ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಜನರು ದೈಹಿಕ ಆರೋಗ್ಯಕ್ಕೆ ಗಮನ ಕೊಡುವಷ್ಟು ಮಾನಸಿಕ ಆರೋಗ್ಯಕ್ಕೆ ಮಹತ್ವ ಕೊಡುವುದಿಲ್ಲ. ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಈ ರೀತಿಯ ಭಾವನೆಯನ್ನು ಬದಲಾಯಿಸಲು ಆರಂಭವಾದ ಆಚರಣೆಯೇ ವಿಶ್ವ ಮಾನಸಿಕ ಆರೋಗ್ಯ ದಿನ. #WorldMentalHealthDay ಜನರಲ್ಲಿ ಮಾನಸಿಕ ಆರೋಗ್ಯದ ಮಹತ್ವ ತಿಳಿಸಿಕೊಟ್ಟು ಪ್ರಶಾಂತ ಚಿತ್ತ ಹಾಗೂ ಆನಂದದಿಂದ ಇರುವ ಮಾರ್ಗವನ್ನು ತಿಳಿಸಿಕೊಡಲಾಗುತ್ತದೆ.
ವಿಶ್ವ ಮಾನಸಿಕ ಆರೋಗ್ಯ ಒಕ್ಕೂಟದವರು ಜಾಗತಿಕವಾಗಿ 1992ರಲ್ಲಿ ಅಕ್ಟೋಬರ್ 10ನೇ ತಾರೀಖನನ್ನು ವಿಶ್ವ ಮಾನಸಿಕ ಆರೋಗ್ಯ ದಿನವೆಂದು ಘೋಷಿಸಿದರು. ವಿಶ್ವದ 150 ದೇಶಗಳು ಸೇರಿ ಈ ಒಂದು ದಿನದ ಆಚರಣೆಯನ್ನು ಮಾಡಿ ಜನರಲ್ಲಿ ಮಾನಸಿಕ ಆರೋಗ್ಯದ ಬಗಗೆ ಜಾಗರೂಕತೆ ಮೂಡಿಸಲು ಮುಂದಾದರು. 1994ರಿಂದ ಥೀಮ್ ಆಧಾರದ ಮೇಲೆ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ಜನರಿಗೆ ತಿಳುವಳಿಕೆ ನೀಡಿ ಮಾನಸಿಕವಾಗಿ ಆರೋಗ್ಯವಂತರಾಗಿದ್ದಾಗ ದೈಹಿಕ ಆರೋಗ್ಯವು ತಾನಾಗಿಯೇ ಸರಿಯಾಗುತ್ತದೆ. ಪ್ರಶಾಂತ ಮತ್ತು ಸಂತಸದಿಂದಿದ್ದರೆ ಮಾನಸಿಕ ಆರೋಗ್ಯವು ಸುಸ್ಥಿರವಾಗಿ ಇರುತ್ತದೆ ಎಂಬ ತಿಳುವಳಿಕೆ ನೀಡುವುದೇ ಈ ದಿನಾಚರಣೆಯ ಉದ್ದೇಶವಾಗಿರುತ್ತದೆ.

ಮೊದಲು ಮನೆಯಿಂದಲೇ ಸಣ್ಣ ಮಕ್ಕಳಿಗೆ ಕೂಡ ಒತ್ತಡವನ್ನು ಸೃಷ್ಟಿಸುವ ವಾತಾವರಣವಿದೆ. ಏಕೆಂದರೆ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಕಡೆಗಳಲ್ಲೂ ಸ್ಪರ್ಧೆ, ಮುನ್ನುಗುವಿಕೆಯ ಭರದಲ್ಲಿ ಪ್ರಶಾಂತವಾದ ನೆಮ್ಮದಿಯ ವಾತಾವರಣವು ಕಡಿಮೆಯಾಗುತ್ತಿದೆ. ಹೀಗಾಗಿ 6-8 ವರ್ಷದ ಮಕ್ಕಳಿಂದ ಹಿಡಿದು 90 ವರ್ಷದ ಮುದುಕರವೆಗೂ ಒತ್ತಡದಲ್ಲೇ ಬದುಕುವಂತೆ ಆಗಿದೆ. ಕಾಲದ ಓಟ, ಸ್ಪರ್ಧಾತ್ಮಕತೆ ಒತ್ತಡದ ಜೀವನದಿಂದ ದೂರವಾಗಿದ್ದಾಗ ಮನಸ್ಸು ನೆಮ್ಮದಿ ಮತ್ತು ಸಂತೋಷದಿಂದ ಇದ್ದು ಆರೋಗ್ಯ ಉತ್ತಮವಾಗಿರುತ್ತದೆ. ಹಾಗೂ ಮನುಷ್ಯ ದೀರ್ಘ ಆಯಸ್ಸನ್ನು ಪಡೆದು ಬದುಕಬಹುದಾಗಿದೆ.
ಹೇಗೆ ಮನುಷ್ಯನ ಜೀವನದಲ್ಲಿ ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಹೊಟ್ಟೆ ತುಂಬಾ ಆಹಾರ ಕಣ್ಣು ತುಂಬ ನಿದ್ದೆ ಮೈ ತುಂಬಾ ಕೆಲಸವು ಮುಖ್ಯವೋ ಅದೇ ರೀತಿ. ಮನುಷ್ಯನ ಮಾನಸಿಕ ಆರೋಗ್ಯಕ್ಕೆ ಪ್ರಶಾಂತ ಚಿತ್ತ ಹಾಗೂ ಸಮಾಧಾನದ ಭಾವ ಬಹಳ ಮುಖ್ಯವೆನಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಮತ್ತು ನಾಗಲೋಟದಲ್ಲಿ ಓಡುತ್ತಿರುವ ಶಥಲಿಯಲ್ಲಿ ಒತ್ತಡ ಇಲ್ಲದೇ ಬದುಕುವುದು ಕಷ್ಟ ಸಾಧ್ಯ. ಆದರೆ ಶಿಸ್ತಿನ ಮತ್ತು ಆರೋಗ್ಯ ಪೂರ್ಣ ಜೀವನ ಶೈಲಿಯಿಂದ ಈ ಸಮಾಧಾನ ಮತ್ತು ಒತ್ತಡ ರಹಿತ ಜೀವನಕ್ಕೆ ಒಗ್ಗಿಕೊಳ್ಳಬಹುದು. ಅದು ಕೇವಲ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಮನುಷ್ಯ ಸ್ವಭಾವದ ಪ್ರಕಾರ ಸುಖ ಮತ್ತು ಆರಾಮದ ಜೀವನಕ್ಕೆ ಹೊಂದಿಕೊಳ್ಳುವ ಹಾಗೆ ಕಷ್ಟ ಸಮಸ್ಯೆಗಳ ಪರಿಸ್ಥಿತಿಗೆ ಬೇಗ ಒಗ್ಗುವುದಿಲ್ಲ. ಇಂದಿನ ವಾತಾವರಣದಲ್ಲಿ ಎಲ್ಲ ಕಡೆಗೂ ನಮ್ಮದೇ ನಡೆಯಬೇಕೆಂಬ ಅತೀ ನೀರಿಕ್ಷೆಯ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕು. ಸದಾಕಾಲ ನಮ್ಮದೇ ಜಯ ನಾವು ಅಂದಿದ್ದೇ ಆಗಬೇಕೆಂಬ ಮನೋಭಾವವಿರಬಾರದು. ಮಾನಸಿಕ ಆರೋಗ್ಯ ಚೆನ್ನಾಗಿ ಇರಲು ಆ ದಿನದಲ್ಲಿ ಬಂದ ಪರಿಸ್ಥಿತಿಗೆ ತಕ್ಕ ಹಾಗೆ ನಡೆದುಕೊಳ್ಳುವುದರಿಂದ, ಸಕಾರಾತ್ಮಕತೆಯನ್ನು ರೂಢಿಸಿಕೊಳ್ಳುವುದರಿಂದ ಬರುತ್ತದೆ.

ಪ್ರತಿ ವರ್ಷವೂ ಒಂದಲ್ಲ ಒಂದು ಥೀಮ್ ಒಟ್ಟಿಗೆ ಈ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿರುತ್ತಾರೆ. ಕಾಲ ಪರಿಸ್ಥಿತಿ ಮತ್ತು ಜಾಗತಿಕವಾದ ಸಮಸ್ಯೆಗಳನ್ನು ಆಧರಿಸಿ ಈ ದಿನದ ಥೀಮ್ ನಿರ್ಧರಿಸಲಾಗುತ್ತದೆ. 2025ರ ಥೀಮ್ ಸೇವೆಗಳ ಲಭ್ಯತೆ – ವಿಪತ್ತು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯ ಎಂಬುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post