲಿ ನಮ್ಮ ಮುಂದಿನ ಪೀಳಿಗೆಗೆ ಭಕ್ತಿ ಮತ್ತು ಶ್ರದ್ಧೆಯನ್ನು ಉಳಿಸುವ ಹಬ್ಬವಾಗಿ ನವರಾತ್ರಿಯನ್ನು ಆಯಾ ಪ್ರಾಂತದ ಪದ್ಧತಿಯಂತೆ ಆಚರಿಸಬೇಕು.
ದಕ್ಷಿಣ ಕರ್ನಾಟಕದಲ್ಲಿ ಗೊಂಬೆ ಕೂಡಿಸುವುದರ ಮೂಲಕ ಅನೇಕ ಪುರಾಣ ಇತಿಹಾಸಗಳ ಮೂಲಕ ಮಕ್ಕಳಿಗೆ ನೀತಿಯನ್ನು ಕಲಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ವೆಂಕಟೇಶ ಪಾರಿಜಾತ ಮಹಾತ್ಮೆ, ಕೋಲಾಟಗಳು ಪ್ರಸಿದ್ಧವಾಗಿವೆ. ಹಲವಾರು ದೇವಿ ಉಪಾಸಕರು ದೇವಿಯ ಕುರಿತಾದ ಪೂಜೆ ಅರ್ಚನೆ ಹೋಮ ಹವನಾದಿಗಳನ್ನು ಮಾಡುತ್ತಾರೆ. ಒಟ್ಟಾರೆ ಧಾರ್ಮಿಕ ಅನುಭೂತಿ ಮತ್ತು ಆಧ್ಯಾತ್ಮಿಕತೆ ಈ ನಾಡಹಬ್ಬವು ನಮ್ಮಲ್ಲಿ ದೈವೀಕತೆಯನ್ನು ಹೆಚ್ಚು ಮಾಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post