ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-33 |

ಯಾವಾಗ ನಾವು ಯಾವುದನ್ನಾದರೂ ಒಳ್ಳೆಯ ಉದ್ದೇಶದಿಂದ ಮಾಡುತ್ತೇವೋ, ಆಗ ಅದಕ್ಕಾಗಿ ಯಾರೂ ಪ್ರೇರಣೆ ಕೊಡಬೇಕಾಗುವುದಿಲ್ಲ. ಆ ಉದ್ದೇಶವೇ ನಮ್ಮೊಳಗೆ ಕೆಲಸಮಾಡಿ, ನಮ್ಮನ್ನು ಮುಂದೆ ಕೊಂಡೊಯ್ಯುತ್ತದೆ.
ಉದಾಹರಣೆಗೆ, ತಾಯಿ – ಆಕೆಯ ಉದ್ದೇಶ ತನ್ನ ಮಗುವನ್ನು ಉತ್ತಮ ಪ್ರಜೆಯಾಗಿಸಬೇಕು ಎಂಬುದು. ಆ ಉದ್ದೇಶಕ್ಕಾಗಿ ಆಕೆ ಎಲ್ಲ ಕಷ್ಟಗಳನ್ನೂ ಸಹಿಸುತ್ತಾಳೆ. ಯಾರೂ ಆಕೆಗೆ “ಮಗುವಿನ ಪಾಲನೆ ಮಾಡು” ಎಂದು ಹೇಳಬೇಕಾಗುವುದಿಲ್ಲ, ಏಕೆಂದರೆ ಆ ಉದ್ದೇಶವೇ ಆಕೆಯ ಶಕ್ತಿ.
ಸೈನಿಕನ ಜೀವನವನ್ನೂ ನೋಡಿದರೆ ಇದೇ ವಿಷಯ ಸ್ಪಷ್ಟವಾಗುತ್ತದೆ. ಅವನು ದೇಶದ ರಕ್ಷಣೆಗೆ ಜೀವವನ್ನೇ ಪಣಕ್ಕಿಟ್ಟು ಕೆಲಸಮಾಡುತ್ತಾನೆ. ಹಿಮ, ಚಳಿ, ಬಿಸಿಲು, ಜೀವಾಪಾಯ – ಯಾವುದಕ್ಕೂ ಅವನು ಅಳುಕುವುದಿಲ್ಲ. ಯಾಕೆಂದರೆ ಅವನ ಉದ್ದೇಶ ಸಾರ್ಥಕ . “ದೇಶದ ರಕ್ಷಣೆಯೇ ನನ್ನ ಕರ್ತವ್ಯ.” ಈ ಉದ್ದೇಶವೇ ಅವನ ಅಂತರಂಗದ ಪ್ರೇರಣೆ.
ಆದರೆ ಉದ್ದೇಶ ಸಾರ್ಥಕವಾಗಿದ್ದರೆ, ಕೆಲಸವು ಸಾರ್ಥವಾಗುತ್ತದೆ. ಒಬ್ಬ ಗುರುವು ವಿದ್ಯಾರ್ಥಿಯ ಸರ್ವೋಚ್ಚ ಬೆಳವಣಿಗೆಗಾಗಿ,ಅವನಿಗೆ ವಿದ್ಯಾರ್ಥಿಯ ಪ್ರಗತಿಯೇ ಅವನಿಗೆ ಪುರಸ್ಕಾರ.
ವೈದ್ಯ ಜೀವ ಉಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಅವನಿಗೆ ಧನ್ಯವಾದಕ್ಕಿಂತ ಜೀವ ಉಳಿದ ಖುಷಿಯೇ ಅವನಿಗೆ ಮುಖ್ಯ. ವಿಜ್ಞಾನಿ ಹೊಸ ಆವಿಷ್ಕಾರದಿಂದ ಸಮಾಜಕ್ಕೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ದುಡಿಯುತ್ತಾನೆ. ಅವನಿಗೆ ವಿಫಲತೆ ಅಡ್ಡಿಯಾಗುವುದಿಲ್ಲ, ಏಕೆಂದರೆ ಅವನ ಉದ್ದೇಶ ದೊಡ್ಡದು, ಸಾರ್ಥಕ.
ಸಾರ್ಥಕ ಉದ್ದೇಶವು “ನಾನು ಮಾಡಲೇಬೇಕು” ಎಂಬ ಮನೋಭಾವವನ್ನು ಕೊಡುತ್ತದೆ.
ಇತಿಹಾಸದಲ್ಲೂ ಇಂತಹ ಅನೇಕ ಉದಾಹರಣೆಗಳಿವೆ – ಸ್ವಾಮಿ ವಿವೇಕಾನಂದರು, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ – ಇವರೆಲ್ಲರಿಗೂ ಜೀವನದಲ್ಲಿ ಒಂದು ಸಾರ್ಥಕ ಉದ್ದೇಶವಿತ್ತು. ಅವರು ತಮ್ಮ ಉದ್ದೇಶದ ಶಕ್ತಿಯಿಂದಲೇ ಅಸಾಧ್ಯವನ್ನು ಸಾಧಿಸಿದರು. ಅವರಲ್ಲಿ ಬಾಹ್ಯ ಪ್ರೇರಣೆ ಇರಲಿಲ್ಲ, ಆದರೆ ಆಂತರಿಕ ಉತ್ಸಾಹ ಇತ್ತು.
ಹೀಗಾಗಿ ನಾವು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಕೇಳಿಕೊಳ್ಳಬೇಕು – “ನಾನು ಮಾಡುತ್ತಿರುವುದರ ಹಿಂದೆ ಯಾವ ಉದ್ದೇಶವಿದೆ?” ಅದು ಕೇವಲ ಹಣಕ್ಕಾಗಿ, ಪ್ರಸಿದ್ಧಿಗಾಗಿಯೇ ಅಥವಾ ಸಾರ್ಥಕ ಉದ್ದೇಶಕ್ಕಾಗಿಯೇ? ಉದ್ದೇಶ ಸಾರ್ಥಕವಾಗಿದ್ದರೆ, ಪ್ರೇರಣೆ, ಶ್ರಮ, ಸಾಧನೆ – ಇವು ಎಲ್ಲವೂ ಸಹಜವಾಗಿ ಬರುತ್ತವೆ.
ಅಂತಿಮವಾಗಿ, ನಿಜವಾದ ಪ್ರೇರಕ ಶಕ್ತಿ ಯಾವುದೋ ಬಾಹ್ಯ ಪ್ರಭಾವವಲ್ಲ – ಅದು ನಮ್ಮ ಸಾರ್ಥಕ ಉದ್ದೇಶವೇ ಆಗಿದೆ. ಉದ್ದೇಶ ಸಾರ್ಥಕವಾಗಿದ್ದರೆ – ಕಷ್ಟಗಳು ಸವಾಲುಗಳಾಗುತ್ತವೆ, ಸವಾಲುಗಳು ಪಾಠಗಳಾಗುತ್ತವೆ, ಪಾಠಗಳು ಯಶಸ್ಸಿನ ಹಾದಿಯಾಗುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post