ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-32 |
ಹೀಗಾಗಿ ಪ್ರಸಿದ್ಧಿ ಮತ್ತು ಸಾರ್ಥಕತೆ – ಎರಡೂ ಕೂಡ ಜೀವನದ ವಿಭಿನ್ನ ಮಾರ್ಗಗಳು; ಒಂದನ್ನು ಲೋಕ ಮೆಚ್ಚುತ್ತದೆ, ಮತ್ತೊಂದರಿಂದ ಆತ್ಮತೃಪ್ತಿ ಉಂಟಾಗುತ್ತದೆ. ಈ ಎರಡು ಮಾರ್ಗಗಳ ಮಧ್ಯೆ ಸಮತೋಲನ ಸಾಧಿಸಿದವರು ಮಾತ್ರ ನಿಜವಾಗಿಯೂ ಅಮರರಾಗುತ್ತಾರೆ.
ಸಾರ್ಥಕತೆ ಎನ್ನುವುದು ಬಾಹ್ಯ ಮೆಚ್ಚುಗೆ ಅಥವಾ ಹೊಗಳಿಕೆಯಿಂದ ಬರುವುದಲ್ಲ. ಅದು ಆತ್ಮಸಂತೃಪ್ತಿಯ ಸ್ಥಿತಿ. ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪೂರೈಸಿದಾಗ ಮನಸ್ಸಿನಲ್ಲಿ ಮೂಡುವ ನಿಜವಾದ ಶಾಂತಿ. ಒಬ್ಬ ಗುರು ತನ್ನ ಜೀವನವನ್ನೆಲ್ಲಾ ವಿದ್ಯಾರ್ಥಿಗಳ ಬೋಧನೆಗೆ ಮೀಸಲಿಟ್ಟಾಗ, ಅವನು ಪ್ರಸಿದ್ಧನಾಗದಿದ್ದರೂ ಅವನ ಜೀವನ ಸಾರ್ಥಕವಾಗುತ್ತದೆ. ಒಬ್ಬ ರೈತ ದಿನವೂ ಬಿಸಿಲಿನ ತಾಪದಲ್ಲಿ ದುಡಿಯುತ್ತಾ, ಕೋಟ್ಯಾಂತರ ಜನರ ಹೊಟ್ಟೆತುಂಬಿಸುತ್ತಾನೆ. ಅವನು ಪತ್ರಿಕೆಗಳಲ್ಲಿ ಬರದಿರಬಹುದು, ಆದರೆ ಅವನ ಶ್ರಮವೇ ದೇಶದ ಆಧಾರ. ಇದೇ ಸಾರ್ಥಕತೆ.
ಆದರೆ ನಾವು ಇತಿಹಾಸದ ಪುಟಗಳನ್ನು ತಿರುವಿದಾಗ ನಮಗೆ ಸಾರ್ಥಕತೆಯಿಂದ ಪ್ರಸಿದ್ಧರಾದ ಮಹನೀಯರನ್ನು ಕಾಣುತ್ತಾರೆ. ಶ್ರೀರಾಮಚಂದ್ರನು ಕೇವಲ ರಾಜನೆಂದು ಅಥವಾ ಅಧಿಕಾರಕ್ಕಾಗಿ ಪ್ರಸಿದ್ಧರಾದವನಲ್ಲ; ಅವನು ಸಾರ್ಥಕನಾಗಿದ್ದವನು. ಏಕೆಂದರೆ ಅವನ ಜೀವನ ಧರ್ಮದ ಪ್ರತಿಬಿಂಬವಾಗಿತ್ತು.ಅವನು ಪಿತೃವಾಕ್ಯಪರಿಪಾಲಕನಾ ಗಿ,ಶರಣಾಗತವತ್ಸಲನಾಗಿ ಮತ್ತು ಶಿಷ್ಟರಕ್ಷಕನಾಗಿ ನಡೆದು ಆದರ್ಶಪುರುಷರಾದರು. ಅವರ ಪ್ರಸಿದ್ಧಿಯ ಮೂಲವೇ ಅವರ ಸಾರ್ಥಕತೆ.
ಅದೇ ರೀತಿಯಲ್ಲಿ ಶ್ರೀಕೃಷ್ಣ ಪರಮಾತ್ಮನು ಕೂಡ ಕೇವಲ ಪ್ರಸಿದ್ಧನಾದವನಲ್ಲ; ಅವರ ಸಾರ್ಥಕತೆ ಕರ್ಮಯೋಗದ ಬೋಧನೆಯಲ್ಲಿ ಹಾಗೂ ಧರ್ಮಸ್ಥಾಪನೆಯ ಸಂಕಲ್ಪದಲ್ಲಿ ಅಡಗಿತ್ತು. ಅವನು ಲೋಕಕ್ಕೆ ತಿಳಿಸಿದ “ನಿಷ್ಕಾಮ ಕರ್ಮ” ತತ್ತ್ವವೇ ಸಾರ್ಥಕ ಜೀವನದ ಸೂತ್ರ. ಅವರ ಪ್ರಸಿದ್ಧಿ ಧರ್ಮದ ಸಂಸ್ಥಾಪನೆಯಿಂದ ಹುಟ್ಟಿದದ್ದು, ವೈಭವದ ಪ್ರದರ್ಶನದಿಂದಲ್ಲ.
ಇಂತಹ ಆದರ್ಶಪುರುಷರ ಕಥೆಗಳನ್ನು ಬಾಲ್ಯದಲ್ಲಿಯೇ ಕೇಳಿದ ಸ್ವಾಮಿ ವಿವೇಕಾನಂದರು ಕೂಡ ಇದೇ ಪಂಕ್ತಿಯವರು. ಅವರು ಬೋಧಿಸಿದ ಆತ್ಮಶಕ್ತಿ, ದೇಶಭಕ್ತಿ ಮತ್ತು ಮಾನವಸೇವೆ ಜೀವನವನ್ನು ಸಾರ್ಥಕಗೊಳಿಸುವ ದಾರಿಯನ್ನು ತೋರಿಸಿತು. ಅವರ ಪ್ರಸಿದ್ಧಿ ಚಿಕಾಗೋ ಭಾಷಣದಿಂದ ಬಂದರೂ, ಅವರ ಸಾರ್ಥಕತೆ ತ್ಯಾಗ ಮತ್ತು ಗುರು ರಾಮಕೃಷ್ಣರ ತತ್ತ್ವಗಳಲ್ಲಿ ಜೀವಂತವಾಗಿತ್ತು. ಪ್ರಸಿದ್ಧಿ ಅವರನ್ನು ಹುಡುಕಿಕೊಂಡು ಬಂತು, ಏಕೆಂದರೆ ಅವರು ಸಾರ್ಥಕರಾಗಿದ್ದರು.
ಒಟ್ಟಾರೆ ಹೇಳುವುದಾದರೆ ಸಾರ್ಥಕತೆ ಮತ್ತು ಪ್ರಸಿದ್ಧಿ ಎರಡು ವಿಭಿನ್ನ ದಾರಿಗಳು. ಪ್ರಸಿದ್ಧಿ ಋಣಾತ್ಮಕವಾಗಿಯೂ ಇರಬಹುದು, ಧನಾತ್ಮಕವಾಗಿಯೂ ಇರಬಹುದು. ಆದರೆ ಸಾಧನೆ ಎಂಬುದು ಕೇವಲ ಧನಾತ್ಮಕ ಮಾತ್ರ. ಉದಾಹರಣೆಗೆ ಗಂಗೆಯ ಉಳಿವಿಗಾಗಿ ಹೋರಾಡಿ ಜೀವ ತೆತ್ತ ಜ್ಞಾನಸ್ವರೂಪ ಸಾನಂದ ಸ್ವಾಮೀಜಿಯಂಥ ಅನೇಕರು ಪ್ರಸಿದ್ಧಿಗೆ ಬಾರದ ಸಾರ್ಥಕರು. ಅಂತೆಯೇ ತಮ್ಮ ಕುಕೃತ್ಯದಿಂದ ಋಣಾತ್ಮಕವಾಗಿ ಪ್ರಸಿದ್ಧಿಗೆ ಬಂದವರು ವೀರಪ್ಪನ್ ಅಂತಹ ಇತ್ಯಾದಿಗಳು.
ಪ್ರಸಿದ್ಧರಾಗುವುದು ಸುಲಭ, ಆದರೆ ಸಾರ್ಥಕರಾಗುವುದು ದುರ್ಲಭ. ಪ್ರಸಿದ್ಧಿಯನ್ನು ಬೆನ್ನಟ್ಟುವವರು ಕಾಲದೊಂದಿಗೆ ಮಾಯವಾಗುತ್ತಾರೆ; ಸಾರ್ಥಕತೆಯನ್ನು ಬೆನ್ನಟ್ಟುವವರು ಕಾಲಕ್ಕಿಂತಲೂ ಎತ್ತರವಾಗಿ ಉಳಿಯುತ್ತಾರೆ. ರಾಮ ನಡೆದಂತೆ ನಡೆದರೆ, ಕೃಷ್ಣ ನುಡಿದಂತೆ ನಡೆದರೆ, ಖಂಡಿತವಾಗಿಯೂ ಸಾರ್ಥಕತೆಯನ್ನು ನಾವು ಪಡೆಯುತ್ತೇವೆ. ಹೀಗಾಗಿ ನಾವು ಪ್ರಸಿದ್ಧರಾಗುವುದಕ್ಕಿಂತ ಸಾರ್ಥಕರಾಗುವುದೇ ಉತ್ತಮ; ಏಕೆಂದರೆ ಸಾರ್ಥಕತೆ ಇದ್ದಲ್ಲಿ ಪ್ರಸಿದ್ಧಿ ಸ್ವತಃ ನಮ್ಮನ್ನು ಹುಡುಕಿಕೊಂಡು ಬರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post