ಕಲ್ಪ ಮೀಡಿಯಾ ಹೌಸ್ | ಹಾಸನ |
ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತಾಧಿಗಳು ಆಗಮಿಸುತ್ತಿದ್ದು, ಇಂದು ಮುಂಜಾನೆಯಿಂದ ಸಂಜೆಯವರೆಗೆ 1,22,600 ಭಕ್ತರು ದರ್ಶನ ಪಡೆದಿದ್ದಾರೆ.
ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಧರ್ಮದರ್ಶನ ಸಾಲಿನಲ್ಲಿ ಸಾಗುತ್ತಿದ್ದ ಜನರನ್ನು ಮಾತನಾಡಿಸಿ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಮಾದ್ಯಮ ಮಿತ್ರರೊಂದಿಗೆ ಮಾತನಾಡಿದರು.
ಸರಾಸರಿ 2 ಗಂಟೆಯಲ್ಲಿ ದರ್ಶನವಾಗುತ್ತಿದ್ದ ಸಮಯವು 4 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳು ಸರತಿ ಸಾಲಿನಲ್ಲಿ ಸಾಗಲು ಮಾನಸಿಕವಾಗಿ ಸಿದ್ಧರಾಗಿ ಬರುವಂತೆ ತಿಳಿಸಿದ್ದಾರೆ.
ಇನ್ನು, ಶುಕ್ರವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆ 5 ಗಂಟೆಯವರೆಗೆ 6,40,700 ಭಕ್ತಾಧಿಗಳು ದೇವಿ ದರ್ಶನ ಪಡೆದಿದ್ದಾರೆ. ಇಂದು ಬೆಳಿಗ್ಗೆಯಿಂದ ಇಲ್ಲಿಯವರೆಗೆ 1,22,600 ಭಕ್ತರು ದರ್ಶನ ಪಡೆದಿದ್ದಾರೆ. ಐದುವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಿಲಾಗಿತ್ತು.
ಮಾರನೇ ದಿನ ಒಂದು ಕಿಲೋಮೀಟರ್, ಮೂರನೇ ದಿನ ಮತ್ತೊಂದು ಕಿಲೋಮೀಟರ್ ಜಾಸ್ತಿ ಮಾಡಲಾಗಿದ್ದು, ಒಟ್ಟು ಏಳುವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸೋಮವಾರ ಒಂದು ಲಕ್ಷದಿಂದ ಒಂದು ಲಕ್ಷದ ಹತ್ತು ಸಾವಿರ ಜನರನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ 2,29,000 ಜನ ಬಂದು ದರ್ಶನ ಮಾಡಿದ್ದಾರೆ. ನಾಳೆ ಬೆಳಿಗ್ಗೆ 5 ಗಂಟೆಯವರೆಗೆ ಒಂದುವರೆ ಲಕ್ಷ ಜನ ದರ್ಶನ ಮಾಡುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ವಾಡಿಕೆಗಿಂತ ಹೆಚ್ಚು ಜನ ಬಂದಿದ್ದಾರೆ ಎಂದರು.
ಸ್ವಚ್ಛತೆ, ಕುಡಿಯುವ ನೀರು, ಪ್ರಸಾದ, ಮಜ್ಜಿಗೆ ವ್ಯವಸ್ಥೆ ಜಿಲ್ಲಾಡಳಿತದಿಂದ ಮಾಡಲಾಗಿದೆ. ಜಿಲ್ಲಾಡಳಿತ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದು, ಅರ್ಚಕರನ್ನು ಮನವಿ ಮಾಡಿ ನಿನ್ನೆ ರಾತ್ರಿ 3 ರಿಂದ ಮುಂಜಾನೆ 5 ಗಂಟೆಯವರೆಗೆ ಗರ್ಭಗುಡಿ ಬಾಗಿಲು ಮುಚ್ಚದೆ ಸಾರ್ವಜನಿಕರಿಗೆ ದರ್ಶನ ಕಲ್ಪಿಸಲಾಗಿದೆ ಎಂದವರು ಹೇಳಿದರು.
ಜನ ತುಂಬಾ ಸಂತೋಷದಿಂದ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಸ್ಥಳೀಯರು ನಮ್ಮ ದೇವಿ ನಮಗೆ ವಾಪಸ್ಸು ನೀಡಿದ್ದೀರಿ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ರೈತರು, ದುಡಿಯವ ವರ್ಗದವರು ದೇವಿ ದರ್ಶನಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.
ನಿನ್ನೆ ಮತ್ತು ಇವತ್ತು ಬಂದಿರುವ ಜನರನ್ನು ನೋಡಿದರೆ ಇನ್ನು ಮುಂದೆ ಶೇ.50 ಕ್ಕಿಂತ ಅಧಿಕ ಜನ ಬರುವ ಸಾಧ್ಯತೆ ಇದೆ. ಇನ್ನೂ ಎಂಟು ದಿನ ದರ್ಶನಕ್ಕೆ ಬಾಕಿ ಇದೆ ನಾವು ದರ್ಶನ ಕಲ್ಪಿಸಲು ಸಜ್ಜಾಗಿದ್ದೇವೆ ಎಂದರು.
ಇಂದು ಬೆಳಿಗ್ಗೆ 5 ಗಂಟೆಯವರೆಗೆ 1000 ರೂ ಹಾಗೂ 300 ರೂ ವಿಶೇಷ ದರ್ಶನದ ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ 4,21,73,760 ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷಕ್ಕಿಂತ ಒಂದು ಕೋಟಿ ಹೆಚ್ಚು ಆದಾಯ ಬಂದಿದೆ ಎಂದು ತಿಳಿಸಿದರು.
ಇಂದು ಮಧ್ಯಾಹ್ನಕ್ಕೆ 1000 ರೂಪಾಯಿಯ 3,600 ಟಿಕೆಟ್’ಗಳು ಮಾರಾಟ ಆಗಿದೆ, 300 ರೂಪಾಯಿಯ 6000 ಟಿಕೆಟ್’ಗಳು ಮಾರಾಟ ಆಗಿದೆ. ಆದಾಯಕ್ಕಿಂತ ಜನರಿಗೆ ಶೀಘ್ರ ದರ್ಶನ ಮಾಡಿಸುವುದು ನಮಗೆ ಮುಖ್ಯವಾಗಿದೆ ಎಂದರು.
ಈ ವೇಳೆಯಲ್ಲಿ ಸಂಸದರಾದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಉಪವಿಭಾಗಾಧಿಕಾರಿ ಹಾಗೂ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಮಾರುತಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















