ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ನವರಾತ್ರಿ ಕೇವಲ ಧಾರ್ಮಿಕ ಹಬ್ಬವಾಗಿರದೇ ವೈಜ್ಞಾನಿಕವಾಗಿಯೂ ಮಹತ್ವವನ್ನು ಪಡೆದಿರುವ ಹಬ್ಬವಾಗಿದೆ. ನವರಾತ್ರಿಯಲ್ಲಿ ಒಂಬತ್ತು ಚಕ್ರಗಳನ್ನು ಜಾಗೃತಗೊಳಿಸುವುದು, ಪೂಜೆ ಆರಾಧನೆ, ಸಂಪ್ರದಾಯ, ಉಪವಾಸ ಮೊದಲಾದವುಗಳ ಮೂಲಕ ಹಬ್ಬವನ್ನು ಆಚರಿಸುತ್ತೇವೆ. ಪ್ರಕೃತಿ ಪೂಜೆಯು, ಸಾಧನೆಯನ್ನು ಕೂಡ ಮಾಡುತ್ತಾರೆ.
ವೈಜ್ಞಾನಿಕವಾಗಿ ಹಬ್ಬದ ಮಹತ್ವವನ್ನು ಚರ್ಚಿಸುವುದಾದರೆ ಈ ಕಾಲದಲ್ಲಿ ಮಳೆಗಾಲದಿಂದ ಚಳಿಗಾಲಕ್ಕೆ ಬದಲಾಗುವ ಸಮಯವಾಗಿದೆ. ಇಂತಹ ಬದಲಾವಣೆಯ ಸಮಯದಲ್ಲಿ ಹೆಚ್ಚಾಗಿ ರೋಗ ರುಜಿನಗಳು ಆರೋಗ್ಯ ಸಮಸ್ಯೆಗಳು ಬರುತ್ತವೆ. ಮಳೆಗಾಲದಲ್ಲಿ ಇರುವ ವಾತಾವರಣ ಮತ್ತು ಆಹಾರ ಪದ್ಧತಿಯ ಬದಲಾಗಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಬೇರೆ ರೀತಿ ಊಟೋಪಚಾರ ಆಹಾರ ವಿಹಾರಗಳನ್ನು ಅಭ್ಯಾಸ ಮಾಡಿಕೊಳ್ಳಲು ಆಶ್ವಯುಜ ಮಾಸ ಮೊದಲಾಗುತ್ತದೆ. ಈ ಮಳೆಗಾಲದ ಆರಂಭದಲ್ಲಿ ಕಫ ಉತ್ಪನ್ನ ಮಾಡುವ ಮೊಸರನ್ನು ಬಳಸುತ್ತಿರುವುದಿಲ್ಲ. ಈ ಬದಲಾವಣೆಯ ಸಮಯದಲ್ಲಿ ದವಸ ಧಾನ್ಯಗಳಲ್ಲಿ ಹುಳಗಳಾಗುವ ಸಂಭವ ಹೆಚ್ಚಾಗುವುದರಿಂದ ಬೇಳೆಕಾಳುಗಳನ್ನು ಮತ್ತು ತರಕಾರಿಗಳನ್ನು ಬಳಸುವುದಿಲ್ಲ, ಈ ಸಮಯದಲ್ಲಿ ಆರೋಗ್ಯಕ್ಕೆ ಯಾವುದು ಹಿತವೋ ಆಯುರ್ವೇದದಲ್ಲಿ ಈ ಕಾಲಕ್ಕೆ ಸೂಕ್ತ ಆಹಾರ ಸೂಚಿಸಿದೆಯೋ ಅಂತಹ ಆಹಾರ ಸೇವನೆ ಮಾಡಲಾಗುತ್ತದೆ.

ಈ ಸಮಯದಲ್ಲಿ ಹಗಲು 12 ತಾಸು ರಾತ್ರಿಯೂ 12 ತಾಸುಗಳು ಇರುತ್ತವೆ ಇದನ್ನು ಇಕ್ಷಿನಾಕ್ಸ್ ಎಂದು ಕರೆಯಲಾಗುತ್ತದೆ ಇಂತಹ ಸಮಯದಲ್ಲಿ ಕತ್ತಲು ಬೆಳಕು ಸಮ ಪ್ರಮಾಣದಲ್ಲಿರುತ್ತದೆ. ಬೇಸಿಗೆಕಾಲದಲ್ಲಿ ಹಗಲು ಹೆಚ್ಚು ರಾತ್ರಿ ಕಡಿಮೆ, ಚಳಿಗಾಲದಲ್ಲಿ ರಾತ್ರಿ ಹೆಚ್ಚು ಹಗಲು ಕಡಿಮೆ ಇರುತ್ತದೆ. ಈ ಕಾಲದಲ್ಲಿ ಅರ್ಧ ರಾತ್ರಿ ಅರ್ಧ ಹಗಲು ಇರುವುದರಿಂದ ಈ ಕಾಲದ ವಾತಾವರಣದಲ್ಲಿ ಉಪವಾಸ ಧ್ಯಾನ ಮೊದಲಾದ ಸಾಧನೆಗಳು ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸರಿಯಾಗಿ ಗಮನ ಹರಿಸಬೇಕಾದ ಸಮಯವೇ ಆಗಿರುತ್ತದೆ.
ನವರಾತ್ರಿಯಲ್ಲಿ ಪರಿಸರ ಮತ್ತು ವಾತಾವರಣ ಬಣ್ಣಗಳಿಂದ ಶೃಂಗಾರಗೊಂಡು ಆನಂದಮಯವಾಗಿರುತ್ತದೆ ಹೂವುಗಳು ಚೆನ್ನಾಗಿ ಅರಳಿನಿಂತಿರುತ್ತವೆ ಅವುಗಳಿಂದ ದೇವಿಯ ಆರಾಧನೆಯನ್ನು ಒಂದೊಂದು ಬಣ್ಣಗಳ ಪ್ರತೀಕಗಳನ್ನು ಅರಿತು ನವದೇವಿಯರ ಪೂಜೆಯನ್ನು ಮಾಡಲಾಗುತ್ತದೆ.

ನವರಾತ್ರಿಯ ಸಮಯದಲ್ಲಿ ಪೂಜೆ ಮತ್ತು ಮಂತ್ರ ಜಪ ಅನುಷ್ಠಾನಗಳನ್ನು ಮಾಡುತ್ತಾರೆ. ಇದರಿಂದ ನಮ್ಮ ದೇಹದ ಚಕ್ರಗಳು ಜಾಗೃತಗೊಳ್ಳುತ್ತವೆ. ನಮ್ಮಲ್ಲಿ ಎಲ್ಲ ರೀತಿಯಲ್ಲಿ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಜಾಗೃತಗೊಳಿಸಿ ದುಷ್ಟ ಶಕ್ತಿಗಳ ಜೊತೆಗೆ ಹೋರಾಡಲು ಪ್ರೇರಣೆಯನ್ನು ನೀಡಿ ನಮ್ಮನ್ನು ಜೀವನದಲ್ಲಿ ಜಯಶಾಲಿಗಳನ್ನಾಗಿ ಮಾಡುವ ಶಕ್ತಿಯನ್ನು ನಮ್ಮಲ್ಲಿ ನಾವು ಈ ಸಮಯದಲ್ಲಿ ಜಾಗೃತಗೊಳಿಸಬಹುದಾಗಿದೆ. ಇಲ್ಲಿ ನವ ಎಂದರೆ ಕೇವಲ ಒಂಭತ್ತು ಅಲ್ಲದೇ ನವ ಎಂದರೆ ಹೊಸದಾದ ಎಂದೂ ಕೂಡ ಅರ್ಥ ಮಾಡಿಕೊಳ್ಳಬಹದು. ನಮ್ಮ ಜೀವನದಲ್ಲಿ ನವಚೈತನ್ಯವನ್ನು ಹೊಸ ಶಕ್ತಿಯನ್ನು ಪಡೆದುಕೊಳ್ಳುವ ಕಾಲ ನವರಾತ್ರಿ.
ನವರಾತ್ರಿಯಲ್ಲಿ ದೇವಿಯ ಪ್ರಸನ್ನತೆಯ ಸಲುವಾಗಿ ಅನೇಕ ಹೋಮ ಹವನಾದಿಗಳನ್ನು ಮಾಡುತ್ತಾರೆ. ಇದರಿಂದ ವಾತಾವರಣದಲ್ಲಿ ಹಾನಿಕಾರಕ ಬ್ಯಾಕ್ಟಿರಿಯಾಗಳು, ಹಾನಿಕಾರಕ ವಸ್ತುಗಳು ನಾಶವಾಗಿ ವಾತಾವರಣವು ಪರಿಶುದ್ಧವಾಗಿ ಆರೋಗ್ಯಯುತ ವಾತಾವರಣವನ್ನು ಸೃಷ್ಟಿಸುತ್ತದೆ. ಹೀಗೆ ಅನೇಕ ರೀತಿಯಲ್ಲಿ ವೈಜ್ಞಾನಿಕ ಕಾರಣಗಳನ್ನು ಇಟ್ಟುಕೊಂಡೇ ನಮ್ಮ ಪೂರ್ವಜರು ಹಬ್ಬಗಳನ್ನು ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿದ್ದಾರೆ, ಶಿಸ್ತುಬದ್ಧ ಜೀವನ ಮತ್ತು ಸರಿಯಾದ ಅಭ್ಯಾಸಗಳನ್ನು ಮಾಡಿಸುವ ಕಾರಣ ದೇವರು ಪೂಜೆ ಸಂಪ್ರದಾಯಗಳ ಮೂಲಕ ಉತ್ತಮ ಜೀವನದ ಮಾರ್ಗವನ್ನು ತೋರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















Discussion about this post