ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಯವಾಗುವ ಕೀರ್ತಿ, ಹಣ, ಅಂದಕ್ಕಿಂತ, ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಗುರುವಾರ ಕಾಲೇಜಿನ ಆವರಣದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಕೌಶಲ್ಯ – 2025’ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬುದ್ದಿವಂತಿಕೆಯ ಜೊತೆಗೆ ಹೃದಯವಂತಿಕೆ ರೂಪಿಸಿಕೊಳ್ಳಿ. ಜೀವನದ ಅತ್ಯಂತ ದೊಡ್ಡ ಶತ್ರುವಾಗಿ ಮೊಬೈಲ್ ಮುಂಚೂಣಿಗೆ ಬಂದಿದೆ. ಹಿರಿಯರು ಬದುಕಿದ ಸಮಾಜದ ನೆಲೆಗಟ್ಟುಗಳನ್ನು, ಆಧುನಿಕತೆಯ ಭ್ರಮೆ ಎಂಬುದು ಮರೆಸುತ್ತಿದೆ. ನಮ್ಮ ಪುರಾತನ ಸಂಸ್ಕೃತಿ ಸಂಸ್ಕಾರಗಳು ಹಿರಿಯರಿಂದ ಸಿಕ್ಕ ಬಳುವಳಿಯಾಗಿದ್ದು, ಕಾಳಜಿಯಿಂದ ಪೋಷಿಸಿ.
ಅಂತಃಶಕ್ತಿಯನ್ನು ಬೆಳೆಸಿಕೊಳ್ಳಿ. ಸಮರ್ಥವಾದ ಆತ್ಮಸ್ಥೈರ್ಯ ರೂಡಿಸಿಕೊಳ್ಳಿ. ಎತ್ತರದ ಸ್ಥಾನಕ್ಕೆ ಏರುವುದು ಸುಲಭವಾದರೂ, ಅದನ್ನು ಉಳಿಸಿಕೊಳ್ಳುವುದು ಒಂದು ಸವಾಲು. ಅಂತಹ ಸವಾಲುಗಳಿಗೆ ಉತ್ತರ ನೀಡುವಲ್ಲಿ ನಮ್ಮ ಆತ್ಮಸ್ಥೈರ್ಯ ಸಹಕಾರಿ.

ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಟಿ ಮಾತನಾಡಿ, ಚಿಕ್ಕ ಮಕ್ಕಳ ಊಟ ತಿಂಡಿ ಎಂಬುದು ಮೊಬೈಲ್ ಮೇಲೆ ಅವಲಂಬಿತವಾಗಿದೆ. ದೈಹಿಕ ಆಟದಲ್ಲಿ ಪಾಲ್ಗೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಭಾರತದ ಸದೃಢ ಭವಿಷ್ಯ ಕಟ್ಟುವಲ್ಲಿ ಯುವ ಸಮೂಹದ ಪಾತ್ರ ಮಹತ್ವದಾಗಿದೆ. ದಿನಪತ್ರಿಕೆಗಳನ್ನು ಅಧ್ಯಯನ ಮಾಡಿ, ವಾಸ್ತವತೆಯನ್ನು ಅರಿಯಲು ಪ್ರಯತ್ನಿಸಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಯು ಚಂದ್ರಪ್ಪ.ಎಸ್.ದುಂಡಪಲ್ಲಿ, ಎನ್ಇಎಸ್ ನಿರ್ದೇಶಕರಾದ ಎಚ್.ಸಿ.ಶಿವಕುಮಾರ್, ಆಜೀವ ಸದಸ್ಯರಾದ ಟಿ.ಎ.ರಾಮಪ್ರಸಾದ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸ್ಪಂದನ್ ಹೊಳ್ಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.











Discussion about this post