ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪ್ರತಿಯೊಬ್ಬರ ಮಾನಸಿಕ ಸ್ಥಿರತೆ, ಸದೃಢ ಆರೋಗ್ಯ ಸಾಧನೆಗೆ ಕ್ರೀಡೆ ಪ್ರೇರಣೆಯಾಗಿದೆ ಎಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಸಿ. ರವೀಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಪಠ್ಯಕ್ಕಿಂತ ಆಟಗಳಲ್ಲಿ ಹೆಚ್ಚು ಆಸಕ್ತಿ, ಕಲಿಕೆಗೆ ಗಮನ ಕೊಡುತ್ತಾರೆ. ಅವರ ಕ್ರೀಡಾಸಕ್ತಿಯು ಮುಂದೆ ಅವರ ಬದುಕಿನ ಚಿತ್ರಣ ಬದಲಿಸುವ ಹಲವಾರು ನಿದರ್ಶನಗಳನ್ನು ನಾವು ನೋಡಿದ್ದೇವೆ. ಅಂತಹ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿ ಸಾಧಕರನ್ನಾಗಿ ಮಾಡುವ ಕೆಲಸ ನಮ್ಮ ಮೇಲಿದೆ. ಅದನ್ನು ನೀಡುವಲ್ಲಿ ಕೆಆರ್’ಸಿಎಸ್ ಶಾಲೆ ಸದಾ ಮುಂಚೂಣಿಯಲ್ಲಿದೆ ಎಂದರು.
ಶಾಲೆಯ ಪ್ರಾಚಾರ್ಯರಾದ ಎಚ್.ಡಿ. ಪ್ರಶಾಂತ್ ಅವರು ಮಾತನಾಡಿ, ಪಾಠ ಆಟ ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾದವುಗಳು. ಅವುಗಳ ಕಲಿಕೆಗೆ ಶ್ರಮ, ಶಿಸ್ತು, ಏಕಾಗ್ರತೆ ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಏಕಾಗ್ರತೆ ಹಾಗೂ ನಿರಂತರ ಅಧ್ಯಯನ ಇದ್ದಾಗ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ಎಂದರು.
ಕೋ ಆರ್ಡಿನೇಟರ್ ಪ್ರಭುರವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಬೋಧಕ-ಭೋದಕೇತರ ವರ್ಗ, ಕೋ ರ್ಡಿನೇಟರ್ಸ್ ಭಾಗವಹಿಸಿದ್ದರು.
ನಿವೇದಿತಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಸಹಶಿಕ್ಷಕಿಯರಾದ ಸುನೀತಾ, ಕಾವ್ಯ ಪಾಟೀಲ್, ಭಾಗ್ಯಲಕ್ಷ್ಮೀ, ಸಹಶಿಕ್ಷಕ ರಾಜು ಅವರುಗಳು ಕ್ರೀಡಾ ವಿಜೇತರ ಹೆಸರುಗಳನ್ನು ಪ್ರಕಟಿಸಿದರು. ಕ್ರೀಡಾಪಟುಗಳಿಗೆ ಪ್ರಮಾಣಪತ್ರ ಹಾಗೂ ಪದಕಗಳನ್ನು ಅತಿಥಿಗಳು ವಿತರಿಸಿದರು.
ಸಹಶಿಕ್ಷಕಿ ದೀಪ್ತಿ ವಂದಿಸಿ, ಲತಾ ಸ್ವಾಗತಿಸಿ, ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















