ಕಲ್ಪ ಮೀಡಿಯಾ ಹೌಸ್ | ಮೈಸೂರು |
ಯುವಜನರು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಉನ್ನತ ಸಾಧನೆಗಳನ್ನು ಮಾಡುವ ನಿಟ್ಟಿನಲ್ಲಿ ಮುನ್ನುಗ್ಗಬೇಕು ಎಂದು ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂಡಿತ ಡಾ. ವಿದ್ಯಾಸಿಂಹಾಚಾರ್ಯ ಮಾಹುಲಿ ಹೇಳಿದರು.
ಶ್ರೀ ಉತ್ತರಾದಿ ಮಠವು ಯುವಜನರ ಅಧ್ಯಾತ್ಮಿಕ ಅಭ್ಯುದಯವನ್ನು ಪ್ರಮುಖ ಉದ್ದೇಶವಾಗಿರಿಸಿಕೊಂಡು ಆರಂಭಿಸಿರುವ ‘ಯುವ ಸಂಕಲ್ಪ’ ವಿಶೇಷ ಪರಿಕ್ರಮದ ಅಡಿಯಲ್ಲಿ ನಗರದ ಕೃಷ್ಣಮೂರ್ತಿ ಪುರಂನ ಬಿಎಸ್‌ಎಸ್ ವಿದ್ಯೋದಯ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ರ‌್ಯಾಷನಾಲಿಟಿ ಆ್ಯಂಡ್ ಫೇತ್ : ಕಾನ್‌ಫ್ಲಿಕ್ಟ್ ಆರ್ ಕಾಂಪ್ಲಿಮೆಂಟ್ಸ್? – ಎ ಧರ್ಮ ಬೇಸ್ಡ್ ಇನ್‌ಕ್ವಯರಿ ಫಾರ್ ಛಾರಿಟಿ ಇನ್ ಮಾಡ್ರನ್ ಲೈಫ್-ವಿಷಯ ಕುರಿತು ಯುವಜನರನ್ನು ಉದ್ದೇಶಿಸಿ ಶಿಖರೋಪನ್ಯಾಸ ನೀಡಿದರು.
ಬೇಸರ, ಆತ್ಮಹತ್ಯೆ, ಖಿನ್ನತೆ ಮತ್ತು ಮನೋವಿಕಾರಗಳಿಂದ ಯುವಜನರು ಹೊರ ಬರಲು ಧರ್ಮದ ಆಚರಣೆಗಳು ಪ್ರೇರಕವಾಗಿವೆ. ರಾಮಾಯಣ, ಮಹಾಭಾರತ, ಭಾಗವತ ಮತ್ತು ಭಗವದ್ಗೀತೆಗಳು ಜೀವನ ಮೌಲ್ಯವನ್ನು ಪ್ರತಿ ಹಂತದಲ್ಲೂ ತಿಳಿಸಿವೆ. ಮನೆಯ ಹಿರಿಯರು ಹೇಳಿದಂತೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳನ್ನು ಸಲ್ಪ ಮಾಡಿದರೂ ಪುಣ್ಯ ಲಭಿಸುತ್ತದೆ. ಭಗವದ್ಗೀತೆಯೂ ಇದನ್ನೇ ಪ್ರತಿಪಾದಿಸಿದೆ ಎಂದು ಅವರು ಯುವಜನರಿಗೆ ಕಿವಿಮಾತು ಹೇಳಿದರು.
ದೇವರ ಬಗ್ಗೆ ಅಂಧ ಶ್ರದ್ಧೆ ಬೇಡ
ಜಗತ್ತಿನ ಒಂದೊಂದು ಕಣವೂ ದೇವರ ಅಸ್ತಿತ್ವವನ್ನು ಸಾರುತ್ತಿವೆ. ಭಗವಂತ ಯಾರು ಯಾರಿಗೆ ಏನೇನು ಬೇಕೋ ಅದನ್ನೇ ಸೃಷ್ಟಿ ಮಾಡಿದ್ದಾನೆ. ಜಗತ್ತಿನ ನಿರ್ಮಾಣದ ಹಿಂದೆ ಇರುವಾತನನ್ನು ಕಣ್ಣಾರೆ ನೋಡುವುದು ಸಾಧ್ಯವಿಲ್ಲ. ಅದನ್ನು ಅನುಭವದಿಂದ ತಿಳಿಯಬೇಕು ಎಂದರು.
ದೇವರ ಬಗ್ಗೆ ಅಂಧ ಶ್ರದ್ಧೆ ಬೇಡ. ದೇವರಿಂದ ದೇಹ, ಬುದ್ದಿ ಶಕ್ತಿ, ಪಂಚಭೂತವನ್ನು ಪಡೆದವರು ಕೃತಜ್ಞತೆ ಸಲ್ಲಿಸಬೇಕು. ಪರಮತ್ಮನ ಉಪಕಾರ ಸ್ಮರಣೆಯೇ ಧರ್ಮ ಎಂದು ಅವರು ಕಾರ್ಯಕ್ರಮದ ನಂತರ ಯುವಜನರ ಪ್ರಶ್ನೆಗಳಿಗೆ ಡಾ. ವಿದ್ಯಾಸಿಂಹಾಚಾರ್ಯರು ಉತ್ತರಿಸಿದರು.
ಉತ್ತರಾದಿ ಮಠದ ವ್ಯವಸ್ಥಾಪಕ ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ, ಬಿಎಸ್‌ಎಸ್ ವಿದ್ಯೋದಯ ಶಾಲೆಯ ಕಾರ್ಯದರ್ಶಿ ವಾಸದೇವ ಭಟ್, ಉದ್ಯಮಿ ಗುರುರಾಜ್ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post